ದಾವಣಗೆರೆ, ಅ.24- ನಾಡಹಬ್ಬ ದಸರಾ ಅಂಗವಾಗಿ ವಿಶ್ವ ಹಿಂದೂ ಪರಿಷದ್, ಸಾರ್ವಜನಿಕ ವಿಜಯದಶಮಿ ಮಹೋತ್ಸವ ಸಮಿತಿ ಆಶ್ರಯದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಶೋಭಾಯಾತ್ರೆ ವಿಜೃಂಭಣೆಯಿಂದ ನೆರವೇರಿತು.
ಬೇತೂರು ರಸ್ತೆಯ ವೆಂಕಟೇಶ್ವರ ವೃತ್ತದಲ್ಲಿ ಮಧ್ಯಾಹ್ನ 11.30 ರ ಸುಮಾರಿಗೆ ದುರ್ಗಾದೇವಿ ಮೂರ್ತಿಗೆ ವಿನೋಬ ನಗರದ ಶ್ರೀ ಜಡೇಸಿದ್ದ ಶಿವಯೋಗೀಶ್ವರ ಮಠದ ಶ್ರೀ ಶಿವಾನಂದ ಸ್ವಾಮೀಜಿ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಶೋಭಾಯಾತ್ರೆಗೆ ಚಾಲನೆ ನೀಡಿದರು.
ನಂತರ ಬೃಹತ್ ಶೋಭಾಯಾತ್ರೆ ಚೌಕಿಪೇಟೆ, ಹೊಂಡದ ವೃತ್ತ, ಅರುಣಾ ಚಿತ್ರಮಂದಿರ ವೃತ್ತದ ಮೂಲಕ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಮೈದಾನ ತಲುಪುವಷ್ಟರಲ್ಲಿ ಸಂಜೆ 7 ಗಂಟೆಯಾಗಿತ್ತು.
ಭಾರತ ಮಾತೆ, ಶ್ರೀ ಚಾಮುಂಡೇಶ್ವರಿ, ಶ್ರೀ ದುರ್ಗಾಂಬಿಕಾದೇವಿ, ವಿವೇಕಾನಂದ, ಛತ್ರಪತಿ ಶಿವಾಜಿ ಇತರರ ಭಾವಚಿತ್ರ, ಸ್ತಬ್ಧ ಚಿತ್ರಗಳು, ನಂದಿಕೋಲು, ಡೊಳ್ಳು, ಸಮಾಳ, ದೇಶಿ ಡೊಳ್ಳು, ನಾಸಿಕ್ ಡೋಲು, ಚಂಡೇ ನಾದ, ನಾದಸ್ವರ, ಕೀಲು ಕುದುರೆ, ಸೇರಿದಂತೆ ಇತರೆ ಜಾನಪದ ಕಲಾತಂಡಗಳು ಮೆರವಣಿಗೆಯ ಮೆರಗು ಹೆಚ್ಚಿಸಿದವು.
ಶೋಭಾಯಾತ್ರೆ ನೋಡಲು ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಜನರು ನೆರೆದಿದ್ದರು. ಶೋಭಾಯಾತ್ರೆ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಚಂದ್ರಯಾನ-3, ಸಿದ್ದಗಂಗಾ ಸ್ವಾಮೀಜಿ, ಬಾಲಗಂಗಾಧರನಾಥ ಸ್ವಾಮೀಜಿ, ಸಿದ್ದೇಶ್ವರ ಸ್ವಾಮೀಜಿ, ಕಿತ್ತೂರು ರಾಣಿ ಚೆನ್ನಮ್ಮ, ಸಂಗೋಳ್ಳಿ ರಾಯಣ್ಣ, ಕೊರಗಜ್ಜ, ಕನಕದಾಸ, ದತ್ತಾತ್ರೇಯ ಸ್ವಾಮಿ, ವಾಲ್ಮೀಕಿ, ವೀರಮದಕರಿ ನಾಯಕ, ಸುಭಾಷ್ಚಂದ್ರ ಭೋಸ್, ಬಸವಣ್ಣ, ಅಕ್ಕಮಹಾದೇವಿ, ಪರಶುರಾಮ, ಕಾಮಧೇನು, ಸ್ವಾತಂತ್ರ್ಯಕ್ಕೆ ಹೋರಾಡಿದ ಮಹನೀಯರು, ಹಿಂದೂ ಪರ ಹೋರಾಟಗಾರರ ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿದ್ದವು.
ಎಂದಿನಂತ ಶೋಭಾಯಾತ್ರೆ ಯಲ್ಲಿ ಡಿಜೆ ಸದ್ದೇ ಜೋರಾಗಿತ್ತು. ಡಿಜೆಯಲ್ಲಿನ ಹಾಡುಗಳಿಗೆ ಯುವ ಕರು ಬಿಸಿಲನ್ನೂ ಲೆಕ್ಕಿಸದೆ ಕುಣಿದು ಕಪ್ಪಳಿಸಿದರು. ಯಾತ್ರೆ ಬರುವ ಮಾರ್ಗದಲ್ಲಿ ಸಂಘ, ಸಂಸ್ಥೆಗಳು, ಯುವಕರು, ಪಾನಕ, ನೀರು, ಮಜ್ಜಿಗೆ ವಿತರಣೆ ಮಾಡುತ್ತಿದ್ದರು.
ಶೋಭಾಯಾತ್ರೆ ಉದ್ದಕ್ಕೂ ಪೊಲೀಸರು ವಿಶೇಷ ಬಂದೋಬಸ್ತ್ ಮಾಡಿದ್ದರು. ಯಾತ್ರೆ ಸಾಗುವ ದಾರಿ ಸೇರಿದಂತೆ ವಿವಿಧ ಸೂಕ್ಷ್ಮ ಹಾಗೂ ಅತೀಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿತ್ತು. ಯಾತ್ರೆ ಆಗಮಿಸುವ ವೇಳೆ ರಸ್ತೆ ಬಂದ್ ಮಾಡಲಾಗಿತ್ತು. ಅಲ್ಲಲ್ಲಿ ಬ್ಯಾರಿಕೇಡ್ಗಳನ್ನು ಹಾಕುವ ಮೂಲಕ ಬೈಕ್, ಕಾರು ಸೇರಿದಂತೆ ವಾಹನಗಳ ಓಡಾಟಕ್ಕೆ ಕಡಿವಾಣ ಹಾಕಿದ್ದರು.
ಮಾಜಿ ಸಚಿವ ಎಸ್.ಎ.ರವೀಂದ್ರನಾಥ್, ಬಿಜೆಪಿ ಮುಖಂಡರಾದ ಡಾ.ಎ.ಹೆಚ್.ಶಿವಯೋಗಿಸ್ವಾಮಿ, ವೈ. ಮಲ್ಲೇಶ್, ಯಶವಂತರಾವ್ ಜಾಧವ್, ಎಸ್.ಟಿ. ವೀರೇಶ್, ಬಿ.ಜಿ. ಅಜಯ ಕುಮಾರ್, ಲೋಕಿಕೆರೆ ನಾಗರಾಜ್, ಎನ್. ರಾಜಶೇಖರ್, ರಾಜನಹಳ್ಳಿ ಶಿವಕುಮಾರ್, ಡಾ.ಟಿ.ಜಿ.ರವಿಕುಮಾರ್, ಶಾಂತರಾಜ ಪಾಟೀಲ್, ಕೆ.ಎಂ.ಸುರೇಶ್, ಶ್ರೀನಿವಾಸ ದಾಸಕರಿಯಪ್ಪ, ರಾಕೇಶ್ , ಧನುಷ್ ರೆಡ್ಡಿ, ವಿಶ್ವಾಸ್, ಸೇರಿದಂತೆ ಅನೇಕರು ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಸಹ ಆಗಮಿಸಿ ದೇವಿ ಮೂರ್ತಿಗೆ ಪೂಜೆ ಸಲ್ಲಿಸಿದರು.
ಶೋಭಾಯಾತ್ರೆಯಲ್ಲಿ ತಂಜುಮನ್ ಮುಸ್ಲಿಮಿನ್ ಫಂಡ್ ಅಸೋಸಿಯೇಷನ್ ಅಧ್ಯಕ್ಷ ದಾದೂ ಸೇಠ್ ನೇತೃತ್ವದಲ್ಲಿ ಮುಖಂಡರಾದ ಚಮನ್ಸಾಬ್, ಸನಾವು ಲ್ಲಾ, ಜಬೀವುಲ್ಲಾ, ಖಾದೀರ್, ಮಹಮ್ಮದ್ ಶಫೀಕ್, ಶೇಖ್ ದಾದೂ, ಅಮ್ಜದ್, ಶಂಶುದ್ದೀನ್ ರಜ್ವಿ, ಮಹ ಮ್ಮದ್ ಜುಬೇರ್ ಸೇರಿದಂತೆ ಹಲವಾರು ಮುಖಂಡರು ಆಗಮಿಸಿ ಸಿಹಿ ಹಂಚಿ ಯಾತ್ರೆಗೆ ಶುಭ ಕೋರಿದರು.