ಅಧ್ಯಾತ್ಮಿಕ, ನೈತಿಕ ನೆಲೆಗಟ್ಟಿನ ಶಿಕ್ಷಣ ಬೇಕಿದೆ

ಅಧ್ಯಾತ್ಮಿಕ, ನೈತಿಕ ನೆಲೆಗಟ್ಟಿನ ಶಿಕ್ಷಣ ಬೇಕಿದೆ

`ಶಿವ ಸಂಕಲ್ಪ ಭವನ’ ಉದ್ಘಾಟನಾ ಕಾರ್ಯಕ್ರಮದಲ್ಲಿ ಬ್ರಹ್ಮಾಕುಮಾರ ಬಸವರಾಜ ರಾಜಋಷಿ

ದಾವಣಗೆರೆ, ಅ. 20 – ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ಕೆಲವು ದೋಷಗಳಿವೆ. ಅಧ್ಯಾತ್ಮಿಕ ಹಾಗೂ ನೈತಿಕ ನೆಲೆಗಟ್ಟಿನ ಶಿಕ್ಷಣ ನೀಡುವ ದಿನಗಳು ಬರಬೇಕಿದೆ ಎಂದು ಪ್ರಜಾ ಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಹುಬ್ಬಳ್ಳಿ ವಲಯದ ನಿರ್ದೇಶಕ ಬ್ರಹ್ಮಾಕುಮಾರ ಬಸವರಾಜ ರಾಜಋಷಿ ಹೇಳಿದರು.

ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವಿದ್ಯಾನಗರ ಸೇವಾ ಕೇಂದ್ರ ದಿಂದ ನೂತನವಾಗಿ ನಿರ್ಮಾಣ ಗೊಂಡಿರುವ `ಶಿವ ಸಂಕಲ್ಪ ಭವನ’ದ ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ, ಅವರು ಮಾತನಾಡಿದರು.

ದೇಶದಲ್ಲಿ ಸನಾತನ ಗುರುಕುಲಗಳಿದ್ದವು. ಸನಾತನ ಶಿಕ್ಷಣ ವ್ಯವಸ್ಥೆಯಲ್ಲಿ ನೈತಿಕ ಮೌಲ್ಯ ಹಾಗೂ ಅಧ್ಯಾತ್ಮಿಕ ಮೌಲ್ಯಗಳಿದ್ದವು. ಪ್ರಸಕ್ತ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ವೈಜ್ಞಾನಿಕ ನೆಲೆಗಟ್ಟಿನಲ್ಲಿ ಅಧ್ಯಾತ್ಮಿಕ ಶಿಕ್ಷಣ ಬೇಕಿದೆ ಎಂದವರು ಅಭಿಪ್ರಾಯ ಪಟ್ಟರು.

ಆಹಾರ ಪದ್ಧತಿ ತಪ್ಪಾಗಿರುವ ಕಾರಣ ರೋಗ ಗಳು ಹೆಚ್ಚಾಗುತ್ತಿವೆ. ರಸಗೊಬ್ಬರ ಬಳಸಿ ಆಹಾರ ಬೆಳೆಯುತ್ತಿರುವುದು ಸಮಸ್ಯೆಗೆ ಕಾರಣವಾಗಿದೆ. ಇದರಿಂದ ಚಿಕ್ಕ ವಯಸ್ಸಿಗೆ ನೂರಾರು ಕಾಯಿಲೆ ಗಳು ಬರುತ್ತಿವೆ ಎಂದೂ ಅವರು ಹೇಳಿದರು.

ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುರೇಶ್ ಬಿ. ಇಟ್ನಾಳ್, ನಾವು ಭೌತಿಕ ಜೀವನದತ್ತ ಮುಖ ಮಾಡಿದ್ದೇವೆ. ಇದರಿಂದ ಜೀವನ ಯಾಂತ್ರೀಕರಣವಾಗಿ ಮಾನಸಿಕ ಒತ್ತಡ ಹೆಚ್ಚಾಗುತ್ತಿದೆ. ಒತ್ತಡದಿಂದ ಹೊರ ಬರಲು ಯೋಗ, ಅಧ್ಯಾತ್ಮ ಹಾಗೂ ಧ್ಯಾನ ಅಗತ್ಯ ಎಂದರು.

ಅಧ್ಯಾತ್ಮ ಹೆಚ್ಚಾದಷ್ಟೂ ಧನಾತ್ಮಕ ಚಿಂತನೆಗಳು ಹೆಚ್ಚಾಗುತ್ತವೆ. ಇದರಿಂದ ಸಮಾಜದ ಉನ್ನತಿಯಾಗುತ್ತದೆ. ಇಂತಹ ಪ್ರಗತಿಗಾಗಿ ಅಧ್ಯಾತ್ಮಿಕ ಕೇಂದ್ರಗಳು ಹೆಚ್ಚಾಗಬೇಕು ಎಂದವರು ಹೇಳಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಜವಳಿ ಉದ್ಯಮಿ ಬಿ.ಸಿ. ಉಮಾಪತಿ ಮಾತನಾಡಿ, ಈಶ್ವರೀಯ ವಿಶ್ವವಿದ್ಯಾಲಯವು 140 ದೇಶಗಳಲ್ಲಿ 4 ಸಾವಿರಕ್ಕೂ ಹೆಚ್ಚು ಕೇಂದ್ರಗಳನ್ನು ಹೊಂದಿದೆ. ಈ ಕೇಂದ್ರಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಬೇಕಿದೆ. ಈಶ್ವರೀಯ ವಿಶ್ವವಿದ್ಯಾಲಯವು ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದರು.

ಕೂಡು ಕುಟುಂಬದಲ್ಲಿ ಬೆಳೆದ ಈಗಿನ ಪೀಳಿಗೆ ಧಾರ್ಮಿಕ ಪರಂಪರೆ ಹಾಗೂ ಸಂಸ್ಕಾರ ಪಡೆದಿದೆ. ಮುಂದಿನ ಪೀಳಿಗೆಗೂ ಅಧ್ಯಾತ್ಮ, ಧರ್ಮ ಹಾಗೂ ಪರಂಪರೆ ಕಲಿಸುವ ಅಗತ್ಯವಿದೆ. ಹೀಗಾಗಿ ವಿದ್ಯೆ ಸ್ವಲ್ಪ ಕಡಿಮೆಯಾದರೂ ಸಂಸ್ಕಾರ ಹೆಚ್ಚು ಕಲಿಸಿದರೆ ಮನೆಯಷ್ಟೇ ಅಲ್ಲದೇ, ಸಮಾಜವೂ ಬೆಳೆಯುತ್ತದೆ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಸ್. ಷಣ್ಮುಖಪ್ಪ ಮಾತನಾಡಿ, ಒತ್ತಡ ಎಲ್ಲರಿಗೂ ಇದೆ. ಒತ್ತಡಕ್ಕೆ ಸಿಲುಕಿದ ಎಲ್ಲರಿಗೂ ವೈದ್ಯಕೀಯ ಚಿಕಿತ್ಸೆ ಮೂಲಕ ಪರಿಹಾರ ಸಾಧ್ಯವಾಗದು. ಧ್ಯಾನ, ರಾಜಯೋಗ ಹಾಗೂ ಅಧ್ಯಾತ್ಮಿಕ ತರಗತಿಗಳ ಮೂಲಕ ಔಷಧ ರಹಿತ ಆರೋಗ್ಯಕರ ಜೀವನ ಸಾಧ್ಯ ಎಂದರು.

`ಶಿವ ಸಂಕಲ್ಪ ಭವನ’ದ ಭೂ ದಾನಿ ಶಾಮನೂರಿನ ಶ್ರೀಮತಿ ಲಕ್ಕಮ್ಮ ದ್ಯಾಮಪ್ಪ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು. 

ಪಾಲಿಕೆ ಸದಸ್ಯೆ ವೀಣಾ,  ಪಾಲಿಕೆ ಆಯುಕ್ತೆ ರೇಣುಕಾ, ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಕೃಷ್ಣಾನಾಯ್ಕ,  ದಾವಣಗೆರೆ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕರಾದ ಬ್ರಹ್ಮಾಕುಮಾರಿ ಲೀಲಾಜಿ, ವಿದ್ಯಾನಗರದ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕರಾದ ಬ್ರಹ್ಮಾಕುಮಾರಿ ಗೀತಾ, ಎಪಿಎಂಸಿ ಮಾಜಿ ಅಧ್ಯಕ್ಷ ಮುದೇಗೌಡ್ರ ಗಿರೀಶ್, ಉದ್ಯಮಿ ಮೋಹನ್ ಕುಮಾರ್, ಇಂಜಿನಿಯರ್ ಇಂದ್ರಪ್ಪ, ಕೃಷಿ ಕೇಂದ್ರದ ಸಹಾಯಕ ನಿರ್ದೇಶಕ ಶ್ರೀಧರ ಮೂರ್ತಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ನಮ್ರತಾ ಪ್ರಾರ್ಥಿಸಿದರೆ, ಭೂಮಿಕಾ ಸ್ವಾಗತ ನೃತ್ಯ ಮಾಡಿದರು. ಈಶ್ವರೀಯ ವಿಶ್ವವಿದ್ಯಾಲಯದ ಮಲೇಬೆನ್ನೂರು ಸಂಚಾಲಕರಾದ ಬ್ರಹ್ಮಾಕುಮಾರಿ ಮಂಜುಳಾ ಸ್ವಾಗತಿಸಿದರು.

error: Content is protected !!