ಪೊಲೀಸರ ಕ್ರಮಕ್ಕೆ ಪ್ರಮೋದ್ ಮುತಾಲಿಕ್ ಖಂಡನೆ
ದಾವಣಗೆರೆ, ಅ. 18- ಶಿವಮೊಗ್ಗ ನಗರದ ರಾಗಿಗುಡ್ಡ ಬಡಾವಣೆಗೆ ಒಂದು ತಿಂಗಳವರೆಗೆ ಬರದಂತೆ ಪೊಲೀಸರು ನೋಟಿಸ್ ನೀಡಿರುವುದನ್ನು ಶ್ರೀ ರಾಮಸೇನೆ ರಾಷ್ಟ್ರೀಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಖಂಡಿಸಿದ್ದು, ರಾಜ್ಯ ಉಚ್ಛ ನ್ಯಾಯಾಲಯದ ಮೊರೆ ಹೋಗುವುದಾಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಗಲಭೆ ಸ್ಥಳಕ್ಕೆ ಹೋಗಲು ತೀರ್ಮಾನಿಸಿದ್ದೆ. ಅ. 17 ರಂದು ರಾತ್ರಿ ಮಂಗಳೂರಿನಿಂದ ನಾನು ಬಸ್ಸಿನಲ್ಲಿ ಬರುತ್ತಿರುವಾಗ ತಡ ರಾತ್ರಿ `ಮಾಸ್ತಿಕಟ್ಟೆ’ ಬಳಿ ನನ್ನನ್ನು ತಡೆದು ಬಂಧಿಸಿ, ದಾವಣಗೆರೆಗೆ ತಂದು ಬಿಟ್ಟಿದ್ದಾರೆ. ಈ ನಿರ್ಧಾರದ ವಿರುದ್ಧ ಹೈಕೋರ್ಟ್‌ಗೆ ನ್ಯಾಯ ಕೇಳಲು ಹೋಗುತ್ತೇನೆ ಎಂದರು.
`ಮೋದಿ ಗೆಲ್ಲಿಸಿ, ದೇಶ ಉಳಿಸಿ’ ಅಭಿಯಾನಕ್ಕೆ ಸಿದ್ಧತೆ
ಭಾರತ ದೇಶಕ್ಕೆ ಮೋದಿ ಆಡಳಿತ ಅತ್ಯವಶ್ಯವಾಗಿದೆ. ಈ ಹಿನ್ನೆಲೆಯಲ್ಲಿ `ಮೋದಿ ಗೆಲ್ಲಿಸಿ, ದೇಶ ಉಳಿಸಿ’ ಅಭಿ ಯಾನವನ್ನು ಕರ್ನಾಟಕದ 224 ವಿಧಾನ ಸಭಾ ಕ್ಷೇತ್ರಗಳಲ್ಲಿ ನಡೆಸಲಾಗುವುದು ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದರು.
ಅಭಿಯಾನದ ಅಂಗವಾಗಿ ರಾಲಿ, ವಿಚಾರ ಸಂಕಿರಣ, ಸಂವಾದಗಳನ್ನು ಸಹ ಆಯೋಜಿಸಲಾಗುವುದು ಎಂದರು.
ಬಸ್ಸಿನಲ್ಲಿ ಕುಳಿತಿದ್ದಾಗ ಮಾಸ್ತಿಕಟ್ಟೆಗೆ ಆಗಮಿಸಿ, ನನಗೆ ನೋಟೀಸ್ ನೀಡಿರುವ ಶಿವಮೊಗ್ಗ ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ರಾಗಿಗುಡ್ಡ ಪ್ರಕರಣದ ತನಿಖೆಯಿಂದ ಸತ್ಯಾಸತ್ಯತೆ ಹೊರ ಬರಬೇಕಾಗಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಹಿಂದೂ ವಿರೋಧಿಯಾಗಿದ್ದಾರೆ. ಅವರ ಕುಮ್ಮಕ್ಕಿನಿಂದಲೇ ಇಂತಹ ಘಟ ನೆಗಳು ಮರುಕಳಿಸುತ್ತಿವೆ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಹಿಂದೂ ನಾಯಕರನ್ನು ಬಂಧಿಸುವ ಮತ್ತು ಹಿಂದೂ ಸಂಘಟನೆಗಳನ್ನು ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿವೆ. ಕಾಂಗ್ರೆಸ್, ಬಿಜೆಪಿ ಪಕ್ಷಗಳಿಗೆ ಹಿಂದೂಗಳು, ಹಿಂದುತ್ವದ ಕಾಳಜಿ ಇಲ್ಲವಾಗಿದೆ.
ಹಿಂದೂ, ಹಿಂದುತ್ವ ಯಾರಿಗೂ ಬೇಡವಾಗಿ ದೆ. ಹಿಂದೂಗಳೇ ತಮ್ಮ ಸುರಕ್ಷತೆಯನ್ನು ತಾವೇ ಮಾಡಿಕೊಳ್ಳುವಂತಹ ವಾತಾವರಣ ನಿರ್ಮಾಣವಾಗಿದೆ ಎಂದು ಹೇಳಿದರು.
ಸುದ್ಧಿಗೋಷ್ಠಿಯಲ್ಲಿ ಶ್ರೀರಾಮ ಸೇನೆಯ ಪದಾಧಿಕಾರಿಗಳಾದ ಮಣಿ ಸರ್ಕಾರ್, ಪರಶುರಾಮ್ ನಡುಮನಿ, ಬಿ.ಜಿ. ರಾಹುಲ್, ಅನಿಲ್ ಸುರ್ವೆ, ಶ್ರೀಧರ್, ಮಧು, ಸಿದ್ಧಾರ್ಥ, ಶ್ರೀಧರ್, ವಿನಯ್ ಮತ್ತಿತರರು ಉಪಸ್ಥಿತರಿದ್ದರು.