ಪರಿಸ್ಥಿತಿ ಒಪ್ಪಿಕೊಳ್ಳಿ, ಯೋಚಿಸಿ ಪ್ರತಿಕ್ರಿಯಿಸಿ

ಪರಿಸ್ಥಿತಿ ಒಪ್ಪಿಕೊಳ್ಳಿ, ಯೋಚಿಸಿ ಪ್ರತಿಕ್ರಿಯಿಸಿ

`ಒತ್ತಡ ಮುಕ್ತ ಆಡಳಿತ’ ಉಪನ್ಯಾಸ ನೀಡಿದ ಬ್ರಹ್ಮಾಕುಮಾರಿ ಆಶಾ ದೀದೀಜಿ

ದಾವಣಗೆರೆ, ಅ.18- ಪರಿಸ್ಥಿತಿಯನ್ನು ಒಪ್ಪಿಕೊಳ್ಳಿ, ಯಾರಿಗಾದರೂ ಪ್ರತಿಕ್ರಿಯಿಸುವಾಗ ಯೋಚಿಸಿ ಪ್ರತಿಕ್ರಿಯಿಸಿ, ಸಕಾರಾತ್ಮಕವಾಗಿ ಚಿಂತಿಸಿ, ನಿತ್ಯ ಧ್ಯಾನದ ಮೂಲಕ ಮನಸ್ಸನ್ನು ಶುದ್ಧ ಮಾಡಿಕೊಳ್ಳಿ ಎಂದು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಪ್ರಧಾನ ಕೇಂದ್ರ ಅಬು ಪರ್ವತದ ಆಡಳಿತ ಮಂಡಳಿ ಸದಸ್ಯರೂ, ದೆಹಲಿಯ ಓಂ ಶಾಂತಿ ರಿಟ್ರೀಟ್ ಸೆಂಟರ್ ಸಂಚಾಲಕರೂ ಆದ ರಾಜಯೋಗಿನಿ  ಬ್ರಹ್ಮಾಕುಮಾರಿ ಆಶಾ ದೀದೀಜಿ ಸಲಹೆ ನೀಡಿದರು.

ನಗರದ ದೇವರಾಜ ಅರಸು ಬಡಾವಣೆ ಯಲ್ಲಿನ ಈಶ್ವರೀಯ  ವಿಶ್ವವಿದ್ಯಾಲಯದ ಶಿವಧ್ಯಾನ ಮಂದಿರದಲ್ಲಿ ಇಂದು ಸಂಜೆ ಹಮ್ಮಿಕೊಳ್ಳಲಾಗಿದ್ದ `ಒತ್ತಡ ಮುಕ್ತ ಆಡಳಿತ’ ವಿಷಯ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.

ಮನಸ್ಸಿನಲ್ಲಿ ಪ್ರತಿ ದಿನ 60 ಸಾವಿರಕ್ಕೂ ಹೆಚ್ಚು ಆಲೋಚನೆಗಳು ಸುಳಿದಾಡುತ್ತವೆ. ಈ ಆಲೋಚನೆಗಳನ್ನು ಸರಿಯಾದ ಮಾರ್ಗಕ್ಕೆ ತರದೇ ಹೋದರೆ ಒತ್ತಡ ಉಂಟಾಗುತ್ತದೆ ಎಂದು ರಾಜಯೋಗಿನಿ ಬ್ರಹ್ಮಾಕುಮಾರಿ ಆಶಾ ದೀದೀಜಿ ಹೇಳಿದರು.

1980ರ ದಶಕದಲ್ಲಿ ನಡೆಸಲಾದ ಅಧ್ಯಯನವೊಂದರ ಪ್ರಕಾರ, ಮನಸ್ಸಿನಲ್ಲಿ ಪ್ರತಿದಿನ 30 ಸಾವಿರ ಆಲೋಚನೆಗಳು ಸೃಷ್ಟಿಯಾಗುತ್ತಿದ್ದವು. ಆಧುನಿಕ ವೇಗದ ಕಾಲದಲ್ಲಿ ಆಲೋಚನೆಗಳ ಭರಾಟೆ ಹೆಚ್ಚಾಗಿದ್ದು, 60 ಸಾವಿರಕ್ಕೂ ಹೆಚ್ಚು ಆಲೋಚನೆಗಳು ಬರುತ್ತಿವೆ. ವಾಹನಗಳ ಸಂಚಾರವನ್ನು ನಿಯಂತ್ರಿಸುವ ರೀತಿಯಲ್ಲೇ ಮನಸ್ಸಿನ ಆಲೋಚನೆಗಳನ್ನೂ ಸರಿಯಾಗಿ ನಿಯಂತ್ರಿಸಬೇಕಿದೆ. ಇದಕ್ಕಾಗಿ ಧ್ಯಾನದ ಅಭ್ಯಾಸ ಮಾಡುವುದು ಸೂಕ್ತ. ಪ್ರತಿದಿನ ಬೆಳಿಗ್ಗೆ ಸಶಕ್ತವಾದ ಹಾಗೂ ಉತ್ತಮ ಆಲೋಚನೆಗಳನ್ನು ಮಾಡುವ ಅಭ್ಯಾಸದಿಂದ ಒತ್ತಡ ತಗ್ಗಿಸಲು ಸಾಧ್ಯವಾಗುತ್ತದೆ ಎಂದವರು ಹೇಳಿದರು.

ದೇಶ ನಿರ್ಮಾಣವಾಗಬೇಕಾದರೆ ಮೊದಲು ಕುಟುಂಬ ನಿರ್ಮಾಣವಾಗಬೇಕು. ಕುಟುಂಬ ನಿರ್ಮಾಣವಾಗಬೇಕಾದರೆ ಮೊದಲು ವ್ಯಕ್ತಿಯ ನಿರ್ಮಾಣವಾಗಬೇಕು ಎಂದು ಕನ್ಫೂಷಿಯಸ್ ಹೇಳಿದ್ದರು. ಹೀಗಾಗಿ ವ್ಯಕ್ತಿಗಳು ಒತ್ತಡ ಮುಕ್ತವಾದಾಗ ದೇಶವೂ ಪ್ರಗತಿ ಸಾಧಿಸಲು ಸಾಧ್ಯ ಎಂದು ನುಡಿದರು.

ಮನಸ್ಸು ಒತ್ತಡಕ್ಕೆ ಸಿಲುಕುವುದು ಸಹಜ. ಒತ್ತಡ ಇರುವುದನ್ನು ಮೊದಲು ಒಪ್ಪಿಕೊಳ್ಳಬೇಕು. ನಂತರ ಸಕಾರಾತ್ಮಕ ಮನೋಭಾವದಿಂದ ಒತ್ತಡ ನಿವಾರಣೆಯ ಸೂತ್ರಗಳನ್ನು ಪಾಲಿಸಬೇಕು. ಈ ದಿಸೆಯಲ್ಲಿ ಪ್ರಾಮಾಣಿಕತೆ ಹಾಗೂ ಆತ್ಮಾವಲೋಕನ ಇರಬೇಕು ಎಂದು ಹೇಳಿದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಹೆಗಡೆ ಮಾತನಾಡಿ,  ಬದುಕನ್ನು ಒಬ್ಬೊಬ್ಬರೂ ಒಂದೊಂದು ರೀತಿ ಅರ್ಥೈಸುತ್ತಾರೆ. ಎಲ್ಲರೂ ತಮ್ಮ ಬದುಕಿನಲ್ಲಿ ಬಂದದ್ದನ್ನು ಸ್ವೀಕರಿಸುವ ಮನೋಭಾವ ಮೈಗೂಡಿಸಿಕೊಳ್ಳಬೇಕಿದೆ ಎಂದರು.

ನ್ಯಾಯಾಧೀಶರ ಕೆಲಸವೂ ಒತ್ತಡದಿಂದ ಹೊರತಾಗಿಲ್ಲ. ನಾನೂ ಸಹ ಕಾರ್ಯಕ್ರಮಕ್ಕೆ ಬರುವಾಗ ಒತ್ತಡದಲ್ಲಿದ್ದೆ. ಇಲ್ಲಿಗೆ ಬಂದು ಆಶಾದೀದೀ ಅವರ ಮಾತು ಕೇಳಿದ  ಮೇಲೆ ಒತ್ತಡ ನಿಭಾಯಿಸುವ ಶಕ್ತಿ ಬಂದಂತಾಗಿದೆ ಎಂದರು.

ಮನೋರಂಜನಾ ಕಾರ್ಯಕ್ರಮಗಳಿಗಷ್ಟೇ ಹೆಚ್ಚು ಜನರು ಸೇರುವ ಈ ದಿನಗಳಲ್ಲಿ ಈ ಕಾರ್ಯಕ್ರಮಕ್ಕೆ ಆಗಮಿಸಿರುವ ಜನರ ಸಂಖ್ಯೆ ಇದರ ಸಾರ್ಥಕತೆ ತೋರಿಸುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ದಾವಣಗೆರೆ ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ.ಬಿ.ಡಿ. ಕುಂಬಾರ ಮಾತನಾಡುತ್ತಾ, ಇತ್ತೀಚೆಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳೂ ಹೆಚ್ಚು ಒತ್ತಡಕ್ಕೆ ಒಳಗಾಗುತ್ತಿದ್ದಾರೆ ಇದರಿಂದ ಮದ್ಯಪಾನ, ಡ್ರಗ್ಸ್ ವ್ಯಸನಿಗಳಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈಶ್ವರೀಯ ವಿದ್ಯಾಲಯದಿಂದ ಶಾಲಾ-ಕಾಲೇಜುಗಳಲ್ಲಿ ಇಂತಹ ಕಾರ್ಯಕ್ರಮ ಗಳನ್ನು ಆಯೋಜಿಸುವಂತೆ ಸಲಹೆ ನೀಡಿದರು.

ಜಿ.ಎಂ. ವಿಶ್ವವಿದ್ಯಾನಿಲಯದ ಡೀನ್ ಪ್ರೊ.ಜಿ.ಎಂ. ಪಾಟೀಲ್, ಶಿಕ್ಷಣ ಹಾಗೂ ಸಂಸ್ಕಾರ ವಿದ್ಯಾರ್ಥಿಗಳಿಗೆ ತಳಮಟ್ಟದಲ್ಲಿಯೇ ಸಿಕ್ಕರೆ ಅವರ ಜೀವನ ಭದ್ರವಾಗಿರುತ್ತದೆ ಎಂದರು.

ಬಾಪೂಜಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಸದಸ್ಯ ಅಥಣಿ ಎಸ್. ವೀರಣ್ಣ ಮಾತನಾಡಿ, ಅಹಂಕಾರ, ಪ್ರತಿಷ್ಠೆಗಳ ಪರಿಣಾಮ ಒತ್ತಡವನ್ನು ನಾವಾಗಿಯೇ ಆಹ್ವಾನಿಸಿಕೊಳ್ಳುತ್ತಿದ್ದೇವೆ. ಒತ್ತಡ ಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸುವ ಬ್ರಹ್ಮಾಕುಮಾರಿ ಸಂಸ್ಥೆಯ ಕಾರ್ಯಕ್ರಮವನ್ನು ಶ್ಲ್ಯಾಘಿಸಿದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಈಶ್ವರೀಯ ವಿಶ್ವವಿದ್ಯಾಲಯದ ಹುಬ್ಬಳ್ಳಿ ವಲಯ ನಿರ್ದೇಶಕ ರಾಜಯೋಗಿ ಬ್ರಹ್ಮಾಕುಮಾರ ಡಾ.ಬಸವರಾಜ ರಾಜಋಷಿ ಅವರು ಮಾತನಾಡಿ, ಮಾನವರಾಗಿ ಹುಟ್ಟಿರುವ ನಾವು, ಸುಖವಾಗಿ ಬಾಳಬೇಕಾದರೆ ಒತ್ತಡ ಮುಕ್ತ ಜೀವನ ಅತ್ಯಗತ್ಯ ಎಂದರು.

ಈಶ್ವರೀಯ ವಿಶ್ವವಿದ್ಯಾಲಯದ ಹುಬ್ಬಳ್ಳಿ ವಲಯ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕಮಾರಿ ನಿರ್ಮಲಾಜೀ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈಶ್ವರೀಯ ವಿವಿ ದಾವಣಗೆರೆ ಸಂಚಾಲಕರಾದ ಬ್ರಹ್ಮಾಕುಮಾರಿ ಲೀಲಾಜಿ ಸ್ವಾಗತಿಸಿದರು.  ಶಿರಸಿ ಸೇವಾ ಕೇಂದ್ರದ ಸಂಚಾಲಕರಾದ ಬ್ರಹ್ಮಾಕುಮಾರಿ ವೀಣಾಜಿ ನಿರೂಪಿಸಿದರು. ಮಲೇಬೆನ್ನೂರು ಸೇವಾ ಕೇಂದ್ರದ ಸಂಚಾಲಕರಾದ ಬ್ರಹ್ಮಾಕುಮಾರಿ ಮಂಜುಳಾಜಿ ವಂದಿಸಿದರು.

error: Content is protected !!