ಬೃಹತ್ ಉದ್ಯೋಗ ಮೇಳ ಉದ್ಘಾಟಿಸಿದ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್
ದಾವಣಗೆರೆ, ಅ.16 – ವಿದ್ಯಾರ್ಹತೆ ಜೊತೆಗೆ ಔದ್ಯೋಗಿಕ ಕ್ಷೇತ್ರಕ್ಕೆ ಬೇಕಿರುವ ಕೌಶಲ್ಯ, ವೃತ್ತಿ ನೈಪುಣ್ಯತೆ ಹೊಂದುವುದು ಅತಿ ಅವಶ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.
ನಗರದ ಹೈಸ್ಕೂಲ್ ಮೈದಾನದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಬೃಹತ್ ಉದ್ಯೋಗ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಉತ್ಪಾದಕತೆ, ಯುವ ಮಾನವ ಸಂಪನ್ಮೂಲ ಮತ್ತು ಖರೀದಿ ಸಾಮರ್ಥ್ಯ ಅಧಿಕವಾಗಿರುವುದನ್ನು ಗಮನಿಸಿಯೇ, ವಿದೇಶಗಳ ಹಲವು ಕಂಪನಿಗಳು ಭಾರತದಲ್ಲಿ ಬಂಡವಾಳ ಹೂಡಲು ಆಸಕ್ತಿ ತೋರುತ್ತವೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಯುವಜನತೆಯ ಕೌಶಲ್ಯ ಹೆಚ್ಚಿಸಲು ಸರ್ಕಾರ ದೀನ್ ದಯಾಳ್ ಗ್ರಾಮೀಣ ಕೌಶಲ್ಯ ಯೋಜನೆ ಜಾರಿಗೊಳಿಸಿದೆ ಎಂದರು.
ಕೆಲಸ ಸಿಕ್ಕರೂ, ಕಾಸು ಉಳಿಯಲ್ಲ …
ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದ್ದ ಉದ್ಯೋಗ ಮೇಳದಲ್ಲಿ ಬಹುತೇಕ ಅನುಭವ ರಹಿತ ಯುವ ಪೀಳಿಗೆಯೇ ಪಾಲ್ಗೊಂಡಿತ್ತು. ಅತ್ಯುತ್ಸಾಹದಿಂದ ತಮ್ಮ ವಿವರಗಳನ್ನು ಕಂಪನಿ ಪ್ರತಿನಿಧಿಗಳಿಗೆ ಸಲ್ಲಿಸಿ ಉದ್ಯೋಗ ಗಿಟ್ಟಿಸುವ ಪ್ರಯತ್ನ ನಡೆಸಿದರು.
ಆದರೆ, ಈ ಮೇಳ ಒಂದು ರೀತಿ ಯುವ ಜನತೆಗೆ ವಾಸ್ತವ ದರ್ಶನ ಮಾಡಿಸಿದಂತಿತ್ತು.
ಸಾಕಷ್ಟು ಯುವಕ – ಯುವತಿಯರಿಗೆ ದೊರೆತ ಉದ್ಯೋಗ ಪ್ರಸ್ತಾಪ ಗಳು, ಕೆಲಸ ಸಿಕ್ಕರೂ ಕೊಡುವ ಸಂಬಳದಲ್ಲಿ ಯಾವುದೇ ಕಾಸು ಉಳಿಸಲು ಆಗಲ್ಲ ಎಂಬ ರೀತಿ ಇತ್ತು.
ಎಂ.ಬಿ.ಎ., ಇಂಜಿನಿಯರಿಂಗ್ ಮುಂತಾದ ಉನ್ನತ ವ್ಯಾಸಂಗ ಪೂರ್ಣಗೊಳಿಸಿದವರು ತಮ್ಮ ನಿರೀಕ್ಷೆಯ ಮಟ್ಟದ ಉದ್ಯೋಗಾವಕಾಶಗಳು ಕಡಿಮೆ ಎಂದು ಹೇಳಿಕೊಂಡರು.
ಕಂಪನಿಗಳು ತಮ್ಮ ಬ್ಯಾನರ್ ಹಾಕಲು ಸರಿಯಾದ ಅವಕಾಶ ಸಿಕ್ಕಿಲ್ಲ. ಇದರಿಂದಾಗಿ ಉದ್ಯೋಗಾಕಾಂಕ್ಷಿಗಳನ್ನು ತಲುಪಲು ಕಷ್ಟಸಾಧ್ಯವಾಗಿದೆ. ನೀರು ಇತ್ಯಾದಿ ಮೂಲ ಭೂತ ಸೌಲಭ್ಯಗಳನ್ನು ಸಮರ್ಪಕವಾಗಿ ಮಾಡಬೇಕಿತ್ತು ಎಂದೂ ಕೆಲವರು ಹೇಳಿದರು.
ಎಂ.ಕಾಂ. ಪದವೀಧರೆಯಾದ ವಿಕಲಚೇತನೆ ಕೆ. ತುಳಸಿ ಬಾಯಿ ಅವರು ಉದ್ಯೋಗ ಅರಸಿ ಮೇಳಕ್ಕೆ ಬಂದಿದ್ದರು. ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ್ ಅವರು, ತುಳಸಿ ಅವರಿಂದ ವಿವರ ಪಡೆದು, ಉದ್ಯೋಗಕ್ಕೆ ನೆರವು ನೀಡುವ ಭರವಸೆ ನೀಡಿದರು.
ಉದ್ಯೋಗ ಮೇಳದಲ್ಲಿ 1,220 ಪುರುಷರು ಹಾಗೂ 1,049 ಮಹಿಳೆಯರೂ ಸೇರಿದಂತೆ 2,269 ಅಭ್ಯರ್ಥಿಗಳು ಭಾಗಿ ಯಾಗಿದ್ದರು. ಇವರ ಪೈಕಿ 216 ಜನರಿಗೆ ಸ್ಥಳದಲ್ಲೇ ಉದ್ಯೋಗ ದೊರೆತಿದೆ. 857 ಜನರನ್ನು ಕಂಪನಿಗಳು ಮುಂದಿನ ಹಂತಕ್ಕೆ ಷಾರ್ಟ್ಲಿಸ್ಟ್ ಮಾಡಿಕೊಂಡಿವೆ.
ಕಾರ್ಯಕ್ರಮದಲ್ಲಿ ಎಸ್.ವಿ ಇಂಡಿಯಾನ್ ಕಂಪನಿ, ಸರ್ವೇ ಇಂಡಿಯಾನ್ ಕಂಪನಿ ಮತ್ತು ವಿಶ್ರಾ ಕಂಪನಿಗಳಿಂದ ಒಪ್ಪಿಗೆ ಪತ್ರ (ಆಫರ್ ಲೇಟರ್) ನೀಡಲಾಯಿತು.
ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಮೇಳಕ್ಕೆ 2,269 ಜನರು ನೋಂದಾಯಿಸಿ ಕೊಂಡಿ ದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ಮೇಳ ಆಯೋಜಿಸುವ ಉದ್ದೇಶವಿದೆ ಎಂದರು.
ಪಾಲಿಕೆ ಮೇಯರ್ ವಿನಾಯಕ ಪೈಲ್ವಾನ್, ಜಿಲ್ಲಾ ಪಂಚಾಯ್ತಿ ಸಿಇಒ ಸುರೇಶ್ ಇಟ್ನಾಳ್, ಪಾಲಿಕೆ ಆಯುಕ್ತೆ ರೇಣುಕಾ, ಕೌಶಲ್ಯಾಭಿವೃದ್ದಿ ಅಧಿಕಾರಿ ಬಸವನಗೌಡ, ತಹಶೀಲ್ದಾರ್ ಎಂ.ಬಿ. ಅಶ್ವತ್ಥ್, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಮಲ್ಲಿಕಾ ರ್ಜುನ್ ಮಠದ್ ಇತರರಿದ್ದರು.