ಬಿಜೆಪಿಯಿಂದ ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ನಡೆಸಿದ ಪ್ರತಿಭಟನೆಯಲ್ಲಿ ಕಿಡಿ ಕಾರಿದ ಸಂಸದ ಜಿ.ಎಂ. ಸಿದ್ದೇಶ್ವರ
ದಾವಣಗೆರೆ, ಅ. 16- ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡುವಂತೆ ಒತ್ತಾಯಿಸಿ ಬಿಜೆಪಿ ಪದಾಧಿಕಾರಿಗಳು ಹಾಗೂ ಕಾರ್ಯ ಕರ್ತರು ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಇದೇ ವೇಳೆ ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಯ ಆಮಿಷ ತೋರಿ ಅಧಿಕಾರಕ್ಕೆ ಬಂದಿದ್ದು, ಸರ್ಕಾರ ಅಕ್ಕಿ ಹಣವನ್ನೂ ಸಹ ನೀಡದೇ ಕೇಂದ್ರ ಸರ್ಕಾರ ನೀಡುತ್ತಿರುವ ಅಕ್ಕಿಯನ್ನು ನಾವೇ ನೀಡುತ್ತಿದ್ದೇವೆಂದು ಸರ್ಕಾರ ಸುಳ್ಳು ಹೇಳುತ್ತಿದೆ ಎಂದರು.
ಗೃಹಲಕ್ಷ್ಮಿ ಯೋಜನೆಯಡಿ ಲಕ್ಷಾಂತರ ಮಹಿಳೆಯರ ಖಾತೆಗೆ ಎರಡು ಸಾವಿರ ರೂ. ಜಮೆ ಮಾಡದಿರುವುದನ್ನು ನೋಡಿದರೆ ಸರ್ಕಾರದ ಖಜಾನೆ ಖಾಲಿಯಾಗಿದೆ. ಸರಿಯಾದ ಆಡಳಿತ ನೀಡಲು ಸಾಧ್ಯವಾಗದಿದ್ದರೆ ರಾಜೀನಾಮೆ ನೀಡಬೇಕು. ರೈತ, ಜನ ವಿರೋಧಿ ಸರ್ಕಾರವನ್ನು ಕೆಳಗಿಳಿಸಬೇಕೆಂದು ಒತ್ತಾಯಿಸಿದರು.
ಎಲ್ಲ ಉಚಿತ ಭಾಗ್ಯಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಸರ್ಕಾರ ಇಡೀ ರಾಜ್ಯಕ್ಕೆ ಕತ್ತಲು ಭಾಗ್ಯವನ್ನು ಕಲ್ಪಿಸಿದೆ.ರಾಜ್ಯದ ಜನರ ಸಮಸ್ಯೆಗಳಿಗೆ ಸ್ಪಂದಿಸದೇ ಕಮಿಷನ್ ಕಲೆಕ್ಷನ್ನಲ್ಲಿ ತೊಡಗಿಸಿಕೊಂಡಿದೆ. ಶೇ. 40 ರಷ್ಟು ಕಮೀಷನ್ ಸರ್ಕಾರ ಎಂದು ಬಿಜೆಪಿಯನ್ನು ದೂರಲಾಗುತ್ತಿದ್ದು, ಕಾಂಗ್ರೆಸ್ ಸರ್ಕಾರ ಶೇ. 80 ರಷ್ಟು ಕಮೀಷನ್ ನಡೆಯುತ್ತಿದೆ. ಜನರಿಗೆ ರೈತರಿಗೆ ವಿದ್ಯುತ್ ಕೊಡಲಿಕ್ಕಾಗದ ಸರ್ಕಾರ ತೊಲಗಲಿ ಎಂದು ಒತ್ತಾಯಿಸಿದರು.
ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಮಾತನಾಡಿ, ಸಿಎಂ ಸಿದ್ಧರಾಮಯ್ಯ, ಉಪ ಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್ ಕರ್ನಾಟಕವನ್ನು ಕಲೆಕ್ಷನ್ ಸೆಂಟರನ್ನಾಗಿ ಮಾಡಿದ್ದಾರೆ. ಕರ್ನಾಟಕ ಕಾಂಗ್ರೆಸ್, ರಾಹುಲ್ ಗಾಂಧಿ ಪಾಲಿಗೆ ಎಟಿಎಂ ಸರ್ಕಾರವಾಗಿದೆ. ಭ್ರಷ್ಟಾಚಾರ, ಲೂಟಿಯಲ್ಲಿ ತೊಡಗಿದೆ. ಜನ ಸಾಮಾನ್ಯರು, ರೈತರಿಗೆ ಸಮರ್ಪಕವಾಗಿ ವಿದ್ಯುತ್ ಕೊಡದ ಸರ್ಕಾರ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಮುಂಚೂಣಿಯಲ್ಲಿ ನಾವು ರೈತರಿಗೆ ಸಮರ್ಪಕ ಪ್ರಮಾಣದಲ್ಲಿ ವಿದ್ಯುತ್ ಕೊಡುತ್ತೇವೆ. ನ್ಯಾಯ ಒದಗಿಸಿಕೊಡುತ್ತೇವೆ. ಈಗ ವಿದ್ಯುತ್ ಎಲ್ಲಿದೆ ಎಂದು ಹುಡುಕುವಂತಾಗಿದೆ.
ಇಂತಹ ಸರ್ಕಾರಕ್ಕೆ ನೂರು ಬಾರಿ ಧಿಕ್ಕಾರ ಹೇಳಿದರೂ ಸಾಲದು. ರಾಜ್ಯವನ್ನು ಕತ್ತಲೆಗೆ ನೂಕಿರುವ ಕಾಂಗ್ರೆಸ್ ಸರ್ಕಾರಕ್ಕೆ ಜನರು ಛೀ, ಥೂ ಎಂದು ಉಗಿಯುತ್ತಿದ್ದಾರೆ. ತಮಿ ಳುನಾಡಿಗೆ ಕಾವೇರಿ ನೀರು ಕೊಡು ತ್ತಿರುವ ಪಂಚರಾಜ್ಯಗಳ ಚುನಾ ವಣೆಗೆ ಕಮೀಷನ್ ಹಣ ನೀಡುತ್ತಿ ರುವ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಕಿಡಿಕಾರಿದರು.
ಕಾಂಗ್ರೆಸ್ ಶಾಸಕರಾದ ಬಿ.ಆರ್. ಪಾಟೀಲ್, ಬಸವರಾಜ ರಾಯರೆಡ್ಡಿ ಅವರುಗಳೇ ಅಭಿವೃದ್ಧಿ ವಿರೋಧಿ ಸರ್ಕಾರ ಎಂದು ಹೇಳಿದ್ದಾರೆ. ಗೃಹಲಕ್ಷ್ಮಿ ಯೋಜನೆ ಯಡಿ 1.28 ಕೋಟಿ ಮಹಿಳೆಯರಲ್ಲಿ 50 ಲಕ್ಷ ಮಹಿಳೆಯರಿಗೆ ಮಾತ್ರ ಹಣ ನೀಡಲಾಗಿದೆ. ಹಾಗಾಗಿ ಮಹಿಳೆ ಯರೂ ಈ ಸರ್ಕಾರವನ್ನು ವಿರೋಧಿ ಸುವಂತಾಗಿದೆ. ಇನ್ನು ಮುಂದೆ ಕೊಡುವ 5 ಕೆಜಿ ಅಕ್ಕಿಗೆ ರಸೀದಿ ನೀಡ ಬೇಕಾಗಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಯಿ ಬಾಯಿ ಬಡಿದುಕೊಳ್ಳುವ ಪರಿಸ್ಥಿತಿ ಬರಲಿದೆ ಎಂದು ವಿಷಾದಿಸಿದರು.
ಪ್ರತಿಭಟನೆಯಲ್ಲಿ ಹರಿಹರ ಶಾಸಕ ಬಿ.ಪಿ. ಹರೀಶ್, ಮಾಜಿ ಸಚಿವ ಎಸ್.ಎ. ರವೀಂದ್ರನಾಥ್, ವಿಧಾನ ಪರಿಷತ್ ಮಾಜಿ ಸಚೇತಕ ಡಾ.ಎ.ಹೆಚ್. ಶಿವಯೋಗಿಸ್ವಾಮಿ, ಎಸ್.ವಿ. ರಾಮಚಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ, ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್, ಮಾಜಿ ಮೇಯರ್ ಬಿ.ಜಿ. ಅಜಯ್ ಕುಮಾರ್, ಎಸ್.ಟಿ. ವೀರೇಶ್, ರಾಜನಹಳ್ಳಿ ಶಿವಕುಮಾರ್, ಲೋಕಿಕೆರೆ ನಾಗರಾಜ್, ಬಿ.ಎಂ. ಸತೀಶ, ವಿಪಕ್ಷ ನಾಯಕ ಪ್ರಸನ್ನಕುಮಾರ್, ಮಂಜುಳಾ ಮಹೇಶ್ ಮತ್ತಿತರರು ಪಾಲ್ಗೊಂಡಿದ್ದರು.