ಜಿಲ್ಲೆಯಲ್ಲಿ ಒಣ ಬರ; ಶೇ.90ರಷ್ಟು ಹಾಳಾದ ಬೆಳೆ

ಜಿಲ್ಲೆಯಲ್ಲಿ ಒಣ ಬರ; ಶೇ.90ರಷ್ಟು  ಹಾಳಾದ ಬೆಳೆ

ಬೇರೆ ಜಿಲ್ಲೆಗಳಿಗಿಂತ ದಾವಣಗೆರೆಯಲ್ಲೇ ಹೆಚ್ಚು ನಷ್ಟ

ದಾವಣಗೆರೆ, ಅ. 12 – ಜಿಲ್ಲೆಯಲ್ಲಿ ಒಣ ಬರ ಉಂಟಾಗಿದ್ದು, ಮಳೆಯಾಶ್ರಿತ ಪ್ರದೇಶದಲ್ಲಿ ಶೇ.90ರಷ್ಟು ಬೆಳೆ ಹಾಳಾಗಿದೆ ಎಂದು ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣ ಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲೇ ಬೆಳೆಗಳಿಗೆ ಅತಿ ಹೆಚ್ಚಿನ ಹಾನಿಯಾಗಿದೆ ಎಂದು ಇತ್ತೀಚೆಗೆ ಭೇಟಿ ನೀಡಿದ್ದ ಕೇಂದ್ರ ಸರ್ಕಾರದ ತಂಡ ತಿಳಿಸಿದೆ ಎಂದೂ ಅವರು ಹೇಳಿದರು. ಬೇರೆ ಜಿಲ್ಲೆಗಳಲ್ಲಿ ಆಗಸ್ಟ್ ತಿಂಗಳಲ್ಲಿ ಸ್ವಲ್ಪ ಮಳೆಯಾದ ಕಾರಣ ಹಸಿರು ಬರದ ಪರಿಸ್ಥಿತಿ ಇದೆ. ಆದರೆ, ಜಿಲ್ಲೆ ಯಲ್ಲಿ ಆಗಸ್ಟ್‌ ನಲ್ಲಿ ತಾಪಮಾನ ತೀವ್ರ ಹೆಚ್ಚಾಗಿದ್ದಲ್ಲದೇ, ಮಳೆಯೂ ಇರಲಿಲ್ಲ. ಹೀಗಾಗಿ ಬೆಳೆ ಸಂಪೂರ್ಣ ಒಣಗಿದೆ ಎಂದರು.

ಜಿಲ್ಲೆಯಲ್ಲಿ 1.51 ಲಕ್ಷ ಹೆಕ್ಟೇರ್ ಮಳೆಯಾಶ್ರಿತ ಪ್ರದೇಶದಲ್ಲಿ ಬಿತ್ತನೆ ಯಾಗಿದ್ದು, ಶೇ.90ರಷ್ಟು ಹಾನಿಯಾಗಿದೆ. ಬೋರ್‌ವೆಲ್‌ ಆಶ್ರಿತ ಹಾಗೂ ನದಿ ದಡದಲ್ಲಿರುವ ಹೊಲಗಳಲ್ಲಿ ಅರ್ಧದಷ್ಟು ಬೆಳೆ ಉಳಿಸಿಕೊಳ್ಳಲು ಸಾಧ್ಯವಾಗಿದೆ ಎಂದರು. ಜಿಲ್ಲೆಯಲ್ಲಿ 119 ಕೋಟಿ ರೂ. ಬೆಳೆ ಹಾನಿ ಪರಿಹಾರ ನೀಡುವಂತೆ ಕೋರಲಾಗಿದೆ. ನೆರವು ಬಿಡುಗಡೆಯಾದ ನಂತರ ರೈತರ ಖಾತೆಗಳಿಗೆ ನೇರವಾಗಿ ಪರಿಹಾರ ಜಮಾ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲೆಯಲ್ಲಿ 6.43 ಲಕ್ಷ ಜಾನುವಾರುಗಳಿಗೆ ಮೇವಿನ ಅಗತ್ಯವಿದೆ. ಪ್ರಸಕ್ತ 30-40 ವಾರಗಳಿಗೆ ಆಗುವಷ್ಟು ಮೇವು ಲಭ್ಯವಿದೆ. ಭತ್ತದ ಮೂಲಕವೂ ಮೇವು ಸಿಗುವ ನಿರೀಕ್ಷೆ ಇದೆ ಎಂದು ವೆಂಕಟೇಶ್ ಹೇಳಿದರು.

ಯಾಂತ್ರಿಕ ಕಟಾವಿನ ಬದಲು ಮಾನವ ಶ್ರಮದಿಂದ ಭತ್ತದ ಕಟಾವು ಮಾಡಿದರೆ, ಹೆಚ್ಚು ಮೇವು ಸಿಗುವ ನಿರೀಕ್ಷೆ ಇದೆ. ಈ ಬಗ್ಗೆ ರೈತರಿಗೆ ಮನವೊಲಿಸಲಾಗುತ್ತಿದೆ ಎಂದೂ ಅವರು ತಿಳಿಸಿದರು.

ಶಾಸಕರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಮಟ್ಟದಲ್ಲಿ ಬರ ನಿರ್ವಹಣೆಗೆ ಕಾರ್ಯಪಡೆ ರೂಪಿಸಲಾಗಿದೆ. ಈ ಕಾರ್ಯಪಡೆಯು ಪ್ರತಿ ಹದಿನೈದು ದಿನಗಳಿಗೊಮ್ಮೆ ಸಭೆ ನಡೆಸಿ ಕ್ರಮ ತೆಗೆದುಕೊಳ್ಳಲಿದೆ. ಬರ ಪರಿಸ್ಥಿತಿ ಎದುರಿಸಲು ಸಮರೋಪಾದಿಯಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಪಟಾಕಿ ಮಾರಾಟಕ್ಕೆ ಸಂಬಂಧಿಸಿದಂತೆ ಉಪವಿಭಾಗಾಧಿಕಾರಿಗಳ ನೇತೃತ್ವದಲ್ಲಿ ತಂಡಗಳನ್ನು ರಚಿಸಲಾಗಿದೆ. ಪಟಾಕಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವವರಿಗೆ ಮಾತ್ರ ಮಾರಾಟದ ಅನುಮತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

error: Content is protected !!