ಲಿಂ.ಜಯದೇವ ಜಗದ್ಗುರುಗಳುತ್ರಿವಿಧ ದಾಸೋಹದ ಪಿತಾಮಹ

ಲಿಂ.ಜಯದೇವ ಜಗದ್ಗುರುಗಳುತ್ರಿವಿಧ ದಾಸೋಹದ ಪಿತಾಮಹ

ಲಿಂ.ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 67ನೇ ಸ್ಮರಣೋತ್ಸವದಲ್ಲಿ ಬಸವಪ್ರಭು ಶ್ರೀ

ರಾಜಮನೆತನಗಳಿಂದ ಗೌರವ

ಜಯದೇವ ಜಗದ್ಗುರುಗಳವರಿಗೆ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರು,  ಕೊಲ್ಲಾಪುರದ ಶಾಹು ಮಹಾರಾಜರು, ಸುರಪುರದ ನಾಯಕರು‌, ಕೆಳದಿ ಅರಸರು, ಕೊಡಗಿನ ಮಹಾರಾಜರು, ಚಿತ್ರದುರ್ಗದ ಪಾಳೆಯಗಾರರು ‌ಹೀಗೆ ಅನೇಕ ರಾಜಮನೆತನಗಳು ಗೌರವಿಸಿದ್ದವು ಎಂದು ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.

ದಾವಣಗೆರೆ, ಅ.12- ಜಗತ್ತಿನಲ್ಲಿ ತ್ರಿವಿಧ ದಾಸೋ ಹದ ಪಿತಾಮಹ ಶ್ರೀ ಜಯದೇವ ಜಗದ್ಗುರುಗಳು ಎಂದು ಚಿತ್ರದುರ್ಗ ಮುರುಘಾ ಮಠದ ಉಸ್ತುವಾರಿ ಶ್ರೀ ಬಸವ ಪ್ರಭು ಸ್ವಾಮೀಜಿ ಬಣ್ಣಿಸಿದರು.

ಲಿಂ.ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 67ನೇ ವರ್ಷದ ಸ್ಮರಣೋತ್ಸವ, ರಥೋತ್ಸವ ಹಾಗೂ ವಚನ ಗ್ರಂಥ ಮೆರವಣಿಗೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಶ್ರೀ ಮುರುಘಾ ಮಠದಲ್ಲಿ ಬಡವರಿಗೆ ಪ್ರತಿ ನಿತ್ಯವೂ ಅನ್ನ ದಾಸೋಹ, ಬಡಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದು ಅಕ್ಷರ ದಾಸೋಹ,  ಬಡಮಕ್ಕಳಿಗೆ ಉಚಿತ ಹಾಸ್ಟೆಲ್ ಸ್ಥಾಪಿಸಿ ಉಚಿತ ಆಶ್ರಯವನ್ನು ನೀಡುವುದೇ ಆಶ್ರಯ ದಾಸೋಹವಾಗಿದೆ. ಹೀಗೆ ಈ ಜಗತ್ತಿಗೆ ತ್ರಿವಿಧ ದಾಸೋಹದ ಸೇವೆಯನ್ನು ಸಲ್ಲಿಸಿ ನಾಡಿನ ಬಡವರ,  ನೊಂದವರ, ಶೋಷಿತರ ಬದುಕನ್ನು ಕಟ್ಟಿ ಕೊಟ್ಟ ಮಹಾತ್ಮರು ಜಯದೇವ ಜಗದ್ಗುರುಗಳವರಾಗಿದ್ದಾರೆ ಎಂದು ಹೇಳಿದರು.

ಸ್ವಾತಂತ್ರ್ಯ ಪೂರ್ವದಲ್ಲಿಯೇ ಉಚಿತ ಹಾಸ್ಟೆಲ್‌ಗಳನ್ನು ದೇಶದಾದ್ಯಂತ ಸ್ಥಾಪಿಸಿ ಶಿಕ್ಷಣ ಕ್ರಾಂತಿಯನ್ನು ಮಾಡುವ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಜಯದೇವ ಜಗದ್ಗುರು ಗಳವರ ಪಾತ್ರ ಬಹು ದೊಡ್ಡದಾಗಿದೆ ಎಂದು ಹೇಳಿದರು.

ಜಯದೇವ ಜಗದ್ಗುರುಗಳವರು ಕೇವಲ ಒಂದು ಜನಾಂಗಕ್ಕೆ, ಧರ್ಮದವರಿಗೆ ಸೀಮಿತವಾಗಿ ಸಮಾಜಸೇವಾ ಕಾರ್ಯಗಳನ್ನು ಮಾಡಿಲ್ಲ. ಅವರು ಸರ್ವ ಸಮಾಜದವರಿಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿ ನಮಗೆಲ್ಲರಿಗೂ ಆದರ್ಶರಾಗಿದ್ದಾರೆ ಎಂದರು.

ಅಲ್ಲಮ ಪ್ರಭುಗಳ ವಚನದಂತೆ `ಕಂದಲು ಕರಗಿತ್ತು, ಬೆಣ್ಣೆ ಉಳಿಯಿತ್ತು’ ಎನ್ನುವಂತೆ ಪೂಜ್ಯರು ಬದುಕಿದ್ದಾರೆ. ಬೆಣ್ಣೆಯನ್ನು ಕಾಯಿಸಲು ಇಟ್ಟಾಗ ಬೆಣ್ಣೆ ಕರಗುತ್ತದೆ. ಆದರೆ, ಇಲ್ಲಿ ಪಾತ್ರೆ ಕರಗಿದೆ ಎಂದು ಅಲ್ಲಮಪ್ರಭು ಹೇಳಿದ್ದಾರೆ. ಇದರರ್ಥ ಪಾತ್ರೆ ಎಂದರೆ ಮಾನವನ ದೇಹ, ಅದು ಕರಗುತ್ತದೆ. ಬೆಣ್ಣೆ ಎಂದರೆ ಸತ್ಕಾರ್ಯಗಳು ಎಂದರ್ಥ. ಮಾನವ ಒಂದು ದಿನ ಕರಗಿ ಹೋಗುವನು. ಆದರೆ ಮಾನವನು ಮಾಡಿದ ಸತ್ಕಾರ್ಯಗಳು ಹಾಗೆಯೇ ಜಗತ್ತಿನಲ್ಲಿ ಸದಾಕಾಲವೂ ಇರುತ್ತವೆ. ಮಾನವನ ಕಾಯವು ನಶ್ವರ, ಕಾರ್ಯಗಳು ಅಮರ. ಸತ್ಕಾರ್ಯಗಳಿಗೆ ಸಾವಿಲ್ಲ. ಹಾಗಾಗಿ ಅವರು ಅಮರರಾಗಿದ್ದಾರೆ. ನಾವು ನಮ್ಮ ಬದುಕಿನಲ್ಲಿ ಸತ್ಕಾರ್ಯಗಳನ್ನು ಮಾಡಿ ಪುಣ್ಯವನ್ನು ಸಂಪಾದಿಸಬೇಕು ಎಂದು ಹೇಳಿದರು.

ಜಯದೇವ ಜಗದ್ಗುರುಗಳವರು ದಾವಣಗೆರೆಯಲ್ಲಿ 1917ರಲ್ಲಿ ನಡೆದ ಅಖಿಲ ಭಾರತ ವೀರಶೈವ ಮಹಾ ಅಧಿವೇಶ ನದಲ್ಲಿ ಭಾಗವಹಿಸಿ ವೀರಶೈವ ಮಹಾಸಭಾಕ್ಕೆ ಚಿರಸ್ಥಾಯಿ ಫಂಡ್ ಎಂದು ಸ್ಥಾಪಿಸಿ ಅವರೇ ಅಂದು 61 ಸಾವಿರ ರೂ. ನೀಡಿ ನಾಡಿನಲ್ಲಿ ವೀರಶೈವ ಮಹಾಸಭೆ ಬೆಳೆಯಲು ಆರ್ಥಿಕ ಶಕ್ತಿಯನ್ನು ತುಂಬಿದ್ದರು ಎಂದು ಸ್ಮರಿಸಿದರು.

ಚಿತ್ರದುರ್ಗ ವನಶ್ರೀ ಮಠದ ಶ್ರೀ ಬಸವಕುಮಾರ ಸ್ವಾಮೀಜಿ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಜೊತೆಯಲ್ಲಿ ಕರ್ನಾಟಕದಲ್ಲಿ ಅಕ್ಷರ ಹಾಗೂ ಅನ್ನ ದಾಸೋಹದ ಮೂಲಕ ಬಡವರ ಬೆಳಕಾಗಿದ್ದವರು ಲಿಂ.ಶ್ರೀ ಜಯದೇವ ಮುರುಘರಾಜೇಂದ್ರ ಸ್ವಾಮಿಗಳು ಎಂದರು.

ಸಿದ್ಧಗಂಗಾ ಶ್ರೀಗಳಿಗೆ ಅನ್ನದಾಸೋಹಕ್ಕೆ ಮೂಲ ಪ್ರೇರಣಾ ಶಕ್ತಿಯೇ ಜಯದೇವ ಜಗದ್ಗುರುಗಳಾಗಿದ್ದರು.  ಮೈಸೂರು ಬ್ಯಾಂಕ್ ಸ್ಥಾಪನೆಯಲ್ಲೂ ಅವರ ಪಾತ್ರ ಮಹತ್ವದ್ದಾಗಿತ್ತು. 

ಜಯದೇವ ಶ್ರೀಗಳ ಗದ್ದುಗೆಗೆ ನಡೆದುಕೊಂಡವರ, ಅವರ ಸ್ಮರಣೆ ಮಾಡಿದ ಎಲ್ಲಾ ಮನೆತನಗಳೂ ಇಂದೂ ಉದ್ಧಾರವಾಗಿವೆ ಎಂದು ಹೇಳಿದರು.

ಹೆಬ್ಬಾಳು ವಿರಕ್ತ ಮಠದ ಶ್ರೀ ಮಹಾಂತ ರುದ್ರೇಶ್ವರ ಮಹಾಸ್ವಾಮೀಜಿ, ಮಡಿವಾಳ ಗುರುಪೀಠದ ಶ್ರೀ ಬಸವ ಮಾಚಿದೇವ ಸ್ವಾಮೀಜಿ, ಗುರುಮಠಕಲ್ ಮಠದ ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ, ನಿಪ್ಪಾಣಿಯ ಶ್ರೀ ಬಸವ ಮಲ್ಲಿಕಾರ್ಜುನ ಸ್ವಾಮೀಜಿ, ಬ್ಯಾಡಗಿ ಶ್ರೀ ಚನ್ನ ಮಲ್ಲಿಕಾರ್ಜುನ ಸ್ವಾಮೀಜಿ,  ತಿಳುವಳ್ಳಿ ಶ್ರೀ ನಿರಂಜನ ಸ್ವಾಮೀಜಿ, ಐರಣಿ ಶ್ರೀ ಬಸವ ಗಜದಂಡ ಸ್ವಾಮೀಜಿ,   ಜಗಳೂರು ಶ್ರೀ ಪ್ರಭುಲಿಂಗ ಸ್ವಾಮೀಜಿ, ಶ್ರೀ ಬಸವ ಕುಂಬಾರ ಗುಂಡಯ್ಯ ಸ್ವಾಮೀಜಿ,  ರಾಣೆಬೆನ್ನೂರು ಶ್ರೀ ಗುರುಬಸವ ಸ್ವಾಮೀಜಿ, ಶ್ರೀ ಬಸವಾದಿತ್ಯ ದೇವರು ಉಪಸ್ಥಿತರಿದ್ದರು. 

ಇದೇ ವೇಳೆ ಜಯದೇವ ಲೀಲೆ ಪ್ರವಚನವನ್ನು ಮಹಾಂತೇಶ ಶಾಸ್ತ್ರಿಗಳು ನಡೆಸಿಕೊಟ್ಟರು. ಜಮುರಾ ಕಲಾವಿದರು ವಚನ ಗೀತೆ ಹಾಡಿದರು. ಡಾ.ಎನ್.ಜೆ. ಶಿವಕುಮಾರ್ ನಿರೂಪಿಸಿದರು. ಕುಂಟೋಜಿ ಚನ್ನಪ್ಪ ಸ್ವಾಗತಿಸಿದರು.

error: Content is protected !!