ಕಾಂಗ್ರೆಸ್ ಪಕ್ಷಕ್ಕೆ ಹೊಸಬರು ಬರಬಾರದೆಂಬ ನಿಯಮವಿದೆಯೇ?

ಕಾಂಗ್ರೆಸ್ ಪಕ್ಷಕ್ಕೆ ಹೊಸಬರು ಬರಬಾರದೆಂಬ ನಿಯಮವಿದೆಯೇ?

ಲೋಕಸಭಾ ಚುನಾವಣಾ ಟಿಕೆಟ್ ಆಕಾಂಕ್ಷಿ ಜಿ.ಬಿ. ವಿನಯ್ ಕುಮಾರ್ ಪ್ರಶ್ನೆ

ದಾವಣಗೆರೆ, ಅ.11- ದಾವಣಗೆರೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೊಸಬರು ಬರಬಾರದು ಎಂಬ ನಿಯಮ ಇದೆಯೇ? ಎಂದು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಬಲ ಟಿಕೆಟ್‌ ಆಕಾಂಕ್ಷಿ ಜಿ.ಬಿ. ವಿನಯ್ ಕುಮಾರ್ ಪ್ರಶ್ನಿಸಿದ್ದಾರೆ.

ಬುಧವಾರ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಪ್ರಜೆಯೇ ಪ್ರಭು. ಎಲ್ಲರೂ ಪ್ರಜೆಗಳಿಂದಲೇ ನಾಯಕರಾಗಿದ್ದಾರೆ. ಯಾರನ್ನೂ ನೇಮಿಸಿ ನಾಯಕನನ್ನಾಗಿ ಮಾಡಿರುವುದಿಲ್ಲ. ಪ್ರದೀಪ್ ಈಶ್ವರ್ ರಾಜಕಾರಣಿಯೇ ಅಲ್ಲ. ಅವರಿಗೆ ವರಿಷ್ಠರು ಟಿಕೆಟ್ ಕೊಟ್ಟಿದ್ದರು.  ಅಲ್ಲಿನ ಕಾರ್ಯಕರ್ತರು ಹೊಸಬರು ಎನ್ನದೆ ಗೆಲ್ಲಿಸಿದರು. ದಾವಣಗೆರೆ ಕ್ಷೇತ್ರದಲ್ಲಿ ಏಕೆ `ಹೊಸಬ’ ಎಂಬ ಮಾತು? ಶಿವಕುಮಾರ್ ಒಡೆಯರ್ ಅವರಿಗೆ ಏಕೆ ಈ ಪ್ರಶ್ನೆ ಕೇಳುವುದಿಲ್ಲ?  ಎಂದವರು ಪ್ರಶ್ನಿಸಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಯಾರಾ ದರೂ ಟಿಕೆಟ್ ಆಕಾಂಕ್ಷಿಯಾಗ ಬಹುದು. ಎಲ್ಲಾ ಆಕಾಂಕ್ಷಿಗಳೂ ಟಿಕೆಟ್‌ಗೆ ಅರ್ಜಿ ಸಲ್ಲಿಸಲಿ. ಜನರ ಬಾಯಲ್ಲಿ ಯಾರ ಹೆಸರು ಬರುತ್ತದೋ ಅವರಿಗೆ ಟಿಕೆಟ್ ನೀಡಲಿ ಎಂದು ವಿನಯ್ ಕುಮಾರ್ ಹೇಳಿದರು.

ಕಳೆದ ಮೂರು ತಿಂಗಳಿನಿಂದ ಪಕ್ಷ ಸಂಘಟನೆ ಮಾಡುತ್ತಿದ್ದೇನೆ. ಜನರ ಸಮಸ್ಯೆ ಅರಿಯುತ್ತಿದ್ದೇನೆ. ಎಲ್ಲಾ ಕಡೆ ನನಗೆ ಬೆಂಬಲ ಸಿಗುತ್ತಿದೆ. ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಸಿಗುತ್ತದೆ ಎಂಬ ಬಲವಾದ ವಿಶ್ವಾಸವಿದೆ ಎಂದು ಹೇಳಿದರು.

ಟಿಕೆಟ್ ಕೊಡದಿದ್ದರೆ ಬೇರೆ ಪಕ್ಷ ಸೇರುವುದಿಲ್ಲ. ಸ್ವತಂತ್ರವಾಗಿಯೂ ಸ್ಪರ್ಧಿಸುವುದಿಲ್ಲ. ಕೊನೆಯ ವರೆಗೂ ಕಾಂಗ್ರೆಸ್‌ನಲ್ಲಿರುತ್ತೇನೆ. ನನಗೆ ಟಿಕೆಟ್ ಕೊಟ್ಟರೆ ಬೇರೆ ನಾಯಕರು ನನ್ನನ್ನು ಬೆಂಬಲಿಸಲಿ, ಬೇರೆಯವರಿಗೆ ಟಿಕೆಟ್ ಸಿಕ್ಕರೆ ಅವರನ್ನು ನಾನು ಬೆಂಬಲಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.

ಒಂದಿಬ್ಬರಷ್ಟೇ ನಾಯಕರಲ್ಲ: ಜಿಲ್ಲೆಯಲ್ಲಿ ಒಂದಿಬ್ಬರು ಮಾತ್ರ ನಾಯಕರಲ್ಲ. ನಾಯಕರೆಂದರೆ ಕೇವಲ ಸಚಿವರು, ಶಾಸಕರಷ್ಟೇ ಅಲ್ಲ. ಸಮಾಜದಲ್ಲಿ ರಾಜಕಾರಣಿಗಳೂ ಇರುತ್ತಾರೆ. ಸಮಾಜದ ನಾಯಕರೂ ಇರುತ್ತಾರೆ ಎಂದು ವಿನಯ್ ಕುಮಾರ್ ಸ್ಥಳೀಯ ನಾಯಕರುಗಳಿಗೆ ತಿರುಗೇಟು ನೀಡಿದರು.

ವಾರದೊಳಗೆ ಮಲ್ಲಿಕಾರ್ಜುನ್, ಶಿವಶಂಕರಪ್ಪ ಭೇಟಿ: ಕಳೆದ 2 ತಿಂಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವರು, ಶಾಸಕರ ಸಭೆ ಕರೆದಿದ್ದರು. ಅಲ್ಲಿ ನನ್ನ ಹೆಸರು ಪ್ರಸ್ತಾಪವಾಗಿತ್ತು. ದಾವಣಗೆರೆ ಕ್ಷೇತ್ರದಲ್ಲಿ ಸಂಚರಿಸುವಂತೆ ಮುಖ್ಯಮಂತ್ರಿಗಳೇ ಸೂಚಿಸಿದ್ದರು.  ಎಲ್ಲಾ ನಾಯಕರನ್ನೂ ಭೇಟಿ ಮಾಡುವಂತೆ ಹೇಳಿದ್ದರು. ಅದರಂತೆ ಎಲ್ಲಾ ನಾಯಕರನ್ನೂ ಈಗಾಗಲೇ ಭೇಟಿ ಮಾಡಿ ಬೆಂಬಲ ಕೋರಿದ್ದೇನೆ.  ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಶಾಮನೂರು ಶಿವಶಂಕರಪ್ಪ ಅವರನ್ನು ಇನ್ನೊಂದು ವಾರದಲ್ಲಿ  ಭೇಟಿ ಮಾಡಿ ಅವರ ಬೆಂಬಲವನ್ನೂ ಕೋರಲಿದ್ದೇನೆ ಎಂದು ಹೇಳಿದರು.

ಕೆಲಸ ಮಾಡಿ ಬಾ ಎಂದಿದ್ದರು ಎಸ್ಸೆಸ್ಸೆಂ: ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರನ್ನು ಭೇಟಿ ಮಾಡಲು ಅವರಿಗೆ ಕರೆ ಮಾಡಿದ್ದೆ. ನೀನಿನ್ನೂ ಹೊಸಬ, ಕ್ಷೇತ್ರದಲ್ಲಿ ಕೆಲಸ ಮಾಡಿ ಬಾ ಎಂದು ಅವರು ಹೇಳಿದ್ದರು. ಅದರಂತೆ ಮೂರು ತಿಂಗಳು ಕ್ಷೇತ್ರ ಸಂಚರಿಸಿ, ಕೆಲಸ ಮಾಡಿದ್ದೇನೆ.  ಅವರ ವಿಶ್ವಾಸ ಗಳಿಸದೇ ಮುಂದುವರೆಯುವುದು ಕಷ್ಟ ಎಂದು ಗೊತ್ತಿದೆ. ವಾರದೊಳಗೆ ಭೇಟಿ ಮಾಡುತ್ತೇನೆ ಎಂದರು.

ಮಂಜಪ್ಪಗೆ ಅಭದ್ರತೆ: ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಹೆಚ್.ಬಿ. ಮಂಜಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ವಿನಯ್ ಕುಮಾರ್,  ಮಂಜಪ್ಪ  ಅವರಿಗೆ ಅಭದ್ರತೆ ಕಾಡುತ್ತಿರಬಹುದು. ಹಾಗಾಗಿ ಈ ರೀತಿ ಮಾತನಾಡಿರಬಹುದು. ಮಂಜಪ್ಪ ಅವರಿಗೆ ನಾನು ಕರೆ ಮಾಡಿದ್ದೇನೆ. ಇತ್ತೀಚೆಗೆ ಭೇಟಿಯನ್ನು ಮಾಡಿದ್ದೇನೆ. ಕಳೆದ ಮೂರು ತಿಂಗಳನಿಂದಲೂ ಬೆಂಬಲ ಕೇಳುತ್ತಿದ್ದೇನೆ ಎಂದರು.

ಚನ್ನಗಿರಿ ಶಾಸಕರು ಬೆಂಬಲಿಸಿದ್ದಾರೆ: ವಿನಯ್ ಕುಮಾರ್ ಅಂತವರು ಪಕ್ಷಕ್ಕೆ ಬರಬೇಕು. ಅವರು ಪಕ್ಷದ ಆಸ್ತಿ ಎಂದು ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ ಎಂದರು.

ಬೆಂಬಲಿಸದಿದ್ದರೆ ಪಕ್ಷ ದ್ರೋಹ: ಪ್ರಜಾಪ್ರಭುತ್ವದಲ್ಲಿ ಸಂಘಟನೆ ಮಾಡಲು ಪ್ರತಿಯೊಬ್ಬರಿಗೂ ಹಕ್ಕಿದೆ. ಅದನ್ನು ಪಕ್ಷದ ಲಾಭಕ್ಕಾಗಿ ಮಾಡುತ್ತಿದ್ದೇನೆ. ಜನರೇ ನಾನು ಪ್ರಬಲ ಆಕಾಂಕ್ಷಿ ಎಂದು ಹೇಳುತ್ತಿದ್ದಾರೆ.  ನನಗೆ ಟಿಕೆಟ್ ಕೊಟ್ಟರೂ ಪಕ್ಷದಲ್ಲಿದ್ದವರು ಬೆಂಬಲ ನೀಡದಿದ್ದರೆ ಅದು ಪಕ್ಷಕ್ಕೆ ದ್ರೋಹ ಬಗೆದಂತಾಗುತ್ತದೆ. ಆ ರೀತಿ ಯಾರೂ ಮಾಡುವುದಿಲ್ಲ ಎಂಬ ವಿಶ್ವಾಸವಿದೆ ಎಂದರು.

error: Content is protected !!