ಮಾನಸಿಕ, ದೈಹಿಕ ಸಾಮರ್ಥ್ಯದತ್ತ ಇರಲಿ ಚಿತ್ತ

ಮಾನಸಿಕ, ದೈಹಿಕ ಸಾಮರ್ಥ್ಯದತ್ತ ಇರಲಿ ಚಿತ್ತ

ಎಡಿಜಿಪಿ ಅಲೋಕ್ ಕುಮಾರ್

ದಾವಣಗೆರೆ, ಅ. 11- ಪೊಲೀಸರು ಮಾನಸಿಕ ಮತ್ತು ದೈಹಿಕ ಸಾಮರ್ಥ್ಯದ ಕಡೆ ಹೆಚ್ಚು ಗಮನಹರಿಸಬೇಕು. ಕೌಟುಂಬಿಕ ಹಾಗೂ ವೈಯಕ್ತಿಕ ಸಮಸ್ಯೆಗಳಿಗೆ ಎದೆಗುಂದದೇ ಧೈರ್ಯದಿಂದ ಸಮರ್ಥವಾಗಿ ಎದುರಿಸಬೇಕು ಎಂದು ಬೆಂಗಳೂರಿನ ಪೊಲೀಸ್ ತರಬೇತಿ ಕೇಂದ್ರದ ಎಡಿಜಿಪಿ ಅಲೋಕ್ ಕುಮಾರ್ ಕರೆ ನೀಡಿದರು.

ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಇಂದು ಬೆಳಿಗ್ಗೆ ಪರಿವೀಕ್ಷಣೆ ನಡೆಸಿ, ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಪೊಲೀಸ್ ಸಿಬ್ಬಂದಿ ತಮ್ಮ ಹಾಗೂ ಕುಟುಂಬದವರ ಆರೋಗ್ಯದ ಕಡೆ ಹೆಚ್ಚು ಗಮನಹರಿಸುವ ಜೊತೆಗೆ ಕರ್ತವ್ಯದಲ್ಲಿದ್ದಾಗ ಸಾರ್ವಜನಿಕರೊಂದಿಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕೆಂದು ಕರೆ ನೀಡಿದರು.

ಸಾರ್ವಜನಿಕರ ಆಸ್ತಿ ಪಾಸ್ತಿ ಕಾಪಾಡುವ ಜೊತೆಗೆ ಅಮೂಲ್ಯವಾದ ಜೀವಗಳನ್ನು ರಕ್ಷಣೆ ಮಾಡುವುದು ಸಹ ಆದ್ಯ ಕರ್ತವ್ಯವಾಗಿರುತ್ತದೆ. ಠಾಣೆಗಳಲ್ಲಿ ದಾಖಲಾದ ಪ್ರಕರಣಗಳನ್ನು ಕೂಡಲೇ ವಿಲೇವಾರಿ ಮಾಡಿ, ಸಾರ್ವಜನಿಕರಿಗೆ ಸೂಕ್ತ ನ್ಯಾಯ ದೊರಕಿಸಿಕೊಡಬೇಕೆಂದು ಹಿತ ನುಡಿದರು.

ದಾವಣಗೆರೆ ಶರಣರು, ಸಂತರು, ಮಹನೀಯರುಗಳು ಜನಿಸಿದ ಪುಣ್ಯಭೂಮಿ. ದಾವಣಗೆರೆ ಶಾಂತಿಯ ತೋಟ. ಹಿಂದಿನ ಘಟನೆಗಳು ಮರುಕಳಿಸದೇ, ಶಾಂತಿ, ಸೌಹಾರ್ದಯುತವಾದ ಜನಜೀವನವನ್ನು ನಾವು ಕಾಣಬಹುದಾಗಿದೆ. ಟ್ರಾಫಿಕ್ ಮತ್ತು ಪಾರ್ಕಿಂಗ್ ಸಮಸ್ಯೆಗಳು ಗಣನೀಯವಾಗಿ ಕಡಿಮೆಯಾಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠಾನಗೊಂಡ ತದನಂತರದಲ್ಲಿ ದಾವಣಗೆರೆ ನಗರ ಕೂಡ ಸ್ಮಾರ್ಟ್ ಆಗುತ್ತಿದೆ. ಆದರೆ ಸೈಬರ್ ಕ್ರೈಮ್‌ ಬಗ್ಗೆ ಪೊಲೀಸರು ಮತ್ತು ಸಾರ್ವಜನಿಕರು ಹೆಚ್ಚು ನಿಗಾವಹಿಸಬೇಕು. ಮೊದಲಿದ್ದ ಅಪರಾಧಗಳ ಸ್ವರೂಪ ಬದಲಾಗುತ್ತಿದ್ದು, ತುಂಬಾ ಎಚ್ಚರಿಕೆಯಿಂದ ಸಾರ್ವಜನಿಕರು ವ್ಯವಹರಿಸಬೇಕಾಗಿದೆ ಎಂದು ತಿಳಿಸಿದರು.

ದಾವಣಗೆರೆ ಜಿಲ್ಲೆಯಲ್ಲಿ ಕೊಲೆ ಪ್ರಕರಣಗಳು ಸಹ ಕಡಿಮೆಯಾಗಿದ್ದು, ನಗರ ಶಾಂತಿಯ ತೋಟವಾಗಿ ಬದಲಾಗುತ್ತಿದೆ. ಬೀಟ್ ವ್ಯವಸ್ಥೆ ಅತ್ಯಂತ ಮಹತ್ವವಾ ಗಿದ್ದು, ಅದನ್ನು ಇನ್ನಷ್ಟು ಬಲಪಡಿಸುವ ಕಡೆ ಅಧಿಕಾರಿ ಗಳು ಗಮನಹರಿಸಬೇಕೆಂದು ಸೂಚನೆ ನೀಡಿದರು.

ಶಿಸ್ತು ಮತ್ತು ಗುರಿ ಸಾಧನೆಗೆ ಕವಾಯತು ತುಂಬಾ ಸಹಕಾರಿಯಾಗಲಿದೆ. ಸಂಪ್ರದಾಯವಾಗಿ ನಡೆದುಕೊಂಡು ಬಂದಿರುವ ಕವಾಯತು ಉದ್ದೇಶದ ಬಗ್ಗೆ ಅರಿಯಬೇಕಾಗಿದೆ. ಎಸ್ಪಿ ಉಮಾ ಪ್ರಶಾಂತ್ ಅವರು ಉತ್ತಮವಾಗಿ ಕವಾಯತು  ಮುನ್ನಡೆಸಿದ್ದು, ಅವರಿಗೆ ಡಿಎಆರ್ ಪ್ರಕಾಶ್ ಅವರು ಕೂಡ ಸಾಥ್ ನೀಡುವ ಮೂಲಕ ಯಶಸ್ವಿಗೊಳಿಸಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕವಾಯತು ತಂಡಗಳ ನಾಯಕಿಯಾಗಿ ಎಸ್ಪಿ ಉಮಾ ಪ್ರಶಾಂತ್, ಉಪ ನಾಯಕರಾಗಿ ಡಿಎಆರ್ ಡಿವೈಎಸ್ಪಿ ಪಿ.ಬಿ. ಪ್ರಕಾಶ್ ಅವರು ಕವಾಯತು ನಡೆಸಿಕೊಟ್ಟರು.

ಡಿಎಆರ್ ಹಾಗೂ ನಾಗರಿಕ ಪೊಲೀಸ್ ಸಿಬ್ಬಂದಿ ಒಳಗೊಂಡಂತೆ ಪೊಲೀಸ್ ನಿರೀಕ್ಷಕರ ನೇತೃತ್ವದಲ್ಲಿ ಎಂಟು ತಂಡಗಳು ಕವಾಯತುವಿನಲ್ಲಿ ಭಾಗವಹಿಸಿದ್ದವು.

ಕವಾಯತುವಿನಲ್ಲಿ ಗೌರವ ವಂದನೆ ಸ್ವೀಕರಿಸಿದ ನಂತರ ಜಿಲ್ಲೆಯಲ್ಲಿ ವಿವಿಧ ಕರ್ತವ್ಯಗಳಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ್ದ 13 ಅಧಿಕಾರಿ ಸಿಬ್ಬಂದಿಗೆ ಶ್ಲ್ಯಾಘನೀಯ ಪತ್ರ ಹಾಗೂ ನಗದು ಬಹುಮಾನ ನೀಡಲಾಯಿತು.

ಈ ಸಂದರ್ಭದಲ್ಲಿ ಐಜಿಪಿ ಡಾ. ತ್ಯಾಗರಾಜನ್, ಅಡಿಷನಲ್ ಎಸ್ಪಿ ರಾಮಗೊಂಡ ಬಸರಗಿ, ಡಿವೈಎಸ್ಪಿ ಬಿ.ಎಸ್. ಬಸವರಾಜ್, ಪಿ.ಬಿ. ಪ್ರಕಾಶ್, ಗ್ರಾಮಾಂತರ ಉಪ ವಿಭಾಗದ ಪ್ರಶಾಂತ್ ಮುನೋಳಿ, ಚನ್ನಗಿರಿ ಉಪವಿಭಾಗದ ಮಲ್ಲೇಶ್ ದೊಡ್ಡಮನಿ, ನಗರ ಉಪ ವಿಭಾಗದ ನಾಗಪ್ಪ ಬಂಕಾಳಿ ಮತ್ತಿತರರು ಭಾಗವಹಿಸಿದ್ದರು.

error: Content is protected !!