ಭದ್ರಾ ನೀರು: ಒತ್ತಡ ಹೇರುವಂತೆ ಒತ್ತಾಯ

ಭದ್ರಾ ನೀರು: ಒತ್ತಡ ಹೇರುವಂತೆ ಒತ್ತಾಯ

ಹರಿಹರ ತಾಲ್ಲೂಕು ರೈತರಿಂದ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಭೇಟಿ

ದಾವಣಗೆರೆ, ಅ. 10 – ಭದ್ರಾ ಜಲಾಶಯದಿಂದ ಬಲದಂಡೆ ನಾಲೆಗೆ ಹರಿಸುತ್ತಿರುವ ನೀರನ್ನು ಆಫ್ ಅಂಡ್ ಆನ್ ಮಾಡದೇ ಸತತವಾಗಿ ನೀರು ಹರಿಸುವಂತೆ ಸಿಎಂ ಹಾಗೂ ಡಿಸಿಎಂ ಮೇಲೆ ಒತ್ತಡ ಹಾಕಿ ಎಂದು ಹರಿಹರ ತಾಲ್ಲೂಕಿನ ರೈತರು ಜಿಲ್ಲಾ ಉಸ್ತುವಾರಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ಅವರನ್ನು ಇಂದು ಭೇಟಿ ಮಾಡಿ ಒತ್ತಾಯಿಸಿದರು.

ಸತತವಾಗಿ ನೀರು ಹರಿಸುವಂತೆ ಹೇಳುತ್ತೇನೆ : ಎಸ್ಸೆಸ್ಸೆಂ – ಭದ್ರಾ ಕಾಡಾ ಸಮಿತಿ ಮಾಡಿರುವ ತೀರ್ಮಾನದಂತೆ ಇದೇ ದಿನಾಂಕ 16 ರಿಂದ 25 ರವರೆಗೆ 10 ದಿವಸ ಬಲದಂಡೆ ನಾಲೆಯಲ್ಲಿ ನೀರು ಬಂದ್ ಮಾಡಲಾಗುವುದು. ಅಚ್ಚು ಕಟ್ಟು ಪ್ರದೇಶದಲ್ಲಿ ಭತ್ತದ ಬೆಳೆ ಕಾಳು ಕಟ್ಟುವ ಹಂತದಲ್ಲಿರುವುದರಿಂದ ನೀರಿನ ಅವಶ್ಯಕತೆ ಇರುತ್ತದೆ. 

ಈ ಸಂದರ್ಭದಲ್ಲಿ 10 ದಿವಸ ನಾಲೆಯಲ್ಲಿ ನೀರು ಬಂದ್ ಮಾಡುವುದರಿಂದ ಭತ್ತದ ಬೆಳೆಗೆ ತೊಂದರೆ ಆಗಲಿದೆ ಎಂದು ರೈತರು ಸಚಿವ ಮಲ್ಲಿಕಾರ್ಜುನ್ ಅವರಿಗೆ ಮನವರಿಕೆ ಮಾಡಿಕೊಟ್ಟರು. ರೈತರ ಮನವಿಗೆ ಪೂರಕವಾಗಿ ಸ್ಪಂದಿಸಿದ ಸಚಿವರು,  ಭದ್ರಾ ಬಲದಂಡೆ ನಾಲೆಯಲ್ಲಿ ಆಫ್ ಅಂಡ್ ಆನ್ ಮಾಡಬೇಡಿ ಎಂದು ಅಧಿಕಾರಿಗಳಗೆ ತಿಳಿಸಿದ್ದೇನೆ. ಆದರೆ ಅವರು ನೀರಾವರಿ ಸಚಿವರು ಮತ್ತು ಶಿವಮೊಗ್ಗ ಜಿಲ್ಲಾ ಉಸ್ತುವಾರಿ  ಸಚಿವರಿಗೆ ತಿಳಿಸಿ ಎಂದಿದ್ದಾರೆ. 

ನಾನೂ ಕೂಡಾ ಇವತ್ತು ಬೆಂಗಳೂರಿಗೆ ತೆರಳುತ್ತಿದ್ದು, ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಇಲ್ಲಿನ ಪರಿಸ್ಥಿತಿ ತಿಳಿಸಿ ನಾಲೆಯಲ್ಲಿ ಸತತವಾಗಿ ನೀರು ಹರಿಸುವಂತೆ ಮನವಿ ಮಾಡುತ್ತೇನೆ. 

ಶಿವಮೊಗ್ಗ, ಭದ್ರಾವತಿ, ತರೀಕೆರೆ ತಾಲ್ಲೂಕಿನವರು ಆಫ್ ಅಂಡ್ ಆನ್ ಮಾಡುವಂತೆ ಒತ್ತಡ ಹಾಕಿದ್ದಾರೆಂಬ ಮಾಹಿತಿಯೂ ಇದೆ, ಸಾಧ್ಯವಾದರೆ ಎಲ್ಲರೂ ಸೇರಿ ಸಿಎಂ ಭೇಟಿ ಮಾಡಿ ಮಾತಾನಾಡೋಣ ಎಂದು ಸಚಿವ ಮಲ್ಲಿಕಾರ್ಜುನ್ ರೈತರಿಗೆ ಭರವಸೆ ನೀಡಿದರು. 

ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾ ಮಂಡಳದ ಅಧ್ಯಕ್ಷ ವೈ. ದ್ಯಾವಪ್ಪರೆಡ್ಡಿ, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಸಿರಿಗೆರೆ ರಾಜಣ್ಣ, ಡಿಸಿಸಿ ಬ್ಯಾಂಕ್‌ನ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ಮಲೇಬೆನ್ನೂರಿನ ಮುಖಂಡ ಮುದೇಗೌಡ್ರ ತಿಪ್ಪೇಶ್, ಓ.ಜಿ. ಕುಮಾರ್, ವಿನಾಯಕ ನಗರ ಕ್ಯಾಂಪಿನ ಗ್ರಾ.ಪಂ. ಸದಸ್ಯ ಶ್ರೀನಿವಾಸ್, ಮಾಜಿ ಅಧ್ಯಕ್ಷರಾದ ಸುಬ್ಬರಾವ್, ಹಲಗೇರಿ ಕರಿಬಸಪ್ಪ, ಸಿ. ಪ್ರಸಾದ್, ಭುವನ್, ರಮೇಶ್ ಸೇರಿದಂತೆ ಇನ್ನೂ ಅನೇಕರು ಈ ವೇಳೆ ಹಾಜರಿದ್ದರು.    

error: Content is protected !!