ವಂದೇ ಭಾರತ್ ಪ್ರಯಾಣಿಕರ ಸಂಖ್ಯೆ ಇಳಿಕೆ

ವಂದೇ ಭಾರತ್ ಪ್ರಯಾಣಿಕರ ಸಂಖ್ಯೆ ಇಳಿಕೆ

ಆಗಸ್ಟ್‌ನಲ್ಲಿ ಬುಕ್ಕಿಂಗ್ ಶೇ. 48ರವರೆಗೆ ಇಳಿಕೆ

ದಾವಣಗೆರೆ, ಜು. 16 – ಕಳೆದ ಜೂನ್ ತಿಂಗಳಲ್ಲಿ ಧಾರವಾಡ ಹಾಗೂ ಬೆಂಗಳೂರು ನಡುವೆ ಆರಂಭವಾದ ವಂದೇ ಭಾರತ್ ಎಕ್ಸ್‍ಪ್ರೆಸ್ ರೈಲಿಗೆ ಆರಂಭಿಕ ದಿನಗಳಲ್ಲಿ ದೊರೆತ ಉತ್ತಮ ಸ್ಪಂದನೆ ನಂತರದ ತಿಂಗಳುಗಳಲ್ಲಿ ಕ್ಷೀಣಿಸಿದೆ.

ಜುಲೈನಲ್ಲಿ ವಂದೇ ಭಾರತ್ ರೈಲುಗಳಲ್ಲಿ ಸರಾಸರಿ ಬುಕ್ಕಿಂಗ್ ಪ್ರಮಾಣ ಶೇ.88.58ರವರೆಗೆ ತಲುಪಿತ್ತು. ಕೆಲವು ದಿನಗಳಲ್ಲಿ ಪ್ರಯಾಣಿಕರ ಬೇಡಿಕೆ ಸೀಟುಗಳಿಗಿಂತ ಹೆಚ್ಚಾಗಿರುವುದೂ ಕಂಡು ಬಂದಿತ್ತು.

ಆದರೆ, ಆಗಸ್ಟ್ ತಿಂಗಳಲ್ಲಿ ಎಕ್ಸಿಕ್ಯೂಟಿವ್ ಕ್ಲಾಸ್ (ಇ.ಸಿ.) ವರ್ಗದಲ್ಲಿ ಧಾರವಾಡ – ಬೆಂಗಳೂರು ಮಾರ್ಗದಲ್ಲಿ ಶೇ.52 ಟಿಕೆಟ್ ಬುಕ್ ಆಗಿವೆ. ಚೇರ್ ಕಾರ್ (ಸಿ.ಸಿ.)  ವರ್ಗದಲ್ಲಿ ಪ್ರಯಾಣಿಕರ ಸಂಖ್ಯೆ ಶೇ.48ರವರೆಗೆ ಇಳಿಕೆಯಾಗಿದೆ.

ಇದೇ ತಿಂಗಳಲ್ಲಿ ಬೆಂಗಳೂರಿನಿಂದ ಧಾರವಾಡ ಮಾರ್ಗದಲ್ಲಿ ಇ.ಸಿ. ಮಾರ್ಗದಲ್ಲಿ ಶೇ.54 ಹಾಗೂ ಸಿ.ಸಿ. ವರ್ಗದಲ್ಲಿ ಶೇ.49 ಮಾತ್ರ ಟಿಕೆಟ್ ಬುಕ್ಕಿಂಗ್ ಆಗಿದೆ.

ಸೆಪ್ಟೆಂಬರ್ ತಿಂಗಳಲ್ಲಿ ಪ್ರಯಾಣಿಕರ ಸಂಖ್ಯೆ ತುಸು ಹೆಚ್ಚಾಗಿದೆ. ಧಾರವಾಡದಿಂದ ಬೆಂಗಳೂರು ಮಾರ್ಗದಲ್ಲಿ ಇ.ಸಿ. ವರ್ಗದಲ್ಲಿ ಶೇ.65 ಹಾಗೂ ಸಿ.ಸಿ. ವರ್ಗದಲ್ಲಿ ಶೇ.61 ಬುಕ್ಕಿಂಗ್ ಆಗಿದೆ. ಇದೇ ಅವಧಿಯಲ್ಲಿ ಬೆಂಗಳೂರಿನಿಂದ ಧಾರವಾಡ ಮಾರ್ಗದಲ್ಲಿ ಇ.ಸಿ. ವರ್ಗದಲ್ಲಿ ಶೇ.68 ಹಾಗೂ ಸಿ.ಸಿ. ವರ್ಗದಲ್ಲಿ ಶೇ.60ರಷ್ಟು ಬುಕ್ಕಿಂಗ್ ಆಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ರೈಲ್ವೆ ಅಧಿಕಾರಿಗಳು, ಸಾಮಾನ್ಯವಾಗಿ ಮಳೆಗಾಲದಲ್ಲಿ ರೈಲ್ವೆ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗುತ್ತದೆ. ವಂದೇ ಭಾರತ್ ರೈಲುಗಳೂ ಸಹ ಇದಕ್ಕೆ ಹೊರತಾಗಿಲ್ಲ. ಪ್ರಯಾಣಿಕರ ಇಳಿಕೆ ಪ್ರಮಾಣ ಅನಿರೀಕ್ಷಿತವೇನೂ ಅಲ್ಲ ಎಂದಿದ್ದಾರೆ.

ಮುಂಬರುವ ಹಬ್ಬ ಹಾಗೂ ರಜೆ ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಲಿದೆ. ವಂದೇ ಭಾರತ್ ಪ್ರಯಾಣಿಕರ ಸಂಖ್ಯೆ ಆ ಸಂದರ್ಭದಲ್ಲಿ ಏರುಮುಖವಾಗುವ ನಿರೀಕ್ಷೆ ಇದೆ ಎಂದವರು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ, ಇಂದೋರ್ – ಭೂಪಾಲ್, ಭೂಪಾಲ್ – ಜಬಲ್ಪುರ ಹಾಗೂ ನಾಗಪುರ – ಬಿಲಾಸ್ಪುರ ಮಾರ್ಗಗಳಲ್ಲಿ ಆರಂಭವಾದ ವಂದೇ ಭಾರತ್ ರೈಲುಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಕಡಿಮೆ ಇತ್ತು. ಈ ಮಾರ್ಗಗಳಲ್ಲಿ ಶೇ.25ರವರೆಗೆ ಪ್ರಯಾಣ ದರವನ್ನೂ ಇಳಿಕೆ ಮಾಡಲಾಗಿತ್ತು. 

ಬೆಂಗಳೂರು – ಧಾರವಾಡ ಮಾರ್ಗಗಳಲ್ಲಿ ದರ ಇಳಿಕೆ ಮಾಡುವ ಮಟ್ಟಿಗೆ ಪ್ರಯಾಣಿಕರ ಸಂಖ್ಯೆ ಇಳಿಕೆಯೇನೂ ಆಗಿಲ್ಲ ಎಂದೂ ಅಧಿಕಾರಿಗಳು ಹೇಳಿದ್ದಾರೆ.

error: Content is protected !!