ಮನಸ್ಸಿನ ನಿಯಂತ್ರಣಕ್ಕೆ ಯೋಗ ಸಹಕಾರಿ

ಮನಸ್ಸಿನ ನಿಯಂತ್ರಣಕ್ಕೆ ಯೋಗ ಸಹಕಾರಿ

ರಾಷ್ಟ್ರಮಟ್ಟದ ಮಹಿಳೆಯರ ಯೋಗಾಸನ ಚಾಂಪಿಯನ್‌ಶಿಪ್ ಉದ್ಘಾಟಿಸಿದ ಬ್ರಹ್ಮಾಕುಮಾರಿ ಲೀಲಾಜಿ

ದಾವಣಗೆರೆ, ಅ.8- ಯೋಗ ಮತ್ತು ಧ್ಯಾನದಿಂದದೈಹಿಕ, ಮಾನಸಿಕ  ಆರೋಗ್ಯ ಸದೃಢವಾಗಲಿದೆ. ಮನಸ್ಸಿನ ನಿಯಂತ್ರಣಕ್ಕೆ ಯೋಗ ಸಹಕಾರಿಯಾಗಲಿದೆ. ಯೋಗಾಭ್ಯಾಸದ ಜೊತೆಗೆ ಉತ್ತಮ ವ್ಯಕ್ತಿತ್ವ, ಸನ್ನಡತೆ ಹೊಂದಬೇಕೆಂದು ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ಸಲಹೆ ನೀಡಿದರು.

ಸಪ್ತರ್ಷಿ ಯೋಗಧಾರ ಸ್ಪೋರ್ಟ್ಸ್ ಅಕಾಡೆಮಿ ದಾವಣಗೆರೆ ಇವರ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ನಗರದ ಶಿವ ಪಾರ್ವತಿ ಕಲ್ಯಾಣ ಮಂಟಪದಲ್ಲಿ ಪ್ರಥಮ ಬಾರಿಗೆ ಏರ್ಪಡಿಸಿದ್ದ ರಾಷ್ಟ್ರಮಟ್ಟದ ಮಹಿಳೆಯರ ಯೋಗಾಸನ ಚಾಂಪಿಯನ್‌ಶಿಪ್ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಮಕ್ಕಳು ಅತಿಯಾಗಿ ಮೊಬೈಲ್ ಬಳಕೆ, ಟಿವಿ ವೀಕ್ಷಣೆಯಲ್ಲಿ ಅವಲಂಬಿತರಾಗಿರುವುದು ಕಂಡು ಬರುತ್ತಿದೆ. ಯೋಗದ ಜೊತೆಗೆ ಸನ್ನಡತೆ, ಸಚ್ಛಾರಿತ್ರ್ಯ ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಪುರುಷರಿಗಿಂತ ಹತ್ತು ಪಟ್ಟು ಗುಣ, ಪ್ರಾಮಾಣಿಕತೆ, ಸತ್ಯದ ವಿಚಾರದಲ್ಲಿ ಮುಂದಿರುವುದು ಸಮಾನತೆ. ಪುರುಷರಂತೆ ಧೂಮಪಾನ ಮಾಡುವುದು, ಮದ್ಯ ಸೇವನೆ ಮಾಡುವುದು, ಅವರಂತೆ ಬಟ್ಟೆಗಳನ್ನು ಧರಿಸುವುದನ್ನು ಅನುಕರಣೆ ಮಾಡುವುದಲ್ಲ. ಬದಲಾಗಿ ಅವರಿಗಿಂತ ಗುಣದಲ್ಲಿ ಸಮಾನತೆ ಸಾಧಿಸಬೇಕೆಂದರು.

ಸಮಾಜದಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಎರಡು ಜಡೆಗಳು ಒಂದೆಡೆ ಸೇರಿದರೆ ಸುಮ್ಮನಿರುವುದಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ಬ್ರಹ್ಮಾಕುಮಾರಿ ಈಶ್ವರೀಯ ವಿವಿ ಅದನ್ನು ಸುಳ್ಳು ಮಾಡಿದೆ. 15 ಸಾವಿರ ಸಮರ್ಪಿತ ಸಾಧಕಿಯರು ಒಂದೆಡೆ ಸೇರಿ ಧಾರ್ಮಿಕ, ಅಧ್ಯಾತ್ಮಿಕ, ಸಾಮಾಜಿಕ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿರುವುದು ವಿಶೇಷವೇ ಸರಿ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾತನಾಡಿ, ಯೋಗಾಭ್ಯಾಸದ ಮೂಲಕ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಿದೆ. ಇಡೀ ವಿಶ್ವಕ್ಕೆ ಯೋಗ ನೀಡಿರುವ ಕೊಡುಗೆ ಅನನ್ಯವಾದುದು ಎಂದರು.

ಯೋಗಾಭ್ಯಾಸಕ್ಕೆ ಯಾವುದೇ ವಯೋಮಿತಿ ಇರುವುದಿಲ್ಲ. ಯೋಗದಿಂದ ಏಕಾಗ್ರತೆ ಬರುತ್ತದೆ. ಮಕ್ಕಳಿಗೆ ಯೋಗ ಕಲಿಕೆ ಹೆಚ್ಚು ಸಹಕಾರಿಯಾಗಲಿದೆ ಎಂದು ಹೇಳಿದರು.

ಇಂದಿನ ಒತ್ತಡದ ಕೆಲಸಗಳ ಮಧ್ಯೆಯೂ ಕೂಡ ಯೋಗಾಭ್ಯಾಸಕ್ಕಾಗಿ ಒಂದಿಷ್ಟು ಸಮಯ ಮೀಸಲಿಡಬೇಕು. ಹೆಚ್ಚಾಗಿ ಮಹಿಳೆಯರಿಗೆ ಭಾಗವಹಿಸುವ ಅವಕಾಶ ಕಲ್ಪಿಸಿರುವ ಆಯೋಜಕರನ್ನು ಅಭಿನಂದಿಸಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ರಾಜ್ಯ ಎನ್‌ಎಸ್‌ಎಸ್ ಅನುಷ್ಠಾನಾಧಿಕಾರಿ ಡಾ. ಪೂರ್ಣಿಮ ಜೋಗಿ ಎಸ್, ರೈತ ಮಹಿಳೆ, ಸಮಾಜ ಸೇವಕಿ ಎಂ.ಜಿ. ಶಶಿಕಲಾ ಮೂರ್ತಿ ನಲ್ಕುದುರೆ, ಎಸ್‌ವೈಎಸ್‌ಎ ಅಧ್ಯಕ್ಷ ಡಾ. ಕೆ. ಜೈಮುನಿ, ಉಪಾಧ್ಯಕ್ಷ ಡಾ.ಎನ್. ಪರಶುರಾಮ್, ಹರಿಹರದ ಡಾ. ಡಿ. ಫ್ರಾನ್ಸಿಸ್ ಕ್ಸೇವಿಯರ್, ಶಾಂಭವಿ, ತೀರ್ಪುಗಾರರಾದ ಸುಷ್ಮಿತರಾಯ್ ಮುಂತಾದವರು ಉಪಸ್ಥಿತರಿದ್ದರು.

ಯೋಗ ವಿದ್ಯಾರ್ಥಿಗಳು ಯೋಗ ನೃತ್ಯ ಮಾಡಿದರು. ಯೋಗ ತೀರ್ಪುಗಾರರಾದ ಶೈಲಜಾ ಸ್ವಾಗತಿಸಿದರು. ಉಪನ್ಯಾಸಕಿ ನಳಿನಿ ನಿರೂಪಿಸಿದರು.

error: Content is protected !!