ಮಹಾಸಭಾದ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ಭೀಮಣ್ಣ ಖಂಡ್ರೆ
ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆಯಲ್ಲಿ ನಡೆದ ಮಹಾ ಅಧಿವೇಶನದ ಪೂರ್ವಭಾವಿ ಸಭೆ
ಐತಿಹಾಸಿಕ ಅಧಿವೇಶನದಲ್ಲಿ ಮಠಾಧೀಶರು, ಸಮುದಾಯದ ಮುಖಂಡರು ಭಾಗಿ, ಸಮುದಾಯ ಎದುರಿಸುತ್ತಿರುವ ಸವಾಲುಗಳ ಕುರಿತು ಚರ್ಚೆ
ದಾವಣಗೆರೆ, ಅ. 6- ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಮಹಾಸಭಾದ 24ನೇ ಮಹಾ ಅಧಿವೇಶನವನ್ನು ಬರುವ ಡಿಸೆಂಬರ್ 23 ಹಾಗೂ 24ರಂದು ನಗರದ ಎಂ.ಬಿ.ಎ. ಕಾಲೇಜು ಮೈದಾನದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಮಹಾಸಭಾದ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ಭೀಮಣ್ಣ ಖಂಡ್ರೆ ಹೇಳಿದರು.
ನಗರದ ಎಂ.ಬಿ.ಎ. ಕಾಲೇಜು ಸಭಾಂಗಣದಲ್ಲಿ ಮಹಾ ಅಧಿವೇಶನ ನಡೆಸುವ ಕುರಿತು ನಡೆದ ಪೂರ್ವಭಾವಿ ಸಭೆಯ ನಂತರ ಪತ್ರಿಕಾಗೋಷ್ಠಿ ನಡೆಸಿ ಅವರು ಮಾಹಿತಿ ನೀಡಿದರು.
ಪ್ರತಿ ಐದು ವರ್ಷಗಳಿಗೊಮ್ಮೆ ಮಹಾ ಅಧಿವೇಶನ ನಡೆಸಲಾಗುತ್ತದೆ. ಕಳೆದ ವರ್ಷವೇ ದಾವಣಗೆರೆಯಲ್ಲಿ ಅಧಿವೇಶನ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಕೊರೊನಾ, ಸಾರ್ವತ್ರಿಕ ಚುನಾವಣೆ ಮತ್ತಿತರೆ ಕಾರಣಗಳಿಂದಾಗಿ ಅನಿವಾರ್ಯವಾಗಿ ಮುಂದೂಡಲಾಗಿತ್ತು ಎಂದು ಹೇಳಿದರು.
ಅಧಿವೇಶನವನ್ನು ಮೂರು ದಿನಗಳ ಕಾಲ ನಡೆಸಲಾಗುತ್ತಿತ್ತು. ಆದರೆ ಈ ವರ್ಷ ರಾಜ್ಯದಲ್ಲಿ ಮಳೆ ಇಲ್ಲದೆ ಬರಗಾಲ ಬಂದಿರುವುದರಿಂದ ಎರಡು ದಿನಗಳು ನಡೆಸಲು ತೀರ್ಮಾನಿಸಲಾಗಿದೆ. ವೇದಿಕೆ, ಹಣಕಾಸು, ದಾಸೋಹ, ಮೆರವಣಿಗೆ, ಸಾರಿಗೆ ಸೇರಿದಂತೆ ವಿವಿಧ ಸಮಿತಿಗಳ ರಚನೆ ಮಾಡಲಾಗುವುದು. ಸ್ಮರಣ ಸಂಚಿಕೆಯನ್ನೂ ಹೊರ ತರಲಾಗುವುದು ಎಂದರು.
ಅಧಿವೇಶನದಲ್ಲಿ ಮಹಿಳಾ ಗೋಷ್ಠಿ, ರೈತ ಗೋಷ್ಠಿ, ಯುವ ಗೋಷ್ಠಿಗಳನ್ನು ನಡೆಸಲು ಉದ್ದೇಶಿಸಲಾಗಿದೆ. ವೀರಶೈವ ಲಿಂಗಾಯತ ಸಮುದಾಯದ ಸವಾಲು ಕುರಿತು ಚರ್ಚೆ ನಡೆಯಲಿದೆ. ಅಧಿವೇಶನದಲ್ಲಿ ಕೆಲವು ನಿರ್ಣಯಗಳನ್ನು ಅಂಗೀಕಾರ ಮಾಡಿ, ಗೊತ್ತುವಳಿ ಮಂಡನೆ ಮಾಡುತ್ತೇವೆ. ಇದನ್ನು ರಾಜ್ಯ ಸರ್ಕಾರಕ್ಕೆ ನೀಡುತ್ತೇವೆ. ಈ ಹಿಂದೆ ನಡೆದ ಮಹಾ ಅಧಿವೇಶನಗಳಲ್ಲಿ ತೆಗೆದುಕೊಂಡ ನಿರ್ಣಯಗಳ ಪೈಕಿ ಕೆಲವು ಅನುಷ್ಠಾನಕ್ಕೆ ಬಂದಿದ್ದರೆ, ಮತ್ತೆ ಕೆಲವು ಅನುಷ್ಠಾನಕ್ಕೆ ಬಂದಿಲ್ಲ. ಈ ಕುರಿತಂತೆಯೂ ಅಧಿವೇಶನದಲ್ಲಿ ಪ್ರಸ್ತಾಪಿಸಲಾಗುವುದು ಎಂದರು.
ಇದೊಂದು ಐತಿಹಾಸಿಕ ಅಧಿವೇಶನವಾಗಿದ್ದು, ಅಧಿವೇಶನದಲ್ಲಿ ಸಮಸ್ತ ವೀರಶೈವ ಲಿಂಗಾಯತ ಮಠಾಧೀಶರು, ಜನಪ್ರತಿನಿಧಿಗಳನ್ನು ಪಕ್ಷಾತೀತವಾಗಿ ಆಹ್ವಾನಿಸಲಾಗುವುದು. ಕರ್ನಾಟಕವಷ್ಟೇ ಅಲ್ಲದೆ, ಹೊರ ರಾಜ್ಯ, ಹೊರ ದೇಶಗಳಿಂದಲೂ ಸಮುದಾಯದ ಜನತೆ ಮಹಾ ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಸಮುದಾಯದ ಅಧಿಕಾರಿಗಳಿಗೆ ಅನ್ಯಾಯವಾದ ವಿಷಯ ಕುರಿತು ಇಂದು ನಡೆದ ಪೂರ್ವಭಾವಿ ಸಭೆಯಲ್ಲಿ ಯಾವುದೇ ಚರ್ಚೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ ಖಂಡ್ರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಎಲ್ಲಾ ಜಾತಿ, ಭಾಷೆ, ಸಮಾಜದವರನ್ನು ಒಟ್ಟಿಗೆ ತೆಗೆದುಕೊಂಡು ಹೋಗುತ್ತಿದೆ. ಬಸವಣ್ಣನವರ ಪ್ರೇರಣೆ ಪಡೆದು ಆಡಳಿತ ನಡೆಸುತ್ತಿದೆ. ಯಾರನ್ನೂ ಕಡೆಗಣಿಸಿಲ್ಲ ಎಂದರು.
ಜಾತಿ ಗಣತಿ ಬಹಿರಂಗ ಕುರಿತಂತೆ ಪ್ರತಿಕ್ರಿಯಿಸಿದ ಖಂಡ್ರೆ, ಈ ಕುರಿತು ಸಚಿವ ಸಂಪುಟದಲ್ಲಿ ಪ್ರಾಥಮಿಕ ಹಂತದಲ್ಲಿ ಚರ್ಚೆಯಾಗಿದ್ದು, ಅಲ್ಲಿಯೇ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ರಾಷ್ಟ್ರೀಯ ಉಪಾಧ್ಯಕ್ಷರಾದ ಎಸ್. ತಿಪ್ಪಣ್ಣ, ಅಥಣಿ ವೀರಣ್ಣ, ಎಸ್. ಎಸ್. ಗಣೇಶ್, ಅಣಬೇರು ರಾಜಣ್ಣ, ರಾಷ್ಟ್ರೀಯ ಕಾರ್ಯದರ್ಶಿ ರೇಣುಕಾ ಪ್ರಸನ್ನ, ಶಾಸಕ ಶಿವಗಂಗಾ ಬಸವರಾಜ್, ಮಹಾಸಭಾದ ಜಿಲ್ಲಾಧ್ಯಕ್ಷ ದೇವರಮನೆ ಶಿವಕುಮಾರ್, ಶಂಕರ್ ಬಿದರಿ, ಬಿ.ಸಿ. ಉಮಾಪತಿ ಇತರರು ಇದ್ದರು.