ಬೆಳ್ಳಿ ಇಟ್ಟಿಗೆ ಸಮರ್ಪಣಾ ಸಮಾರಂಭದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ
ದಾವಣಗೆರೆ, ಸೆ. 6 – ಮುಘಲ್ ದೊರೆ ಔರಂಗಜೇಬ್ ದೇವಾಲಯ ಧ್ವಂಸ, ಮತಾಂತರ ಹಾಗೂ ಜಝಿಯಾ ತಲೆಗಂದಾಯ ಹೇರುವಂತಹ ಕೃತ್ಯಗಳನ್ನು ನಡೆಸಿದ್ದ. ಅಂತಹ ಮಾನಸಿಕತೆ ಪೋಷಿಸುವುದರಿಂದ ಸಮಾಜದಲ್ಲಿ ಸೌಹಾರ್ದತೆ ಸಾಧ್ಯವಾಗದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.
ನಗರದ ರೇಣುಕ ಮಂದಿರದಲ್ಲಿ ಅಯೋಧ್ಯೆ ರಾಮ ಮಂದಿರಕ್ಕೆ ಬೆಳ್ಳಿ ಇಟ್ಟಿಗೆ ಸಮರ್ಪಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಔರಂಗಜೇಬ್, ಟಿಪ್ಪು ಸುಲ್ತಾನ್, ಮೊಹಮ್ಮದ್ ಘಜ್ನಿ ಹಾಗೂ ಘೋರಿ ಅಂಥವರ ಮಾನಸಿಕತೆ ಪೋಷಿಸುವ ಮನಸ್ಥಿತಿ ಜೀವಂತವಾಗಿದೆ. ಇದರಿಂದ ಹಿಂದೂ ಸಮಾಜಕ್ಕೆ ಈ ಹಿಂದೆ ಆಗಿರುವ ಗಾಯ ಮತ್ತೆ ಹಸಿಯಾಗುತ್ತಿದೆ ಎಂದರು.
ಔರಂಗಜೇಬ್ ರೀತಿಯವರಿಂದ ಆದ ಗಾಯವನ್ನು ಮರೆತು ಸಹಬಾಳ್ವೆಗೆ ಹಿಂದೂ ಸಮಾಜ ಸಿದ್ಧವಿದೆ. ಆದರೆ, ಶಿವಮೊಗ್ಗದಲ್ಲಿ ನಡೆದ ಘಟನೆ ಕೆಲವರಲ್ಲಿ ಔರಂಗಜೇಬ್ ಮಾನ ಸಿಕತೆ ಜೀವಂತವಾಗಿರುವುದನ್ನು ತೋರಿಸುತ್ತಿದೆ ಎಂದವರು ತರಾಟೆಗೆ ತೆಗೆದುಕೊಂಡರು.
ನೂರಾರು ಮನೆಗಳಲ್ಲಿ ಔರಂಗಜೇಬ್ ರೀತಿಯವರು ಹುಟ್ಟಬೇಕು ಎಂದು ಕೆಲವರು ಭಾವಿಸಿದರೆ, ಅಂಥವರನ್ನು ಎದುರಿಸಲು ಮನೆ ಮನೆಯಲ್ಲಿ ಶಿವಾಜಿ ಮಹಾರಾಜರು ಹುಟ್ಟಬೇಕು ಎಂದು ನಾವೂ ಬಯಸಬೇಕಾ ಗುತ್ತದೆ ಎಂದು ರವಿ ಹೇಳಿದರು.
ಔರಂಗಜೇಬ್ ಬದಲು ಶಿಶುನಾಳ ಷರೀಫ, ಇಬ್ರಾಹಿಂ ಸುತಾರ, ಅಬ್ದುಲ್ ಕಲಾಂ ಮುಂತಾದವರು ಆದರ್ಶವಾಗಬೇಕಿದೆ. ಇದರಿಂದ ಸಮಾಜದಲ್ಲಿ ಸೌಹಾರ್ದತೆ ಹಾಗೂ ಸಹಬಾಳ್ವೆ ಸಾಧ್ಯ ಎಂದವರು ತಿಳಿಸಿದರು.
ಇತಿಹಾಸದಲ್ಲಿ ಭಾರತ ಈಗಿನದಕ್ಕಿಂತ ಮೂರು ಪಟ್ಟು ದೊಡ್ಡದಾಗಿದ್ದು, ಜಂಬೂ ದ್ವೀಪ ಎಂದು ಕರೆಸಿಕೊಳ್ಳುತ್ತಿತ್ತು. ಏಕತೆ ದುರ್ಬಲವಾಗಿ ನಾವು ಅತಿ ದೊಡ್ಡ ಪ್ರದೇಶಗಳನ್ನು ಕಳೆದುಕೊಂಡೆವು ಎಂದವರು ವಿಷಾದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸದ ಜಿ.ಎಂ. ಸಿದ್ದೇಶ್ವರ, ಬಿಜೆಪಿ, ಭಜರಂಗ ದಳ ಹಾಗೂ ಆರ್.ಎಸ್.ಎಸ್.ಗಳು ದೇಶಭಕ್ತಿಯ ಸಂಘಟನೆಗಳಾಗಿವೆ. ಕಾಂಗ್ರೆಸ್ನ ಕೆಲ ಸಚಿವರು ಈ ಸಂಘಟನೆಗಳ ಬಗ್ಗೆ ಅವಹೇಳನವಾಗಿ ಮಾತನಾಡುತ್ತಿರುವುದು ಖಂಡನಾರ್ಹ ಎಂದರು.
ರಾಮ ಮಂದಿರ ಅಲ್ಲ, ರಾಷ್ಟ್ರ ಮಂದಿರ
ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವುದು ಕೇವಲ ರಾಮ ಮಂದಿರವಲ್ಲ, ಅದು ರಾಷ್ಟ್ರಮಂದಿರವಾಗಿದೆ. ಶ್ರೀ ರಾಮ ದೇವರಿಗೆ ಜೈ ಎನ್ನುವ ಮೊದಲು, ಭಾರತ್ ಮಾತಾ ಕಿ ಜೈ ಎಂದು ರಾಮ ಭಕ್ತರು ಘೋಷಣೆ ಮೊಳಗಿಸುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.
ಶಬರಿಯನ್ನು ಶ್ರೀರಾಮ ಭೇಟಿ ಮಾಡಿದ ಪ್ರಸಂಗ ಉದಾಹರಿಸಿದ ರವಿ, ಜಾತಿ ರಹಿತ ಹಾಗೂ ಅಸ್ಪೃಶ್ಯತೆ ರಹಿತ ಜೀವನ ರಾಮ ದೇವರ ಸಂದೇಶವಾಗಿದೆ. ಜಾತೀಯತೆ ಹಾಗೂ ಅಸ್ಪೃಶ್ಯತೆ ನಿವಾರಿಸುವ ಮೂಲಕ ರಾಷ್ಟ್ರ ಮಂದಿರವನ್ನು ಬಲಿಷ್ಠ ಮಾಡಬೇಕಿದೆ ಎಂದರು.
ಕಾಶಿ, ಮಥುರಾಗಳಲ್ಲಿ ದೇವಾಲಯಗಳ ಪುನರ್ ಸ್ಥಾಪನೆಯಾಗಬೇಕು
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ವಾಗುತ್ತಿದೆ. ಮುಂದಿನ ದಿನಗಳಲ್ಲಿ ಕಾಶಿ, ಮಥುರಾ ಸೇರಿದಂತೆ ಉಳಿದೆಡೆ ದೇವಾಲಯಗಳ ಪುನರ್ ಸ್ಥಾಪನೆಯಾಗಬೇಕಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.
ಜಾತಿ ಹಾಗೂ ಹಣ ಗಳಿಕೆಗಾಗಿ ಮತ ಹಾಕಿ ದರೆ ಆಗುವ ಅನಾಹುತ ಊಹಿಸಲು ಸಾಧ್ಯವಿಲ್ಲ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಾಯಿ ಭಾರತಿಗೆ ಜೈಕಾರ ಹಾಕುವ ನೇತೃತ್ವಕ್ಕೆ ಮತ ಹಾಕಬೇಕು ಎಂದವರು ಕರೆ ನೀಡಿದರು.
ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಸನಾತನ ಹಿಂದೂ ಧರ್ಮದ ನಿವಾರಣೆಯ ಬಗ್ಗೆ ಕೆಲಸ ಮಾಡುತ್ತಿದ್ದಾರೆ. ನಾವು ಮೈ ಮರೆತರೆ ಹಿಂದೂಗಳನ್ನು ಒಡೆಯುತ್ತಾರೆ. ಇಂಥವರನ್ನು ಎದುರಿಸಲು ಹಿಂದೂ ಸಂಘಟನೆಗಳ ನಿಜವಾದ ಹೋರಾಟ ಇಂದಿನಿಂದ ಆರಂಭವಾಗಬೇಕಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬಿಜೆಪಿ ಮುಖಂಡ ಯಶವಂತರಾವ್ ಜಾಧವ್, 33 ವರ್ಷಗಳ ಹಿಂದೆ ಇದೇ ದಿನದಂದು ರಾಮ ಮಂದಿರ ಹೋರಾಟದಲ್ಲಿ ಎಂಟು ಜನ ಹುತಾತ್ಮರಾಗಿದ್ದರು. ತಮಗೂ ಸಹ ಗುಂಡೇಟು ಬಿದ್ದಿತ್ತು. ಇಂತಹ ತ್ಯಾಗ ಬಲಿದಾನಗಳ ಹೋರಾಟದಿಂದ ರಾಮ ಮಂದಿರ ನಿರ್ಮಾಣ ಸಾಧ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ರಾಮ ಮಂದಿರಕ್ಕೆ ಹುತಾತ್ಮರಾದವರ ಕುಟುಂಬದವರು, ಗುಂಡೇಟಿನಿಂದ ಗಾಯಗೊಂಡವರು, ಹೋರಾಟದಲ್ಲಿ ಪಾಲ್ಗೊಂಡವರು ಹಾಗೂ ಹಿಂದೂ ಕಾರ್ಯಕರ್ತರಿಗೆ ನೆರವಾದ ವಕೀಲರನ್ನು ಸನ್ಮಾನಿಸಲಾಯಿತು.
ಹೆಬ್ಬಾಳು ವಿರಕ್ತ ಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ಸಮಾರಂಭದ ಸಾನ್ನಿಧ್ಯ ವಹಿಸಿದ್ದರು.
ವೇದಿಕೆಯ ಮೇಲೆ ಮಾಜಿ ಶಾಸಕರಾದ ಎಸ್.ಎ. ರವೀಂದ್ರನಾಥ್, ಬಸವರಾಜ ನಾಯ್ಕ, ಬೆಳ್ಳಿ ಪ್ರಕಾಶ್, ಪರಿಷತ್ ಮಾಜಿ ಮುಖ್ಯ ಸಚೇತಕ ಡಾ. ಎ.ಹೆಚ್. ಶಿವಯೋಗಿಸ್ವಾಮಿ, ಮುಖಂಡರಾದ ಬಿ.ಜಿ. ಅಜಯ್ ಕುಮಾರ್, ಲೋಕಿಕೆರೆ ನಾಗರಾಜ್, ಶ್ರೀನಿವಾಸ ಶಿವಕುಮಾರ್, ದಾಸಕರಿಯಪ್ಪ, ಮುಖಂಡರಾದ ಕೆ.ಬಿ. ಶಂಕರನಾರಾಯಣ್, ಉತ್ತಮ್ ಚಂದ್ ಜೈನ್ ಮತ್ತಿತರರು ಉಪಸ್ಥಿತರಿದ್ದರು.
ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಸ್ವಾಗತಿಸಿದರು.