ನಾಳೆ ಬೆಳ್ಳಿ ಇಟ್ಟಿಗೆ ಸಮರ್ಪಣೆ : ಹಿಂದೂ ಯುವಕರಿಂದ ಬೈಕ್ ರ‍್ಯಾಲಿ

ನಾಳೆ ಬೆಳ್ಳಿ ಇಟ್ಟಿಗೆ ಸಮರ್ಪಣೆ : ಹಿಂದೂ ಯುವಕರಿಂದ ಬೈಕ್ ರ‍್ಯಾಲಿ

ದಾವಣಗೆರೆ, ಅ. 4- ನಾಡಿದ್ದು ದಿನಾಂಕ 6 ರಂದು ನಗರದಲ್ಲಿ ನಡೆಯುವ ಶ್ರೀರಾಮ ಮಂದಿರಕ್ಕೆ ಬೆಳ್ಳಿ ಇಟ್ಟಿಗೆ ಸಮರ್ಪಿಸುವ ಸಮಾರಂಭದ ಭಾಗವಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಜಿಲ್ಲೆಯ ಹಿಂದೂ ಕಾರ್ಯಕರ್ತರಿಂದ ಬೈಕ್‌ ರಾಲಿಯನ್ನು ಇಂದು ನಗರದಲ್ಲಿ ನಡೆಸಲಾಯಿತು.

ಇದೇ ವೇಳೆ ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಮಾತನಾಡಿ, ನಾಡಿದ್ದು ದಿನಾಂಕ 6 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಅಭಿನವ ರೇಣುಕಾ ಮಂದಿರದಲ್ಲಿ ಬೆಳ್ಳಿ ಇಟ್ಟಿಗೆ ಸಮರ್ಪಣಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ ಮಾತನಾಡಿ, 1990 ರ ಅಕ್ಟೋಬರ್ 6 ರಂದು ದಾವಣಗೆರೆಗೆ ಶ್ರೀರಾಮ ಜ್ಯೋತಿ ರಥಯಾತ್ರೆ ಬಂದಾಗ ಕೆಲ ಕಿಡಿಗೇಡಿಗಳಿಂದ ಕೋಮು ಗಲಭೆ ನಡೆದು, ಗೋಲಿಬಾರ್‌ನಲ್ಲಿ 8 ಜನ ರಾಮಭಕ್ತರು ಹುತಾತ್ಮರಾದರು. 70 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು ಎಂದರು.

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಅವರ ಆಸೆಯಾಗಿತ್ತು. 33 ವರ್ಷಗಳ ನಂತರದ ಆಸೆ ನೇರವೇರುತ್ತಿದ್ದು, ಅವರ ಸ್ಮರಣಾರ್ಥ ಅವರ ಹೆಸರುಗಳು, ಶ್ರೀರಾಮ ಮಂದಿರ ಹಾಗೂ ಶ್ರೀರಾಮ ಚಿತ್ರವನ್ನು ಬೆಳ್ಳಿ ಇಟ್ಟಿಗೆ ಮೆಲೆ ಕೆತ್ತಿಸಲಾಗಿದೆ. ಈ ಬೆಳ್ಳಿ ಇಟ್ಟಿಗೆಯನ್ನು ಉಡುಪಿಯ ಪೇಜಾವರ ಸ್ವಾಮಿಗಳ ಮುಖಾಂತರ ಶ್ರೀರಾಮ ಮಂದಿರಕ್ಕೆ ಕೊಂಡೊಯ್ಯಲಾಗುವುದು ಎಂದು ಹೇಳಿದರು.

ಬೇತೂರು ರಸ್ತೆಯ ವೆಂಕಟೇಶ್ವರ ವೃತ್ತದಿಂದ ಆರಂಭವಾದ ಬೈಕ್ ರಾಲಿ ಬಂಬೂ ಬಜಾರ್,
ವಿಠಲ ಮಂದಿರ, ಕೆ.ಆರ್. ರಸ್ತೆ, ಮಂಡಿಪೇಟೆ, ಗಡಿಯಾರ ಕಂಬ, ಬಿ.ಎಸ್. ಚನ್ನಬಸಪ್ಪ ಬಟ್ಟೆ ಅಂಗಡಿ, ಹಗೇದಿಬ್ಬ ವೃತ್ತ, ದುರ್ಗಾಂಬಿಕ ದೇವಸ್ಥಾನ, ವೀರಮದಕರಿ ನಾಯಕ ವೃತ್ತ, ವೀರರಾಣಿ ಕಿತ್ತೂರು ಚನ್ನಮ್ಮ ವೃತ್ತದ ಮೂಲಕ ರೇಣುಕಾ ಮಂದಿರದ ಆವರಣದಲ್ಲಿ ಸಮಾಪನಗೊಂಡಿತು.

ಈ ಸಂದರ್ಭದಲ್ಲಿ ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಮುಖಂಡರಾದ ಟಿಂಕರ್ ಮಂಜಣ್ಣ, ಕಿಶೋರ್ ಕುಮಾರ್, ಬೇತೂರು ಬಸವರಾಜ್, ರಮೇಶ್ ನಾಯಕ್, ಕುಮಾರ್, ಹೆಚ್.ಬಿ. ನವೀನ್, ಅಮರ್, ಗೌತಮ್ ಜೈನ್, ಪಿ.ಸಿ. ಶ್ರೀನಿವಾಸ್ ಮತ್ತಿತರರು ಪಾಲ್ಗೊಂಡಿದ್ದರು. 

error: Content is protected !!