`ಲಿಂಗಾಯತ’ ಕಾರಣಕ್ಕೆ ಮೀಸಲಾತಿ ಸಿಗುತ್ತಿಲ್ಲ

`ಲಿಂಗಾಯತ’ ಕಾರಣಕ್ಕೆ ಮೀಸಲಾತಿ ಸಿಗುತ್ತಿಲ್ಲ

ಯಾಕಾದರೂ ಲಿಂಗಾಯತರಾದೆವೋ ಎನ್ನುವ ಸ್ಥಿತಿ ನಿರ್ಮಾಣ: ಜಯ ಮೃತ್ಯುಂಜಯ ಶ್ರೀ

ದಾವಣಗೆರೆ, ಸೆ. 3 – ಜಾತಿ ಪ್ರಮಾಣ ಪತ್ರದಲ್ಲಿ `ಲಿಂಗಾಯತ’ ಎಂದು ನಮೂದಿಸಿದ ಕಾರಣಕ್ಕಾಗಿ ಮಕ್ಕಳು ಮೀಸಲಾತಿ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಈ ಮಕ್ಕಳು ನಾವು ಯಾಕಾದರೋ ಲಿಂಗಾಯತರಾದೆವೋ ಎಂದು ಬೈದುಕೊಳ್ಳುವ ಪರಿಸ್ಥಿತಿ ಇದೆ ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ವಿಷಾದಿಸಿದ್ದಾರೆ.

ನಗರದ ಶಿವಯೋಗಾಶ್ರಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಿವಶರಣ, ನಿಜಸುಖಿ ಹಡಪದ ಅಪ್ಪಣ್ಣ ಶರಣರ 889ನೇ ಜಯಂತ್ಯೋತ್ಸವ ಹಾಗೂ ಜನಜಾಗೃತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಹಡಪದ ಸಮುದಾಯ ಒಂದೇ ಆಗಿದೆ. ಆದರೆ, ಹಿಂದೂ ಹಡಪದ ಎಂದು ಜಾತಿ ಪ್ರಮಾಣ ಪತ್ರದಲ್ಲಿದ್ದರೆ 2ಎ, ಲಿಂಗಾಯತ ಹಡಪದ ಎಂದಿದ್ದರೆ 3ಬಿಗೆ ಸೇರಿಸಲಾಗುತ್ತಿದೆ ಎಂದವರು ಹೇಳಿದರು.

ಹಿಂದೂ ಹಡಪದ ಹಾಗೂ ಲಿಂಗಾಯತ ಹಡಪದ ಒಂದೇ ಸಮುದಾಯದ ಪರ್ಯಾಯ ನಾಮಗಳು. ಕುರುಬ, ಕುಂಬಾರ, ಕಮ್ಮಾರ ಹೀಗೆ ಎಲ್ಲ ಲಿಂಗಾಯತರ ಉಪಪಂಗಡಗಳು ಮೀಸಲಾತಿಯಿಂದ ವಂಚಿತವಾಗಿವೆ. ಸಾಕಷ್ಟು ಪಂಗಡಗಳು ಮೀಸಲಾತಿ ಕಾರಣಕ್ಕಾಗಿಯೇ ಲಿಂಗಾಯತ ಹೆಸರಿನ ಬಳಕೆ ಬಿಟ್ಟಿವೆ ಎಂದು ಶ್ರೀಗಳು ತಿಳಿಸಿದರು.

ಈ ಹಿಂದೆ ಮೀಸಲಾತಿ ನಿಗದಿ ಪಡಿಸುವ ಸಂದರ್ಭದಲ್ಲಿ ಲಿಂಗಾಯತ ಸಮುದಾಯಗಳನ್ನು ಮೀಸಲಾತಿ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಈ ಸಮಸ್ಯೆ ಬಗೆಹರಿಸಲು ಮುಖ್ಯಮಂತ್ರಿ ಗಳು ಕ್ರಮ ತೆಗೆದುಕೊಳ್ಳಬೇಕು ಎಂದ ವರು ಆಗ್ರಹಿಸಿದರು.

ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಮುರುಘಾ ಮಠದ ಉಸ್ತುವಾರಿಗಳಾದ ಶ್ರೀ ಬಸವಪ್ರಭು ಸ್ವಾಮೀಜಿ, ಸಂಸ್ಕಾರದಿಂದ ನಾವು ಲಿಂಗವಂತರು. ಆದರೆ, ಮೀಸಲಾತಿಯಿಂದ ಹಡಪದ ಸಮುದಾಯಕ್ಕೆ ಸೇರಿದವರು ಎಂದು ಗುರುತಿಸಿಕೊಳ್ಳುವ ಮೂಲಕ ಸರ್ಕಾರದಿಂದ ಸೌಲಭ್ಯಗಳನ್ನು ಕೇಳಬೇಕಿದೆ ಎಂದರು.

ಸಾಹಿತಿ ಬಾಮ ಬಸವರಾಜಯ್ಯ ಮಾತನಾಡಿ, ಮೀಸಲಾತಿಗಾಗಿ ಹಾವನೂರು ವರದಿ ರೂಪಿಸಿದ ಸಂದರ್ಭದಲ್ಲಿ ಲಿಂಗಾಯತ ಹಡಪದವರನ್ನು 3ಬಿ ಪ್ರವರ್ಗಕ್ಕೆ ಸೇರಿಸಲಾಗಿದೆ. ಅವರನ್ನು 2ಎಗೆ ಸೇರ್ಪಡೆ ಮಾಡುವ ಜವಾಬ್ದಾರಿ ಈಗಿನ ಜನಪ್ರತಿನಿಧಿಗಳು ಹಾಗೂ ಸ್ವಾಮೀಜಿಗಳಿಗೆ ಇದೆ ಎಂದರು.

ಬಿಜಾಪುರದ ಗಾಣಿಗೆರೆ ಪೀಠದ ಶ್ರೀ ಬಸವಕುಮಾರ ಸ್ವಾಮೀಜಿ ಆಶಯ ನುಡಿಗಳನ್ನಾಡಿದರು.

ವೇದಿಕೆಯ ಮೇಲೆ ತಂಗಡಗಿಯ ಶ್ರೀ ಹಡಪದ ಅಪ್ಪಣ್ಣ ಸ್ವಾಮೀಜಿ, ಹೊಸದುರ್ಗದ ಕುಂಚಿಟಿಗ ಸಂಸ್ಥಾನ ಮಠದ ಶ್ರೀ ಬಸವ ಶಾಂತವೀರ ಸ್ವಾಮೀಜಿ, ಚಿತ್ರದುರ್ಗ ಭೋವಿ ಗುರುಪೀಠದ ಶ್ರೀ ಬಸವ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಶಾಸಕ ಕೆ.ಎಸ್. ಬಸವಂತಪ್ಪ, ಮುಖಂಡರಾದ ತೇಜಸ್ವಿ ಪಟೇಲ್, ನಾಗರಾಜ್ ಹೇಮಗಿರಿ ಮೈಲಾರ, ಶಿವಯೋಗಿ ಹೊಸರಿತ್ತಿ, ಶಿರಮಗೊಂಡನಹಳ್ಳಿಯ ಶಿವಾನಂದ ಗುರೂಜಿ, ಚೇತನಾ ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!