ವಿನೋಬನಗರ ಗಣಪತಿ ಮೂರ್ತಿಯ ಅದ್ಧೂರಿ ಮೆರವಣಿಗೆ

ವಿನೋಬನಗರ ಗಣಪತಿ ಮೂರ್ತಿಯ ಅದ್ಧೂರಿ ಮೆರವಣಿಗೆ

ಟ್ರ್ಯಾಕ್ಟರ್ ಚಲಾಯಿಸಿ ಮೆರವಣಿಗೆಗೆ ಚಾಲನೆ ನೀಡಿದ ಸಚಿವ ಎಸ್ಸೆಸ್ಸೆಂ, ಮೆರವಣಿಗೆಗೆ ಕಲಾ ತಂಡಗಳ ಮೆರಗು

ದಾವಣಗೆರೆ, ಸೆ.26- ಇಲ್ಲಿನ ವಿನೋಬನಗರದಲ್ಲಿ ಶ್ರೀ ವೀರ ವರಸಿದ್ಧಿ ವಿನಾಯಕ ಸೇವಾ ಸಮಿತಿಯಿಂದ 31ನೇ ವರ್ಷದ ಗಣೇಶ ಮಹೋತ್ಸವದ ಅಂಗವಾಗಿ ಪ್ರತಿಷ್ಠಾಪಿಸಲಾಗಿದ್ದ ಗಣಪತಿ ಮೂರ್ತಿ ವಿಸರ್ಜನೆ ಮಂಗಳವಾರ ಅದ್ಧೂರಿಯಾಗಿ ನೆರವೇರಿತು.

ಮಧ್ಯಾಹ್ನ 2.40ರ ಸುಮಾರಿಗೆ  ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಗಣೇಶಮೂರ್ತಿಯ ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು. ಗಣೇಶನ ವಿಗ್ರಹವಿದ್ದ ಟ್ರ್ಯಾಕ್ಟರ್ ಚಲಾಯಿಸಿ ಸಚಿವರು ಗಮನ ಸೆಳೆದರು.

ಮೆರವಣಿಗೆ ಸಂದರ್ಭದಲ್ಲಿ ಮಾತನಾಡಿದ ಸಚಿವ ಎಸ್ಸೆಸ್ಸೆಂ, ಕಳೆದ 28 ವರ್ಷಗಳಿಂದಲೂ ಇಲ್ಲಿನ ಗಣೇಶೋತ್ಸವಕ್ಕೆ ಬರುತ್ತಿದ್ದೇನೆ. 1995ರಿಂದಲೂ ಟ್ರ್ಯಾಕ್ಟರ್ ಓಡಿಸುವ ಮೂಲಕ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತೇನೆ ಎಂದರು. ಇಲ್ಲಿ ಎಲ್ಲಾ ಜಾತಿ, ಧರ್ಮದವರೂ ಸೇರಿ ಮೆರವಣಿಗೆ ನಡೆಸುವುದು ಖುಷಿಯ ವಿಚಾರ ಎಂದರು.

ಸಮಾಳ, ವೀರಗಾಸೆ, ಡೊಳ್ಳು, ನಂದಿಕೋಲು, ನಾಸಿಕ್ ಡೋಲು ಮೊದಲಾದ ಕಲಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ಮೆರವಣಿಗೆ ಆರಂಭದಲ್ಲಿ ಮಳೆಯ ಸಿಂಚನ ಯುವಕರ ಉತ್ಸಾಹ ಹೆಚ್ಚಿಸಿತ್ತು. ಡಿಜೆ ಸದ್ದಿಗೆ ಯುವ ಪಡೆ ಭರ್ಜರಿ ನೃತ್ಯ ಮಾಡಿತು. ಜನರು ಮನೆಗಳ ಮಹಡಿ, ಕಟ್ಟಡಗಳು, ಕಾಂಪೌಂಡ್‌ಗಳನ್ನು ಏರಿ ಮೆರವಣಿಗೆ ವೀಕ್ಷಿಸಿದರು. ಮೆರವಣಿಗೆಯಲ್ಲಿ ಯುವಕರು ಕೇಸರಿ ಬಣ್ಣದ ರುಮಾಲು ಧರಿಸಿ, ಸೆಲ್ಫಿ ತೆಗೆಸಿಕೊಳ್ಳುತ್ತಿದ್ದರು. 

2ನೇ ಮುಖ್ಯ ರಸ್ತೆಯಲ್ಲಿರುವ ಮಸೀದಿಯ ಎದುರು ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಮುಂಜಾಗ್ರತೆಯಾಗಿ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಡಿಜೆ ಹಾಡಿಗೆ ನೃತ್ಯ ಮಾಡುತ್ತಿದ್ದ ಯುವಕರನ್ನು ಮುಂದೆ ಕಳುಹಿಸಲು ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹರಸಾಹಸಪಟ್ಟರು.

ವಿನೋಬನಗರ ಗಣಪತಿ ಮೂರ್ತಿಯ ಅದ್ಧೂರಿ ಮೆರವಣಿಗೆ - Janathavani

ಮುನ್ನೆಚ್ಚರಿಕೆ ಕ್ರಮವಾಗಿ ಅಲ್ಲಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಡ್ರೋಣ್ ಕ್ಯಾಮೆರಾದ ಮೂಲಕವೂ ಹದ್ದಿನ ಕಣ್ಣು ಇಡಲಾಗಿತ್ತು. ಪೊಲೀಸರು ಹ್ಯಾಂಡಿ ಕ್ಯಾಮ್‍ಗಳ ಮೂಲಕವೇ ದೃಶ್ಯಗಳನ್ನು ಸೆರೆಹಿಡಿಯುತ್ತಿದ್ದರು.

ವಿನೋಬ ನಗರ 2ನೇ ಮುಖ್ಯ ರಸ್ತೆಯಿಂದ ಆರಂಭವಾದ ಮೆರವಣಿಗೆಯು ಮಸೀದಿ ಮುಖಾಂತರ ಪಿಬಿ ರಸ್ತೆ, ಕಿತ್ತೂರು ರಾಣಿ ಚನ್ನಮ್ಮ ವೃತ್ತ, ಹರಳೆಣ್ಣೆ ಕೊಟ್ರಬಸಪ್ಪ ವೃತ್ತ, ಎಂ.ಸಿ ಕಾಲೋನಿ ಎ ಬ್ಲಾಕ್ ಮುಖಾಂತರ ಮರಳಿ ವಿನೋಬ ನಗರ 1ನೇ ಮುಖ್ಯ ರಸ್ತೆಯಲ್ಲಿರುವ ಚೌಡೇಶ್ವರಿ ದೇವಸ್ಥಾನದ ಮುಂದೆ ಸಾಗಿ, ಪಿಬಿ ರಸ್ತೆಗೆ ತಲುಪಿ ಕಾಡಪ್ಪನ ಕಣದಲ್ಲಿರುವ ಬಾವಿಯಲ್ಲಿ ಗಣಪತಿ ಮೂರ್ತಿಯನ್ನು ವಿಸರ್ಜಿಸಲಾಯಿತು. ಇದೇ ವೇಳೆ ವಿನೋಬನಗರ ಮಸೀದಿ ಬಳಿ ಸಮಿತಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಾರ ಹಾಕಿ ಮೆರವಣಿಗೆಗೆ ಸ್ವಾಗತಿಸಿದರು.

ಮೆರವಣಿಗೆ ಮೇಳೆ ಸಚಿವ ಶಾಮನೂರು ಮಲ್ಲಿಕಾರ್ಜುನ್ ಅವರೊಂದಿಗೆ ಮಹಾನಗರ ಪಾಲಿಕೆ ಮೇಯರ್ ವಿನಾಯಕ ಪೈಲ್ವಾನ್, ದೂಡಾ ಮಾಜಿ ಅಧ್ಯಕ್ಷ ದೇವರಮನೆ ಶಿವಕುಮಾರ್, ಪಾಲಿಕೆ ಸದಸ್ಯ ಎ.ನಾಗರಾಜ್, ಸಮಿತಿ ಗೌರವಾಧ್ಯಕ್ಷ ದೇವರಮನೆ ಶಿವರಾಜ್, ಅಧ್ಯಕ್ಷ ಗುರುನಾಥ ಬಾಬು, ಕಾರ್ಯದರ್ಶಿ  ಡಿ.ಕೆ. ರಮೇಶ್, ಉಪಾಧ್ಯಕ್ಷ ನಾಗರಾಜ ಗೌಡ, ಮಂಜುನಾಥ ಮತ್ತು ಇತರರು ಇದ್ದರು.

error: Content is protected !!