4ನೇ ದಿನಕ್ಕೆ ಕಾಲಿಟ್ಟ ರೈತರ ಪ್ರತಿಭಟನೆ

4ನೇ ದಿನಕ್ಕೆ ಕಾಲಿಟ್ಟ ರೈತರ ಪ್ರತಿಭಟನೆ

ಮಲೇಬೆನ್ನೂರು, ಸೆ.22- ಭದ್ರಾ ಬಲದಂಡೆ ನಾಲೆಯಲ್ಲಿ ಸತತವಾಗಿ ನೀರು ಹರಿಸುವಂತೆ ಒತ್ತಾಯಿಸಿ, ಮಲೇಬೆನ್ನೂರಿನ ನೀರಾವರಿ ಇಲಾಖೆಯ ಕಚೇರಿ ಎದುರು ಹರಿಹರ ತಾಲ್ಲೂಕಿನ ರೈತರು ನಡೆಸುತ್ತಿರುವ ಪ್ರತಿಭಟನೆ ಶುಕ್ರವಾರ 4ನೇ ದಿನಕ್ಕೆ ಕಾಲಿಟ್ಟಿತು.

ಪ್ರತಿಭಟನೆ ವೇಳೆ ಮಾತನಾಡಿದ ರೈತ ಮುಖಂಡ ಮುದೇಗೌಡ್ರ ತಿಪ್ಪೇಶ್ ಅವರು, ಮಲೇಬೆನ್ನೂರು ಬಂದ್‌ಗೆ ನೀಡಿದ್ದ ಕರೆಯನ್ನು ಪೊಲೀಸ್ ಅಧಿಕಾರಿಗಳ ಮನವಿ ಮೇರೆಗೆ ಸದ್ಯ ಕೈಬಿಟ್ಟಿದ್ದೇವೆ.

ಭಾನುವಾರದೊಳಗೆ ಭದ್ರಾ ನಾಲೆಗೆ ನೀರು ಹರಿಸದಿದ್ದರೆ, ನಮ್ಮ ಹೋರಾಟ ತೀವ್ರಗೊಳ್ಳಲಿದೆ. ಸರ್ಕಾರ ಇದಕ್ಕೆ ಅವಕಾಶ ನೀಡದೇ ನಾಲೆಗೆ ಹರಿಸಿ, ರೈತರನ್ನು ಸಂರಕ್ಷಿಸಬೇಕು. ಭತ್ತದ ನಾಟಿ ಒಮ್ಮೆ ಒಣಗಿದ ನಂತರ ಎಷ್ಟೇ ನೀರು ಬಿಟ್ಟರೂ ಉಪಯೋಗವಿಲ್ಲ. ಹಾಗಾಗಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲೆಯ ಶಾಸಕರು ಕೂಡಲೇ ನಾಲೆಗೆ ನೀರು ಹರಿಸುವಂತೆ ನೀರಾವರಿ ಸಚಿವರನ್ನು ಖುದ್ದು ಭೇಟಿ ಮಾಡಿ, ಒತ್ತಡ ಹೇರಬೇಕೆಂದು ಮುದೇಗೌಡ್ರ ತಿಪ್ಪೇಶ್ ಮನವಿ ಮಾಡಿದರು.

ಯಲವಟ್ಟಿಯ ಡಿ.ಹೆಚ್.ಚನ್ನಬಸಪ್ಪ ಮಾತನಾಡಿ, ಭದ್ರಾ ಕಾಡಾ ಸಮಿತಿ ಮೇಲ್ಭಾಗದ ರೈತರ ಹಿತವನ್ನು ಅಷ್ಟೇ ಕಾಪಾಡುತ್ತಿದೆ ಎಂದು ಆರೋಪಿಸಿದರು.

ಈ ವೇಳೆ ಪ್ರಭಾರ ಇಇ ಮಂಜುನಾಥ್, ಎಇಇ ಧನುಂಜಯ ಅವರಿಗೆ ರೈತರು ಕೂಡಲೇ ಭದ್ರಾ ಬಲದಂಡೆ ನಾಲೆಗೆ ನೀರು ಹರಿಸುವಂತೆ ಮನವಿ ಪತ್ರ ನೀಡಿದರು. ಯಲವಟ್ಟಿ ಮಹೇಂ ದ್ರಪ್ಪ, ಮದಕರಿ, ವಿನಾಯಕ ನಗರ ಕ್ಯಾಂಪಿನ ಶ್ರೀನಿವಾಸ್, ಬಸಾಪುರದ ವೀರಭದ್ರಯ್ಯ, ಓ.ಜಿ.ಕುಮಾರ್, ಆದಾಪುರದ ತಿಮ್ಮಯ್ಯ ಸೇರಿದಂತೆ ಕುಂಬಳೂರು, ನಿಟ್ಟೂರು, ನಂದಿತಾವರೆ, ಜಿಗಳಿ, ಭಾನುವಳ್ಳಿ, ಸಿರಿಗೆರೆ, ಕೆ.ಎನ್.ಹಳ್ಳಿ, ಕೊಕ್ಕನೂರು, ಜಿ.ಬೇವಿನಹಳ್ಳಿ ಮತ್ತು ಮಲೇಬೆನ್ನೂರಿನ ನೂರಾರು ರೈತರು ಪ್ರತಿಭಟನೆಯಲ್ಲಿದ್ದರು.

ಪಿಎಸ್ಐ ಪ್ರಭು ಕೆಳಗಿನಮನೆ ನೇತೃತ್ವದಲ್ಲಿ ಪೊಲೀಸರು ಭದ್ರತೆ ಒದಗಿಸಿದ್ದರು.

error: Content is protected !!