ಸತತವಾಗಿ ನೀರು ಹರಿಸುವಂತೆ ಎಸ್ಸೆಸ್ಸೆಂ ಹಾಗೂ ಶಾಸಕರ ಪಟ್ಟು
ದಾವಣಗೆರೆ, ಸೆ.19- ಭದ್ರಾ ನಾಲೆಯ ನೀರಿನ ವಿಚಾರವಾಗಿ ಮಂಗಳವಾರ ಬೆಂಗಳೂರಿನಲ್ಲಿ ನಡೆದ ಸಭೆ ಅಪೂರ್ಣವಾಗಿದ್ದು, ಇನ್ನೆರೆಡು ದಿನಗಳಲ್ಲಿ ತೀರ್ಮಾನ ಹೇಳುವುದಾಗಿ ಜಲಸಂಪನ್ಮೂಲ ಸಚಿವರೂ ಆದ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮೊದಲಿಗೆ ವಿಕಾಸಸೌಧದಲ್ಲಿ ನಿಗದಿಯಾಗಿದ್ದ ಸಭೆ ಕಾರಣಾಂತರಗಳಿಂದಾಗಿ ಡಿ.ಕೆ.ಶಿವಕುಮಾರ್ ಅವರ ಗೃಹ ಕಚೇರಿಯಲ್ಲೇ ನಡೆಯಿತು.
ಸಭೆಯಲ್ಲಿ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ಅವರು, ಅಚ್ಚುಕಟ್ಟಿನಲ್ಲಿ ಬಹಳಷ್ಟು ರೈತರು ಭತ್ತದ ನಾಟಿ ಮಾಡಿರುವುದರಿಂದ ಭತ್ತದ ಉಳಿವಿಗಾಗಿ ನಾಲೆಯಲ್ಲಿ ಸತತವಾಗಿ ನೀರು ಹರಿಸಬೇಕೆಂಬ ವಾದ ಮಂಡಿಸಿದರು.
ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು, ಭದ್ರಾ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆ ಇರುವುದರಿಂದ ಆಫ್ ಅಂಡ್ ಆನ್ ಪದ್ಧತಿಯಲ್ಲಿ ನೀರು ಹರಿಸುವ ಅನಿವಾರ್ಯತೆ ಇದೆ. ಹಾಗಾಗಿ ಮಂಗಳವಾರ ಬೆಳಿಗ್ಗೆ ನಾಲೆಯಲ್ಲಿ ನೀರು ಬಂದ್ ಮಾಡಲಾಗಿದೆ ಎಂದರು.
ಶಾಸಕರುಗಳಾದ ಬಿ.ಪಿ.ಹರೀಶ್, ಡಿ.ಜಿ.ಶಾಂತನಗೌಡ್ರು, ಶಿವಗಂಗಾ ಬಸವರಾಜ್, ಕೆ.ಎಸ್.ಬಸವಂತಪ್ಪ, ಶ್ರೀಮತಿ ಲತಾ ಮಲ್ಲಿಕಾರ್ಜುನ್, ಮಾಜಿ ಶಾಸಕ ಎಸ್.ರಾಮಪ್ಪ, ಭದ್ರಾ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳದ ಅಧ್ಯಕ್ಷ ವೈ.ದ್ಯಾವಪ್ಪರೆಡ್ಡಿ, ಮುಖಂಡರಾದ ನಂದಿಗಾವಿ ಶ್ರೀನಿವಾಸ್, ಮುದೇಗೌಡ್ರ ತಿಪ್ಪೇಶ್ ಮತ್ತಿತರರು ಭದ್ರಾ ನಾಲೆಯಲ್ಲಿ ಆಫ್ ಅಂಡ್ ಆನ್ ಮಾಡದೇ, ನಿತ್ಯ 2000 ಸಾವಿರ ಕ್ಯೂಸೆಕ್ಸ್‌ನಂತೆ ಸತತವಾಗಿ ನೀರು ಹರಿಸಿ ಎಂದು ಒತ್ತಾಯಿಸಿದರು ಎನ್ನಲಾಗಿದೆ.
ದೆಹಲಿಗೆ ಹೋಗುವ ತರಾತುರಿಯಲ್ಲಿದ್ದ ಡಿಸಿಎಂ ಶಿವಕುಮಾರ್ ಅವರು, ನಿಮ್ಮ ಅಭಿಪ್ರಾಯವನ್ನು ಪತ್ರ ಮುಖೇನ ನನಗೆ ಕೊಡಿ, ಅಧಿಕಾರಿಗಳಿಂದ ವಾಸ್ತವ ಪರಿಸ್ಥಿತಿ ತಿಳಿದುಕೊಂಡು ಒಂದೆರಡು ದಿನಗಳಲ್ಲಿ ತೀರ್ಮಾನ ಹೇಳುತ್ತೇನೆಂದು ಸಭೆಯನ್ನು ಮೊಟಕುಗೊಳಿಸಿದರೆಂದು ಸಭೆಯಲ್ಲಿದ್ದವರು `ಜನತಾವಾಣಿ’ಗೆ ತಿಳಿಸಿದರು.
ಕರ್ನಾಟಕ ನೀರಾವರಿ ನಿಗಮದ ಎಂ.ಡಿ.ಮಲ್ಲಿಕಾರ್ಜುನ್ ಗುಂಗೆ ಸೇರಿದಂತೆ, ನೀರಾವರಿ ಇಲಾಖೆ ಅಧಿಕಾರಿಗಳು ಸಭೆಯಲ್ಲಿದ್ದರು.
ನಾಲೆಯಲ್ಲಿ ನೀರು ಬಂದ್ : ಏತನ್ಮಧ್ಯೆ ಮಂಗಳವಾರ ಬೆಳಿಗ್ಗೆ ಭದ್ರಾವತಿ ಭಾಗದ ನಾಲೆಯಲ್ಲಿ ನೀರು ಬಂದ್ ಮಾಡುವಂತೆ ಪಟ್ಟು ಹಿಡಿದಿದ್ದರಿಂದ ಬಲದಂಡೆ ನಾಲೆಗೆ ಹರಿಸಲಾಗುತ್ತಿದ್ದ ನೀರನ್ನು ಬಂದ್ ಮಾಡಲಾಗಿದೆ.
ಈ ವಿಷಯ ತಿಳಿದ ಅಚ್ಚುಕಟ್ಟಿನ ರೈತರು, ದಾವಣಗೆರೆ ಮತ್ತು ಮಲೇಬೆನ್ನೂರಿನಲ್ಲಿ ಪ್ರತಿಭಟನೆ ನಡೆಸಿ, ಸತತವಾಗಿ ನೀರು ಹರಿಸುವಂತೆ ಆಗ್ರಹಿಸಿದ್ದಾರೆ.
ಪ್ರತಿಭಟನೆಗೆ ಕರೆ : ಯಾರಿಗೂ ಹೇಳದೆ, ಕೇಳದೇ ಭದ್ರಾ ನಾಲೆಯಲ್ಲಿ ನೀರು ಬಂದ್ ಮಾಡಿರುವುದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಶಾಸಕ ಬಿ.ಪಿ.ಹರೀಶ್ ಅವರು, ಬುಧವಾರ ದಾವಣಗೆರೆ ಮತ್ತು ಮಲೇಬೆನ್ನೂರಿನಲ್ಲಿ ರೈತರ ಬೃಹತ್ ಪ್ರತಿಭಟನಗೆ ಕರೆ ನೀಡಿದ್ದಾರೆ ಎನ್ನಲಾಗಿದೆ. ನಾಲೆಯಲ್ಲಿ ಸತತವಾಗಿ ನೀರು ಹರಿಸದಿದ್ದರೆ, ಹೋರಾಟ ತೀವ್ರ ಗೊಳಿಸುವುದಾಗಿ ಹರೀಶ್ ಅವರು ತಿಳಿಸಿದ್ದಾರೆ.