ದಾವಣಗೆರೆ, ಸೆ.19- ಜಿಲ್ಲಾದ್ಯಂತ ಗಣೇಶೋತ್ಸವವನ್ನು ಸಡಗರ – ಸಂಭ್ರಮದಿಂದ ಆಚರಿಸಲಾಯಿತು. ಸೋಮವಾರ ಮುಂಜಾನೆಯೇ ಕೆಲವರು ಗಣೇಶನನ್ನು ಪೂಜಿಸಿ ವಿಸರ್ಜಿಸಿದರು. ಮತ್ತೆ ಕೆಲವೆಡೆ ಮಂಗಳವಾರ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜಿಸಿದರು.
ಅಂದದ ಮಂಟಪದಲ್ಲಿ ಆಸೀನನಾದ ಗಣಪ: ವಿಘ್ನ ನಿವಾರಕನ ಆಗಮನದ ಹಿನ್ನೆಲೆಯಲ್ಲಿ ಎಲ್ಲೆಡೆ ಸಂಭ್ರಮ ಮನೆ ಮಾಡಿತ್ತು. ಮನೆಗಳಲ್ಲಿ ಅಂದದ ಮಂಟಪಗಳಲ್ಲಿ ಚಂದದ ಗಣಪನನ್ನು ಪ್ರತಿಷ್ಠಾಪಿಸಿ ಪೂಜಿಸಲಾಯಿತು. ಗಣಪನಿಗೆ ಇಷ್ಟದ ಮೋದಕ, ಕಡುಬು, ಉಂಡೆ, ಹಣ್ಣುಗಳ ನೈವೇದ್ಯ ಸಮರ್ಪಿಸಲಾಯಿತು.
ವಿವಿಧ ಸಂಘ-ಸಂಸ್ಥೆಗಳು ಅದ್ಧೂರಿಯಾಗಿ ಗಣೇಶೋತ್ಸವ ಆಚರಿಸಿದವು. ಒಬ್ಬರಿಗೊಬ್ಬರು ಸ್ಪರ್ಧೆಗಿಳಿದವರಂತೆ ಪೆಂಡಾಲ್ಗಳನ್ನು ಸುಂದರವಾಗಿರಿಸಿ, ಡೊಳ್ಳಿನ ಸದ್ದಿನೊಂದಿಗೆ ನೃತ್ಯ ಮಾಡುತ್ತಾ, ಗಣೇಶನ ಘೋಷಣೆ ಕೂಗುತ್ತಾ ಅದ್ಧೂರಿಯಾಗಿ ಬರಮಾಡಿಕೊಳ್ಳಲಾಗುತ್ತಿತ್ತು. ನಾನಾ ವೇಷದಲ್ಲಿನ ವಿನಾಯಕನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಸಂಭ್ರಮಿಸಿದರು.
ಮಹಾನಗರ ಪಾಲಿಕೆ ವತಿಯಿಂದ ಚಿಕ್ಕ ಗಣೇಶನ ಮೂರ್ತಿಗಳ ವಿಸರ್ಜನೆಗೆ ಟ್ರ್ಯಾಕ್ಟರ್ ವ್ಯವಸ್ಥೆ ಕಲ್ಪಿಸಲಾಗಿತ್ತು. ದೊಡ್ಡ ಗಾತ್ರದ ಮೂರ್ತಿಗಳನ್ನು ಮೆರವಣಿಗೆ ಮೂಲಕ ಕೊಂಡೊಯ್ದು ಬಾತಿ ಕೆರೆ ಬಳಿ ವಿಸರ್ಜಿಸಲಾಯಿತು. ಮಂಟಪಗಳ ಬಳಿ ಪ್ರಸಾದ ವಿತರಣೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಹೈಸ್ಕೂಲ್ ಮೈದಾನದಲ್ಲಿ ಕೇದಾರನಾಥ ಮಂಟಪ: ಹಿಂದೂ ಮಹಾ ಗಣಪತಿ ಸಮಿತಿಯಿಂದ ನಗರದ ಹೈಸ್ಕೂಲ್ ಮೈದಾನದಲ್ಲಿ ಕೇದಾರನಾಥ ಮಹಾಮಂಟಪದ ಮಾದರಿಯಲ್ಲಿ 140 ಅಡಿ ಉದ್ದ ಹಾಗೂ 65 ಅಡಿ ಅಗಲದ ಗಣೇಶನ ಮಂಟಪವನ್ನು ನಿರ್ಮಿಸಲಾಗಿದೆ. ಈ ಮಂಟಪದಲ್ಲಿ 15 ಅಡಿ ಎತ್ತರದ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿದೆ.
ಬಂಬೂ ಬಜಾರ್ನಲ್ಲಿ ಚಂದ್ರಯಾನ-3 ಮಾದರಿ ನಿರ್ಮಾಣ
ದಾವಣಗೆರೆ ಬಂಬೂಬಜಾರ್ನಲ್ಲಿರುವ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಮೇದಾರ ಸಮಾಜದ ವತಿಯಿಂದ 53ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಪೂರ್ಣ ಪ್ರಮಾಣದ ಬಿದಿರಿನಿಂದ ನಿರ್ಮಿಸಲ್ಪಟ್ಟ ಚಂದ್ರಯಾನ-3 ಮಾದರಿಯನ್ನು ನಿರ್ಮಿಸಿ ಗಣೇಶನನ್ನು ಪ್ರತಿಷ್ಠಾಪಿಸಲಾಗಿದೆ.
ಕಳೆದ ಬಾರಿ ಶ್ರೀ ಕೇದಾರನಾಥ ಮಂದಿರ ನಿರ್ಮಿಸಲಾಗಿತ್ತು. ಈ ಬಾರಿ ಚಂದ್ರಯಾನ-3 ಮಾದರಿಯ ಜಿ.ಎಸ್.ಎಲ್.ವಿ. ಲಾಂಚ್ ವೆಹಿಕಲ್ನ ಎಲ್.ವಿ.ಎಂ 3 ಮತ್ತು 4 ನ್ನು ಮತ್ತು ಚಂದ್ರನ ಮೇಲ್ಮೈನಲ್ಲಿ ಲ್ಯಾಂಡಿಂಗ್ ಮಾಡಿರುವ ವಿಕ್ರಂ ಲ್ಯಾಂಡರ್ ಅನ್ನು ಹಾಗೂ ಪ್ರಗ್ಯಾನ್ ರೋವರ್ ಅನ್ನು ಪೂರ್ಣ ಪ್ರಮಾಣದ ಬಿದಿರಿನಿಂದ ಆಕರ್ಷಕವಾಗಿ ನಿರ್ಮಿಸಲಾಗಿದೆ.
ಜಿ.ಎಸ್.ಎಲ್.ವಿ. ಲಾಂಚ್ ವೆಹಿಕಲ್ನ ಎಲ್.ವಿ.ಎಂ 3 ಮತ್ತು 4 ನ್ನು 36 ಅಡಿ ಎತ್ತರವಿದ್ದು, 8 ಅಡಿ ಸುತ್ತಳತೆ ಹೊಂದಿದೆ. ಇದನ್ನು ಬಿದಿರಿನ ಚಾಪೆಗಳು ಮತ್ತು ಬಂಬೂಗಳಿಂದ ನಿರ್ಮಿಸಲಾಗಿದೆ ಎಂದು ಮೇದಾರ ಸಮಾಜದ ಶ್ರೀ ಕೇತೇಶ್ವರ ಯುವ ವೇದಿಕೆಯ ಅಧ್ಯಕ್ಷ ರಾಘವೇಂದ್ರ ಹೆಚ್. ತಿಳಿಸಿದ್ದಾರೆ. 10 ದಿನಗಳವರೆಗೆ ವೀಕ್ಷಣೆಗೆ ಅವಕಾಶವಿದೆ.
ಮಂಟಪದ ಸುತ್ತ ನಾಗೇಶ್ವರ, ಭೀಮಾಶಂಕರ, ವೈದ್ಯನಾಥೇಶ್ವರ, ಓಂಕಾರೇಶ್ವರ, ಮಹಾಕಾಳೇಶ್ವರ, ಮಲ್ಲಿಕಾರ್ಜುನ, ಸೋಮನಾಥೇಶ್ವರ, ಕಾಶಿ ವಿಶ್ವನಾಥ, ಘೃಷ್ಣೇಶ್ವರ, ತ್ರಯಂಬಕೇಶ್ವರ, ಕೇದಾರೇಶ್ವರ ಹಾಗೂ ರಾಮೇಶ್ವರ ಜ್ಯೋತಿರ್ಲಿಂಗಗಳ ಚಿತ್ರಗಳ ಮಾದರಿ ರಚಿಸಲಾಗಿದೆ. 26 ದಿವಸಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪ್ರಸಾದ ವಿತರಣೆ ನಡೆಯಲಿದೆ. ಮಂಟಪದ ಪಕ್ಕದಲ್ಲಿಯೇ ಮಕ್ಕಳಿಗಾಗಿ ಅಮ್ಯೂಸ್ಮೆಂಟ್ ಪಾರ್ಕ್ ಇದೆ.
ಸೋಮವಾರ ಶಾಸಕ ಶಾಮನೂರು ಶಿವಶಂಕರಪ್ಪ ಗಣೇಶೋತ್ಸವಕ್ಕೆ ಚಾಲನೆ ನೀಡಿದರು. ಹಿಂದೂ ಮಹಾ ಗಣಪತಿ ಸಮಿತಿ ಅಧ್ಯಕ್ಷ ಜೊಳ್ಳಿ ಗುರು, ದೂಡಾ ಮಾಜಿ ಅಧ್ಯಕ್ಷ ದೇವರಮನೆ ಶಿವಕುಮಾರ್ ಹಾಗು ಇತರರು ಈ ಸಂದರ್ಭದಲ್ಲಿದ್ದರು.
ಗೋಪಿ ಚಂದನ ಅಲಂಕಾರ: ಹಿಂದೂ ಯುವ ಶಕ್ತಿ ವತಿಯಿಂದ ತೊಗಟವೀರ ಕಲ್ಯಾಣ ಮಂಟಪದಲ್ಲಿ ಪ್ರತಿಷ್ಠಾಪಿಸಲಾಗಿರುವ ಗಣೇಶನಿಗೆ ಗೋಪಿ ಚಂದನ ಅಲಂಕಾರ ಮಾಡಲಾಗಿದೆ. ಕಳೆದ ಬಾರಿ ಕೊಬ್ಬರಿಯಿಂದ ಗಣೇಶನ ಮೂರ್ತಿಯನ್ನು ಅಲಂಕಾರ ಮಾಡಲಾಗಿತ್ತು. ಪ್ರತಿವರ್ಷ ಒಂದೊಂದು ಬಗೆಯ ಅಲಂಕಾರ ಮಾಡುವುದು ಇಲ್ಲಿನ ವಾಡಿಕೆ. ಗಣೇಶನ ವಿಗ್ರಹ 18 ಅಡಿ ಇದ್ದು, 250 ಕೆ.ಜಿಯಷ್ಟು ಗೋಪಿ ಚಂದನದಿಂದ ಅಲಂಕಾರ ಮಾಡಲಾಗಿದೆ. ಕಡೆಯ ದಿವಸ ಜಾನಪದ ಕಲಾತಂಡದೊಂದಿಗೆ ಗಣಪತಿಯನ್ನು ವಿಸರ್ಜನೆ ಮಾಡಲಾಗುತ್ತದೆ.
ರಾಂ ಅಂಡ್ ಕೋ ದಲ್ಲಿ ಕಾಳಿ ದರ್ಶನ: ರಾಂ ಅಂಡ್ ಕೋ ವೃತ್ತದಲ್ಲಿ ಶ್ರೀ ವರ ಸಿದ್ಧಿ ವಿನಾಯಕ ಮಹೋತ್ಸವ ಸಮಿತಿ ವತಿಯಿಂದ 31ನೇ ವರ್ಷದ ಗಣೇಶೋತ್ಸವ ಆಚರಿಸಲಾಗುತ್ತಿದ್ದು, ಶಂಕರಾಚಾರ್ಯರಿಗೆ ಕಾಳಿದೇವಿ ದರ್ಶನ ನೀಡುವ ರೂಪಕ ಏರ್ಪಡಿಸಲಾಗಿದೆ. 29ರಂದು ಅನ್ನ ಸಂತರ್ಪಣೆ ಹಾಗೂ 30ರಂದು ವಿಸರ್ಜನೆ ನಡೆಯಲಿದೆ.
ಕ್ಷೀರ ಸಾಗರ ಮಂಥನ: ಎಸ್.ಕೆ.ಪಿ.ದೇವಸ್ಥಾನ ರಸ್ತೆಯ ವಾಸವಿ ಯುವಜನ ಸಂಘದಿಂದ 42ನೇ ವಿನಾಯಕ ಮಹೋತ್ಸವದ ಪ್ರಯುಕ್ತ ಶ್ರೀ ಕಾಸಲ್ ವಿಠ್ಠಲ್ ಶ್ರೀಮತಿ ಸುನಂದಮ್ಮ ಕಲ್ಯಾಣ ಮಂಟಪದಲ್ಲಿ ಶ್ರೀ ವಿಘ್ನೇಶ್ವರ ಸ್ವಾಮಿಯ ಪ್ರತಿಷ್ಠಾಪಿಸಲಾಯಿತು.
ಮಹೋತ್ಸವದ ಅಂಗವಾಗಿ ಭಕ್ತರ ವೀಕ್ಷಣೆಗಾಗಿ ಕ್ಷೀರ ಸಾಗರ ಮಂಥನ (ಸಮುದ್ರ ಮಂಥನ) ಪ್ರದರ್ಶನ ಏರ್ಪಡಿಸಲಾಗಿದೆ. ಸೆ.24ರ ಭಾನುವಾರ ವೀಕ್ಷಣೆಗೆ ಕೊನೆಯ ದಿನವಾಗಿದೆ.
ಡ್ರೈ ಫ್ರೂಟ್ಸ್ ಗಣಪತಿ: ದೊಡ್ಡಪೇಟೆಯ ಗಣೇಶ ದೇವಸ್ಥಾನದಲ್ಲಿ ಶ್ರೀ ವಿನಾಯಕ ಮಹೋತ್ಸವದ ವಿಶೇಷವಾಗಿ ಈ ಬಾರಿ ವಿವಿಧ ಡ್ರೈ ಫ್ರೂಟ್ಸ್ ಗಳಿಂದ ಮನಮೋಹಕವಾಗಿ ಅಲಂಕರಿಸಲಾಗಿದೆ.
ಸಾರ್ವಜನಿಕ ವೀಕ್ಷಣೆಗೆ ಇದೇ 22ರ ಶುಕ್ರವಾರ ಕೊನೆಯ ದಿನವಾಗಿದ್ದು, ಅಂದು ಅದ್ದೂರಿಯಾಗಿ ಮಂಗಳವಾದ್ಯದೊಡನೆ ಮಯೂರ ರಥದಲ್ಲಿ ವಿಸರ್ಜಿಸಲಾಗುವುದು ಎಂದು ದೊಡ್ಡಪೇಟೆ ಗಣಪತಿ ದೇವಸ್ಥಾನ ಸಮಿತಿಯ ರವಿಶಂಕರ್ ತಿಳಿಸಿದ್ದಾರೆ.