ಸಂವಿಧಾನ ಪೀಠಿಕೆಗೆ ಮಳೆ ಸಿಂಚನ

ಸಂವಿಧಾನ ಪೀಠಿಕೆಗೆ ಮಳೆ ಸಿಂಚನ

ದಾವಣಗೆರೆ, ಸೆ. 15 – ನಗರದ ಜಿಲ್ಲಾ ಕ್ರೀಡಾಂ ಗಣದಲ್ಲಿ ಮಳೆಯ ಸಿಂಚನದ ನಡುವೆ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ನೆರವೇರಿತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಸಂಯು ಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ವಿವಿಧ ಶಾಲೆಯ ಸಾವಿರಾರು ಮಕ್ಕಳು ಕ್ರೀಡಾಂಗಣದಲ್ಲಿ ನೆರೆದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ನೆರೆದಿದ್ದವರಿಗೆ ಸಂವಿಧಾನದ ಪೀಠಿಕೆಯ ಶಪಥ ಬೋಧಿಸಲಾಯಿತು.

ಸಿದ್ದಗಂಗಾ ಶಾಲೆಯ ಮಕ್ಕಳು ಭಾರತ ಭೂಪಟದ ಆಕಾರದಲ್ಲಿ ನಿಲ್ಲುವ ಮೂಲಕ ಗಮನ ಸೆಳೆದರು. ಕೇಸರಿ, ಹಸಿರು ಹಾಗೂ ಬಿಳಿ ಬಣ್ಣದ ಫಲಕಗಳನ್ನು ಹಿಡಿದು ತ್ರಿವರ್ಣ ಧ್ವಜ ರೂಪಿಸಿ ಚಪ್ಪಾಳೆ ಗಿಟ್ಟಿಸಿದರು.

ಕಾರ್ಯಕ್ರಮ ಆರಂಭವಾಗುವ ಸಮಯಕ್ಕೆ ಸರಿಯಾಗಿ ತುಂತುರು ಮಳೆ ಆರಂಭವಾಗಿ, ನಂತರ ಬಿರುಸು ಪಡೆದುಕೊಂಡಿತು. ಆದರೆ, ಭಾರತದ ಭೂಪಟದ ಮಾದರಿ ರೂಪಿಸಿ ನಿಂತಿದ್ದ ವಿದ್ಯಾರ್ಥಿಗಳು ಕಾರ್ಯಕ್ರಮ ಪೂರ್ಣಗೊಳ್ಳುವವರೆಗೂ ಅಲುಗಾಡದೇ ನಿಂತಿದ್ದರು.

ಈ ಬಗ್ಗೆ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಕಾರ್ಯಕ್ರಮದ ವೇಳೆ ಮಳೆ ಬಂದಿರುವುದು ಶುಭ ಸೂಚನೆ. ಮಳೆಯ ನಡುವೆಯೂ ಮಕ್ಕಳು ಶಿಸ್ತಿನಿಂದ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಂವಿಧಾನದ ಆಶಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ, ದೇಶ ಬೆಳೆಸುವ ಪ್ರಕ್ರಿಯೆಯಲ್ಲಿ ಭಾಗಿಯಾಗಬೇಕು ಎಂದವರು ಕರೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ್, ಮೇಯರ್ ವಿನಾಯಕ ಪೈಲ್ವಾನ್, ಜಿಲ್ಲಾ ಪಂಚಾಯ್ತಿ ಸಿಇಒ ಸುರೇಶ್ ಇಟ್ನಾಳ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮಗೊಂಡ ಬಸರಗಿ, ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಕೃಷ್ಣನಾಯ್ಕ್, ಉಪವಿಭಾಗಾಧಿಕಾರಿ ದುರ್ಗಾಶ್ರೀ, ಪಾಲಿಕೆ ಆಯುಕ್ತೆ ರೇಣುಕಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಪಾಲಿಕೆ ಸದಸ್ಯರಾದ ಗಡಿಗುಡಾಳ್ ಮಂಜುನಾಥ್, ಚಮನ್‌ಸಾಬ್ ಮತ್ತಿತರರು ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೆ.ನಾಗರಾಜ ಸ್ವಾಗತಿಸಿದರು.

error: Content is protected !!