ದಾವಣಗೆರೆ, ಸೆ.10- ಯಾವುದೇ ನೋಟೀಸ್ ನೀಡದೆ, ಮಾಜಿ ಶಾಸಕ ಟಿ.ಗುರುಸಿದ್ದನಗೌಡ ಹಾಗೂ ಅವರ ಕುಟುಂಬದವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿರುವುದು ಖಂಡನೀಯ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.
ನಗರದ ಸಿದ್ದವೀರಪ್ಪ ಬಡಾವಣೆಯಲ್ಲಿರುವ ಮಾಜಿ ಶಾಸಕ ಗುರುಸಿದ್ದನಗೌಡ ಅವರ ನಿವಾಸಕ್ಕೆ ಭಾನುವಾರ ಭೇಟಿ ನೀಡಿದ ರೇಣುಕಾಚಾರ್ಯ, ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಚುನಾವಣೆಯ ಸಂದರ್ಭದಲ್ಲಿ ಗುರುಸಿದ್ದನಗೌಡರು ಸಾಕಷ್ಟು ಓಟಾಟ ಮಾಡಿ ಪಕ್ಷ ಕಟ್ಟಿದ್ದಾರೆ. ಅಭ್ಯರ್ಥಿ ವಿರುದ್ಧ ಕೆಲಸ ಮಾಡಿದ್ದರೆ ನೋಟಿಸ್ ನೀಡಬೇಕು. ಆದರೆ ಯಾವುದೇ ನೋಟಿಸ್ ನೀಡದೆ ಪಕ್ಷದಿಂದ ಉಚ್ಛಾಟನೆ ಮಾಡಿರುವುದು ಸರಿಯಲ್ಲ ಎಂದರು.
ಗುರುಸಿದ್ದನಗೌಡ ಅವರ ಪುತ್ರ ಡಾ.ರವಿಕುಮಾರ್ ಸಹ ಲೋಕಸಭಾ ಚುನಾವಣೆಗೆ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಅವರು ರಾಜಕೀಯ ಕ್ಷೇತ್ರದಲ್ಲಿ ಬೆಳೆಯಬಾರದೆಂದು ಉಚ್ಛಾಟನೆ ಮಾಡಿರುವುದು ಸರಿಯಲ್ಲ. ಮಾಜಿ ಶಾಸಕರಾದ ರವೀಂದ್ರನಾಥ್, ಗುರುಸಿದ್ದನಗೌಡ್ರು ಅಂತವರನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಜಿಲ್ಲೆಯ ಐದು ಶಾಸಕರು ಒಟ್ಟಾಗಿ ಸಚಿವ ಸ್ಥಾನ ಕೇಳಿದರೂ ಕೊಡಲು ಬಿಡದೆ, ಸಚಿವ ಸ್ಥಾನ ತಪ್ಪಿಸಲಾಯಿತು. ಜಿಲ್ಲಾ ಅಧ್ಯಕ್ಷರು ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದ್ದಾರೆ ಎಂದು ಕಿಡಿಕಾರಿದರು.
ದೇಶಕ್ಕೆ ಮೋದಿ ಹೇಗೋ ಹಾಗೆ ರಾಜ್ಯಕ್ಕೆ ಯಡಿಯೂರಪ್ಪ. ಅವರು ಎಲ್ಲಾ ಸಮುದಾಯಗಳನ್ನು ಒಟ್ಟಿಗೆ ತೆಗೆದುಕೊಂಡು ಹೋದ ಮಹಾನ್ ನಾಯಕ. ವ್ಯವಸ್ಥಿತವಾಗಿ ಯಡಿಯೂರಪ್ಪ ನವರನ್ನು ಇಳಿಸುವ ಕೆಲಸ ಮಾಡಿದ್ದರು. ನಮ್ಮವರೇ ಆರೋಪ ಹೊರಿಸಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಿದರು ಎಂದು ರಾಜ್ಯ ಮುಖಂಡರ ವರ್ತನೆಗೆ ರೇಣುಕಾಚಾರ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಯಡಿಯೂರಪ್ಪನವರು ನೋಡದ ಹಳ್ಳಿಗಳಿಲ್ಲ. ಗ್ರಾಮ ಪಂಚಾಯ್ತಿ ಗೆಲ್ಲಲೂ ಆಗದವರು ಪಕ್ಷದ ಜವಾಬ್ದಾರಿ ವಹಿಸಿಕೊಂಡರು. ಆದರೆ ಈಗ ಪಕ್ಷಕ್ಕೆ ಸಾಕಷ್ಟು ಡ್ಯಾಮೇಜ್ ಆದ ಮೇಲೆ, ಲೋಕಸಭಾ ಚುನಾವಣೆಗೆ ಮತಗಳು ಬೇಕೆಂದು ಯಡಿಯೂರಪ್ಪನವರ ನಾಯಕತ್ವ ಕೇಳುತ್ತಿದ್ದಾರೆ ಎಂದು ಟೀಕಿಸಿದರು.
ನಾಳೆ ಮಾಡಾಳು ವಿರೂಪಾಕ್ಷಪ್ಪ ಅವರನ್ನು ಭೇಟಿ ಮಾಡುವುದಾಗಿ ಹೇಳಿದ ರೇಣುಕಾಚಾರ್ಯ, ನನ್ನ ಮೇಲೆ ತೂಗುಕತ್ತಿ ತೂಗುತ್ತಾ ಇದೆ. ಈಗ ಮತ್ತೆ ನೋಟಿಸ್ ಕೊಟ್ಟಿದ್ದಾರೆ. ನಾನು ಉತ್ತರಿಸುವುದಿಲ್ಲ. ಯಾರಿಗೂ ಹೆದರುವುದಿಲ್ಲ. ಯಡಿಯೂರಪ್ಪ ಅವರ ವಿರುದ್ಧ ಮಾತನಾಡಿದವರ ಮೇಲೆ ಮೊದಲು ಕ್ರಮ ಕೈಗೊಳ್ಳಲಿ ಎಂದು ಹೇಳಿದರು.
ಈ ವೇಳೆ ಮಾಜಿ ಶಾಸಕ ಗುರುಸಿದ್ದನಗೌಡ್ರು, ಡಾ.ರವಿಕುಮಾರ್ ಇನ್ನಿತರರಿದ್ದರು.