ವಲಯ ಮಟ್ಟದ ಫುಟ್‌ಬಾಲ್ ಪಂದ್ಯಾವಳಿಗೆ ಚಾಲನೆ

ವಲಯ ಮಟ್ಟದ ಫುಟ್‌ಬಾಲ್ ಪಂದ್ಯಾವಳಿಗೆ ಚಾಲನೆ

ಕ್ರೀಡಾಪಟುಗಳ ಪ್ರತಿಭೆ ರಾಷ್ಟ್ರ ಮಟ್ಟದಲ್ಲಿ ಬೆಳಗುವಂತಾಗಲಿ : ಪ್ರೊ. ವೈ. ವೃಷಭೇಂದ್ರಪ್ಪ ಹಾರೈಕೆ

ದಾವಣಗೆರೆ, ಸೆ. 1 -ಕ್ರೀಡಾಪಟುಗಳ ಪ್ರತಿಭೆ ಕೇವಲ ಜಿಲ್ಲೆಗೆ ಮೀಸಲಾಗದೇ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಬೆಳಗುವಂತಾಗಲಿ ಎಂದು ಬಿಐಇಟಿ ನಿರ್ದೇಶಕ ಪ್ರೊ.ವೈ. ವೃಷಭೇಂದ್ರಪ್ಪ ಅವರು ಶುಭ ಹಾರೈಸಿದರು.

ನಗರದ ಬಾಪೂಜಿ ಇಂಜಿನಿಯರಿಂಗ್ ಕಾಲೇಜಿನ ಮೈದಾನದಲ್ಲಿ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯ ಹಾಗೂ ಜೆ.ಜೆ.ಎಂ.ವೈದ್ಯಕೀಯ ಕಾಲೇಜಿನ ಸಹಯೋಗದಲ್ಲಿ ನಿನ್ನೆ ಆಯೋಜಿಸಿದ್ದ 2023-24ನೇ ಸಾಲಿನ ಬೆಳಗಾಂ ವಲಯ ಮಟ್ಟದ ಪುರುಷರ ಫುಟ್‌ಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. 

ಪ್ರಸ್ತುತ ದಿನಗಳಲ್ಲಿ ಹೆಚ್ಚಾಗಿ 25 ರಿಂದ 40 ವರ್ಷದವರು ಹಲವಾರು ಕಾರಣಗಳಿಂದ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ನಿಮ್ಮ ನಿತ್ಯದ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಿರಿ. ನಿಮ್ಮಗಳ ಓದಿನ, ಕೆಲಸಗಳ ಒತ್ತಡದಿಂದ ಹೊರ ಬಂದು ಹೆಚ್ಚು ಹೆಚ್ಚು ದೈಹಿಕ ಕ್ರೀಡೆಗಳಲ್ಲಿ ಪಾಲ್ಗೊಳ್ಳಿ. ಇದರಿಂದ ನಿಮ್ಮ ಆರೋಗ್ಯ ಕಾಪಾಡಿಕೊಳ್ಳ ಬಹುದಾಗಿದೆ.ವಿಶ್ವವಿದ್ಯಾನಿಲಯದಿಂದ ನಿಮಗೆ ಇರುವ ಕ್ರೀಡಾ ಸವಲತ್ತುಗಳನ್ನು ಚೆನ್ನಾಗಿ ಬಳಸಿಕೊಂಡು ರಾಜ್ಯ, ರಾಷ್ಟ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿ ನಿಮ್ಮ ಕಾಲೇಜಿಗೆ, ಜಿಲ್ಲೆಗೆ ಕೀರ್ತಿ ತನ್ನಿರಿ ಎಂದು ಎಂದು ಅವರು ಹಾರೈಸಿದರು. 

ಜೆ.ಜೆ.ಎಂ. ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಡಾ. ಎಸ್.ಬಿ. ಮುರುಗೇಶ್‌ ಮಾತನಾಡಿ, ಕ್ರೀಡೆಗಳನ್ನು ಬರೀ ಕ್ರೀಡಾ ಮನೋಭಾವದಿಂದ ಆಡಬೇಕು. ಕ್ರೀಡೆಗಳಲ್ಲಿ ಬಹುಮಾನ ಗಳಿಸುವುದು ಮುಖ್ಯವಲ್ಲ. ಕ್ರೀಡೆಗಳಲ್ಲಿ ಭಾಗವಹಿಸುವಿಕೆ ಮುಖ್ಯ ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ಬೆಳಗಾಂ ವಲಯದ ಕಾಡ್ಸ್ ಕೋ ಆರ್ಡಿನೇಟರ್ ಸಿ.ಪಿ.ಮಹೇಶ್, ಆರ್‌ಜಿಯುಎಚ್‌ಎಸ್‌ನ ದೈಹಿಕ ನಿರ್ದೇಶಕರ ಸಂಘದ ಅಧ್ಯಕ್ಷರು, ವಿಜಯನಗರ ವೈದ್ಯಕೀಯ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಜೋಸೆಫ್ ಅನಿಲ್, ಜೆಜೆಎಂ ವೈದ್ಯಕೀಯ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಕೆ.ಎನ್.ಗೋಪಾಲಕೃಷ್ಣ, ಜಿಎಂ ಫಾರ್ಮಸಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಹನುಮಂತಪ್ಪ, ಹುಬ್ಬಳ್ಳಿಯ ಕಿಮ್ಸ್‌ನ ದೈಹಿಕ ಶಿಕ್ಷಣ ನಿರ್ದೇಶಕ ಅರುಣ ಗೌಡರ್, ತರಬೇತುದಾರರಾದ ಗ್ಯಾಬ್ರಿಯಲ್, ರೆಹಮಾನ್, ನಾಗೇಶ್‌, ಇಮ್ತಿಯಾಜ್ ಶಾಂತಕುಮಾರ, ಕಾಲೇಜಿನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಸೇರಿದಂತೆ, ಇತರರು ಭಾಗವಹಿಸಿದ್ದರು.  

error: Content is protected !!