ಜಿಲ್ಲೆಯಲ್ಲಿ ಮುನಿಸಿಕೊಂಡ ಮಳೆರಾಯ

ಜಿಲ್ಲೆಯಲ್ಲಿ ಮುನಿಸಿಕೊಂಡ ಮಳೆರಾಯ

ಆಗಸ್ಟ್‌ ತಿಂಗಳಲ್ಲಿ ಶೇ.75ರಷ್ಟು ಮಳೆ ಕುಂಠಿತ

ದಾವಣಗೆರೆ, ಆ. 30 – ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಮುನಿಸಿಕೊಂಡಿದ್ದು, ಆಗಸ್ಟ್ ತಿಂಗಳ ವಾಡಿಕೆಗೆ ಹೋಲಿಸಿದರೆ ಶೇ.75ರ ಭಾರೀ ಕೊರತೆಯಾಗಿದೆ.

ಆಗಸ್ಟ್ ತಿಂಗಳಲ್ಲಿ ಜಿಲ್ಲೆಯಲ್ಲಿ ವಾಡಿಕೆ ಮಳೆಯ ಪ್ರಮಾಣ 97 ಮಿ.ಮೀ. ಇದೆ. ಆದರೆ, ವಾಸ್ತವಿಕ ವಾಗಿ ಕೇವಲ 24 ಮಿ.ಮೀ. ಮಾತ್ರ ಮಳೆ ಸುರಿದಿದೆ.

ಬರದ ನಾಡಾದ ಜಗಳೂರು ತಾಲ್ಲೂಕಿನಲ್ಲಿ ಆಗಸ್ಟ್ ತಿಂಗಳಲ್ಲಿ ಕೇವಲ 19 ಮಿ.ಮೀ. ಮಳೆ ಯಾಗಿದೆ. ಈ ತಿಂಗಳಲ್ಲಿ ಜಗಳೂರಿನಲ್ಲಿ ವಾಡಿಕೆ ಮಳೆ ಪ್ರಮಾಣ 68.1 ಮಿ.ಮೀ. ಆಗಿತ್ತು.

ಹೊನ್ನಾಳಿಯಲ್ಲಿ ಪರಿಸ್ಥಿತಿ ಇನ್ನೂ ಕಠಿಣ ವಾಗಿದ್ದು,  80.1 ಮಿ.ಮೀ. ಬದಲು 16.3 ಮಳೆ ಸುರಿದಿದೆ. ಚನ್ನಗಿರಿಯಲ್ಲಿ ವಾಡಿಕೆಯ 138.9 ಮಿ.ಮೀ. ಮಳೆಯ ಬದಲು 31.7 ಮೀ.ಮೀ. ಮಳೆಯಾಗಿದೆ. ದಾವಣಗೆರೆಯಲ್ಲಿ 90.8 ಮಿ.ಮೀ. ಬದಲು 25.7, ಹರಿಹರದಲ್ಲಿ 79.5 ಮಿ.ಮೀ. ಬದಲು 23.9 ಹಾಗೂ ನ್ಯಾಮತಿಯಲ್ಲಿ 133.8 ಮಿ.ಮೀ. ಬದಲು 22.6 ಮಿ.ಮೀ. ಮಳೆಯಾಗಿದೆ. ನ್ಯಾಮತಿ ತಾಲ್ಲೂಕಿನಲ್ಲೇ ಅತಿ ಹೆಚ್ಚು ಶೇ.83ರ ಕೊರತೆಯಾಗಿದೆ.

ಇದರಿಂದಾಗಿ ಜಿಲ್ಲೆಯಲ್ಲಿ ಈ ಮುಂಗಾರಿನಲ್ಲಿ ಶೇ. 15ರಷ್ಟು ಮಳೆಯ ಕೊರತೆಯಾದಂತಾಗಿದೆ. ಜೂನ್ 1ರಿಂದ ಆರಂಭವಾದ ಮುಂಗಾರು ಹಂಗಾಮಿನಲ್ಲಿ ಇದುವರೆಗೂ ವಾಡಿಕೆ ಮಳೆ 283 ಮಿ.ಮೀ. ಆಗಬೇಕಿತ್ತು. ಆದರೆ, 241 ಮಿ.ಮೀ. ಮಾತ್ರ ಮಳೆಯಾಗಿದೆ.

ವಾಡಿಕೆ ಮಳೆ ವ್ಯತ್ಯಾಸಕ್ಕಿಂತ ಹೆಚ್ಚಾಗಿ, ಮಳೆರಾಯ ಒಂದು ತಿಂಗಳಲ್ಲಿ ಅಬ್ಬರಿಸಿ ಇನ್ನೊಂದು ತಿಂಗಳಲ್ಲಿ ಮರೆಯಾಗಿರುವುದು ಕೃಷಿಗೆ ಸಂಕಟ ತಂದಿದೆ.

ಜೂನ್ ತಿಂಗಳಲ್ಲಿ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ.39ರಷ್ಟು ಕಡಿಮೆ ಮಳೆಯಾಗಿತ್ತು. ಜುಲೈ ತಿಂಗಳಲ್ಲಿ ವಾಡಿಕೆಗಿಂತ ಶೇ.57ರಷ್ಟು ಹೆಚ್ಚಿನ ಮಳೆಯಾಗಿತ್ತು. ಈಗ ಆಗಸ್ಟ್ ತಿಂಗಳಲ್ಲಿ ಶೇ.75ರ ಭಾರೀ ಕೊರತೆಯಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿಯಾದರೂ ಮಳೆರಾಯ ಕೃಪೆ ತೋರಿದರೆ ಕುಡಿಯುವ ನೀರಿನ ಭೀಕರ ಸಮಸ್ಯೆಯಾಗುವುದು ತಪ್ಪಲಿದೆ.

error: Content is protected !!