ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗೃಹಲಕ್ಷ್ಮಿ ಯೋಜನೆಗೆ ಶಾಸಕ ಎಸ್ಸೆಸ್ ಚಾಲನೆ
ದಾವಣಗೆರೆ, ಆ.30- ಕಾಂಗ್ರೆಸ್ ಸರ್ಕಾರದ ಬಹು ನಿರೀಕ್ಷಿತ ನಾಲ್ಕನೇ ಗ್ಯಾರಂಟಿ ಮನೆ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ನೀಡುವ ಗೃಹಲಕ್ಷ್ಮಿ ಯೋಜನೆಗೆ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಚಾಲನೆ ನೀಡಿದರು.
ಬುಧವಾರ ದಕ್ಷಿಣ ವಿಧಾನಸಭಾ ಕ್ಷೇತ್ರದ ಮುದಹದಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜರೀಕಟ್ಟೆ ಗ್ರಾಮದ ಛತ್ರಪತಿ ಶಿವಾಜಿ ಮಹಾರಾಜ್ ಸಮುದಾಯ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಯೋಜನೆಗೆ ಡಿಜಿಟಲ್ ಬಟನ್ ಒತ್ತುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಶಾಸಕರು, ಚುನಾವಣೆಗೂ ಮುಂಚೆ ಕಾಂಗ್ರೆಸ್ ಪಕ್ಷ 5 ಗ್ಯಾರಂಟಿಗಳನ್ನು ಘೋಷಿಸಿತ್ತು. ಕಾಂಗ್ರೆಸ್ ಪಕ್ಷ ಕೊಟ್ಟ ಮಾತನ್ನು ಈಡೇರಿಸಿದೆ. ಇವತ್ತು ನಾವು ಈ ಕಾರ್ಯಕ್ರಮದಲ್ಲಿ ಡಿಜಿಟಲ್ ಬಟನ್ ಒತ್ತುವ ಮೂಲಕ ಮನೆಯ ಯಜಮಾನಿಯ ಖಾತೆಗೆ ಹಣ ಸಂದಾಯ ಆಗಿದೆ ಎಂದು ಹೇಳಿದರು.
ಕರ್ನಾಟಕ ಇಡೀ ದೇಶಕ್ಕೆ ದಿಕ್ಸೂಚಿಯಾಗಿದೆ. ನಮ್ಮ ಗ್ಯಾರಂಟಿ ಘೋಷಣೆ ವೇಳೆ ಕೇಂದ್ರ ಸರ್ಕಾರ ಟೀಕೆ ಮಾಡಿತ್ತು. ಆದರೆ, ನಾವಿಂದು ನುಡಿದಂತೆ ನಡೆದಿದ್ದೇವೆ. ಮಹಿಳೆಯರ ಸಮಸ್ಯೆಯನ್ನೇ ನಾವೀಗ ಈಡೇರಿಸಿದ್ದೇವೆ ಎಂದು ಹೇಳಿದರು.
ಚುನಾವಣೆ ಮುಂಚೆ ನಾವು ಗ್ಯಾರಂಟಿ ಘೋಷಣೆ ಮಾಡಿದಾಗ, ಕೇಂದ್ರ ನಾಯಕರು ಟೀಕೆ ಮಾಡಿದ್ದರು. ಇದರಿಂದ ಆರ್ಥಿಕತೆ ಕುಸಿಯುತ್ತದೆ. ಇದು ಸುಳ್ಳು ಭರವಸೆ ಎಂದು ಹೇಳಿದ್ದರು. ಆದರೆ, ನಾವು ನುಡಿದಂತೆ ನಡೆದಿದ್ದೇವೆ. ಭರವಸೆಯನ್ನು ಈಡೇರಿಸಿದ್ದೇವೆ ಎಂದರು.
ವೇದಿಕೆ ಮೇಲೆ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಜಿ.ಸಿ.ನಿಂಗಪ್ಪ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಪಂಚಾಯತ್ ರಾಜ್ ಇಲಾಖೆ ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ, ಮಲ್ಲಾನಾಯ್ಕ, ತಾಲ್ಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ರಾಮಭೋವಿ, ಮುದಹದಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೂಜಾ, ಉಪಾಧ್ಯಕ್ಷೆ ಮಂಜಮ್ಮ, ಸದಸ್ಯರುಗಳಾದ ಶಶಿಕಲಾ, ಬಸಮ್ಮ, ಮಂಜಮ್ಮ, ನೀಲಮ್ಮ, ಸಾಕಮ್ಮ, ಜಯಮ್ಮ, ನೇತ್ರಾವತಿ, ಪಾರ್ವತಮ್ಮ, ರೇಷ್ಮಾ, ಮೌನೇಶ್ವರಚಾರಿ, ಆನಂದಪ್ಪ, ಕೃಷ್ಣಮೂರ್ತಿ, ನಾಗರಾಜಪ್ಪ ಬಿ., ನಾಗರಾಜಪ್ಪ, ಬಿ.ಜಿ., ಹನುಮಂತಪ್ಪ, ಮಹೇಂದ್ರ, ಮಂಜುನಾಥ, ಪಿಡಿಓ ಅಶ್ವಿನಿ, ಮುಖಂಡರಾದ ಶಿವರಾಜ್, ದಿಳ್ಳೆಪ್ಪ, ಶಂಭಣ್ಣ, ಬಸವರಾಜಪ್ಪ ಉಪಸ್ಥಿತರಿದ್ದರು.
ಇದೇ ವೇಳೆ ಕಾಂಗ್ರೆಸ್ ಸರ್ಕಾರ 100 ದಿನಗಳ ಪೂರೈಸಿದ ಹಿನ್ನೆಲೆಯಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾಬಾಯಿ ಮಾಲತೇಶ್, ಪ್ರಧಾನ ಕಾರ್ಯದರ್ಶಿ ಕವಿತಾ ಚಂದ್ರಶೇಖರ್ ಮತ್ತು ಮಂಗಳಮ್ಮ ಶಾಸಕರಿಗೆ ಸಿಹಿ ನೀಡಿ ಶುಭ ಕೋರಿದರು.