ಗ್ಯಾರಂಟಿ ಕಾಯುವುದೇ ನಿತ್ಯದ ಕಾಯಕವಾಗಿದೆ

ಗ್ಯಾರಂಟಿ ಕಾಯುವುದೇ ನಿತ್ಯದ ಕಾಯಕವಾಗಿದೆ

ಹರಿಹರದಲ್ಲಿ ಗೃಹಲಕ್ಷ್ಮಿ ಯೋಜನೆ ಉದ್ಘಾಟಿಸಿದ ಶಾಸಕ ಬಿ.ಪಿ. ಹರೀಶ್

ಹರಿಹರ, ಅ. 30 – ಗೃಹಲಕ್ಷ್ಮಿ ಯೋಜನೆ ನೊಂದ ಹಾಗೂ ಅವಶ್ಯಕತೆ ಇರುವಂತಹ ಮಹಿಳೆಯರು ಸ್ವತಂತ್ರವಾಗಿ ಜೀವನ ನಡೆಸಲು ಆಸರೆಯಾಗಿದ್ದು, ಇದನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಕೊಳ್ಳುವಂತೆ ಶಾಸಕ ಬಿ.ಪಿ. ಹರೀಶ್ ಹೇಳಿದರು.

ನಗರದ ಸಿದ್ದೇಶ್ವರ್ ಪ್ಯಾಲೇಸ್ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯ್ತಿ, ನಗರಸಭೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಗೃಹಲಕ್ಷ್ಮಿ ಯೋಜನೆ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ವಿಶ್ವದ ಮಹಾನ್ ಚೇತನ, ಕಾಯಕ ಯೋಗಿ ಬಸವಣ್ಣನವರು ಕಾಯಕವೇ ಕೈಲಾಸ ಎಂಬ ದೊಡ್ಡ ಶಕ್ತಿಯಾಗಿ ಉಳಿಯುವಂತಹ ಸಂದೇಶಗಳನ್ನು ನೀಡಿದ್ದರು. ಮನುಷ್ಯನಾಗಿ ಹುಟ್ಟಿದ ಮೇಲೆ ಬೇಡುವುದಕ್ಕಿಂತ, ದುಡಿದು ತಿನ್ನುವುದು ಲೇಸು ಎಂದರು. ಆದರೆ ಇತ್ತೀಚಿನ ದಿನಗಳಲ್ಲಿ ಅದು ಹೋಗಿ ಗ್ಯಾರಂಟಿ ಯೋಜನೆಗಳನ್ನು ಕಾಯುವುದೇ ದಿನ ನಿತ್ಯದ ಕಾಯಕವಾಗಿದೆ. ಇದನ್ನು ನಂಬಿದ ಜನರು ಮುಂದಿನ ದಿನಗಳಲ್ಲಿ ಕಾಯಕವಿಲ್ಲದವರು ಹೆಚ್ಚಾ ಗುವ ಹಂತಕ್ಕೆ ತಲುಪಬಹುದು ಎಂದು ಹೇಳಿದರು.

ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಮಾತನಾಡಿ, ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನವರು ರಾಜ್ಯದ ಜನರ ಏಳಿಗೆಗಾಗಿ ಐದು ಯೋಜನೆಗಳನ್ನು ಜಾರಿಗೆ ತರವುದಾಗಿ ಘೋಷಣೆ ಮಾಡಿದ್ದರ ಫಲವಾಗಿ, ಇವತ್ತು ನಾಲ್ಕನೇ ಗ್ಯಾರಂಟಿ ಯೋಜನೆ ಜಾರಿಗೆ ತರುವ ಮೂಲಕ ನಾಡಿನ ಜನತೆಗೆ ಕೊಟ್ಟ ಮಾತಿನಂತೆ ನಡೆದುಕೊಂಡು ಮತದಾರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಅವರಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಬಲ ತುಂಬುವ ಕೆಲಸವನ್ನು ಮತದಾರರು ಮಾಡಬೇಕು ಎಂದು ಹೇಳಿದರು.

ತಹಶೀಲ್ದಾರ್ ಪೃಥ್ವಿ ಸಾನಿಕಂ ಮಾತನಾಡಿ, ತಾಲ್ಲೂಕಿನ 23 ಗ್ರಾಮ ಪಂಚಾಯತಿ ಕಾರ್ಯಾಲಯ ಮತ್ತು ನಗರದ 10 ಹಾಗೂ ಮಲೇಬೆನ್ನೂರು 3 ಕಡೆಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಚಾಲನಾ ಸಮಾರಂಭದ ಕಾರ್ಯಕ್ರಮ ವೀಕ್ಷಿಸಲು  ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಹೇಳಿದರು.  

ಕೆಪಿಸಿಸಿ ಸದಸ್ಯ ಬಿ. ರೇವಣಸಿದ್ದಪ್ಪ ಮಾತನಾಡಿ, ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದ ತಕ್ಷಣವೇ ವಿರೋಧ ಪಕ್ಷದವರು ಕಾಂಗ್ರೆಸ್ ಪಕ್ಚದ ಬಗ್ಗೆ ಹಗುರವಾಗಿ ಪರಿಗಣಿಸಲು ಪ್ರಾರಂಭಿಸಿದರು. ಆದರೆ ಸಿದ್ದರಾಮಯ್ಯನವರು ಕೇವಲ100 ದಿನಗಳಲ್ಲಿ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಮೂಲಕ ನಾಡಿನ ಜನತೆಗೆ ಅತ್ಯಂತ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ ಎಂದು ಹೇಳಿದರು.

ನಗರಸಭೆ ಸದಸ್ಯ ಶಂಕರ್ ಖಟಾವ್ಕರ್ ಮಾತನಾಡಿ, ಸಿದ್ದರಾಮಯ್ಯನವರು ಮಹಿಳೆಯರನ್ನು ನಾಡಿನ ಶಕ್ತಿಯನ್ನಾಗಿ ಪರಿವರ್ತಿಸುವ ದೃಷ್ಟಿಯಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಮತ್ತು ಗೃಹಲಕ್ಷ್ಮಿ ಯೋಜನೆ ಜಾರಿಗೆ ತಂದಿರುವುದು ಶ್ಲ್ಯಾಘನೀಯ ಕಾರ್ಯವಾಗಿದೆ ಎಂದು ಹೇಳಿದರು.

ನಗರಸಭೆ ಸದಸ್ಯೆ ಆಶ್ವಿನಿ ಕೃಷ್ಣ ಮಾತನಾಡಿ, ಬಡವರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಜಾರಿಗೆ ತಂದಿರುವ ಯೋಜನೆಗಳನ್ನು ಮತದಾರರು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಸಿಡಿಪಿಒ ಪೂರ್ಣಿಮಾ ಮಾತನಾಡಿ, ಗೃಹಲಕ್ಷ್ಮಿ ಯೋಜನೆಯಿಂದ ಮಹಿಳೆಯರು ಆರ್ಥಿಕವಾಗಿ ಸಬಲೀಕರಣವಾಗಬೇಕು ಎಂಬ ದೃಷ್ಟಿಯಿಂದ ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ ಎಂದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ನಿಂಬಕ್ಕ ಚಂದಪೂರ್, ತಾ.ಪಂ. ಇ.ಓ. ಎನ್. ರವಿ, ತಾಲ್ಲೂಕು ನೋಡಲ್ ಅಧಿಕಾರಿ ರಾಘವೇಂದ್ರ, ನಗರಸಭೆ ಪೌರಾಯುಕ್ತ ಐಗೂರು ಬಸವರಾಜ್, ಪ್ರವೀಣ್ ಜಿ.ಕೆ., ಸಿಡಿಪಿಒ ಪೂರ್ಣಿಮ ಎಂ, ಮಂಜುಳಾ ಇತರರು ಹಾಜರಿದ್ದರು.

error: Content is protected !!