ಒಟ್ಟಾಗಿ ಮುನ್ನಡೆದರೆ ಬದುಕು ಹಸನು

ಒಟ್ಟಾಗಿ ಮುನ್ನಡೆದರೆ ಬದುಕು ಹಸನು

ಭಗವಾನ್ ಶ್ರೀ ಜಿವ್ಹೇಶ್ವರ ಸ್ವಾಮಿ ಜಯಂತ್ಯುತ್ಸವದಲ್ಲಿ ಸಚಿವ ಕೆ.ಹೆಚ್. ಮುನಿಯಪ್ಪ

ದಾವಣಗೆರೆ, ಆ. 29- ಸಮಾಜ ಒಗ್ಗಟ್ಟಿನಿಂದ ಇದ್ದರೆ ಏನೆಲ್ಲಾ ಸಾಧಿಸಬಹುದು. ಒಗ್ಗಟ್ಟೇ ಮೂಲಮಂತ್ರ. ಗುಂಪುಗಾರಿಕೆ, ಭಿನ್ನಾಭಿಪ್ರಾಯಗಳಿದ್ದರೆ ಅವುಗಳನ್ನೆಲ್ಲಾ  ಮರೆತು ಒಟ್ಟಾಗಿ ಸಮಾಜ ಮುನ್ನಡೆಸಿದರೆ ಜನರ ಬದುಕು ಹಸನಾಗುತ್ತದೆ ಎಂದು ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿದರು.

ನಗರದ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ಸ್ವಕುಳಸಾಳಿ ಸಮಾಜ (ನೇಕಾರ)ದ ವತಿಯಿಂದ ಇಂದು ಹಮ್ಮಿಕೊಂಡಿದ್ದ ಭಗವಾನ್ ಶ್ರೀ ಜಿವ್ಹೇಶ್ವರ ಸ್ವಾಮಿ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ನೂರು ದಿನಗಳಲ್ಲೇ ಕಾಂಗ್ರೆಸ್ ಸರ್ಕಾರ ಚುನಾವಣೆಗೂ ಮುನ್ನ ಭರವಸೆ ನೀಡಿದ್ದ ಐದು ಗ್ಯಾರಂಟಿಗಳ ಪೈಕಿ ಮೂರು ಗ್ಯಾರಂಟಿಗಳು ಅನುಷ್ಠಾನಗೊಂಡಿದ್ದು, ನಾಳೆ ಮೈಸೂರಿನಲ್ಲಿ `ಗೃಹಲಕ್ಷ್ಮಿ’ ಯೋಜನೆಗೆ ಚಾಲನೆ ದೊರೆಯಲಿದೆ. ಡಿಸೆಂಬರ್ ವೇಳೆಗೆ ಐದನೇ `ಯುವ ನಿಧಿ’ ಯೋಜನೆ ಜಾರಿಗೊಳ್ಳಲಿದೆ. ಕಾಂಗ್ರೆಸ್ ನುಡಿದಂತೆ ನಡೆವ ಸರ್ಕಾರವಾಗಿದೆ. ಕೊಟ್ಟ ಭರವಸೆಯನ್ನು ಈಡೇರಿಸುತ್ತಿದೆ ಎಂದರು.

ಮಾಜಿ ಸಂಸದ ಕೆ.ಸಿ. ಕೊಂಡಯ್ಯ ಅವರು ನೇಕಾರ ಸಮಾಜಕ್ಕೆ ಅತ್ಯುತ್ತಮ ಸೇವೆ ಸಲ್ಲಿಸಲು ಪಣ ತೊಟ್ಟಿದ್ದಾರೆ. ಸಮಾಜಕ್ಕೆ ಅಗತ್ಯವಾದ ಬೇಡಿಕೆಗಳ ಈಡೇರಿಕೆಗಾಗಿ ಸಂಘಟಿತರಾಗಬೇಕು ಎಂದು ಸಚಿವರು ನೇಕಾರ ಸಮಾಜಕ್ಕೆ ಕರೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮಾತನಾಡಿ, ನಮ್ಮ ಸರ್ಕಾರ ಶಿಕ್ಷಣ, ಆರೋಗ್ಯ ಮತ್ತು ಹಸಿವು ನೀಗಿಸುವ ಯೋಜನೆಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಿದೆ. ಕೊಟ್ಟ ಮಾತಿನಂತೆ ಐದು ಗ್ಯಾರಂಟಿ ಯೋಜನೆಗಳ ಜಾರಿಯನ್ನು ಪ್ರಾಮಾಣಿಕವಾಗಿ ಮಾಡುತ್ತಿದೆ ಎಂದರು.

ಸ್ವಕುಳಸಾಳಿ ಸಮಾಜಕ್ಕೆ ಅತೀ ಕಡಿಮೆ ದರದಲ್ಲಿ ಈಗಾಗಲೇ ನಿವೇಶನವನ್ನು ಮಂಜೂರು ಮಾಡಲಾಗಿದೆ.  ಸಮುದಾಯ ಭವನ ನಿರ್ಮಾಣದ ಬೇಡಿಕೆಯನ್ನು ನಮ್ಮ ಮುಂದಿಟ್ಟಿದ್ದು, ಅದನ್ನು ಕೂಡ ಸರ್ಕಾರದ ಮುಂದಿಟ್ಟು ಹೆಚ್ಚಿನ ಅನುದಾನ ಕೊಡಿಸುವುದಾಗಿ ಭರವಸೆ ನೀಡಿದರು.

ಮಾಜಿ ಸಂಸದ ಕೆ.ಸಿ. ಕೊಂಡಯ್ಯ ಮಾತನಾಡಿ, 10- 12 ಉಪ ಪಂಗಡಗಳನ್ನು `ನೇಕಾರ’ ಎಂಬ ಸೂರಿನಡಿಗೆ ತರುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ನೇಕಾರರ ಒಕ್ಕೂಟ ರಚನೆಯಾಗಿದೆ. ರಾಜ್ಯದಲ್ಲಿ ದೇವಾಂಗ, ಕುರುಹಿನಶೆಟ್ಟಿ, ಸ್ವಕುಳಸಾಳಿ ಸೇರಿ ಅನೇಕ ಉಪ ಪಂಗಡಗಳಿವೆ. ಇವುಗಳನ್ನೆಲ್ಲಾ `ನೇಕಾರ’ ಎಂಬ ಹೆಸರಿನ ಮೂಲಕ ಒಂದೇ ಸೂರಿನಡಿ ತರುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು.

ನೇಕಾರಿಕೆ ವೃತ್ತಿ ನೇಪಥ್ಯಕ್ಕೆ ಸರಿಯುತ್ತಿದ್ದು, ಧಾರ್ಮಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಸಮಾಜ ಒಂದಾಗಬೇಕಾಗಿದೆ ಎಂದರು.

ನಗರದ ಜಡೇಸಿದ್ಧ ಶಿವಯೋಗೇಶ್ವರ ಮಠದ ಶ್ರೀ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸ್ವಕುಳಸಾಳಿ ಸಮಾಜದ ಅಧ್ಯಕ್ಷ ಮೋಹನ್ ಪಿ. ಗಾಯಕವಾಡ್ ಅಧ್ಯಕ್ಷತೆ ವಹಿಸಿದ್ದರು.

ಮೇಯರ್ ವಿನಾಯಕ ಪೈಲ್ವಾನ್, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಅನಿತಾಬಾಯಿ ಮಾಲತೇಶರಾವ್, ದೂಡಾ ಮಾಜಿ ಅಧ್ಯಕ್ಷ ಮಾಲತೇಶರಾವ್ ಜಾಧವ್, ಸ್ವಕುಳಸಾಳಿ ಗುರುಪೀಠದ ಸ್ಥಾಪನಾ ಸಮಿತಿ ಗೌರವಾಧ್ಯಕ್ಷ ನೀಲಕಂಠಪ್ಪ ರೋಖಡೆ, ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಬಸವರಾಜ್ ಗುಬ್ಬಿ, ಜಿಲ್ಲಾ ನೇಕಾರರ ವೇದಿಕೆ ಅಧ್ಯಕ್ಷ ಎಲ್. ಸತ್ಯನಾರಾಯಣ, ನಗರಸಭೆ ಮಾಜಿ ಅಧ್ಯಕ್ಷ ಆರ್.ಹೆಚ್.ನಾಗಭೂಷಣ, ಪಾಲಿಕೆ ಮಾಜಿ ಸದಸ್ಯ ಡಿ.ಎನ್. ಜಗದೀಶ್, ವಾಸುದೇವ್ ಸಾಕ್ರೆ ಮತ್ತಿತರರು ಭಾಗವಹಿಸಿದ್ದರು.

ದೇವಸೇನಿ ಪ್ರಾರ್ಥಿಸಿದರು. ಪ್ರಧಾನ ಕಾರ್ಯದರ್ಶಿ ಧರ್ಮರಾಜ ಏಕಬೋಟೆ ಸ್ವಾಗತಿಸಿದರು. ಆರ್.ಜೆ. ಬಸವರಾಜ್ ನಿರೂಪಿಸಿದರು. ಮಂಜುನಾಥ ಕಾಂಬಳೆ ವಂದಿಸಿದರು.

error: Content is protected !!