ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಗುಂಜನ್ ಕೃಷ್ಣ ಸೂಚನೆ
ದಾವಣಗೆರೆ,ಆ.28- ಸರ್ಕಾರ ಸರ್ವರಿಗೂ ಸಮಪಾಲು, ಸಮಬಾಳು ಮತ್ತು ಜನರಿಗೆ ಅನುಕೂಲ ಕಲ್ಪಿಸಲು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದು ಇವುಗಳ ಅನುಷ್ಠಾನದಲ್ಲಿ ದುರ್ಬಳಕೆಯಾಗದಂತೆ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕೆಂದು ಕೈಗಾರಿಕಾಭಿವೃದ್ದಿ ಆಯುಕ್ತರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ನಿರ್ದೇಶಕರು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಗುಂಜನ್ ಕೃಷ್ಣ ಸೂಚಿಸಿದರು.
ಸೋಮವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರದ ಯೋಜನೆಗಳನ್ನು ಬಳಸಿ ಒಂದೇ ಬ್ಯಾಂಕ್ ಖಾತೆಗೆ ಹಲವು ಫಲಾನುಭವಿಗಳ ನೋಂದಣಿಯನ್ನು ಮಾಡಿಸಿ ಹಣ ದುರುಪಯೋಗ ಮಾಡಲಾಗುತ್ತದೆ ಎಂದು ಮಹಾಲೇಖಪಾಲರ ವರದಿ ಇದೆ. ಗೃಹಲಕ್ಷ್ಮಿ ಯೋಜನೆಯ ಹಲವು ಫಲಾನುಭವಿಗಳ ಹೆಸರಿಗೆ ಒಂದೇ ಖಾತೆಗೆ ಹಣ ಜಮಾ ಆಗುವಂತೆ ಹ್ಯಾಕ್ ಮಾಡಲಾಗುತ್ತದೆ. ಅದೇ ರೀತಿ ಅನ್ನಭಾಗ್ಯ ಯೋಜನೆಯಡಿ ಐದು ಕೆ.ಜಿ.ಅಕ್ಕಿಯ ಬದಲಾಗಿ ನಗದು ನೀಡಲಾಗುತ್ತಿದ್ದು ಈ ವೇಳೆಯು ದುರುಪಯೋಗ ಆಗುವ ಸಂಭವವಿರುತ್ತದೆ, ಅಧಿಕಾರಿಗಳು ಪ್ರತಿಯೊಂದು ಖಾತೆಯನ್ನು ಪರಿಶೀಲನೆ ನಡೆಸಿ ದುರುಪಯೋಗವಾಗದಂತೆ ಅರ್ಹರಿಗೆ ತಲುಪಿಸುವ ಕೆಲಸ ಮಾಡಬೇಕೆಂದು ಸೂಚನೆ ನೀಡಿದರು.
ಜಿಲ್ಲೆ ಉತ್ತಮ ಪ್ರಗತಿಯಲ್ಲಿದೆ, ಆದರೂ ಈ ವರ್ಷ ಬರದ ಛಾಯೆ ಇದ್ದು ಎಲ್ಲರೂ ಸಮನ್ವಯತೆ ಯಿಂದ ಕೆಲಸ ಮಾಡಬೇಕಾಗಿದೆ. ಸರ್ಕಾರದ ಮಟ್ಟದಲ್ಲಿ ಅಥವಾ ಇಲಾಖೆಗಳಲ್ಲಿ ಯಾವುದಾದರೂ ಸಮಸ್ಯೆಗಳಿದ್ದಲ್ಲಿ ನನ್ನ ಗಮನಕ್ಕಾಗಲೀ, ಜಿಲ್ಲಾಧಿಕಾರಿಯವರ ಗಮನಕ್ಕಾಗಲೀ ತರಬೇಕು. ಸರ್ಕಾರದಿಂದ ಆಗಬೇಕಾದ ಎಲ್ಲಾ ಕೆಲಸಗಳನ್ನು ಸಮನ್ವಯತೆಯಿಂದ ಮಾಡಲಾಗುತ್ತದೆ ಎಂದು ಎಲ್ಲಾ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ತಾಯಂದಿರ ಮರಣ ಆಡಿಟ್ಗೆ ಸೂಚನೆ
ಶಿಶು, ತಾಯಂದಿರ ಮರಣ ಪ್ರಮಾಣ ತಗ್ಗಿಸಿ; ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ತಾಯಿ, ಮಗುವಿನ ಆರೋಗ್ಯವನ್ನು ಕಾಪಾಡುವ ಮೂಲಕ ಸಾಂಸ್ಥಿಕ ಹೆರಿಗೆ ಮೂಲಕ ನವಜಾತ ಶಿಶು ಮತ್ತು ತಾಯಂದಿರ ಮರಣ ಪ್ರಮಾಣವನ್ನು ತಗ್ಗಿಸಬೇಕಾಗಿದೆ. ಆದರೆ ಜುಲೈನಲ್ಲಿ 8 ತಾಯಂದಿರ ಮರಣವಾಗಿದ್ದು, ಇದಕ್ಕೆ ಏನು ಕಾರಣ ಎಂದು ಅಧ್ಯಯನ ಮಾಡಬೇಕೆಂದು ಜಿಲ್ಲಾಧಿಕಾರಿಯ ವರು ಪ್ರಸ್ತಾಪಿಸಿದಾಗ ಜಿಲ್ಲಾ ಆರೋಗ್ಯಾಧಿ ಕಾರಿ ಬೇರೆ ಜಿಲ್ಲೆಗಳಿಂದ ರೆಫರೆಲ್ ಆಗಿ ಬಂದಂತಹ ಪ್ರಕರಣಗಳು ಇವಾಗಿವೆ ಎಂದಾಗ ಕಾರ್ಯದರ್ಶಿ ಪ್ರತಿಯೊಂದು ಪ್ರಕರಣಗಳು ಆಡಿಟ್ ಆಗಬೇಕೆಂದು ಗುಂಜನ್ ಕೃಷ್ಣ ಸೂಚನೆ ನೀಡಿದರು.
ಮಹಿಳೆಯರಿಗೆ ಸಾರಿಗೆ ನಿಗಮದ ಬಸ್ಗಳಲ್ಲಿ ಉಚಿತ ಪ್ರಯಾಣ ಯೋಜನೆಯಡಿ ದಾವಣಗೆರೆ ವಿಭಾಗದಿಂದ ಜೂನ್, ಜುಲೈ, ಆಗಸ್ಟ್ 24 ರ ವರೆಗೆ ಒಟ್ಟು 78,15,550 ಪ್ರಯಾಣಿಕರು ಸಂಚರಿಸಿದ್ದು 19.43 ಕೋಟಿ ನಿಗಮಕ್ಕೆ ಆದಾಯ ಬಂದಿರುತ್ತದೆ ಎಂದು ಕೆ.ಎಸ್.ಆರ್.ಟಿ.ಸಿ. ವಿಭಾಗಾಧಿಕಾರಿ ಸಭೆಗೆ ಮಾಹಿತಿ ನೀಡಿದರು.
ಈ ವೇಳೆ ಜಿಲ್ಲಾಧಿಕಾರಿಯವರು ಜಗಳೂರಿಗೆ ಸಂಜೆ ಸಮಯದಲ್ಲಿ ಬಸ್ಗಳು ಇರುವುದಿಲ್ಲ ಎಂಬ ದೂರುಗಳಿವೆ ಎಂದಾಗ ಜಗಳೂರಿಗೆ ಸಂಜೆ 7.30 ರ ವರೆಗೆ ಬಸ್ಗಳಿದ್ದು ಮುಂದಿನ ತಿಂಗಳು ನಿಗಮಕ್ಕೆ ಹೊಸ ಬಸ್ಗಳು ಬರಲಿದ್ದು ಎಲ್ಲೆಲ್ಲಿ ಕೊರತೆ ಇದೆ, ಅಂತಹ ಕಡೆ ಹೊಸ ಬಸ್ಗಳನ್ನು ಕಲ್ಪಿಸಲಾಗುತ್ತದೆ ಎಂದರು. ಅನ್ನಭಾಗ್ಯ, ಗೃಹಲಕ್ಷ್ಮಿಹಾಗೂ ಗೃಹ ಜ್ಯೋತಿ ಯೋಜನೆಗಳ ಪ್ರಗತಿ ವಿವರವನ್ನು ಅಧಿಕಾರಿಗಳು ನೀಡಿದರು.
ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್, ವಸತಿ ಶಾಲೆಗಳಲ್ಲಿ ಮ್ಯಾನ್ಯುಯಲ್ ಸ್ಯ್ಕಾವೆಂಜಿಂಗ್ ಸಂತ್ರಸ್ತರ ಪಟ್ಟಿಯಲ್ಲಿನ ಮಕ್ಕಳಿಗೆ ಮತ್ತು ರೈತರ ಆತ್ಮಹತ್ಯೆಯಾದ ಮಕ್ಕಳಿಗೆ ಹಾಸ್ಟೆಲ್ ಮತ್ತು ವಸತಿ ಶಾಲೆಗಳಲ್ಲಿ ಪ್ರವೇಶ ಕಲ್ಪಿಸಲು ನಿಯಮವಿದ್ದು ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳು ತಿಳಿಸಿದಾಗ ಸಮಾಜ ಕಲ್ಯಾಣಾಧಿಕಾರಿಯವರು ಜಿಲ್ಲೆಯಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ಸಂತ್ರಸ್ಥರು 288 ಜನರು ಇದ್ದು ಇವರ ಮಕ್ಕಳಿಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದಾಗ ಕಾರ್ಯದರ್ಶಿಯವರು ಪರಿಶೀಲನೆ ನಡೆಸಿ ಅವಕಾಶ ಇರುವವರಿಗೆ ಯೋಜನೆ ಕಲ್ಪಿಸಲು ಸೂಚನೆ ನೀಡಿದರು.
ಆಗಸ್ಟ್ 23 ರಂದು ಜಿಲ್ಲೆಯ ಎಲ್ಲಾ ತಾಲ್ಲೂಕು ಕಚೇರಿಗಳಲ್ಲಿ ಪಹಣಿ ತಿದ್ದುಪಡಿ ಆಂದೋಲನ ಏರ್ಪಡಿಸುವ ಮೂಲಕ ಸುಮಾರು 3 ಸಾವಿರ ತಿದ್ದುಪಡಿ ಮಾಡಿ ಸರಿಪಡಿಸಿದ ಪಹಣಿಯನ್ನು ಅರ್ಜಿದಾರರಿಗೆ ತಲುಪಿಸಲಾಗಿದೆ ಎಂದು ಜಿಲ್ಲಾಧಿಕಾರಿಯವರು ಪ್ರಸ್ತಾಪಿಸಿದಾಗ ಇಂತಹ ಕಾರ್ಯ ಮೆಚ್ಚುವಂತಹದ್ದಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಜುಲೈನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ ಆದರೆ ಜೂನ್ ಮತ್ತು ಆಗಸ್ಟ್ನಲ್ಲಿ ಮಳೆಯ ಕೊರತೆಯಾಗಿದೆ. ಅಚ್ಚುಕಟ್ಟು ಪ್ರದೇಶದಲ್ಲಿ ಮಾತ್ರ ಭದ್ರಾ ಜಲಾಶಯದಿಂದ ಕಾಲುವೆಗಳಿಗೆ ನೀರು ಬಿಡಲಾಗುತ್ತಿದೆ. ಉಳಿದ ಪ್ರದೇಶದಲ್ಲಿ ಮಳೆಯಾಶ್ರಿತ ಬೆಳೆಗಳಿದ್ದು ಬೆಳೆ ಸಮೀಕ್ಷೆಗೆ ತಂಡಗಳನ್ನು ರಚಿಸಿ ಸಮೀಕ್ಷಾ ಕ್ರಮ ಕೈಗೊಳ್ಳಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ ಚಿಂತಾಲ್ ಸಭೆಗೆ ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಇಟ್ನಾಳ್, ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.