ಶರಣರ ವಿಚಾರಗಳನ್ನು ಜನ ಮಾನಸಕ್ಕೆ ತಲುಪಿಸುವುದು ವಚನ ಸಂಸ್ಕೃತಿ ಅಭಿಯಾನದ ಆಶಯ

ಶರಣರ ವಿಚಾರಗಳನ್ನು ಜನ ಮಾನಸಕ್ಕೆ ತಲುಪಿಸುವುದು ವಚನ ಸಂಸ್ಕೃತಿ ಅಭಿಯಾನದ ಆಶಯ

ವಚನ ನೃತ್ಯ ರೂಪಕ ಪ್ರದರ್ಶನದಲ್ಲಿ ಸಾಣೇಹಳ್ಳಿ ಸ್ವಾಮೀಜಿ

ದಾವಣಗೆರೆ, ಆ.27- ಶರಣರ ವಿಚಾರಧಾರೆಗಳನ್ನು ಜನ ಮಾನಸಕ್ಕೆ ತಲುಪಿ ಸುವುದು ವಚನ ಸಂಸ್ಕೃತಿ ಅಭಿಯಾನದ ಆಶಯವಾಗಿದೆ. ಈ ನಿಟ್ಟಿನಲ್ಲಿ `ವಚನ ನೃತ್ಯ ರೂಪಕ’ ಪ್ರದರ್ಶನ ಪೂರಕವಾಗಿದೆ ಎಂದು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿನ ಎಸ್.ಎಸ್. ಮಲ್ಲಿಕಾರ್ಜುನ್ ಸಾಂಸ್ಕೃತಿಕ ಕೇಂದ್ರದಲ್ಲಿ ಶ್ರೀ ಶಿವಕುಮಾರ ಕಲಾ ಸಂಘ ಸಾಣೇಹಳ್ಳಿ ಹಾಗೂ ಸಮಸ್ತ ಭಕ್ತವೃಂದ ದಾವಣಗೆೆರೆ ಇವರ ಸಂಯುಕ್ತಾಶ್ರ ಯದಲ್ಲಿ ಇಂದು ಸಂಜೆ ಹಮ್ಮಿಕೊಂಡಿದ್ದ  ವಚನ ನೃತ್ಯ ರೂಪಕ ಪ್ರದರ್ಶನ ಹಾಗೂ ಗುರುವಂದನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ಗ್ರಾಮೀಣ ಹೆಣ್ಣುಮಕ್ಕಳಿಗೆ ವಚನ ನೃತ್ಯ ರೂಪಕದ ತರಬೇತಿ ನೀಡಿ ಅವರನ್ನು ಉತ್ತಮ ಕಲಾವಿದರನ್ನಾಗಿ ಸಜ್ಜುಗೊಳಿಸಬೇಕಾಗಿದೆ ಎಂಬ ಎಸ್ಸೆಸ್ ಮಾತಿಗೆ ಪ್ರತಿಕ್ರಿಯಿಸಿದ ಶ್ರೀಗಳು, ಈ ನೃತ್ಯವನ್ನು ಗ್ರಾಮೀಣ ಮಹಿಳೆಯರಿಗೆ ಕಲಿಸಲು ಬಹಳಷ್ಟು ಹಣ ಖರ್ಚಾಗುತ್ತೆ ಎಂದಾಗ, ಶಿವಶಂಕರಪ್ಪ ಆ ಖರ್ಚನ್ನು ನಾನೇ ಭರಿಸುತ್ತೇನೆ ಎಂದು ಹೇಳಿದ್ದಾರೆ. ಅವರು ಉದಾರಿಗಳು,  ಕೊಡುಗೈ ದಾನಿಗಳು, ನಿಷ್ಕಲ್ಮಶ ಹೃದಯಿಗಳು ಎಂದು ಎಸ್ಸೆಸ್ ಅವರ ಸೇವಾ ಮನೋಭಾವನೆಯನ್ನು ಪ್ರಶಂಸಿಸಿದರು.

ಬಸವಾದಿ ಶರಣರ ಸಂದೇಶಗಳನ್ನು ಇಡೀ ಭಾರತ ದೇಶದಾದ್ಯಂತ ಬಿತ್ತಬೇಕು ಎಂಬುದು ತರಳಬಾಳು ಹಿರಿಯ ಜಗದ್ಗುರು ಶ್ರೀ ಶಿವಕುಮಾರ ಸ್ವಾಮೀಜಿಯವರ ಕನಸಾಗಿ ತ್ತು. ಅವರ ಕನಸನ್ನು ನನಸು ಮಾಡುವುದೇ ಈ ಕಾರ್ಯಕ್ರಮದ ಉದ್ದೇಶ ಎಂದರು.

ದೇಶದ 14 ರಾಜ್ಯಗಳಲ್ಲಿ ವಚನ ನೃತ್ಯ ರೂಪಕ ಪ್ರದರ್ಶನ ವಿಶಿಷ್ಟ ಅನುಭವವನ್ನು ನೀಡಿದ್ದು, ಬಸವ ತತ್ವ ಪ್ರಚಾರ ಮಾಡುವಲ್ಲಿ ಅಭಿಯಾನ ತಂಡದ ಕಲಾವಿದರು ತಮ್ಮ ಬದ್ದತೆಯನ್ನು ಮೆರೆದಿದ್ದಾರೆ. ವಚನ ಸಂಸ್ಕೃತಿ ಅಭಿಯಾನ ದುಸ್ಸಾಹಸದ ಯಾತ್ರೆಯೇ ಸರಿ ಎಂದು ಹೇಳಿದರು.

ಈ ಯಾತ್ರೆಯಲ್ಲಿನ ಕಲಾವಿದರಿಗೆ ಅನೇಕ ರೋಚಕ ಅನುಭವಗಳಾಗಿದ್ದು, ಪದವಿ ಪಡೆದವರು, ನೌಕರಿಯಲ್ಲಿರುವವರು ಅಭಿಯಾನದಲ್ಲಿ ಸಕ್ರಿಯಾಗಿ ಭಾಗವಹಿಸಿದ್ದಾರೆ. ಶ್ರೀ ಮಠದ ಭಕ್ತರಲ್ಲದವರು, ಭಾಷೆ ಗೊತ್ತಿಲ್ಲದವರ ನಡುವೆ 14 ರಾಜ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವುದು ಸಾಮಾನ್ಯವಾದ ಕೆಲಸವಲ್ಲ. ಕೆಲ ಕಲಾವಿದರು ಕಾಯಿಲೆಗೆ ತುತ್ತಾಗಿದ್ದರೂ ಯಾವುದನ್ನೂ ಲೆಕ್ಕಿಸದೇ ಮರಳಿ ಪ್ರದರ್ಶನ ನೀಡಲು ವಾಪಸ್ಸಾಗಿದ್ದಾರೆ. ಇನ್ನು ಕೆಲವರು ರಜೆ ಕೊಡಲಿಲ್ಲ ಎನ್ನುವ ಕಾರಣಕ್ಕಾಗಿ ನೌಕರಿಗೆ ರಾಜೀನಾಮೆ ಕೊಟ್ಟಿದ್ದಾರೆ. ಇದು ಅವರಲ್ಲಿನ ಬದ್ಧತೆಯನ್ನು ತೋರಿಸುತ್ತದೆ ಎಂದರು.

ನಾವು ಕೂಡ  ರಂಗಭೂಮಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಕಳೆದ 26 ವರ್ಷಗಳಿಂದ ರಂಗ ಸೇವೆಯನ್ನು ಮಾಡುತ್ತಾ ಬಂದಿದ್ದೇವೆ. ಹಿರಿಯ ಜಗದ್ಗುರುಗಳು ಸಮಾಜದಲ್ಲಿ ಶರಣರ ವಚನಗಳನ್ನು ಬಿತ್ತಲು ಅಣ್ಣನ ಬಳಗ, ಅಕ್ಕನ ಬಳಗ, ಕಲಾ ಸಂಘ, ಶಿವಾನುಭವ ಪ್ರವಾಸ ಸೇರಿ ಇತರೆ ಪ್ರಯೋಗಳನ್ನು ನಡೆಸಿಕೊಂಡು ಬಂದಿದ್ದನ್ನು ಸ್ಮರಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ, ಈ ವಚನ ನೃತ್ಯ ಪ್ರದರ್ಶನವನ್ನು ಬೆಂಗಳೂರಿನಲ್ಲಿ ನೋಡಿ ಸಂತಸ ಪಟ್ಟಿದ್ದೇನೆ. ಇದು ಕೇವಲ ನಗರ ಪ್ರದೇಶಕ್ಕೆ ಸೀಮಿತವಾಗಬಾರದು. ಅದಕ್ಕೆ ಗ್ರಾಮೀಣ ಹೆಣ್ಣು ಮಕ್ಕಳನ್ನು ತರಬೇತುಗೊಳಿಸುವ ಮೂಲಕ ಹಳ್ಳಿಗಳಲ್ಲೂ ವಚನಗಳ ಸಾರವನ್ನು ತಿಳಿಸುವ ಪ್ರಯತ್ನ ಮಾಡಬೇಕೆಂದು ಸಂಘಟಕರಲ್ಲಿ ವಿನಂತಿಸಿಕೊಂಡರು.

ಜಗಳೂರು ಶಾಸಕ ಬಿ. ದೇವೇಂದ್ರಪ್ಪ ಮಾತನಾಡಿ, ಬಯಲು ಸೀಮೆ ಜಗಳೂರು ಕ್ಷೇತ್ರದಲ್ಲಿ ವಚನ ನೃತ್ಯ ರೂಪಕ ಪ್ರದರ್ಶನಕ್ಕೆ ಶ್ರೀಗಳು ಅವಕಾಶ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿಕೊಂಡರು. ತಾವು ಕೂಡ ರಂಗಕರ್ಮಿ ಅಶೋಕ ಬಾದರದಿನ್ನಿ ನಿರ್ದೇಶನದಲ್ಲಿ ನಾಟಕವೊಂದರಲ್ಲಿ ಅಭಿನಯಿಸಿದ್ದನ್ನು ನೆನೆಸಿಕೊಂಡರು.

ಇವತ್ತು ನಾವೆಲ್ಲ ಸ್ವತ್ತಿಗೋಸ್ಕರ ಹೊಡೆದಾಡುತ್ತೇವೆ. ಈ ಸ್ವತ್ತನ್ನು ಬಿಟ್ಟು ಪುರುಸೊತ್ತು ಮಾಡಿಕೊಂಡು ಈ ಕಾರ್ಯಕ್ರಮ ನೋಡಲೇಬೇಕೆಂದು ತುಂಬಾ ಆಸಕ್ತಿಯಿಂದ ಬಂದಿದ್ದೇನೆ. ಬೇಡನಾಗಿದ್ದ ನಾನು ಶ್ರೀಮಠದ ಸಂಸ್ಕಾರದಿಂದ ಶಾಸಕನಾಗುವ ಮಟ್ಟಕ್ಕೆ ಬಂದಿದ್ದೇನೆ. ನಾನು ಕೂಡ ಮೂಲತಃ ಕಲಾವಿದನೇ. ಶರಣಸತಿ-ಲಿಂಗಪತಿ ಎನ್ನುವ ನಾಟಕದಲ್ಲಿ ಅಭಿನಯಿಸಿದ್ದೇನೆ ಎಂದರು.

ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಮಾತನಾಡಿ, ವಚನ ನೃತ್ಯ ರೂಪಕ ಇದೊಂದು ವಿಶೇಷ, ವಿಭಿನ್ನ ಮತ್ತು ಅದ್ಭುತ ಕಾರ್ಯಕ್ರಮ. ಇಂತಹ ಕಾರ್ಯಕ್ರಮಗಳು ಸಮಾಜಕ್ಕೆ ಅಗತ್ಯವಾಗಿ ಬೇಕು. 12ನೆಯ ಶತಮಾನದಲ್ಲಿ ಮಾನವೀಯ ಮೌಲ್ಯಗಳನ್ನು ಕೊಟ್ಟಿದ್ದು ವಚನ ಸಾಹಿತ್ಯ. ಕಟ್ಟಕಡೆಯ ವ್ಯಕ್ತಿಯನ್ನು ಮೇಲ್ಮಟ್ಟಕ್ಕೆ ಬೆಳೆಸಿದ ಕಾಲ 12ನೆಯ ಶತಮಾನ ಎಂದರು. ಬಸವಾದಿ ಶರಣರ ತತ್ವಗಳನ್ನು ಇಡೀ ವಿಶ್ವಕ್ಕೇ ಪರಿಚಯ ಮಾಡಿಕೊಡಬೇಕು ಎನ್ನುವ ಉದ್ದೇಶದಿಂದ ವಚನ ಸಂಸ್ಕೃತಿ ಅಭಿಯಾನ ಭಾರತಾದ್ಯಂತ ಸಂಚರಿಸಿ ಪ್ರದರ್ಶಿಸುತ್ತಿರುವುದು ಹೆಮ್ಮೆಯ ವಿಷಯ. ಅನುಭವ ಮಂಟಪದ ಮೂಲಕ ಶರಣರು ಮಾನವೀಯ ಮೌಲ್ಯಗಳನ್ನು ಬಿತ್ತಿದರು. ಕಾಯಕ, ದಾಸೋಹ ತತ್ವಗಳ ಮೂಲಕ ಸಮಾನತೆಯನ್ನು ಸಾರಿದರು ಎಂದು ಹೇಳಿದರು.

ಹೋಟೆಲ್ ಉದ್ಯಮಿ ಅಣಬೇರು ರಾಜಣ್ಣ ಪ್ರಾಸ್ತಾವಿಕವಾಗಿ ಮಾತನಾಡಿ, ತರಳಬಾಳು ಮಠದ ಪರಂಪರೆ ಸಮಯಕ್ಕೆ ಹೆಚ್ಚು ಮಹತ್ವ ಕೊಡುತ್ತಾ ಬಂದಿದೆ. ಶಾಮನೂರು ಶಿವಶಂಕರಪ್ಪನವರಿಗೆ ರಾಜಕೀಯಕ್ಕಿಂತ ಸಮಾಜ ದೊಡ್ಡದು. ನಮ್ಮ ಹಿರಿಯ ತರಳಬಾಳು ಜಗದ್ಗುರು ದೊಡ್ಡ ಸಮಾಜವನ್ನು ಬೆಳೆಸಿ ನಮ್ಮ ಕೈಗೆ ಕೊಟ್ಟಿದ್ದಾರೆ. ಸಮಾಜವನ್ನು ಬಡಿದೆಬ್ಬಿಸಿ ಶಿಕ್ಷಣ ಕೊಟ್ಟು ಸಮಾಜದಲ್ಲಿ ತಲೆ ಎತ್ತಿ ಬಾಳುವಂತೆ ಬದುಕುವುದನ್ನು ಕಲಿಸಿದರು. ಅವರ ಹಾದಿಯಲ್ಲಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನಡೆದುಕೊಂಡು ಬರುತ್ತಿದ್ದಾರೆ ಎಂದು ಅಭಿಮಾನಪೂರ್ವಕವಾಗಿ ನುಡಿದರು.

ಸಾಣೇಹಳ್ಳಿಯ ಮಠದಿಂದ ಶರಣರ ನಾಟಕಗಳು, ಮತ್ತೆ ಕಲ್ಯಾಣ, ಶ್ರಾವಣ ಸಂಜೆ, ಲಿಂಗದೀಕ್ಷೆ ಹೀಗೆ ಅನೇಕ ಕಾರ್ಯಕ್ರಮಗಳು ನಿರಂತರವಾಗಿ ನಡೆದುಕೊಂಡು ಬಂದಿವೆ. ಈ ನೃತ್ಯರೂಪಕ ಭಾರತದಾದ್ಯಂತ 14 ರಾಜ್ಯಗಳಲ್ಲಿ ಪ್ರದರ್ಶನ ನೀಡಿ ಜನಮನ್ನಣೆ ಗಳಿಸಿಕೊಂಡಿದೆ ಎಂದರು.

ಬಾಪೂಜಿ ವಿದ್ಯಾಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ಡಾ. ಎಂ.ಜಿ. ಈಶ್ವರಪ್ಪ ಮಾತನಾಡಿ, ಬಸವಣ್ಣನ ಕಾಲದ ಸಂಸ್ಕೃತಿಯನ್ನು ಎಲ್ಲ ಕಡೆ ಬಿತ್ತಬೇಕು ಎನ್ನುವ ಕಾರಣಕ್ಕಾಗಿ ಇಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಾ ಬಂದಿದೆ. ನಾಟಕ, ನೃತ್ಯ, ವಚನಗೀತೆ, ಮತ್ತೆ ಕಲ್ಯಾಣ ಮಾಡುವುದರ ಮೂಲಕ ಶರಣರ ವಿಚಾರಗಳನ್ನು ಪಸರಿಸಿ, ಬಸವಣ್ಣನವರ ವಿಚಾರಗಳನ್ನು ಜನಸಾಮಾನ್ಯರಿಗೆ ಮುಟ್ಟಿಸಿದ ಕೀರ್ತಿ ಪೂಜ್ಯರಿಗೆ ಸಲ್ಲಬೇಕು. ‘ತುಮ್ಹಾರೆ ಸಿವಾ ಔರ್ ಕೋಯಿ ನಹೀ’ ಬದಲಾಗಿ ‘ತುಮ್ಹಾರೆ ಪಂಡಿತಾರಾಧ್ಯ ಸ್ವಾಮೀಜಿ ಔರ್ ಕೋಯಿ ನಹೀ.’ ಪಂಡಿತಾರಾಧ್ಯ ಸ್ವಾಮೀಜಿಯವರೇ, ನೀವಲ್ಲದೇ ಮತ್ತಾರೂ ಇಲ್ಲವಯ್ಯ. ನಿಮ್ಮಂಥವರವನ್ನು ಪಡೆದುಕೊಂಡ ನಾವೇ ಪುಣ್ಯವಂತರು ಎಂದು ಹೇಳಿದರು.

ಕೈಗಾರಿಕೋದ್ಯಮಿ ಎಸ್.ಎಸ್. ಗಣೇಶ್, ಜವಳಿ ಉದ್ಯಮಿ ಬಿ.ಸಿ.ಉಮಾಪತಿ, ಲೆಕ್ಕಪರಿಶೋಧಕ ಅಥಣಿ ವೀರಣ್ಣ, ಸಹಕಾರಿ ಧುರೀಣ ಜೆ.ಆರ್. ಷಣ್ಮುಖಪ್ಪ, ರಂಗ ಸಂಘಟಕ ಶ್ರೀನಿವಾಸ ಜಿ. ಕಪ್ಪಣ್ಣ,  ವಚನ ಸಂಸ್ಕೃತಿ ಅಭಿಯಾನದ ನಾಯಕಿ ಸ್ನೇಹ ಕಪ್ಪಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿ. ರವಿಚಂದ್ರ ಮತ್ತಿತರರಿದ್ದರು.

ಕದಳಿ ಮಹಿಳಾ ವೇದಿಕೆಯವರು ವಚನ ಗೀತೆಗಳನ್ನು ಹಾಡಿದರು. ಅಣಬೇರು ರಾಜಣ್ಣ ಸ್ವಾಗತಿಸಿದರು. ಹೆಚ್. ಎಸ್. ದ್ಯಾಮೇಶ್ ನಿರೂಪಿಸಿ, ವಂದಿಸಿದರು. 

ನೃತ್ಯರೂಪಕವನ್ನು ನೋಡಿದ ಪ್ರೇಕ್ಷಕರು ಕಣ್ಮನವನ್ನು ತಣಿಸಿಕೊಂಡು ಅಭಿಪ್ರಾಯ ಹಂಚಿಕೊಂಡರು.

error: Content is protected !!