ಸಮ್ಮೇಳನದ ಪೂರ್ವ ಸಿದ್ಧತೆಯ ಉದ್ಘಾಟನಾ ಸಮಾರಂಭದಲ್ಲಿ ವೆಬ್ ಸೈಟ್ಗೆ ಚಾಲನೆ ನೀಡಿದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್
ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅನುದಾನ ಕೊಡಿಸುವುದಾಗಿ ಆಶ್ವಾಸನೆ
ದಾವಣಗೆರೆ, ಆ. 27- ದಾವಣಗೆರೆಯಲ್ಲಿ ನಡೆಯಲಿರುವ ರಾಜ್ಯ ಪತ್ರಕರ್ತರ ಸಮ್ಮೇಳನಕ್ಕೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ, 15 ಲಕ್ಷ ರೂ. ಅನುದಾನ ಕೊಡಿಸುವುದಾಗಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಭರವಸೆ ನೀಡಿದರು.
ಸ್ಥಳೀಯ ಹೋಟೆಲ್ ಅಪೂರ್ವ ಸಭಾಂಗಣದಲ್ಲಿ ಇಂದು ಏರ್ಪಾಡಾಗಿದ್ದ ; ಬರುವ ಡಿಸೆಂಬರ್ ತಿಂಗಳಲ್ಲಿ ದಾವಣಗೆರೆ ನಗರದಲ್ಲಿ ನಡೆಯಲಿರುವ 38ನೇ ರಾಜ್ಯ ಪತ್ರಕರ್ತರ ಸಮ್ಮೇಳನದ ಪೂರ್ವ ಸಿದ್ಧತಾ ಉದ್ಘಾಟನಾ ಸಮಾರಂಭದಲ್ಲಿ ಸಮ್ಮೇಳನದ ವೆಬ್ಸೈಟ್ಗೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯದ ಮಧ್ಯಭಾಗದಲ್ಲಿರುವ ದಾವಣಗೆರೆಯಲ್ಲಿ ಸಮಾವೇಶ ನಡೆಯುತ್ತಿರುವುದು ಸಂತೋಷದ ವಿಷಯ. ಸಮ್ಮೇಳನ ಯಶಸ್ವಿಯಾಗಿ ನಡೆಯಲಿ. ಸರ್ಕಾರದ ಕಡೆಯಿಂದ ಬೇಕಾದ ಎಲ್ಲಾ ಸಹಕಾರವನ್ನೂ ಕೊಡಿಸುವ ದೆಸೆಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.
ಇದುವರೆಗೂ ಸಮ್ಮೇಳನಗಳಿಗೆ ಸರ್ಕಾರ ಯಾವುದೇ ಹಣಕಾಸು ನೆರವು ಒದಗಿಸಿರಲಿಲ್ಲ. ಆದರೆ 2013ರಲ್ಲಿ ಹಾಸನದಲ್ಲಿ ನಡೆದ ಸಮ್ಮೇಳನಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು 15 ಲಕ್ಷ ರೂ. ಘೋಷಿಸಿದ್ದರು. ಹಾಗೆಯೇ ದಾವಣಗೆರೆ ಸಮ್ಮೇಳನಕ್ಕೂ 15 ಲಕ್ಷ ರೂ. ಬಿಡುಗಡೆ ಮಾಡುವಂತೆ ಕೇಳಲಾಗುವುದು ಎಂದರು. ಇದು ಪತ್ರಕರ್ತರು ಬಂದು ಹೋಗುವ ಸಮ್ಮೇಳನವಾಗಬಾರದು. ಎರಡು ದಿನವೂ ಹಬ್ಬದ ವಾತಾವರಣ ನಿರ್ಮಾಣವಾಗಬೇಕು. ಕುಟುಂಬ ಸಹಿತರಾಗಿ ಪತ್ರಕರ್ತರು ಖುಷಿಯಿಂದ ಭಾಗವಹಿಸಬೇಕು. ಜೊತೆಗೆ ಅನೇಕ ವಿಚಾರಗಳನ್ನೂ ತಿಳಿದುಕೊಳ್ಳುವಂತಾಗಬೇಕು. ಈ ನಿಟ್ಟಿನಲ್ಲಿ ಅದ್ಧೂರಿ ಸಮ್ಮೇಳನಕ್ಕೆ ಇಂದಿನಿಂದಲೇ ಸಿದ್ಧತೆ ಆರಂಭವಾಗಲಿ ಎಂದು ಆಶಿಸಿದರು.
ಪ್ರಭಾವಿ ರಾಜಕಾರಣಿಗಳು ಇರುವ ದಾವಣಗೆರೆ ಜಿಲ್ಲೆಯಲ್ಲಿ ಪತ್ರಕರ್ತರ ಭವನ ಇಲ್ಲ ಎನ್ನುವುದು ಬೇಸರದ ಸಂಗತಿ. ಈಗಾಗಲೇ ಜಾಗ ಪಡೆದಿರುವುದಾಗಿ ಅಧ್ಯಕ್ಷರು ತಿಳಿಸಿದ್ದು, ಕಡಿಮೆ ಹಣದಲ್ಲಿ ಖರೀದಿಗೆ ಕ್ಯಾಬಿನೆಟ್ನಲ್ಲಿ ಚರ್ಚೆಗೆ ಬರುವಂತೆ ಮುಖ್ಯಮಂತ್ರಿಗಳೊಂದಿಗೆ ಮಾತನಾಡುತ್ತೇನೆ. ಮುಂದಿನ ವರ್ಷದ ವೇಳೆಗೆ ಸುಸಜ್ಜಿತ ಭವನ ನಿರ್ಮಾಣವಾಗಲಿ. ಕಟ್ಟಡ ನಿರ್ಮಾಣಕ್ಕೂ ಸರ್ಕಾರದ ಕಡೆಯಿಂದ ಎಷ್ಟು ಸಾಧ್ಯವೋ ಅಷ್ಟು ಧನ ಸಹಾಯ ಒದಗಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.
3 ಸಾವಿರ ರೂ. ಇದ್ದ ಪತ್ರಕರ್ತರ ಪಿಂಚಣಿಯನ್ನು ಸಿದ್ದರಾಮಯ್ಯ ಅವರು 10 ಸಾವಿ ರೂ.ಗೆ ಹೆಚ್ಚಿಸಿದ್ದರು. ಇದೀಗ ಮತ್ತೆ 12 ಸಾವಿರ ರೂ.ಗೆ ಹೆಚ್ಚಿಸಿದ್ದಾರೆ. ಆದರೆ ಕಠಿಣ ನಿಯಮಗಳ ಕಾರಣದಿಂದ ಪಿಂಚಣಿ ಪಡೆಯುವವರ ಸಂಖ್ಯೆ ವಿರಳವಾಗಿದೆ. ನಿಯಮಗಳನ್ನು ಸರಳೀಕರಣಗೊಳಿಸಿ, ಎಲ್ಲರಿಗೂ ಸೌಲಭ್ಯ ದೊರಕುವಂತೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ನೀಡುವ ಸಲುವಾಗಿ ಮುಖ್ಯಮಂತ್ರಿಗಳು ಯೋಜನಾ ವರದಿ ಸಿದ್ಧಪಡಿಸುವಂತೆ ವಾರ್ತಾ ಇಲಾಖೆ ಆಯುಕ್ತರಿಗೆ ಸೂಚಿಸಿದ್ದು, ಒಂದೆರಡು ತಿಂಗಳಲ್ಲಿಯೇ ಬಸ್ ಪಾಸ್ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಹೇಳಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಇ.ಎಂ. ಮಂಜುನಾಥ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, 30 ವರ್ಷಗಳ ನಂತರ ದಾವಣಗೆರೆಯಲ್ಲಿ ಮತ್ತೆ ರಾಜ್ಯ ಸಮ್ಮೇಳನ ನಡೆಸಲು ಅವಕಾಶ ಸಿಕ್ಕಿರುವುದು ನಮ್ಮೆಲ್ಲರ ಸುದೈವ ಎಂದರು.
ಅವಿಭಜಿತ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯಾಗಿದ್ದಾಗ, 1992ರಲ್ಲಿ ರಾಜ್ಯ ಪತ್ರಕರ್ತರ ಸಮ್ಮೇಳನ ದಾವಣಗೆರೆಯಲ್ಲಿ ನಡೆದಿತ್ತು. 30 ವರ್ಷಗಳ ನಂತರ ಮತ್ತು ದಾವಣಗೆರೆ ಜಿಲ್ಲೆ ರಚನೆಯಾದ ನಂತರ ಪ್ರಪ್ರಥಮ ಸಮ್ಮೇಳನ ಇದಾಗಿದೆ ಎಂದು ಮಂಜುನಾಥ ಹೇಳಿದರು.
ಕಾನಿಪ ಸಂಘದ ರಾಜ್ಯದ ಖಜಾಂಚಿ ವಾಸುದೇವ ಹೊಳ್ಳ, ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ್, ರಾಜ್ಯ ಸದಸ್ಯ ಕೆ.ಚಂದ್ರಣ್ಣ, ರಾಷ್ಟ್ರೀಯ ಮಂಡಳಿ ಸದಸ್ಯ ಎಸ್.ಕೆ. ಒಡೆಯರ್ ಇತರರು ಉಪಸ್ಥಿತರಿದ್ದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಫಕೃದ್ದೀನ್ ಸ್ವಾಗತಿಸಿದರು. ಖಜಾಂಚಿ ಎನ್.ವಿ. ಬದರಿನಾಥ್ ವಂದಿಸಿದರು. ನಿರ್ದೇಶಕ ಸಿ. ವೇದಮೂರ್ತಿ ಕಾರ್ಯಕ್ರಮ ನಿರೂಪಿಸಿದರು.