ನಗರದಲ್ಲಿ ನಾಳೆ `ನೀನಿಲ್ಲದೆ ಮತ್ತಾರೂ ಇಲ್ಲವಯ್ಯಾ’ ವಚನ ನೃತ್ಯ ರೂಪಕ ಪ್ರದರ್ಶನ

ನಗರದಲ್ಲಿ ನಾಳೆ `ನೀನಿಲ್ಲದೆ ಮತ್ತಾರೂ ಇಲ್ಲವಯ್ಯಾ’ ವಚನ ನೃತ್ಯ ರೂಪಕ ಪ್ರದರ್ಶನ

ನಗರದಲ್ಲಿ ನಾಳೆ `ನೀನಿಲ್ಲದೆ ಮತ್ತಾರೂ ಇಲ್ಲವಯ್ಯಾ' ವಚನ ನೃತ್ಯ ರೂಪಕ ಪ್ರದರ್ಶನ - Janathavaniದಾವಣಗೆರೆ ಭಕ್ತ ವೃಂದದಿಂದ ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರಿಗೆ ಗುರುವಂದನೆ

ದಾವಣಗೆರೆ, ಆ. 25- ಶ್ರೀ ಶಿವಕುಮಾರ ಕಲಾಸಂಘ ಸಾಣೇಹಳ್ಳಿ ಹಾಗೂ ನಗರದ ಸಮಸ್ತ ಭಕ್ತ ವೃಂದ ಇವರ ಸಹಯೋಗದಲ್ಲಿ ಭಾರತದ ಪ್ರಥಮ ವಚನ ಸಂಸ್ಕೃತಿ ಅಭಿಯಾನ ` ನೀನಲ್ಲದೆ ಮತ್ತಾರೂ ಇಲ್ಲವಯ್ಯಾ'(ತುಮ್ಹಾರೆ ಸಿವಾ ಔರ್ ಕೋಯಿ ನಹೀ) ಬಸವಣ್ಣನವರ ಆಯ್ದ 44 ವಚನಗಳ ಆಧಾರಿತ ವಚನ ನೃತ್ಯ ರೂಪಕ ಪ್ರದರ್ಶನ ಹಾಗೂ ಗುರುವಂದನೆ ಕಾರ್ಯಕ್ರಮವನ್ನು ನಾಡಿದ್ದು ದಿನಾಂಕ 27 ರ ಭಾನುವಾರ ಸಂಜೆ 6 ಗಂಟೆಗೆ ನಗರದ ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿನ ಎಸ್.ಎಸ್. ಮಲ್ಲಿಕಾರ್ಜುನ್ ಸಾಂಸ್ಕೃತಿಕ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹೋಟೆಲ್ ಉದ್ಯಮಿ ಅಣಬೇರು ರಾಜಣ್ಣ ಅವರು ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮುಖ್ಯ ಅತಿಥಿಗಳಾಗಿ ಶಾಸಕ ಶಾಮನೂರು ಶಿವಶಂಕರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಶಾಸಕ ದೇವೇಂದ್ರಪ್ಪ, ಉದ್ಯಮಿ ಎಸ್.ಎಸ್. ಗಣೇಶ, ಹೋಟೆಲ್ ಉದ್ಯಮಿ ಅಣಬೇರು ರಾಜಣ್ಣ, ಬೆಂಗಳೂರಿನ ರಂಗ ಸಂಘಟಕ ಶ್ರೀನಿವಾಸ ಜಿ. ಕಪ್ಪಣ್ಣ, ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್, ಸಹಕಾರಿ ಧುರೀಣ ಜೆ.ಆರ್. ಷಣ್ಮುಖಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿ. ರವಿಚಂದ್ರ ಭಾಗವಹಿಸಲಿದ್ದಾರೆ ಎಂದು ರಾಜಣ್ಣ ಮಾಹಿತಿ ನೀಡಿದರು.

ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾರ್ಗದರ್ಶನದಲ್ಲಿ ಜುಲೈ  2 ರಂದು ಬೆಂಗಳೂರಿನಲ್ಲಿ ಉದ್ಘಾಟನೆಗೊಂಡು 14 ರಾಜ್ಯಗಳಲ್ಲಿ  47 ಪ್ರದರ್ಶನಗಳನ್ನು ನೀಡಿದೆ. ಶಿವಸಂಚಾರ ಬಸ್‌ನಲ್ಲಿ 11 ಸಾವಿರ ಕಿ. ಮೀ. ಕ್ರಮಿಸಿದ್ದು, ಇದೇ ದಿನಾಂಕ 27 ರಂದು ದಾವಣಗೆರೆಗೆ ವಚನ ಸಂಸ್ಕೃತಿ ಅಭಿಯಾನದ ತಂಡ ಆಗಮಿಸಲಿದೆ ಎಂದು ತಿಳಿಸಿದರು.

ಸೆಪ್ಟೆಂಬರ್ 2 ರಂದು ಸಾಣೇಹಳ್ಳಿಯಲ್ಲಿ ಅಭಿಯಾನ ಸಮಾರೋಪಗೊಳ್ಳಲಿದೆ. ವಚನ ನೃತ್ಯ ರೂಪಕ ಪ್ರದರ್ಶನದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶಂಸೆಯ ಪತ್ರ ಬರೆದಿರುವುದೇ ವಚನ ಸಂಸ್ಕೃತಿ ಅಭಿಯಾನದ ಹೆಗ್ಗಳಿಕೆಗೆ ಹಿಡಿದ ಕನ್ನಡಿಯಾಗಿದೆ ಎಂದರು.

ಇದೊಂದು ದುಸ್ಸಾಹಸದ ಯಾತ್ರೆಯಾಗಿದ್ದು, ಯಶಸ್ವಿಯಾಗಲು ಶ್ರೀನಿವಾಸ ಜಿ.ಕಪ್ಪಣ್ಣ, ಸ್ನೇಹಾ ಕಪ್ಪಣ್ಣ, ವೈ.ಡಿ. ಬದಾಮಿ ಸೇರಿದಂತೆ 24 ಕಲಾವಿದರು ಮತ್ತು ತಂತ್ರಜ್ಞರು, ಸಂಘಟಕರೂ ಸೇರಿದಂತೆ ನೂರಾರು ಜನರು ಅಹರ್ನಿಶಿ ಶ್ರಮಿಸಿದ್ದಾರೆ. ಇವರಿಗೆ ಪ್ರೇರಕ ಶಕ್ತಿಯಾಗಿ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನಿಂತಿದ್ದಾರೆ. ಶ್ರೀಗಳನ್ನು ಅಭಿನಂದಿಸುವ ಸಲುವಾಗಿ ದಾವಣಗೆರೆಯ ಸಮಸ್ತ ಭಕ್ತವೃಂದ ಅಪೇಕ್ಷಿಸಿದೆ ಎಂದು ಹೇಳಿದರು.

ಮತ್ತೆ ಕಲ್ಯಾಣ ರಾಜ್ಯವನ್ನಾಗಿ ಮಾಡುವುದೇ ಈ ಅಭಿಯಾನದ ಉದ್ದೇಶವಾಗಿದೆ. ಸಮಾಜ ತಿದ್ದುವ ಪ್ರಯತ್ನವನ್ನು ಈ ಕಾರ್ಯಕ್ರಮದ ಮೂಲಕ ಮಾಡಲಾಗುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬಾಪೂಜಿ ವಿದ್ಯಾಸಂಸ್ಥೆ ಶೈಕ್ಷಣಿಕ ನಿರ್ದೇಶಕ ಡಾ. ಎಂ.ಜಿ. ಈಶ್ವರಪ್ಪ, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಬಿ. ಪರಮೇಶ್ವರಪ್ಪ, ಜಿ.ಪಂ. ಮಾಜಿ ಸದಸ್ಯ ಶಾಮನೂರು ಬಸವರಾಜ್,  ಐಗೂರು ಸಿ. ಚಂದ್ರಶೇಖರ್, ಬಿ.ಕೆ. ಬಸವಲಿಂಗಪ್ಪ, ಪಲ್ಲಾಗಟ್ಟಿ ನಾಗರಾಜ್ ಮತ್ತಿತರರು ಇದ್ದರು.

error: Content is protected !!