ಡಿಸೆಂಬರ್‌ಗೆ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಉದ್ಘಾಟನೆ : ಸಚಿವ ರೆಡ್ಡಿ

ಡಿಸೆಂಬರ್‌ಗೆ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಉದ್ಘಾಟನೆ : ಸಚಿವ ರೆಡ್ಡಿ

ದಾವಣಗೆರೆ, ಆ. 23- ನಗರದಲ್ಲಿ 120 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಅತ್ಯಾಧುನಿಕ ವಾದ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣವನ್ನು ಡಿಸೆಂಬರ್ ಅಂತ್ಯದ ವೇಳೆಗೆ ಉದ್ಘಾಟಿಸ ಲಾಗುವುದು ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಅವರು ಬುಧವಾರ ಪಿ.ಬಿ.ರಸ್ತೆಯಲ್ಲಿ ನಿರ್ಮಾಣಗು ತ್ತಿರುವ ಬಸ್ ನಿಲ್ದಾಣ ಕಾಮ ಗಾರಿ ಯನ್ನು  ಜಿಲ್ಲಾ ಉಸ್ತು ವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರೊಂದಿಗೆ ವೀಕ್ಷಿಸಿ, ಪತ್ರಕರ್ತರೊಂದಿಗೆ ಮಾತನಾಡಿದರು.

ಪಂಪಾಪತಿ ಅವರ ಅವಧಿಯಲ್ಲಿ  ಬಸ್ ನಿಲ್ದಾಣ ನಿರ್ಮಾಣವಾಗಿತ್ತು. 2017ರಲ್ಲಿ ನಾನು ಸಾರಿಗೆ ಸಚಿವನಾಗಿದ್ದಾಗ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಈ ನಿಲ್ದಾಣವನ್ನು ಕೆಡವಿ ಹೊಸ ನಿಲ್ದಾಣ ನಿರ್ಮಿಸಲು ಹೇಳಿದ್ದರು. ಎಲ್ಲಾ ಸಿದ್ಧತೆಯೂ ನಡೆದಿತ್ತು. ಇದೀಗ ಸ್ಮಾರ್ಟ್ ಸಿಟಿ ಅನುದಾನದಲ್ಲಿ ನಿರ್ಮಾಣವಾಗಿದೆ. ಸಚಿವ ಮಲ್ಲಿಕಾರ್ಜುನ್ ಹಾಗೂ ಶಾಮನೂರು ಶಿವಶಂಕರಪ್ಪ ಅವರು ಡಿಸೆಂಬರ್‌ ತಿಂಗಳಲ್ಲಿ ಉದ್ಘಾಟನೆಗೆ ಎಲ್ಲಾ ಸೂಚನೆ ನೀಡಿದ್ದಾರೆ ಎಂದರು.

ಸ್ಮಾರ್ಟ್ ಸಿಟಿ ಯೋಜನೆಯಡಿ ಶೇ.75 ರಷ್ಟು ಹಾಗೂ ಕೆಎಸ್ಸಾರ್ಟಿಸಿಯಿಂದ ಶೇ.25 ರಷ್ಟು ಅನುದಾನ ಸೇರಿ ಒಟ್ಟು 120 ಕೋಟಿ ರೂ. ವೆಚ್ಚದಲ್ಲಿ ಆರೂವರೆ ಎಕರೆ ಪ್ರದೇಶದಲ್ಲಿ ಬಸ್ ನಿಲ್ದಾಣ ನಿರ್ಮಾಣವಾಗುತ್ತಿದೆ ಎಂದರು.

3 ಮಾಲ್‍ಗಳು, ಹೋಟೆಲ್, ಥಿಯೇಟರ್ ಸೇರಿದಂತೆ ಪ್ರಯಾಣಿಕರಿಗೆ ಅಗತ್ಯವಿರುವ ತತ್‍ಕ್ಷಣದ ಸೌಲಭ್ಯಗಳನ್ನು ಇಲ್ಲಿ ಕಲ್ಪಿಸಲಾಗುತ್ತದೆ. ಏಕಕಾಲದಲ್ಲಿ 41 ಬಸ್‍ಗಳು ನಿಲ್ಲಲು ಸ್ಥಳಾವಕಾಶ ಕಲ್ಪಿಸಲಾಗಿದೆ. ಜೊತೆಗೆ ಕಾರ್ ಪಾರ್ಕಿಂಗ್ ವ್ಯವಸ್ಥೆಯೂ ಇಲ್ಲಿರಲಿದೆ ಎಂದರು.

ಬಸ್ ನಿಲ್ದಾಣಕ್ಕೆ ಯಾರ ಹೆಸರಿಡಬೇಕೆಂಬ ಬಗ್ಗೆ ಯಾವ ಚರ್ಚೆಯಾಗಿಲ್ಲ. ಬಸ್ ನಿಲ್ದಾಣಕ್ಕೆ ಯಾರ ಹೆಸರನ್ನೂ ಇಡುವುದಿಲ್ಲ. ಸ್ಥಳೀಯವಾಗಿ ಒತ್ತಡ ಬಂದರೆ ಈ ಬಗ್ಗೆ ಚಿಂತಿಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.

5 ಸಾವಿರ ಬಸ್ ಖರೀದಿ: ಬಿಜೆಪಿ ಸರ್ಕಾರದ ಅವಧಿಯಲ್ಲಿ ಒಂದೂ ಬಸ್ ಖರೀದಿಸಿರಲಿಲ್ಲ. ಕೊನೆಯ ಅವಧಿಯಲ್ಲಿ 4000 ಬಸ್‍ಗಳ ಖರೀದಿಗೆ ಟೆಂಡರ್ ಆಗಿತ್ತು. ಇದರೊಂದಿಗೆ ಈಗ 1000 ಬಸ್‍ಗಳನ್ನು ಖರೀದಿ ಸೇರಿ ಒಟ್ಟು 5 ಸಾವಿರ ಬಸ್‍ಗಳ ಖರೀದಿಸಲಾಗುತ್ತಿದೆ. ಇದರಲ್ಲಿ ಎಲೆಕ್ಟ್ರಾನಿಕ್ ಬಸ್‍ಗಳು ಇರಲಿವೆ. ನಗರ, ಗ್ರಾಮೀಣ ಸಾರಿಗೆಗೆ ಎಲೆಕ್ಟ್ರಾನಿಕ್ ಬಸ್‍ಗಳನ್ನು ನೀಡಲು ಉದ್ದೇಶಿಸಲಾಗಿದೆ ಎಂದು ಸಚಿವರು ಹೇಳಿದರು.

13 ಸಾವಿರ ಹುದ್ದೆ ಭರ್ತಿ: 2016 ರಿಂದ ಸುಮಾರು 16 ಸಾವಿರ ಸಿಬ್ಬಂದಿಗಳು ನಿವೃತ್ತರಾಗಿದ್ದರೂ ನೇಮಕಾತಿ ಪ್ರಕ್ರಿಯೆ ನಡೆದಿರುವುದಿಲ್ಲ. ಆದ್ದರಿಂದ ಶೀಘ್ರವೇ 13 ಸಾವಿರ ಖಾಲಿ ಹುದ್ದೆಗಳಿಗೆ ನೇಮಕಾತಿಗೆ ಕ್ರಮ ವಹಿಸಲಾಗುತ್ತಿದೆ ಎಂದು ಹೇಳಿದರು.

ಈ ವೇಳೆ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ, ಕೆ.ಎಸ್.ಆರ್.ಟಿ.ಸಿ. ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್, ಸ್ಮಾರ್ಟ್ ಸಿಟಿ ಎಂಡಿ ವೀರೇಶ್ ಕುಮಾರ್ ಉಪಸ್ಥಿತರಿದ್ದರು.

error: Content is protected !!