ಬಾಡಾ ಕ್ರಾಸ್‌ ಬಳಿ ಒತ್ತುವರಿ ತೆರವುಗೊಳಿಸಿ

ಬಾಡಾ ಕ್ರಾಸ್‌ ಬಳಿ ಒತ್ತುವರಿ ತೆರವುಗೊಳಿಸಿ

ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಸೂಚನೆ

ದಾವಣಗೆರೆ, ಆ. 22- ಬಾಡಾ ಕ್ರಾಸ್ ಬಳಿ ಹೆಚ್ಚಾಗಿರುವ ಡಾಬಾಗಳು, ಹೋಟೆಲ್‌ಗಳಿಗೆ ಬರುವ ವಾಹನ ಚಾಲಕರು ರಸ್ತೆಯಲ್ಲಿ ಪಾರ್ಕಿಂಗ್ ಮಾಡುವುದರಿಂದ ಉಂಟಾಗುವ ತೊಂದರೆ ನಿವಾರಿಸುವಂತೆ ಜಿಲ್ಲಾಧಿಕಾರಿ
ಡಾ.ಎಂ.ವಿ. ವೆಂಕಟೇಶ್  ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹೋಟೆಲ್‌ ಹಾಗೂ ಡಾಬಾಗಳು ರಸ್ತೆ ಒತ್ತುವರಿ ಮಾಡಿಕೊಂಡಿರುವುದರಿಂದಲೂ ಹೆಚ್ಚಿನ ಸಮಸ್ಯೆಗಳುಂಟಾಗಿದ್ದು,  ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ತಂಡ ರಚನೆ ಮಾಡಿಕೊಂಡು ಸಮೀಕ್ಷೆ ನಡೆಸಿ ಒತ್ತುವರಿ ತೆರವು ಮಾಡಬೇಕು.  ನೋ ಪಾರ್ಕಿಂ‌ಗ್ ಫಲಕ ಅಳವಡಿಸುವ ಮೂಲಕ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು. ಬಾಡಾ ಕ್ರಾಸ್ ಬಳಿ  ಮಂಗಳಮುಖಿಯರ ಉಪಟಳ ಹೆಚ್ಚಾಗಿದ್ದು, ಇದಕ್ಕೆ ಕಡಿವಾಣ ಹಾಕುವಂತೆಯೂ ಸೂಚಿಸಿದರು.

ಎಸ್‌.ಎಸ್. ಹೈಟೆಕ್ ಆಸ್ಪತ್ರೆಯ ರೈಲ್ವೆ ಕೆಳಸೇತುವೆಯಲ್ಲಿ ಮಳೆ ಬಂದಾಗ ನೀರು ನಿಂತು ಸಂಚಾರಕ್ಕೆ ತೊಂದರೆಯಾಗಿ ಅಪಘಾತಗಳು ಸಂಭವಿಸುತ್ತಿವೆ. ಕೂಡಲೇ ದುರಸ್ತಿಪಡಿಸಬೇಕು. ಇದಲ್ಲದೇ ಜೆನಿಸಿಸ್ ಹೋಟೆಲ್, ಹೆರಿಟೇಜ್ ಹೋಟೆಲ್, ಶಾಮನೂರು ಬಳಿಯ ಸೇತುವೆಗೆ ಬಳಿ ಬ್ಲಿಂಕರ್ಸ್‌ಗಳನ್ನು ಅಳವಡಿಸುವಂತೆಯೂ ಜಿಲ್ಲಾಧಿಕಾರಿ ಸೂಚಿಸಿದರು.

ಜಿಲ್ಲೆಯಲ್ಲಿ 28 ಅಪಘಾತ ವಲಯಗಳನ್ನು ಗುರುತಿಸಲಾಗಿದೆ.  ಈ ವಲಯಗಳಲ್ಲಿ ಕೆಲವು ಸೂಚನಾ ಫಲಕಗಳು ಇಲ್ಲ. ಕೆಲವೊಂದು ಕಡೆ ಕಾಡುಗಳು ಬೆಳೆದಿದ್ದು, ಚಾಲಕರಿಗೆ ರಸ್ತೆಗಳ ತಿರುವು ಗೊತ್ತಾಗದಂತೆ ಅಪಘಾತಗಳು ಸಂಭವಿಸುತ್ತಿವೆ ಎಂದು ತಾಂತ್ರಿಕ ಮತ್ತು ಸಂಚಾರ ವಿಭಾಗದ ಕಾನ್‌ಸ್ಟೆಬಲ್ ಎಸ್.ಎಚ್. ಅಂಬರೀಶ್ ಸಭೆಯಲ್ಲಿ ತಿಳಿಸಿದರು.

ನಗರದಲ್ಲಿ ತಡೆಗಟ್ಟುವ ನಿಟ್ಟಿನಲ್ಲಿ ಸಂಚಾರ ಸುಗಮಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿರುವ 28 ಅಪಾಯಕಾರಿ ಅಪಘಾತ ಸ್ಥಳಗಳಿಗೆ (ಬ್ಲಾಕ್ ಸ್ಪಾಟ್) ಸೂಚನಾ ಫಲಕ ಅಳವಡಿಸಬೇಕು. ಅಂಗವಿಕಲರು, ಮಹಿಳೆಯರು, ಮಕ್ಕಳಿಗೆ ಪೂರಕ ವಾತಾವರಣ ನಿರ್ಮಾಣ ಮಾಡಬೇಕು  ಎಂದು ಡಾ.ವೆಂಕಟೇಶ್ ಅಧಿಕಾರಿಗಳಿಗೆ ತಿಳಿಸಿದರು.

ಇದಕ್ಕೂ ಮುನ್ನ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸೈಯ್ಯದ್ ಸೈಫು‌ಲ್ಲಾ ಮಾತನಾಡಿ, ನಗರದ ಹೊರವಲಯದ ಆನಗೋಡು ಬಳಿ ಡಾಬಾಗಳು ಹೆಚ್ಚಾಗಿದ್ದು, ರಸ್ತೆಯಲ್ಲೇ ಪಾರ್ಕಿಂಗ್ ಮಾಡುವುದರಿಂದ ಅಪಘಾತಗಳು ಸಂಭವಿಸುತ್ತಿವೆ. ಅಲ್ಲದೇ ಡಾಬಾಗಳ ಬಳಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂದು ಆರೋಪಿಸಿದರು.

ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್, ದೂಡಾ ಆಯುಕ್ತ ಬಸವನಗೌಡ ಕೋಟೂರು, ಪಾಲಿಕೆ ಆಯುಕ್ತರಾದ ರೇಣುಕಾ, ಜಿಲ್ಲಾ ಲಾರಿ, ಖಾಸಗಿ ಬಸ್, ಆಟೋ ಚಾಲಕರ ಸಂಘದ ಅಧ್ಯಕ್ಷರುಗಳು ಉಪಸ್ಥಿತರಿದ್ದರು.

error: Content is protected !!