ಸಂಘಟಿತ ಹೋರಾಟದಿಂದ ಸಮಾಜ ಬದಲಾವಣೆ ಸಾಧ್ಯ

ಸಂಘಟಿತ ಹೋರಾಟದಿಂದ ಸಮಾಜ ಬದಲಾವಣೆ ಸಾಧ್ಯ

ನಗರದ ಸೇವಾಲಾಲ್ ದೇವಸ್ಥಾನದ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ

ದಾವಣಗೆರೆ, ಆ. 22- ಸಂಘಟಿತ ಹೋರಾಟದಿಂದ ಸಮಾಜ ಬದಲಾವಣೆ ಸಾಧ್ಯ. ಜನರ ಆಶೋತ್ತರಗಳಿಗೆ ಸ್ಪಂದಿಸುವ ಮೂಲಕ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಕಾರ್ಯೋನ್ಮುಖರಾಗಬೇಕೆಂದು ಮಾಜಿ ಸಚಿವರೂ, ದೇವರಾಜ ಅರಸು ಪ್ರಶಸ್ತಿ ಪುರಸ್ಕೃತರೂ ಆದ  ಕಾಗೋಡು ತಿಮ್ಮಪ್ಪ ಕರೆ ನೀಡಿದರು.

ನಗರದ ಸರಸ್ವತಿ ಬಡಾವಣೆಯ ಸೇವಾಲಾಲ್ ದೇವಸ್ಥಾನದ ಆವರಣದಲ್ಲಿ ಬಂಜಾರ ಸೇವಾ ಸಂಘದ ವತಿಯಿಂದ ಇಂದು ಸಂಜೆ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಇಚ್ಛಾಶಕ್ತಿ ರೂಢಿಸಿಕೊಳ್ಳುವ ಜೊತೆಗೆ ಜನರಲ್ಲಿ ಜಾಗೃತಿ ಉಂಟು ಮಾಡಬೇಕು. ಜನರ ಸಮಸ್ಯೆಗಳನ್ನು ಅರಿತು ಅವುಗಳಿಗೆ ಸ್ಪಂದಿಸಿದರೆ ಮಾತ್ರ ಪಕ್ಷ ಅಥವಾ ವ್ಯಕ್ತಿ ಬಗ್ಗೆ ನಂಬಿಕೆ, ವಿಶ್ವಾಸ ಮೂಡುತ್ತದೆ ಎಂದರು.

ಸಮುದಾಯದ ಜನರನ್ನು ಸಂಘಟಿಸಿ ಜಾಗ, ನಿವೇಶನ, ಹಕ್ಕುಪತ್ರ ಕೊಡಿಸುವುದು ಸೇರಿದಂತೆ ಅವರ ಅಗತ್ಯ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟಕ್ಕೆ ಅಣಿಗೊಳಿಸಿದರೆ ನಾವು ಕೂಡ ಬೆಂಬಲಕ್ಕೆ ನಿಲ್ಲುತ್ತೇವೆ ಎಂದು ಹೇಳಿದರು.

ಕೇವಲ ಕಾಗದ ಪತ್ರದಲ್ಲಿನ ಸಾಧನೆಯಾಗಬಾರದು. ಸ್ಥಳೀಯ ಸಮಸ್ಯೆಗಳನ್ನು ಆಲಿಸಿ, ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಅವರನ್ನು ಸಂಘಟಿಸುವ ಮೂಲಕ ಹೋರಾಟಕ್ಕೆ ಸಜ್ಜುಗೊಳಿಸಬೇಕು ಎಂದರು.

ಹಿರಿಯ ವಕೀಲರಾದ ಜಯದೇವನಾಯ್ಕ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರಾಜಕೀಯ ಕ್ಷೇತ್ರ ಕಲುಷಿತಗೊಂಡಿದ್ದು, ರಾಜಕೀಯ ಪಕ್ಷಗಳು ಕೇವಲ ಎರಡು ಅಂಶಗಳನ್ನು ಮಾತ್ರ ಅವಲಂಬಿಸಿವೆ. ನನ್ನ ಪಕ್ಷ ಉಳಿಯಬೇಕು. ನಾನು ಅಧಿಕಾರದ ಗದ್ದುಗೆ ಏರಬೇಕು ಎಂಬುದೇ ಮುಖ್ಯವಾಗಿದೆ ಎಂದರು.

ರೈತರು, ಕಾರ್ಮಿಕರು, ಬಡವರು, ಶೋಷಿತರ ಬಗ್ಗೆ ಯಾವ ಪಕ್ಷದವರು ಚಿಂತನೆ ನಡೆಸುತ್ತಿಲ್ಲ. ಜನಪರ ಯೋಜನೆಗಳ ಕಿಂಚಿತ್ತು ಕಾಳಜಿ ವಹಿಸುತ್ತಿಲ್ಲ ಎಂದು ದೂರಿದರು.

ದಮನಿತರಿಗೆ ಎಲ್ಲಿಯವರೆಗೆ ಅಧಿಕಾರ ಸಿಗುವುದಿಲ್ಲವೋ ಅಲ್ಲಿಯವ ರೆಗೆ ಸಂವಿಧಾನಕ್ಕೆ ಬೆಲೆ ಬರುವುದಿಲ್ಲ ಎಂದ ಅವರು, ಇನ್ನೂ ಲಂಬಾಣಿ ತಾಂಡಾ, ಗೊಲ್ಲರ ಹಟ್ಟಿಗಳು, ಹಾಡಿಗಳ ಜನರಿಗೆ ನಿವೇಶನ, ಹಕ್ಕುಪತ್ರ ಸಿಗಬೇ ಕಾಗಿದೆ. ಮೂಲಭೂತ ಸವಲತ್ತುಗಳನ್ನು ಕಲ್ಪಿಸಲು ಸಾಧ್ಯವಾಗಿಲ್ಲ ಎಂದರು.

ಮಾಜಿ ಸಚಿವ ಕೆ. ಶಿವಮೂರ್ತಿ ನಾಯ್ಕ, ಪ್ರಗತಿಪರ ಹೋರಾಟಗಾರ ತೇಜಸ್ವಿ ಪಟೇಲ್ ಮಾತನಾಡಿದರು.

ವಿವಿಧ ಸಮಾಜ ಮುಖಂಡರಾದ ನಂಜಾನಾಯ್ಕ, ಶಂಕರ್, ಹೆಚ್. ಶಾಂತಾ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

error: Content is protected !!