ಮಳೆ ಕೊರತೆಗೆ ಶೇ.75 ಬೆಳೆ ನಾಶ

ಮಳೆ ಕೊರತೆಗೆ ಶೇ.75 ಬೆಳೆ ನಾಶ

ರೈತರ ನೆರವಿಗೆ ಧಾವಿಸುವಂತೆ ಬಲ್ಲೂರು ರವಿಕುಮಾರ್ ಆಗ್ರಹ

ದಾವಣಗೆರೆ, ಆ. 22- ಜಿಲ್ಲೆಯಲ್ಲಿ ಈಗಾಗಲೇ ಬಿತ್ತನೆಯಾಗಿರುವ ಬೆಳೆಯಲ್ಲಿ ಮಳೆ ಕೊರತೆಯಿಂದ ಶೇ.75ರಷ್ಟು ಬೆಳೆ ಹಾನಿಯಾಗಿದೆ. ಸರ್ಕಾರ ಕೂಡಲೇ ರೈತರ ನೆರವಿಗೆ ಧಾವಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ್ ಒತ್ತಾಯಿಸಿದ್ದಾರೆ.

ನಗರದ ಎಪಿಎಂಸಿ ಆವರಣದಲ್ಲಿ ಮಂಗಳವಾರ ರೈತರ ಸಮಸ್ಯೆಗಳ ಕುರಿತು ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಯಾವ ಶಾಸಕರೂ ರೈತರ ಅಳಲು ಕೇಳುತ್ತಿಲ್ಲ. ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು ರೈತರ ಸಭೆ ಕರೆದು ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿಕೊಡಬೇಕು ಎಂದು ರವಿಕುಮಾರ್ ಒತ್ತಾಯಿಸಿದರು.

ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 1,27,907 ಹೆಕ್ಟೇರ್ ಮೆಕ್ಕೆಜೋಳ, 6,052 ಹೆ.ರಾಗಿ, 10,100 ಹೆ.ತೊಗರಿ, 15,565 ಹೆ.ಶೇಂಗಾ ಬಿತ್ತನೆಯಾಗಿದ್ದು, ಮಳೆ ಕೊರತೆಯಿಂದ ಶೇ.75ರಷ್ಟು ಬೆಳೆ ಹಾನಿಯಾಗಿದೆ ಎಂದರು.

ಭದ್ರಾ ಜಲಾಶಯದ ಅಚ್ಚುಕಟ್ಟು ವ್ಯಾಪ್ತಿಯಲ್ಲಿ 1,14,057.5 ಎಕರೆ ಭತ್ತ ಬೆಳೆಯಲಾಗಿದೆ. ಮಲೇಬೆನ್ನೂರು ವ್ಯಾಪ್ತಿಯಲ್ಲಿ 85932.5 ಎಕರೆ ಸೇರಿ ಒಟ್ಟು 1,99,990 ಎಕರೆ ಭತ್ತ ಬೆಳೆಯಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಭದ್ರಾ ಜಲಾಶಯದಿ ಪ್ರಸಕ್ತ ಇರುವ ನೀರು ಭದ್ರಾವತಿ ಡಿವಿಜನ್ ವ್ಯಾಪ್ತಿಗೆ 100 ದಿನಗಳವರೆಗೆ ಹರಿಯುತ್ತದೆ. ಡಿ.ಬಿ. ಹಳ್ಳಿ ವಿಭಾಗದ ವ್ಯಾಪ್ತಿಗೆ 95 ದಿನ, ಬಸವಾಪಟ್ಟಣ ಹಾಗೂ ತ್ಯಾವಣಿಗೆ ವಿಭಾಗಗಳಿಗೆ 80 ದಿನ ಮತ್ತು ದಾವಣಗೆರೆಯ ಉಪ ವಿಭಾಗಗಳಿಗೆ 75 ದಿನ ಮಾತ್ರ ಸಿಗಬಹುದಾಗಿದೆ. ಈ ಹಿನ್ನೆಲೆಯಲ್ಲಿ ರೈತರು ನಾಟಿ ಮಾಡುವ ಮೂಲಕ ಕೇವಲ ಬೀಜ, ಗೊಬ್ಬರ, ಔಷಧಿ ಅಂಗಡಿ ಮಾಲೀಕರನ್ನು ಶ್ರೀಮಂತರರಾಗಿ ಮಾಡಿದಂತಾಗುತ್ತದೆ ಎಂದರು.

ವಿದ್ಯುತ್ ಅಭಾವಕ್ಕೆ ರೈತರು ಹೈರಾಣ: ದಿನಕ್ಕೆ 7 ತಾಸು ವಿದ್ಯುತ್ ಹರಿಸುತ್ತೇವೆ ಎಂದು ಸರ್ಕಾರ ಹೇಳುತ್ತದೆ. ಆದರೆ ರಾತ್ರಿ 3 ಗಂಟೆ ಮಾತ್ರ ವಿದ್ಯುತ್ ನೀಡಲಾಗುತ್ತದೆ. ಹಗಲು ಹೊತ್ತಿನಲ್ಲಿ 2 ತಾಸು ವಿದ್ಯುತ್ ಯಾವಾಗ ಇರುತ್ತದೆ ಎಂಬುದೇ ರೈತರಿಗೆ ಗೊತ್ತಾಗುವುದಿಲ್ಲ. ಇದರ ಮಧ್ಯೆ ಲೋಡ್ ಶೆಡ್ಡಿಂಗ್ ಹಾವಳಿಗಳ ಕಾರಣದಿಂದ ರೈತರು ಬೆಳೆಗಳನ್ನು ಪಡೆಯುವುದಾದರೂ ಹೇಗೆ? ಎಂದು ರವಿಕುಮಾರ್ ಪ್ರಶ್ನಿಸಿದರು.

ಕಲ್ಲಿದ್ದಲು ಕೊರತೆಯಿಂದ ವಿದ್ಯುತ್ ಅಭಾವ ಉಂಟಾಗಿದೆ ಎಂದು ಇಲಾಖೆಯ ಸಚಿವರು ಹೇಳುತ್ತಾರೆ. ಪಂಚವಾರ್ಷಿಕ ಯೋಜನೆ ತಯಾರಿಸುವಾಗ ಎಷ್ಟು ವಿದ್ಯುತ್ ಬೇಕಾಗುತ್ತದೆ? ಎಷ್ಟು ಉತ್ಪಾದನೆಯಾಗುತ್ತದೆ ಎಂಬ ಅರಿವು ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಇರುವುದಿಲ್ಲವೇ? ಯಾವ ಆಧಾರದ ಮೇಲೆ ಪಂಚವಾರ್ಷಿಕ ಯೋಜನೆ ತಯಾರಿಸಲಾಗಿತ್ತು ಎಂದು ತರಾಟೆಗೆ ತೆಗೆದುಕೊಂಡರು.

ಪ್ರತಿ ತಿಂಗಳು 875 ಕೋಟಿ ರೂ. ಸರ್ಕಾರಿ ಅಧಿಕಾರಿಗಳು, ನೌಕರರ ವೇತನಕ್ಕ ನೀಡಲಾಗುತ್ತದೆ. 1250 ಕೋಟಿ ರೂಪಾಯಿ ಸಚಿವರು, ಶಾಸಕರ ಭತ್ಯೆ, ಖರ್ಚು ವೆಚ್ಚಗಳಿಗೆ ವ್ಯಯ ಮಾಡಲಾಗುತ್ತದೆ. ಶೇ.80ರಷ್ಟು ಜನರು ದುಡಿದು ಪಾವತಿಸುವ ತೆರಿಗೆಯೇ ಇದಾಗಿರುತ್ತದೆ. ಆದರೆ ಜನ ಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಲು ಇವರು ನಿರ್ಲಕ್ಷ್ಯ ವಹಿಸುತ್ತಾರೆ. ಸಚಿವರು ಹಾಗೂ ಶಾಸಕರು ಐದು ವರ್ಷದ ಗುತ್ತಿಗೆ ನೌಕರರಿದ್ದಂತೆ, ಅವರಿಗೆ ಸೌಲಭ್ಯ ದೊರೆಯುವುದು ಸಾಮಾನ್ಯ ಜನರ ಹಣದಿಂದಲೇ ಎಂದರು.

ಬಲ್ಲೂರು ಗ್ರಾಮದ ಭದ್ರಾ ಅಚ್ಚುಕಟ್ಟು ಕಾಲುವೆಯಲ್ಲಿ 10 ಅಡಿಯಷ್ಟು ಹೂಳು ತುಂಬಿದೆ. ಒಂದೂವರೆ ಕಿಲೋಮೀಟರ್ ನೀರು ಹರಿಯದೇ ನಿಲ್ಲುತ್ತದೆ. ಮನೆಗಳು ಶಿಥಿಲಗೊಂಡು ಬೀಳುವ ಹಂತದಲ್ಲಿವೆ. 2008ರಲ್ಲಿ ಕಾಲುವೆ ಸ್ಥಳಾಂತರ ಮಾಡುವುದಾಗಿ ಹೇಳಿದ್ದರಾದರೂ, ಇನ್ನೂ ಕ್ರಮ ತೆಗೆದುಕೊಂಡಿಲ್ಲ. ಇನ್ನೂ ಒಂದು ತಿಂಗಳೊಳಗೆ ಕ್ರಮ ಕೈಗೊಳ್ಳದಿದ್ದರೆ, ಕಾನೂನು ಹೋರಾಟ ನಡೆಸುವುದಾಗಿ ರವಿಕುಮಾರ್ ಹೇಳಿದರು.

ಬೆಳೆ ವಿಮೆ ನೀಡಲು ಅನಗತ್ಯ ನಿಯಮಗಳ ಕಾರಣ ಹೇಳಲಾಗುತ್ತದೆ. ಬಗರ್ ಹುಕ್ಕುಂ ಹಕ್ಕುಪತ್ರಕ್ಕೆ ಸತಾಯಿಸಲಾಗುತ್ತದೆ. ಒಂದು ಆಧಾರ್‌ ಕಾರ್ಡ್‌ಗೆ ಒಂದು ಪಂಪ್‌ಸೆಟ್ ಬಳಕೆ ಅವಕಾಶ ನೀಡಿರುವುದರಿಂದ ರೈತರಿಗೆ ತೊಂದರೆಯಾಗುತ್ತದೆ ಎಂದು ಸಭೆಯಲ್ಲಿ ವಿವಿಧ ಗ್ರಾಮಗಳ ರೈತರು ಆರೋಪಿಸಿದರು.

ಸಭೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಕೆ.ಎಸ್. ಪ್ರಸಾದ್, ಮಾಯಕೊಂಡದ ಅಶೋಕ್, ವಕೀಲ ಮಂಜುನಾಥ್, ಶಿವಮೂರ್ತಪ್ಪ ಐಗೂರು, ಮಂಜುನಾಥ್, ಹರಿಹರ ಬಸಣ್ಣ ಇತರರು ಇದ್ದರು.

error: Content is protected !!