ನಿರ್ವಹಣೆ ಕಷ್ಟವಾಗಿದ್ದರಿಂದ ಟಾಕೀಸ್ ಬಂದ್ ಮಾಡಿ 10 ವರ್ಷಗಳ ನಂತರ ನೆಲಸಮ
ಮಲೇಬೆನ್ನೂರು, ಆ. 2 – ಇಲ್ಲಿನ ಜಿಗಳಿ ರಸ್ತೆಯಲ್ಲಿದ್ದ ಸಿನಿರಸಿಕರ ಮನಗೆಿದಿದ್ದ ನೀಲ್ಕಮಲ್ ಚಿತ್ರ ಮಂದಿರ ಇನ್ನು ನೆನಪು ಮಾತ್ರ. ಸುಮಾರು 30 ವರ್ಷಗಳ ಕಾಲ 3 ಸಾವಿರಕ್ಕೂ ಹೆಚ್ಚು ಚಲನ ಚಿತ್ರಗಳನ್ನು ಪ್ರದರ್ಶನ ಮಾಡಿದ್ದ ನೀಲ್ಕಮಲ್ ಟಾಕೀಸ್ ಈಗ ಇತಿಹಾಸದ ಪುಟ ಸೇರಿದೆ.
ಕಳೆದ 15-20 ದಿನಗಳಿಂದ ಈ ಚಿತ್ರಮಂದಿರವನ್ನು ಕೆಡುವ ಕೆಲಸ ನಡೆದು ಭಾನುವಾರ ಪೂರ್ತಿಯಾಗಿ ನೆಲ ಸಮವಾಗಿದೆ. ಚಿತ್ರ ವಿಕ್ಷೀಸಲು ಪ್ರೇಕ್ಷಕರ ಕೊರತೆ ಅನುಭವಿಸುತ್ತಿದ್ದ ನೀಲ್ ಕಮಲ್ ಚಿತ್ರ ಮಂದಿರವು 2014ರಿಂದ ಪ್ರದರ್ಶನಗಳನ್ನು ಸ್ಥಗಿತಗೊಳಿಸಿತ್ತು. ಅಲ್ಲಿಂದ ಇಲ್ಲಿಯವರೆಗೂ ಚಿತ್ರಮಂದಿರ ನಿರ್ಜೀವ ವಸ್ತುವಾಗಿತ್ತು. ಸ್ಪಲ್ಪ ದಿನ ಟಾಕೀಸಿನ ಮಾಲೀಕರಾದ ಸೈಯದ್ ಅಲ್ತಾಫ್, ಸೈಯದ್ ಇಸ್ರಾರ್ ಅವರು ಭತ್ತ ತುಂಬಿದ ಚೀಲಗಳನ್ನು ಹಾಕುತ್ತಿದ್ದರು. ನಂತರ ಖಾಲಿ ಬಿದ್ದಿತ್ತು.
ಇದೀಗ ಚಿತ್ರಮಂದಿರವನ್ನು ಜೆಸಿಬಿ ಕೆಡವಿ ನೆಲ ಸಮ ಮಾಡಿದ್ದು, ಈ ಜಾಗವನ್ನು ಲೇಔಟ್ ಮಾಡಿ ಸೈಟ್ ಮಾರಾಟ ಮಾಡುವ ಚಿಂತನೆಯಲ್ಲಿ ಸೈಯದ್ ಇಸ್ರಾರ್ ಸಹೋದರರು ಇದ್ದಾರೆ ಎನ್ನಲಾಗಿದೆ.
ಹಿನ್ನೆಲೆ : ಮಲೇಬೆನ್ನೂರಿನಲ್ಲಿ ಸೈಯದ್ ಖಾಸಿಂ ಸಾಬ್ ಮತ್ತು ಸೈಯದ್ ನೂರ್ ಅಹಮದ್ ಸಾಬ್ ಸಹೋದರರು 1978ರಲ್ಲಿ ಸಿನಿಮಾ ಟಾಕೀಸ್ ಕಟ್ಟಿಸಬೇಕೆಂಬ ಯೋಜನೆ ಸಿದ್ದಪಡಿಸಿ ದಾವಣಗೆರೆಯ ಪುಷ್ಪಾಂಜಲಿ ಮತ್ತು ಹರಿಹರದ ಶ್ರೀಕಾಂತ್ ಟಾಕೀಸ್ ನಿರ್ಮಿಸಿದ ಇಂಜಿನಿಯರ್ ಅವರನ್ನು ಸಂಪ ರ್ಕಿಸಿ ಟಾಕೀಸ್ ಕಾಮಗಾರಿ ಆರಂಭಿಸಿದರು.
1978ರಲ್ಲಿ ಪ್ರಾರಂಭವಾದ ಟಾಕೀಸ್ ನಿರ್ಮಾಣ ಕಾಮಗಾರಿ 1984ರಲ್ಲಿ ಪೂರ್ಣ ಗೊಂಡು 1984ರ ಫೆಬ್ರವರಿ 19ರಂದು `ಸಿಂಹಘರ್ಜನೆ’ ಚಿತ್ರ ಪ್ರದರ್ಶನದೊಂದಿಗೆ ಅಧಿಕೃತವಾಗಿ ಲೋಕಾರ್ಪಣೆಗೊಂಡಿತ್ತು.ನಂತರ ನಮ್ಮ ಚಿತ್ರಮಂದಿರ ಪ್ರಾರಂಭವಾ ಯಿತು ಎಂದು ಸೈಯದ್ ನೂರ್ ಅಹಮದ್ ಸಾಬ್ ಅವರ ಪುತ್ರ ಸೈಯದ್ ಜಾಕೀರ್ ಜನತಾವಾಣಿಗೆ ಮಾಹಿತಿ ನೀಡಿದರು.
ನೀಲ್ ಕಮಲ್ ಟಾಕೀಸ್ನಲ್ಲಿ ಪ್ರದರ್ಶನ ಗೊಂಡ ಸುಮಾರು 3 ಸಾವಿರ ಚಿತ್ರಗಳಲ್ಲಿ ಎರಡು ನಕ್ಷತ್ರ, ಅಪೂರ್ವ ಸಂಗಮ, ದೇವತಾ ಮನುಷ್ಯ, ಒಡಹುಟ್ಟಿದವರು, ಬಂಗಾರದ ಮನುಷ್ಯ, ಗಂಧದ ಗುಡಿ, ಮನ ಮೆಚ್ಚಿದ ಹುಡುಗಿ, ನಂಜುಂಡಿ ಕಲ್ಯಾಣ ರಾಮಾಚಾರಿ, ಜನುಮದ ಜೋಡಿ, ಸೂರ್ಯವಂಶ ಸೇರಿದಂತೆ ಇನ್ನೂ ಅನೇಕ ಚಿತ್ರಗಳು 50 ದಿನ ಪ್ರದರ್ಶನ ಗೊಂಡಿದ್ದವು. ದಿನಕ್ಕೆ ನಾಲ್ಕು ಪ್ರದರ್ಶನ ಗಳು ಇರುತ್ತಿದ್ದವು. ಮಾರ್ನಿಂಗ್ ಷೋ ನಲ್ಲಿ ಹೆಚ್ಚಾಗಿ ಹಿಂದಿ, ಇಂಗ್ಲಿಷ್ ಚಿತ್ರಗಳನ್ನು ಪ್ರದರ್ಶನ ಮಾಡು ತ್ತಿದ್ದವು ಎಂದು ಸೈಯದ್ ಜಾಕೀರ್ ತಿಳಿಸಿದರು.
ವಿಷ್ಣುವರ್ಧನ್, ಪ್ರಭಾಕರ್, ಶೃತಿ, ಧೀರೇಂದ್ರ ಗೋಪಾಲ್ ಸೇರಿದಂತೆ ಅನೇಕ ಕಲಾವಿದರು ನೀಲ್ ಕಮಲ್ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದರು. ಮಲೇಬೆನ್ನೂರು ಸೇರಿದಂತೆ ಸುತ್ತಮುತ್ತಲಿನ 40ಕ್ಕೂ ಹೆಚ್ಚು ಹಳ್ಳಿಗಳಿಂದ ಜನ ಮೊದಲಿಗೆ ಎತ್ತಿನ ಬಂಡಿ, ನಂತರ ಟ್ರ್ಯಾಕ್ಟರ್ಗಳಲ್ಲಿ ನಮ್ಮ ಟಾಕೀಸ್ಗೆ ಬರುತ್ತಿದ್ದರು. ಒಮ್ಮೊಮ್ಮೆ ಟಾಕೀಸ್ ಹೌಸ್ ಪುಲ್ ಆಗಿ ಜನ ಇನ್ನೊಂದು ಷೋಗಾಗಿ ಕಾದು ಕುಳಿತುಕೊಳ್ಳುತ್ತಿದ್ದ ದಿನಗಳನ್ನು ನಾವು ಎಂದಿಗೂ ಮರೆಯುವುದಿಲ್ಲ, ಆದರೆ 2010 ರಿಂದ ಈಚೇಗೆ ಟಿ.ವಿ. ಮೊಬೈಲ್ ಹಾವಳಿಯಿಂದಾಗಿ ಜನ ಸಿನಿಮಾ ನೋಡಲು ಟಾಕೀಸ್ಗೆ ಬರುವುದನ್ನೆ ಕಡಿಮೆ ಮಾಡಿದರು.
ಇದರಿಂದಾಗಿ ಟಾಕೀಸ್ ನಿರ್ವಹಣೆ ಬಹಳ ಕಷ್ಟ ಆಗುತ್ತಾ ಬಂದಿದ್ದರಿಂದ 2014 ರಿಂದ ಟಾಕೀಸ್ ಬಂದ್ ಮಾಡುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಯಿತೆಂದು ಸೈಯದ್ ಜಾಕೀರ್ ಬಹಳ ಬೇಸರದಿಂದ ಹೇಳಿದರು.
ನೀಲ್ ಕಮಲ್ ಟಾಕೀಸ್ ಬಂದ್ ಆದ ನಂತರ ಗಣೇಶ್ ಟಾಕೀಸ್ ಕೂಡಾ ಬಂದ್ ಆಯಿತು. ಈಗ ಸದ್ಯ ಜ್ಯೋತಿ ಟಾಕೀಸ್ ಮಾತ್ರ ನಡೆಯುತ್ತಿದ್ದು, ಅಲ್ಲಿ ಕೂಡಾ ಪ್ರೇಕ್ಷಕರ ಕೊರತೆ ಇದ್ದು ನಿರ್ವಹಣೆ ಕಷ್ಟವಾಗಿದ್ದರೂ ಚಿತ್ರ ಪ್ರದರ್ಶನ ಮಾತ್ರ ಕುಂಟುತಾ ಸಾಗಿದೆ.
– ಜಿಗಳಿ ಪ್ರಕಾಶ್