ಕಳ್ಳಸಾಗಣೆಗೆ ಸಿಲುಕಿದವರಿಗೆ ನೆರವು ಕಲ್ಪಿಸಲು ನ್ಯಾ.ರಾಜೇಶ್ವರಿ ಎನ್. ಹೆಗಡೆ ಕರೆ
ದಾವಣಗೆರೆ, ಜು. 31 – ಎಲ್ಲರಿಗೂ ನ್ಯಾಯ ಹಾಗೂ ನಾಗರಿಕ ಜೀವನ ಸಿಗಬೇಕು ಎಂಬುದು ಸಂವಿಧಾನದ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಮಾನವ ಕಳ್ಳಸಾಗಣೆಯ ಪಿಡುಗು ನಿವಾರಿಸುವ ಜೊತೆಗೆ, ಶೋಷಣೆಗೆ ಸಿಲುಕಿದ ಪ್ರತಿಯೊಬ್ಬರಿಗೂ ನೆರವು ಸಿಗಬೇಕಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಮೂರ್ತಿ ರಾಜೇಶ್ವರಿ ಎನ್. ಹೆಗಡೆ ತಿಳಿಸಿದ್ದಾರೆ.
ಜಿಲ್ಲಾ ಪಂಚಾಯ್ತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾಡಳಿತ ಭವನದಲ್ಲಿ ಆಯೋಜಿಸಲಾಗಿದ್ದ ಮಾನವ ಕಳ್ಳಸಾಗಣೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ ಐದು ವರ್ಷಗಳಲ್ಲಿ 21 ಸಾವಿರಕ್ಕೂ ಹೆಚ್ಚು ಜನರು ರಾಜ್ಯದಲ್ಲಿ ಕಾಣೆಯಾಗಿರುವ ವರದಿ ಗಳಿವೆ. ಈ ರೀತಿಯ ಘಟನೆಗಳು ನಡೆಯದಂತೆ ನೋಡಿಕೊಳ್ಳುವುದು ಪೊಲೀಸ್ ಸೇರಿದಂತೆ ಹತ್ತು ಇಲಾಖೆಗಳ ಪ್ರಮುಖ ಹೊಣೆಯಾಗಿದೆ. ಮಾನವ ಕಳ್ಳಸಾಗಣೆ ತಡೆ ಘಟಕವನ್ನು ಸರ್ಕಾರದಿಂದ ರಚಿಸಲಾಗಿದೆ. ಮಾನವ ಕಳ್ಳಸಾಗಣೆಗೆ ಗುರಿಯಾದವರಿಗೆ ನೆರವು ಹಾಗೂ ಪುನರ್ವಸತಿ ಸಹ ಲಭ್ಯವಿದೆ ಎಂದವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ್ ಮಾತನಾಡಿ, ಮಹಿಳೆಯರು ಹಾಗೂ ಮಕ್ಕಳೇ ಈ ಪಿಡುಗಿಗೆ ಅತಿ ಹೆಚ್ಚು ಗುರಿಯಾಗುತ್ತಿದ್ದಾರೆ. ಕಳ್ಳಸಾಗಣೆಯು ಸಾಮಾಜಿಕ ಸಮಸ್ಯೆಯಷ್ಟೇ ಅಲ್ಲದೇ ಕಾನೂನಿನ ಸಮಸ್ಯೆಯೂ ಆಗಿದೆ ಎಂದು ಹೇಳಿದರು.
ಬಡವರು, ಸಮಾಜದ ಮುಖ್ಯವಾಹಿನಿಯಿಂದ ದೂರವಾದವರು, ಶೋಷಣೆಗೆ ಒಳಗಾದವರೇ ಕಳ್ಳಸಾಗಣೆ ಜಾಲಕ್ಕೆ ಹೆಚ್ಚಾಗಿ ಸಿಲುಕುತ್ತಿದ್ದಾರೆ. ಸರ್ಕಾರದ ಜೊತೆ ನಾಗರಿಕರು ಹಾಗೂ ಸರ್ಕಾರೇತರ ಸಂಘಟನೆಗಳೂ ಕೈ ಜೋಡಿಸಿ ಈ ಅನಾಗರಿಕ ಹಾಗೂ ಕ್ರೂರ ಪಿಡುಗನ್ನು ನಿವಾರಿಸಬೇಕು ಎಂದು ಹೇಳಿದರು.
ಕಳೆದ ಐದು ವರ್ಷಗಳಲ್ಲಿ ಜಿಲ್ಲೆಯಲ್ಲಿ ಐದು ಮಹಿಳೆ ಹಾಗೂ ಎರಡು ಮಕ್ಕಳ ಕಳ್ಳಸಾಗಣೆ ಪ್ರಕರಣಗಳು ನಡೆದಿವೆ. 704 ಮಹಿಳೆಯರು ಸ್ವಾಧಾರ ಕೇಂದ್ರಗಳಲ್ಲಿ ನೆರವು ಪಡೆದಿದ್ದಾರೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಎಸ್ಪಿ ಕೆ. ಅರುಣ್, ಭಿಕ್ಷುಕರು, ಅನಾಥರು ಹಾಗೂ ನಿರ್ಗತಿಕರೇ ಕಳ್ಳಸಾಗಣೆಗೆ ಸಿಲುಕುವುದು ಹೆಚ್ಚು. ಈ ರೀತಿಯ ಘಟನೆಗಳು ನಡೆದಾಗ ನಾಗರಿಕರು ಪೊಲೀಸರಿಗೆ ತಿಳಿಸಬೇಕು ಎಂದು ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ವಾಸಂತಿ ಉಪ್ಪಾರ್, ಗ್ರಾಮೀಣ ಭಾಗದಲ್ಲಿ ಜನಸಂಪರ್ಕ ಹೆಚ್ಚಾಗಿ ಹೊಂದುವ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು ಮಾನವ ಕಳ್ಳಸಾಗಣೆ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಬಲ್ಲರು ಎಂದು ಹೇಳಿದರು.
ವೇದಿಕೆಯ ಮೇಲೆ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆಗಿರುವ ನ್ಯಾಯಮೂರ್ತಿ ಮಹಾವೀರ ಕರೆಣ್ಣವರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾಗರಾಜ್, ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್. ಅರುಣ್ ಕುಮಾರ್, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರಾಮಾನಾಯಕ್, ರಾ.ಲಾ. ಕಾಲೇಜು ಪ್ರಾಂಶುಪಾಲ ಜಿ.ಎಸ್. ಯತೀಶ್, ಮತ್ತಿತರರು ಉಪಸ್ಥಿತರಿದ್ದರು.