ನವದೆಹಲಿಯಲ್ಲಿನ `ತುಮ್ಹಾರೆ ಸಿವಾ ಔರ್ ಕೋಯಿ ನಹೀ’ ವಚನ ನೃತ್ಯರೂಪಕ ಪ್ರದರ್ಶನದಲ್ಲಿ ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ
ನವದೆಹಲಿ, ಆ.1- ವಚನಗಳು ಬದುಕಿಗೆ ಬೆಳಕನ್ನು ನೀಡಬಲ್ಲವು. ಬಸವಣ್ಣ ರಚಿಸಿದ ಆಯ್ದ 44 ವಚನಗಳನ್ನು ಹಿಂದಿಯಲ್ಲಿ ಅನುವಾದಿಸಿ, ಹಾಡಿಸಿ, ಅದಕ್ಕೆ ನೃತ್ಯರೂಪಕವನ್ನು ಒಂದು ಗಂಟೆ, ಹತ್ತು ನಿಮಿಷಗಳ ಕಾಲ ನಮ್ಮ ಕಲಾ ತಂಡ ನೀಡಲಿದೆ. ಈ ವಚನ ನೃತ್ಯರೂಪಕದ ಗುಚ್ಛಕ್ಕೆ ಶೀರ್ಷಿಕೆಯಾಗಲು ಪ್ರೇರಣೆ ನೀಡಿದ್ದು ಬಸವಣ್ಣನವರ `ತಂದೆ ನೀನು, ತಾಯಿ ನೀನು, ಬಂಧು ನೀನು, ಬಳಗ ನೀನು, `ನೀನಲ್ಲದೆ ಮತ್ತಾರೂ ಇಲ್ಲವಯ್ಯಾ’ ಕೂಡಲಸಂಗದೇವ’ ಎನ್ನುವ ವಚನ. ಇಂಥ ಅನೇಕ ಸಂದೇಶಗಳು 44 ವಚನಗಳಲ್ಲಿ ಅಡಗಿವೆ ಎಂದು ಸಾಣೇಹಳ್ಳಿಯ ಶ್ರೀ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಇಲ್ಲಿನ ದೆಹಲಿ ಕನ್ನಡ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ಬಸವಣ್ಣನವರ 44 ವಚನಗಳನ್ನು ಆಧರಿಸಿದ ಸಾಣೇಹಳ್ಳಿಯ ಶ್ರೀ ಶಿವಕುಮಾರ ಕಲಾಸಂಘ ಪ್ರಸ್ತುತಪಡಿಸುವ `ತುಮ್ಹಾರೆ ಸಿವಾ ಔರ್ ಕೋಯಿ ನಹೀ’ ವಚನ ನೃತ್ಯರೂಪಕ ಪ್ರದರ್ಶನಕ್ಕೆ ಮುನ್ನ ಆಯೋಜಿಸಿದ್ದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ , ಶ್ರೀಗಳು ಆಶೀರ್ವಚನ ನೀಡಿದರು.
ಬಸವಣ್ಣ, ಮೊದಲಾದ ಶರಣರ ಕಾರಣಕ್ಕೆ ಜಗತ್ತಿನ ಭೂಪಟದಲ್ಲಿ ಕರ್ನಾಟಕದ ಹೆಸರು ಅಜರಾಮರವಾಗಿದೆ. ಬಸವಣ್ಣನವರು ಸಾಮಾಜಿಕ, ಧಾರ್ಮಿಕ, ಆರ್ಥಿಕ, ಸಾಂಸ್ಕೃತಿಕ ಕ್ರಾಂತಿಯ ಮೂಲಕ ಜಗತ್ತಿನ ಅಂಧಕಾರವನ್ನು ತೊಡೆದು ಬೆಳಕನ್ನು ನೀಡುವ ಪ್ರಾಮಾಣಿಕ ಪ್ರಯತ್ನ ಮಾಡಿದರು ಎಂದರು.
ಬಸವಣ್ಣನವರು ಸಮಾಜಕ್ಕೆ ಕಲಿಸಿದ್ದು ಮೂರು ಮುಖ್ಯ ತತ್ವಗಳನ್ನು; ಕಾಯಕ, ದಾಸೋಹ, ಇಷ್ಟಲಿಂಗ ನಿಷ್ಠೆ. ಮನುಷ್ಯ ಸೋಮಾರಿಯಾಗದೆ ಸದಾ `ಕಾಯಕ’ ಶೀಲನಾಗಿರಬೇಕು. ಕಾಯಕದಿಂದ ಬಂದ ಆದಾಯವನ್ನು ಸಮಾಜದ ಒಳಿತಿನ ಕಾರ್ಯಗಳಿಗೆ ವಿನಿಯೋಗ ಮಾಡುವ `ದಾಸೋಹ’ ತತ್ವವನ್ನು ಅಳವಡಿಸಿಕೊಳ್ಳಬೇಕು ಎಂದು ಹಿತ ನುಡಿದರು.
ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಕರ್ನಾಟಕದಿಂದ ಬಂದ ಮೂವತ್ತು ಜನರ ಕಲಾವಿದರ ತಂಡ ವಚನಗಳಿಗೆ ಅತ್ಯುತ್ತಮವಾಗಿ ನೃತ್ಯ ಮಾಡುವರು. ವಿಶೇಷ ಅನುಭವ ನೀಡುವುದು. ಬಸವಣ್ಣ ಜಗತ್ತಿನ ಮೊದಲ ಪಾರ್ಲಿಮೆಂಟ್ ನಡೆಸಿದವರು. ಅದೇ ಮಾದರಿಯಲ್ಲಿ ಇಂದಿನ ಇಂಗ್ಲೆಂಡ್, ಭಾರತ ಮೊದಲಾದ ಪಾರ್ಲಿಮೆಂಟ್‍ಗಳು ನಡೆಯುತ್ತಿವೆ ಎಂದರು.
ಲಂಡನ್ ಮತ್ತು ಭಾರತ ಸಂಸತ್ತಿನಲ್ಲಿ ಬಸವಣ್ಣನವರ ಪ್ರತಿಮೆಯನ್ನು ಉದ್ಘಾಟಿಸಿದ್ದಾರೆ. ಬೆಂಗಳೂರಿನಿಂದ ಹೊರಟ ತಂಡದಲ್ಲಿ ಐಟಿ, ಬಿಟಿ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಕಲಾವಿದರಿದ್ದಾರೆ. ಅವರು ಈಗಾಗಲೇ ದೇಶದ 8 ರಾಜ್ಯಗಳಲ್ಲಿ ಪ್ರವಾಸ ಮಾಡಿ 22 ಪ್ರದರ್ಶನಗಳ ಮೂಲಕ ಬಸವಣ್ಣನವರ ಪರಿಚಯ ಮಾಡಿಕೊಟ್ಟಿದ್ದಾರೆ. ಮುಂದುವರೆದು, ಇನ್ನೂ 8 ರಾಜ್ಯಗಳಲ್ಲಿ ಪ್ರವಾಸ ಮಾಡಿ 40ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಗುಲ್ಬರ್ಗಾ ಸಂಸದ ಡಾ. ಉಮೇಶ್ ಜಾಧವ್ ಮಾತನಾಡಿ, ನರೇಂದ್ರ ಮೋದಿಯವರ ಕನಸು `ಆಜಾದಿ ಕಾ ಅಮೃತ್ ಮಹೋ ತ್ಸವ; ಅಮೃತ್ ಕಾಲ್’ ಅಭಿಯಾನ. ಕರ್ನಾಟಕ ಕಲಾತಂಡದಿಂದ ಅತ್ಯದ್ಭುತವಾದ ಕಾರ್ಯಕ್ರಮ ಇಲ್ಲಿ ನಡೆದಿದೆ. ನನ್ನ ಹುಟ್ಟೂರು ಬಸವಣ್ಣನವರ ಕಾರ್ಯಕ್ಷೇತ್ರ ಬಸವ ಕಲ್ಯಾಣದಿಂದ ಕೇವಲ 50 ಕಿ.ಮಿ. ದೂರದಲ್ಲಿದೆ. ನಾನು ಬಸವಣ್ಣನವರ ಕರ್ಮಭೂಮಿಯಿಂದ ಲೋಕಸಭಾ ಸದಸ್ಯನಾಗಿ ಆಯ್ಕೆಯಾಗಿ ಬಂದಿದ್ದೇನೆ ಎಂದು ಹೇಳಿದರು.
12 ನೇ ಶತಮಾನದಲ್ಲಿ ಬಸವಣ್ಣನವರು ಸ್ಥಾಪಿಸಿದ `ಅನುಭವ ಮಂಟಪ’ದ ಮೂಲಕವೇ ಇಂದಿನ ಪ್ರಜಾಪ್ರಭುತ್ವ ಮುನ್ನಡೆದಿದೆ. ಅನುಭವ ಮಂಟಪದಲ್ಲಿ ಎಲ್ಲ ಜಾತಿಯ ಜನರಿಗೆ ಮಾತನಾಡಲು ಅವಕಾಶವಿತ್ತು. ಬಸವಣ್ಣನವರ ಸಂದೇಶ ಹೊತ್ತು ಸಾಗುತ್ತಿರುವ ಈ ಅಭಿಯಾನ ಬಹಳ ದೊಡ್ಡದು ಎಂದರು.
ಸಂಚಾಲಕ ಶ್ರೀನಿವಾಸ ಜಿ ಕಪ್ಪಣ್ಣ, ಸಂಸ್ಥೆಯ ಪದಾಧಿಕಾರಿಗಳಾದ ಅರವಿಂದ ರಾವ್, ಮೈಲಾರಪ್ಪ, ಪ್ರಶಾಂತಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಮೋನಿಕಾ ಚೌಧರಿ ಮತ್ತು ಚಂಚಲ್ ಸ್ವಾಗತಿಸಿದರು. ದೆಹಲಿ ಕನ್ನಡ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ.ಕೆ. ಬಸವರಾಜ್ ವಂದಿಸಿದರು. ನಂತರ `ತುಮ್ಹಾರೆ ಸಿವಾ ಔರ್ ಕೋಯಿ ನಹೀ ಹೈ’ ಹಿಂದಿ ಅವತರಣಿಕೆಯಲ್ಲಿ ನೃತ್ಯರೂಪಕವನ್ನು ಪ್ರದರ್ಶಿಸಲಾಯಿತು.