ವಿದ್ಯೆ ಜೊತೆಗೆ ಸಂಸ್ಕಾರ-ಪ್ರಜ್ಞಾವಂತಿಕೆ ಮುಖ್ಯ

ವಿದ್ಯೆ ಜೊತೆಗೆ ಸಂಸ್ಕಾರ-ಪ್ರಜ್ಞಾವಂತಿಕೆ ಮುಖ್ಯ

ಸಿರಿಗೆರೆ: ಗುರು ಪೌರ್ಣಿಮೆ ಕಾರ್ಯಕ್ರಮದಲ್ಲಿ ತರಳಬಾಳು ಸ್ವಾಮೀಜಿ ಅಭಿಮತ

ಸಿರಿಗೆರೆ ಜು. 3- ವಿದ್ಯೆಯ ಜೊತೆಗೆ ಸಂಸ್ಕಾರ ಮತ್ತು ಪ್ರಜ್ಞಾವಂತಿಕೆ ಮುಖ್ಯ ಎಂದು ಶ್ರೀ ತರಳ ಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.

ಇಂದು ಸಿರಿಗೆರೆಯ ಶ್ರೀ ಗುರುಶಾಂತೇಶ್ವರ ದಾಸೋಹ ಭವನದಲ್ಲಿ ಏರ್ಪಡಿಸಿದ್ದ ಗುರು ಪೂರ್ಣಿಮೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಪೂಜ್ಯರು ಆಶೀರ್ವಚನ ನೀಡಿದರು.

ಅಕ್ಷರ ಜ್ಞಾನ ಪಡೆದವರನ್ನು ಸಾಕ್ಷರರು ಎನ್ನಲಾಗುತ್ತದೆ. ಆದರೆ ಸಾಕ್ಷರ ಪದ ತಿರುವು ಮುರುವು ಆಗಿ ಕೆಲವರು ರಾಕ್ಷಸರಾಗುತ್ತಿರುವುದು ವಿಷಾದನೀಯ. ಅಕ್ಷರದ ಜ್ಞಾನದಿಂದ ಪದವೀಧರರಾಗಬಹುದು. ಆದರೆ ಅನುಭವ ಮತ್ತು ವಿವೇಕದಿಂದ ಸತ್ಪ್ರಜೆಯಾಗಬೇಕು. ಭಾರತದಲ್ಲಿ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನವನ್ನು ಶಿಕ್ಷಕರ ದಿನಾಚರಣೆಯಾಗಿ ಆಚರಿಸುವುದು ರೂಢಿಯಲ್ಲಿದೆ. ಗುರು ಪೂರ್ಣಿಮೆ ಸಾಂಪ್ರದಾಯಿಕ  ಆಚರಣೆಯಾಗಿದೆ.

ಜಪಾನ್ ದೇಶದಲ್ಲಿ ನಿರ್ದಿಷ್ಟವಾಗಿ ಶಿಕ್ಷಕರ ದಿನ ಎಂದು ಆಚರಿಸಲಾಗುವುದಿಲ್ಲ. ಆದರೆ ಜಪಾನಿಯರು ದಿನನಿತ್ಯದ ಬದುಕಿನಲ್ಲಿ ಗುರು ಹಿರಿಯರನ್ನು ಗೌರವಿಸುವುದನ್ನು  ಬೆಳೆಸಿಕೊಂಡಿರುತ್ತಾರೆ. ಅಂತಹ ಸಂಸ್ಕಾರವನ್ನು ನಮ್ಮ ದೇಶದ ಮಕ್ಕಳೂ ರೂಢಿಸಿಕೊಳ್ಳುವಂತಾಗಬೇಕು. ಜನ್ಮ ದಿನ ಆಚರಿಸಿಕೊಳ್ಳುವುದು ವಿದೇಶಿ ಸಂಸ್ಕೃತಿ. ಹುಟ್ಟಿದ ದಿನ ಮಗು ಅಳುತ್ತಿರುತ್ತದೆ. ಆ ದಿನ ಮತ್ತೆ ಮತ್ತೆ ಬರಲಿ ಎಂದು ಆಶಿಸುವುದು ಸೂಕ್ತವಲ್ಲ. ಮಗು ಜನಿಸಿದಾಗ ತಂದೆ-ತಾಯಿಗಳಿಗೆ ಸಂಭ್ರಮ ದಿನವಾಗಿರುತ್ತದೆ. ಆದುದರಿಂದ

ಜನ್ಮ ದಿನದಂದು ತಂದೆ-ತಾಯಿಗಳನ್ನು ಗೌರವಿಸುವ ದಿನವಾಗಬೇಕು. ಸಿರಿಗೆರೆಯಲ್ಲಿ ಅಭ್ಯಾಸ ಮಾಡಿದ ಮಕ್ಕಳು ಉತ್ತಮ ಸಂಸ್ಕಾರವಂತರಾಗಬೇಕು ಎಂದು ಆಶಿಸಿದರು.

ಗುರು ಪೂರ್ಣಿಮೆಯ ಅಂಗವಾಗಿ ಶ್ರೀಗಳವರಿಂದ ನರ್ಸರಿ ಮಕ್ಕಳಿಗೆ ಅಕ್ಷರಾಭ್ಯಾಸವನ್ನು ಪ್ರಾರಂಭಿಸಲಾಯಿತು.

ಸಮಾರಂಭದಲ್ಲಿ ಸಿರಿಗೆರೆಯ ಹಿರಿಯ ವಿದ್ಯಾರ್ಥಿ,  ಮೈಸೂರಿನ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಬಸವಂತ ಗುದಗತ್ತಿಯವರ್ ವಿದ್ಯಾರ್ಥಿ ದಾಸೋಹ ನಿಧಿಗೆ ಒಂದು ಲಕ್ಷ ರೂಪಾಯಿಗಳನ್ನು ಕಾಣಿಕೆಯಾಗಿ ಸಮರ್ಪಿಸಿದರು.

ವೇದಿಕೆಯಲ್ಲಿ ಕೇಶವಮೂರ್ತಿ, ಪ್ರೊ.ಡಿ ರಮೇಶ್, ಅಣ್ಣನ ಬಳಗದ ಅಧ್ಯಕ್ಷ ಮರುಳಸಿದ್ಧಯ್ಯ,  ಪ್ರಾಚಾರ್ಯರಾದ ಶಿವಕುಮಾರ ಸುರಕೋಡ, ಎಂ ಎನ್ ಶಾಂತ, ಸೋಮಶೇಖರ್, ಜೆ.ಡಿ ಬಸವರಾಜ್, ಪ್ರವೀಣ ಕುಮಾರ್,  ಮುಂತಾದವರು ಪಾಲ್ಗೊಂಡಿದ್ದರು.

error: Content is protected !!