ದಾವಣಗೆರೆ, ಜೂ. 22- ಕೆಇಆರ್‌ಸಿಯು ವಿದ್ಯುತ್ ಹೆಚ್ಚಿಸಿರುವುದರಿಂದ ಜನ ಸಾಮಾನ್ಯರ, ವರ್ತಕರ, ಕೈಗಾರಿಕೆಗಳ ಮೇಲೆ ಪರಿಣಾಮ ಬೀರಲಿದ್ದು, ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ, ವಿದ್ಯುತ್ ಶುಲ್ಕವನ್ನು ಇಳಿಕೆ ಮಾಡುವಂತೆ ಒತ್ತಾಯಿಸಿ, ದಾವಣಗೆರೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಅಪರ ಜಿಲ್ಲಾಧಿಕಾರಿ ಲೋಕೇಶ್ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಅವೈಜ್ಞಾನಿಕ ವಿದ್ಯುತ್ ದರ ಹೆಚ್ಚಳದಿಂದ ಕೈಗಾರಿಕೆಗಳು ನಷ್ಟ ಅನುಭವಿಸುತ್ತಿವೆ. ಕೂಡಲೇ ವಿದ್ಯುತ್ ದರ ಇಳಿಕೆ ಮಾಡಬೇಕೆಂದು ಒತ್ತಾಯಿಸಿದರು.
ದುಪ್ಪಟ್ಟು ಪ್ರಮಾಣದಲ್ಲಿ ವಿದ್ಯುತ್ ದರ ಹೆಚ್ಚಳ ವಾಗಿದ್ದು, ಇದರಿಂದ ಕೈಗಾರಿಕಗಳು, ವರ್ತಕರಿಗೆ ಮಾತ್ರವಲ್ಲದೇ ಜನ ಸಾಮಾನ್ಯರ ಮೇಲೂ ಅಧಿಕ ಭಾರ ಹೇರಿದಂತಾಗಿದೆ. ಸರ್ಕಾರ ಪರಾಮರ್ಶಿಸಿ ಕೂಡಲೇ ವಿದ್ಯುತ್ ಶುಲ್ಕ ಇಳಿಕೆ ಮಾಡಬೇಕೆಂದು ಆಗ್ರಹಿಸಿದರು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ದಾವಣಗೆರೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಕಾರ್ಯದರ್ಶಿ ಅಜ್ಜಂಪುರ ಶೆಟ್ಟು ಶಂಭುಲಿಂಗಪ್ಪ, ಜಂಟಿ ಕಾರ್ಯದರ್ಶಿ ಕಿರುವಾಡಿ ಸೋಮಶೇಖರ್, ಖಜಾಂಚಿ ಟಿ.ಎಸ್. ಜಯರುದ್ರೇಶ್ ಹಾಗು ಇತರೆ ಪದಾಧಿಕಾರಿಗಳಾದ ಎಸ್.ಟಿ. ಕುಸುಮಶ್ರೇಷ್ಠಿ, ಕೆ. ಜಾವಿದ್, ಕಾಸಲ್ ಬದರಿನಾಥ್, ಅಂದನೂರು ಮುಪ್ಪಣ್ಣ, ಜಂಬಗಿ ರಾಧೇಶ್, ಬುಳ್ಳಾಪುರದ ಮಲ್ಲಿಕಾರ್ಜುನ ಸ್ವಾಮಿ, ಕೆ.ಜಿ.ಕೆ. ಬಸವರಾಜ್, ಐನಳ್ಳಿ ನಾಗರಾಜ್, ಬಿ.ಹೆಚ್. ಪ್ರಕಾಶ್, ಎಂ.ವಿ. ಶಶಿಧರ್ ಮತ್ತಿತರರು ಉಪಸ್ಥಿತರಿದ್ದರು.