ಕಾಂಗ್ರೆಸ್ ದ್ರೋಹದ ವಿರುದ್ಧ ಜು.5ರಿಂದ ಗಾಂಧಿ ಪ್ರತಿಮೆ ಎದುರು ಸತ್ಯಾಗ್ರಹ : ಯಡಿಯೂರಪ್ಪ
ದಾವಣಗೆರೆ, ಜೂ. 23 – ಚುನಾವಣೆ ವೇಳೆ ಭರವಸೆ ನೀಡಿದಂತೆ ಐದು ಗ್ಯಾರಂಟಿಗಳನ್ನು ಜಾರಿಗೆ ತರಲು ಸಾಧ್ಯವಾಗದೇ ಇದ್ದರೆ, ಕಾಂಗ್ರೆಸ್ ಸರ್ಕಾರ ಅಧಿಕಾರ ಬಿಟ್ಟು ತೊಲಗಲಿ ಎಂದು ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಗುಡುಗಿದ್ದಾರೆ.
ನಗರದ ಅಭಿನವ ರೇಣುಕ ಮಂದಿರದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ಯಾರಂಟಿಗಳ ಭರವಸೆ ನೀಡಿ ಅಧಿಕಾರಕ್ಕೆ ಬಂದ ನಂತರ ಅವುಗಳನ್ನು ಜಾರಿಗೆ ತರದೇ ಇರುವುದನ್ನು ಜನ ಒಪ್ಪುವುದಿಲ್ಲ ಎಂದರು.
ಬರುವ ಜುಲೈ 4ರಿಂದ ವಿಧಾನ ಮಂಡಲದ ಅಧಿವೇಶನ ಆರಂಭವಾಗಲಿದೆ. ಜುಲೈ 5ರಿಂದ ಗ್ಯಾರಂಟಿಗಳ ಈಡೇರಿಕೆಗೆ ಒತ್ತಾಯಿಸಿ, ಬೆಂಗಳೂರಿನಲ್ಲಿ ಗಾಂಧಿ ಪ್ರತಿಮೆ ಎದುರು ನಾನು ಸತ್ಯಾಗ್ರಹಕ್ಕೆ ಕೂರುತ್ತೇನೆ. ಶಾಸಕರು ಸದನದ ಒಳಗೆ ಹೋರಾಟ ನಡೆಸಲಿದ್ದಾರೆ ಎಂದು ಯಡಿಯೂರಪ್ಪ ತಿಳಿಸಿದರು.
ಸದನದ ಒಳಗೆ ಹಾಗೂ ಹೊರಗೆ ಬಿಜೆಪಿ ತೀವ್ರ ಹೋರಾಟ ನಡೆಸಲಿದೆ. ಸರ್ಕಾರದ ಕಿವಿ – ಮೂಗು ಹಿಡಿದು ಗ್ಯಾರಂಟಿಗಳನ್ನು ಜಾರಿಗೆ ತರುವಂತೆ ಒತ್ತಾಯಿಸಲಿದ್ದೇವೆ ಎಂದು ಹೇಳಿದರು.
ಜನರಿಗೆ ಐದು ಗ್ಯಾರಂಟಿಗಳ ಭರವಸೆ ನೀಡಿ, ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್, ಈಗ ದ್ರೋಹ ಮಾಡಿದರೆ ಒಪ್ಪಲಾಗದು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅನ್ನಭಾಗ್ಯದ ಗ್ಯಾರಂಟಿಯಂತೆ ಕೇಂದ್ರದ ಐದು ಕೆಜಿ ಅಕ್ಕಿ ಹೊರತು ಪಡಿಸಿ ಹತ್ತು ಕೆಜಿ ಅಕ್ಕಿ ನೀಡಬೇಕು. ಪ್ರತಿ ವ್ಯಕ್ತಿಗೆ ತಲಾ 15 ಕೆಜಿ ಅಕ್ಕಿ ಕೊಡಬೇಕು ಎಂದು ಯಡಿಯೂರಪ್ಪ ಆಗ್ರಹಿಸಿದರು.
ಕೇಂದ್ರದ ಮೋದಿ ಸರ್ಕಾರ 5 ಕೆಜಿ ಅಕ್ಕಿ ಕೊಡುತ್ತಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ಭರವಸೆಯಂತೆ 10 ಕೆಜಿ ಅಕ್ಕಿ ಸೇರಿ ಒಟ್ಟು 15 ಕೆಜಿ ಅಕ್ಕಿ ಕೊಡಬೇಕು.
– ಬಿ.ಎಸ್. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
ಸರ್ವರ್ ಹ್ಯಾಕ್ ಆಗಿದೆ ಎಂದು ಹೇಳುವ ಸಚಿವರು, ಹುಚ್ಚಾಸ್ಪತ್ರೆಯಿಂದ ತಪ್ಪಿಸಿಕೊಂಡ ರೋಗಿಗಳ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಕೈಲಾಗದವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ.
– ಗೋವಿಂದ ಕಾರಜೋಳ, ಮಾಜಿ ಸಚಿವ
ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿಗಳ ಜೊತೆ, ಕೋಲಾರ ಮಹಿಳೆಯರ ಬೇಡಿಕೆಯಂತೆ ಸ್ತ್ರೀಶಕ್ತಿ ಸಂಘಗಳ ಸಾಲವನ್ನೂ ಮನ್ನಾ ಮಾಡಬೇಕು.
– ಜಿ.ಎಂ. ಸಿದ್ದೇಶ್ವರ, ಸಂಸದ
ಇನ್ನು ಆರು ತಿಂಗಳ ಕಾಲ ಹೆಚ್ಚಿನ ಅನುದಾನ ಕೇಳದಂತೆ ಕಾಂಗ್ರೆಸ್ ಶಾಸಕರಿಗೇ ತಿಳಿಸಲಾಗಿದೆ. ಆರು ತಿಂಗಳ ನಂತರ ಅನುದಾನ ಬರದೇ ಇದ್ದರೆ, ಬಿಜೆಪಿಯಿಂದಲೇ ಅಭಿವೃದ್ಧಿ ಸಾಧ್ಯ ಎಂದು ಆ ಶಾಸಕರೇ ಹೇಳಲಿದ್ದಾರೆ.
– ಬಿ.ಪಿ. ಹರೀಶ್, ಶಾಸಕ
ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೆರೆ ತುಂಬಿಸಿದೆವು, ಭದ್ರಾ ಮೇಲ್ದಂಡೆ ಜಾರಿಗೆ ತಂದೆವು. ಆದರೂ, ಕೆಲಸ ಮಾಡಿದವರನ್ನು ನಮ್ಮವರೇ ಸೋಲಿಸಿದ್ದಾರೆ.
– ಎಸ್.ವಿ. ರಾಮಚಂದ್ರ, ಮಾಜಿ ಶಾಸಕ
ಪುರುಷರಿಗೆ ಕಿಕ್, ಮಹಿಳೆಯರಿಗೆ ಷಾಕ್
ಅತ್ತೆ – ಸೊಸೆ ನಡುವೆ ಜಗಳ: ರೇಣುಕಾಚಾರ್ಯ
ಮದ್ಯದ ಮೇಲೆ ತೆರಿಗೆ ಹೆಚ್ಚಿಸಿರುವುದರಿಂದ ಕ್ವಾರ್ಟರ್ ಬೆಲೆ 40 ರೂ.ಗಳಿಂದ 70 ರೂ.ಗಳಿಗೆ ಹೆಚ್ಚಾಗಿದೆ ಎಂದು ಪುರುಷರು ಬೇಸರಗೊಂಡಿದ್ದಾರೆ. ಅವರ ಕಷ್ಟವನ್ನೂ ನಾವು ಕೇಳಬೇಕಿದೆ ಎಂದು ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ಕರೆಂಟ್ ಬಿಲ್ ಹಲವು ಪಟ್ಟು ಹೆಚ್ಚಾಗಿ ಬಂದಿರುವುದರಿಂದ ಮಹಿಳೆಯರು ಶಪಿಸುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ನದ್ದು ಒಂದು ರೀತಿ ಕಿಕ್ ಹಾಗೂ ಷಾಕ್ ಸರ್ಕಾರ ಎಂದವರು ಲೇವಡಿ ಮಾಡಿದರು.
ಗೃಹಲಕ್ಷ್ಮಿ ಯೋಜನೆಯಡಿ ಅತ್ತೆ ಇಲ್ಲವೇ ಸೊಸೆಯರಲ್ಲಿ ಒಬ್ಬರಿಗೆ ಮಾತ್ರ ಹಣ ನೀಡುವುದಾಗಿ ಹೇಳುವ ಮೂಲಕ, ಅವರ ನಡುವೆ ಜಗಳ ತರಲಾಗುತ್ತಿದೆ ಎಂದೂ ಆಕ್ಷೇಪಿಸಿದರು.
ಸಿದ್ದೇಶ್ವರರಿಗೆ ಮತ್ತೆ ಟಿಕೆಟ್ ಸುಳಿವು ನೀಡಿದ ಬಿಎಸ್ವೈ
ಸಂಸದ ಜಿ.ಎಂ. ಸಿದ್ದೇಶ್ವರ ಅವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸಬಹುದು ಎಂದು ಯಡಿಯೂರಪ್ಪ ಸುಳಿವು ನೀಡಿದ್ದಾರೆ. ನಿಮ್ಮೆಲ್ಲರ ಆಶೀರ್ವಾದ ದಿಂದ ಸಿದ್ದೇಶ್ವರ ಮತ್ತೆ ಸಂಸದರಾಗಲಿದ್ದಾರೆ ಎಂದು ತಮ್ಮ ಭಾಷಣದ ಆರಂಭದಲ್ಲಿ ಹೇಳಿ ದರು. ಆ ಮೂಲಕ ಮತ್ತೆ ಸಿದ್ದೇಶ್ವರ ಸ್ಪರ್ಧಿಸುವ ಸುಳಿವು ನೀಡಿದರು. ಹೈಕಮಾಂಡ್ ಟಿಕೆಟ್ ನೀಡಿದರೆ ಮತ್ತೆ ಸ್ಪರ್ಧಿಸಲು ಸಿದ್ಧವಿರುವುದಾಗಿ ಸಿದ್ದೇಶ್ವರ ಅವರು ಇತ್ತೀಚೆಗೆ ಹೇಳಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ, ಪ್ರಧಾನಿ ಮೋದಿ ಅವರನ್ನು ಕೇಳಿ ಕಾಂಗ್ರೆಸ್ ಪಕ್ಷ ಅನ್ನಭಾಗ್ಯದ ಗ್ಯಾರಂಟಿ ಕೊಟ್ಟಿತ್ತೇ? ಗ್ಯಾರಂಟಿ ಈಡೇರಿಸುವ ಯೋಗ್ಯತೆ ನಮಗೆ ಇಲ್ಲ ಎಂದು ಅವರು ನೇರವಾಗಿ ಹೇಳಲಿ ಎಂದು ಕಿಡಿ ಕಾರಿದರು.
ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಚುನಾವಣಾ ವೇಳೆ ಗ್ಯಾರಂಟಿಗಳನ್ನು ಆಮಿಷದ ರೀತಿ ತೋರಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಗ್ಯಾರಂಟಿ ಈಡೇರಿಸದೇ ಹೋದರೆ, ಅವರೇ ಅಧಿಕಾರ ಬಿಟ್ಟು ಹೋಗುವ ರೀತಿ ಹೋರಾಟ ಮಾಡಬೇಕು ಎಂದು ಹೇಳಿದರು. ಮಾಜಿ ಸಚಿವ ಗೋವಿಂದ ಕಾರಜೋಳ ಮಾತನಾಡಿ, ಎಫ್.ಸಿ.ಐ. ಅಕ್ಕಿ ದಾಸ್ತಾನು ನೋಡಿಕೊಳ್ಳುವ ಸಂಸ್ಥೆ ಮಾತ್ರ. ಕೇಂದ್ರ ಸರ್ಕಾರದಿಂದ ಅಕ್ಕಿ ಖರೀದಿಸಬೇಕಾದರೆ, ಸಂಬಂಧಿಸಿದ ಸಚಿವರ ಜೊತೆ ಮಾತನಾಡಬೇಕು. ವಾಚ್‌ಮನ್ ಜೊತೆ ಮಾತನಾಡಿದ್ದೇವೆ, ಅಕ್ಕಿ ಕೊಡಿ ಎಂಬ ರೀತಿಯಲ್ಲಿ ಕಾಂಗ್ರೆಸ್ ವರ್ತಿಸುತ್ತಿದೆ ಎಂದು ಹೇಳಿದರು.
ಪರಿಷತ್ ಸದಸ್ಯ ಎನ್. ರವಿಕುಮಾರ್ ಮಾತನಾಡಿ, ಬಿಜೆಪಿ ಮುಖಂಡರು ಏಳು ತಂಡಗಳಲ್ಲಿ 30 ಜಿಲ್ಲೆಗಳ ಪ್ರವಾಸ ಕೈಗೊಂಡಿದ್ದೇವೆ. ಗ್ಯಾರಂಟಿಗಳನ್ನು ಈಡೇರಿಸದ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಬಿ.ಪಿ. ಹರೀಶ್, ಪರಿಷತ್ ಸದಸ್ಯ ನವೀನ್, ಮಾಜಿ ಸಚಿವ ಬಿ.ಸಿ. ನಾಗೇಶ್, ಮಾಜಿ ಶಾಸಕರಾದ ಎಸ್.ವಿ. ರಾಮಚಂದ್ರ, ಪ್ರೊ. ಲಿಂಗಣ್ಣ, ಎಂ.ಪಿ. ರೇಣುಕಾಚಾರ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್, ಮುಖಂಡರಾದ ಅನಿಲ್ ಕುಮಾರ್, ಶಿವಕುಮಾರ್, ಸುಧಾ ಜಯರುದ್ರೇಶ್, ಯಶವಂತರಾವ್ ಜಾಧವ್, ಲೋಕಿಕೆರೆ ನಾಗರಾಜ್, ಬಿ.ಜಿ. ಅಜಯ್ ಕುಮಾರ್, ಶಾಂತರಾಜ್ ಪಾಟೀಲ್, ಕಲ್ಲೇಶ್, ಬಿ.ಎಸ್. ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.