ಮೈಕ್ರೋ ಪ್ಲಾಸ್ಟಿಕ್‌ನಿಂದ ದೂರವಿರಿ: ಡಾ.ಶಾಂತಾ ಭಟ್

ಮೈಕ್ರೋ ಪ್ಲಾಸ್ಟಿಕ್‌ನಿಂದ ದೂರವಿರಿ: ಡಾ.ಶಾಂತಾ ಭಟ್

ದಾವಣಗೆರೆ, ಜು.7- ನಮಗೇ ಗೊತ್ತಿಲ್ಲದ ರೀತಿಯಲ್ಲಿ ನಾವೆಲ್ಲರೂ ಮೈಕ್ರೋ ಪ್ಲಾಸ್ಟಿಕ್ ಅನ್ನು ವಾತಾವರಣದೊಳಗೆ ಅಪಾರ ಪ್ರಮಾಣದಲ್ಲಿ ಸೇರಿಸುತ್ತಿದ್ದೇವೆ. ಇದರಿಂದ ಮನುಷ್ಯ ಹಾಗೂ ಪ್ರಾಣಿಗಳ ಆರೋಗ್ಯದ ಮೇಲೆ ಸಾಕಷ್ಟು ದುಷ್ಪರಿಣಾಮ ಉಂಟಾಗುತ್ತಿದೆ ಎಂದು ಪರಿಸರ ಪ್ರೇಮಿ ಡಾ. ಶಾಂತಾ ಭಟ್ ಹೇಳಿದರು.

ನಗರದ ಕುಂದುವಾಡ ಕೆರೆಯಲ್ಲಿ ಬುಧವಾರ ಕುಂದುವಾಡ ಕೆರೆ ವಾಯು ವಿಹಾರಿಗಳ ಬಳಗ ಮತ್ತು ಸಪ್ತಗಿರಿ ಪದವಿಪೂರ್ವ ಕಾಲೇಜು ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ವನ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, 0.5 ಎಂಎಂ ಗಿಂತಲೂ ಕಡಿಮೆ ಉದ್ದ, ದಪ್ಪ, ಅಗಲವಿರುವ ಕಣ್ಣಿಗೆ ಕಾಣದಂತಹ ಪ್ಲಾಸ್ಟಿಕ್‌ನ ಕಣಗಳು ಯಾವುದೇ ರೂಪದಲ್ಲಾದರೂ ದೇಹ ಸೇರುವ ಅಪಾಯವಿದೆ ಎಂದರು.

ಚಿಕ್ಕದಾದ ಈ ಮೈಕ್ರೋ ಪ್ಲಾಸ್ಟಿಕ್‌ ಕಣಗಳು ಮನುಷ್ಯ ಮಾತ್ರವಲ್ಲದೆ ಯಾವುದೇ ಪ್ರಾಣಿ, ಸಸ್ಯದ ದೇಹ ಸೇರುವ ಸಾಮರ್ಥ್ಯ ಹೊಂದಿರುತ್ತವೆ. ಅದು ಸಸ್ಯಗಳಲ್ಲಿ ಸುಲಭವಾಗಿ ಬೆರೆತು, ನಾವು ಸೇವಿಸುವ ಹಣ್ಣು, ತರಕಾರಿಗಳಲ್ಲಿ ಸೇರುತ್ತದೆ. ನೀರಿನ ಮೂಲಕ ಜಲಚರಗಳ ದೇಹ ಸೇರುತ್ತದೆ. ಬಳಿಕ ಹಣ್ಣು ತರಕಾರಿ, ಮೀನುಗಳನ್ನು ಆಹಾರ ರೂಪದಲ್ಲಿ ಸೇವಿಸುವ ವ್ಯಕ್ತಿಯ ದೇಹವನ್ನು ಮೈಕ್ರೋ ಪ್ಲಾಸ್ಟಿಕ್ ಸೇರುತ್ತದೆ. ಮನುಷ್ಯನ ದೇಹದ ಟಿಷ್ಯುಗಳನ್ನು ಪರೀಕ್ಷೆ ಮಾಡಿದರೆ ಒಂದು ಜೀವ ಕಣದಲ್ಲಿ 16,000 ಪಾರ್ಟಿಕಲ್ ಮೈಕ್ರೋ ಪ್ಲಾಸ್ಟಿಕ್‌ಗಳು ಸಿಗುತ್ತವೆ. ಈ ಜೀವಕೋಶಗಳು ಸೇರಿ ನಮ್ಮ ಚಯಾಪಚಯ (ಮೆಟಬಾಲಿಸಂ), ಅನುವಂಶೀಯ ಕ್ರಮಾವಳಿಯನ್ನೇ ಬದಲಿಸುವ ಹಾಗೂ ಹಾರ್ಮೋನ್ ವ್ಯವಸ್ಥೆಯನ್ನು ಪಲ್ಲಟಗೊಳಿಸುವ ಸಾಮರ್ಥ್ಯ ಈ ಮೈಕ್ರೋ ಪ್ಲಾಸ್ಟಿಕ್ ಕಣಗಳಿಗಿದೆ ಎಂದು ಎಚ್ಚರಿಸಿದರು.

ಸಿಂಥೆಟಿಕ್ ಬಿಡಿ, ಹತ್ತಿ ಹಿಡಿ : 

ನಾವು ಇಂದು ಎದುರಿಸುತ್ತಿರುವ ಹಲವಾರು ಅನಾರೋಗ್ಯ ತೊಂದರೆಗಳಿಗೆ ಮೈಕ್ರೋ ಪ್ಲಾಸ್ಟಿಕ್ ಮೂಲ ಕಾರಣವಾಗಿದೆ. ಬೊಜ್ಜು, ಥೈರಾಯ್ಡ್, ಮಧುಮೇಹ, ಅಧಿಕ ರಕ್ತದೊತ್ತಡ, ಅಲರ್ಜಿ ಮಾತ್ರವಲ್ಲದೆ ಎಲ್ಲ ರೀತಿಯ ಮಾರಣಾತಿಕ ಕಾಯಿಲೆಗಳಿಗೂ ಈ ಮೈಕ್ರೋ ಪ್ಲಾಸ್ಟಿಕ್ ಕಾರಣವಾಗಿದೆ. ಇದರಿಂದ ರಕ್ಷಣ ಪಡೆಯಲು ಒಂದು ಸುಲಭ ಮಾರ್ಗವಿದೆ. ಅದೇನೆಂದರೆ, ಸಿಂಥೆಟಿಕ್ ಉಡುಪುಗಳನ್ನು ತ್ಯಜಿಸಿ, ಮಣ್ಣಿನಲ್ಲಿ ಕೊಳೆಯುವಂತಹ ಹತ್ತಿ, ರೇಷ್ಮೆ ಮತ್ತು ಉಣ್ಣೆ ಉಡುಪುಗಳನ್ನು ಧರಿಸಬೇಕು ಎಂದು ಡಾ. ಶಾಂತಾ ಭಟ್ ಸಲಹೆ ನೀಡಿದರು.

ನಗರದ ಖ್ಯಾತ ವೈದ್ಯ ಡಾ. ಸುರೇಂದ್ರ ಮಾತನಾಡಿ, ನಾವೆಲ್ಲರೂ ಮಾತನಾಡುವುದು ಹೆಚ್ಚು. ಆದರೆ ಆಡಿದ್ದನ್ನು ಮಾಡಿ ತೋರಿಸುವುದು ತೀರಾ ಕಡಿಮೆ. ಹೀಗಾಗಿ ಪರಿಸರ ರಕ್ಷಣೆ ಕುರಿತು ಕೇವಲ ಮಾತನಾಡದೆ, ರಕ್ಷಣೆ ಮಾಡಿ ತೋರಿಸಬೇಕೆಂದರು. ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರಿಗೆ ಪರಿಸರದ ಬಗ್ಗೆ ಕಾಳಜಿ ಹೆಚ್ಚಿದೆ. ಇದು ಆಶಾದಾಯಕ ಬೆಳವಣಿಗೆ ಎಂದರು.

ಅರಣ್ಯ ಇಲಾಖೆ ಅಧಿಕಾರಿ ಎಸ್.ಕೆ. ದೇವರಾಜ್, ದೂಡ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಪಾಲಿಕೆ ಸದಸ್ಯೆ ಶಿಲ್ಪಾ ಜಯಪ್ರಕಾಶ್, ಸಪ್ತಗಿರಿ ಶಿಕ್ಷಣ ಸಂಸ್ಥೆಯ ರಾಮಮೂರ್ತಿ, ವಾಯುವಿಹಾರಿಗಳ ಬಳಗದ ಈಶ್ವರ್ ಸಿಂಗ್, ಬಿ.ಎಚ್. ಶಿವಕುಮಾರ್ ಮತ್ತು ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 

error: Content is protected !!