ಪತ್ರಕರ್ತನಿಗೆ ವಿಶ್ವಾಸಾರ್ಹತೆ ಮುಖ್ಯ

ಪತ್ರಕರ್ತನಿಗೆ ವಿಶ್ವಾಸಾರ್ಹತೆ ಮುಖ್ಯ

ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅಭಿಮತ

ದಾವಣಗೆರೆ, ಜೂ.4- ನಿಜವಾದ ಪತ್ರಕರ್ತನಿಗೆ ವಿಶ್ವಾಸಾರ್ಹತೆ ಮುಖ್ಯ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹೇಳಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕವು ನಗರದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ  ಡಿ.ದೇವರಾಜ ಅರಸು ಬಡಾವಣೆಯಲ್ಲಿನ ಶಿವಧ್ಯಾನ ಮಂದಿರದಲ್ಲಿ ಭಾನುವಾರ ಪತ್ರಿಕಾ ದಿನಾಚರಣೆ, 2022ನೇ ಸಾಲಿನ ಮಾಧ್ಯಮ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರದಾನ, ವಿವಿಧ ಪ್ರಶಸ್ತಿಗಳ ಪುರಸ್ಕೃತ ಪತ್ರಕರ್ತರಿಗೆ ಗೌರವಾರ್ಪಣೆ, ಮಹಿಳಾ ಪತ್ರಕರ್ತರಿಗೆ ಸನ್ಮಾನ, ಅನಾರೋಗ್ಯದಲ್ಲಿನ ಪತ್ರಕರ್ತರಿಗೆ ಧನಸಹಾಯ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಪತ್ರಕರ್ತರ ವೃತ್ತಿ ಫ್ಯಾಷನ್ ಆಗಿದೆ. ಈ ಹಿನ್ನೆಲೆಯಲ್ಲಿ ರಾಶಿ ರಾಶಿ ಪತ್ರಕರ್ತರು ಹುಟ್ಟಿಕೊಂಡಿದ್ದಾರೆ. ರಾತ್ರಿ ಯೂ ಟ್ಯೂಬ್ ಚಾನಲ್ ಆರಂಭಿಸಿ, ಮರುದಿನವೇ ನಾನೂ ಪತ್ರಕರ್ತ ಎಂದು ಬರುವವರು ಹೆಚ್ಚಾಗಿದ್ದಾರೆ. ಅವರಿಗೆ ಯಾವ ಜ್ಞಾನವೂ ಇರುವುದಿಲ್ಲ. ಜೊಳ್ಳು ಪತ್ರಕರ್ತರ ಹಾವಳಿ ಹೆಚ್ಚಾಗಿದೆ. ಇದಕ್ಕೆ ಕಡಿವಾಣ ಹಾಕದಿದ್ದರೆ ನಿಜವಾದ ಪತ್ರಕರ್ತರು ಮನೆ ಸೇರುವ ಆತಂಕದ ಸ್ಥಿತಿ ನಿರ್ಮಾಣವಾಗಿದೆ ಎಂದರು.

ಪತ್ರಕರ್ತ ತನ್ನ ಬರವಣಿಗೆ ಮೂಲಕ, ಪತ್ರಿಕೆಯ ಮೂಲಕ,  ಜನರೊಂದಿಗಿನ ಒಡನಾಟದ ಮೂಲಕ ವಿಶ್ವಾಸಾರ್ಹತೆ ಸಂಪಾದಿಸಿಕೊಳ್ಳಬೇಕು. ಪತ್ರಕರ್ತರು ಎಲ್ಲರೊಂದಿಗೂ ಉತ್ತಮ ಸಂಬಂಧ ಹೊಂದಿರಬೇಕು. ಆದರೆ ಅದು ಸುದ್ದಿಯ ಸಂಬಂಧ ವಾಗಿರಬೇಕು. ಸುದ್ದಿ ಜೊತೆ ಅಂತರ ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯ ನಿರತ ಪತ್ರಕರ್ತರ ಸಂಘ ಇಂದು  8 ಸಾವಿರಕ್ಕೂ ಹೆಚ್ಚು ಜನ ಸದಸ್ಯರನ್ನು ಹೊಂದಿದ ಬೃಹತ್ ಸಂಘಟನೆಯಾಗಿದೆ. ಇದು ಕಾರ್ಯನಿರತ ಪತ್ರಕರ್ತರಿಗೆ ಮಾತ್ರ ಸಂಘಟನೆ ವೇದಿಕೆಯೇ ಹೊರತು, ಕಾರ್ಯ ಮರೆತವರಲ್ಲ. ಕಾರ್ಯಮರೆತವರು ದಯ ಮಾಡಿ ಸಂಘಟನೆಯಿಂದ ಆಚೆ ಹೋಗಬೇಕು ಎಂದು ಹೇಳಿದರು.

ಸಾಮಾಜಿಕ ಜಾಲ ತಾಣಗಳಲ್ಲಿ ಬೇಕಾದಷ್ಟು ಸುದ್ದಿಗಳು ಸಿಗುತ್ತವೆ. ಸುಳ್ಳು ಸುದ್ದಿಗಳ ನಡುವೆ ನಿಜವಾದ ಸುದ್ದಿಗಳನ್ನು ಹೆಕ್ಕಿ ತೆಗೆದು ಪ್ರಕಟಿಸುವ ಸವಾಲು ಇಂದಿನ ಪತ್ರಕರ್ತರಾಗಿದ್ದು, ಅಂತಹ ಪತ್ರಕರ್ತರಿಗೆ ಇಂದಿಗೂ ಸಮಾಜದಲ್ಲಿ ಗೌರವವಿದೆ ಎಂದರು.

ಬಾಪೂಜಿ ವಿದ್ಯಾಸಂಸ್ಥೆ ಸದಸ್ಯರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಮಹಿಳಾ ಪತ್ರಕರ್ತರಿಗೆ `ಮಾಧ್ಯಮ ರತ್ನ’ ಗೌರವ ಪ್ರದಾನ ಮಾಡಿ ಮಾತನಾಡುತ್ತಾ, ಮಾಧ್ಯಮ ಇಂದು ಸಮಾಜದ ಕನ್ನಡಿಯಾಗಿದೆ. ಸಮಾಜಕ್ಕೆ ಮಾಧ್ಯಮವೂ ನಾಲ್ಕನೇ ಆಧಾರ ಸ್ಥಂಭವಿದ್ದಂತೆ ಎಂದರು.

ಮಾಧ್ಯಮಗಳು ಶೀಘ್ರ ಸುದ್ದಿಗಳನ್ನು ನೀಡುವ ಆತುರದಲ್ಲಿ ಫೇಕ್ ಸುದ್ದಿಗಳ ಬಗ್ಗೆ ನಿಗಾವಹಿಸಬೇಕು. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಅನೇಕರು ನಮ್ಮೊಂದಿಗಿದ್ದಾರೆ. ಅವರ ಬಗ್ಗೆಯೂ ಬೆಳಕು ಚೆಲ್ಲಬೇಕು. ಅಭಿವೃದ್ದಿ ಪರ ಚಿಂತನೆ ಬಿತ್ತುವ ಸುದ್ದಿಗಳ ಬಗ್ಗೆ ಹೆಚ್ಚು ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಸಾಮಾಜಿಕ ಜಾಲ ತಾಣಗಳಲ್ಲಿ ಬರುವ ಸುದ್ದಿಗಳು ಎಷ್ಟರ ಮಟ್ಟಿಗೆ ನಿಜಾಂಶದಿಂದ ಕೂಡಿರುತ್ತವೆ ಎಂಬ ಅನುಮಾನವಿರುತ್ತದೆ. ಪತ್ರಿಕೆಗಳು ಇಂದಿಗೂ ವಿಶ್ವಾಸಾರ್ಹತೆ ಉಳಿಸಿಕೊಂಡಿವೆ. ಈ ನಿಟ್ಟಿನಲ್ಲಿ ಮನೆಯಲ್ಲಿ ಮಕ್ಕಳಿಗೆ ಪತ್ರಿಕೆ ಓದುವ ಹವ್ಯಾಸ ಬೆಳೆಸಬೇಕು ಎಂದರು.

ಮಹಿಳಾ ದಿನಾಚರಣೆ ಒಂದು ದಿನ, ಒಂದು ತಿಂಗಳಿಗೆ ಸೀಮಿತವಾಗದೇ, ವರ್ಷ ಪೂರ್ತಿ ಮಹಿಳೆಯರನ್ನು ಗೌರವಿಸುವಂತಾಗಬೇಕು. ಮಹಿಳೆಯರಿಗೆ ಸಮಾನತೆ ಸಿಗಬೇಕು. ಅದು ಮನೆಯಿಂದಲೇ ಆರಂಭವಾಗಬೇಕು ಎಂದು ಕರೆ ನೀಡಿದರು.

ಕೈಗಾರಿಕೋದ್ಯಮಿ, ಹಿರಿಯ ಲೆಕ್ಕ ಪರಿಶೋಧಕ ಡಾ.ಅಥಣಿ ವೀರಣ್ಣ ಮಾತನಾಡುತ್ತಾ, ತಾವು ಪತ್ರಿಕೆ ಹಂಚುತ್ತಿದ್ದ ದಿನಗಳನ್ನು ನೆನಪಿಸಿಕೊಂಡು, ಪತ್ರಿಕಾ ವಿತರಕರಿಗೆ ಸಹಾಯ ಮಾಡುವ ಹಂಬಲ ವ್ಯಕ್ತಪಡಿಸಿದರು.

ಅನಾರೋಗ್ಯದಿಂದಿರುವ ಪತ್ರಕರ್ತರಿಗೆ  ಸಂಘದ ಕ್ಷೇಮ ನಿಧಿಯಿಂದ ಧನ ಸಹಾಯದ ಚೆಕ್ ವಿತರಣೆ ಮಾಡಿದ ಹೋಟೆಲ್ ಉದ್ಯಮಿ ಅಣಬೇರು ರಾಜಣ್ಣ, ತಾವೂ ಸಹ 20 ಸಾವಿರ ರೂ. ಧನ ಸಹಾಯ ಮಾಡುವುದಾಗಿ ಹೇಳಿದರು.

ಪತ್ರಿಕೆ ಓದುವುದರಿಂದ ಜ್ಞಾನ ಹೆಚ್ಚಾಗುತ್ತದೆ. ನಿತ್ಯ ನಡೆಯುವ ವಿದ್ಯಮಾನಗಳ ಬಗ್ಗೆ ಅರಿವಾಗುತ್ತದೆ. ಈ ಹಿನ್ನೆಲೆಯಲ್ಲಿ ಪತ್ರಿಕೆ ಓದುವ ಅಭ್ಯಾಸ ಉತ್ತಮ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಇ.ಎಂ. ಮಂಜುನಾಥ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಸಂಘ ಸಾಕಷ್ಟು ರಚನಾತ್ಮಕ ಕಾರ್ಯಕ್ರಮಗಳನ್ನು ಮಾಡಿದೆ. ಸಂಘಕ್ಕೆ ಇದುವರೆಗೂ ಕಚೇರಿ ಇಲ್ಲ. ದಾವಣಗೆರೆ ಹೊರತುಪಡಿಸಿ ಎಲ್ಲಾ ಜಿಲ್ಲೆಗಳಲ್ಲೂ ಪತ್ರಿಕಾ ಭವನಗಳಿವೆ. ಇಲ್ಲಿರುವ ಆ ಕೊರತೆಯನ್ನು ನೀಗಿಸಬೇಕೆಂಬ ಉದ್ದೇಶದಿಂದ ಜನಪ್ರತಿನಿಧಿಗಳು, ಅಧಿಕಾರಿಗಳನ್ನು ಭೇಟಿ ಮಾಡಿ ಮಾಡಿದ ಮನವಿ ಮೇರೆಗೆ ದೂಡಾದಿಂದ ಬೃಹತ್ ನಿವೇಶನ ಮಂಜೂರಾಗಿದೆ ಎಂದರು.

ಸಾಧಕ ಪತ್ರಕರ್ತರನ್ನು ಗೌರವಿಸಲು ದತ್ತಿ ಪ್ರಶಸ್ತಿ ನೀಡುವ ಉದ್ದೇಶವಿದ್ದು,  ಈಗಾಗಲೇ ದಾನಿಗಳಿಂದ 5.50 ಲಕ್ಷ ರೂಪಾಯಿ ಸಂಗ್ರಹವಾಗಿದೆ. ದತ್ತಿ ಹಣವನ್ನು ಠೇವಣಿ ಇಟ್ಟು ಬಡ್ಡಿ ಹಣದಲ್ಲಿ ಪ್ರಶಸ್ತಿ ನೀಡುವ ಉದ್ದೇಶವಿದ್ದು, ಶೀಘ್ರವೇ ದತ್ತಿ ಪ್ರಶಸ್ತಿ ಕಾರ್ಯಕ್ರಮವನ್ನೂ ಮಾಡಲಾಗುವುದು ಎಂದರು.

ನಾಗರಾಜ್ ಬಡದಾಳ್, ಎ.ಎಲ್. ತಾರಾನಾಥ್, ವಿವೇಕ್ ಎಲ್. ಬದ್ದಿ,  ಬಿ.ಎನ್. ಸಾಯಿಪ್ರಸಾದ್, ಎಂ. ನಾಗರಾಜ್, ಬುಡೇನ್ ಸಾಬ್, ಎ.ಕೆ. ಶಿವಬಸಪ್ಪ ಅವರುಗಳಿಗೆ `ಮಾಧ್ಯಮ ಮಾಣಿಕ್ಯ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

2022-23ನೇ ಸಾಲಿನಲ್ಲಿ ವಿವಿಧ ಪ್ರಶಸ್ತಿಗಳ ಪುರಸ್ಕೃತರಾದ ಜಿ.ಸಿ. ಲೋಕೇಶ್,  ಕೆ. ಚಂದ್ರಣ್ಣ,  ಬಿ.ಎನ್. ಮಲ್ಲೇಶ್,  ಆರ್.ಜಿ. ಹಳ್ಳಿ ನಾಗರಾಜ್,  ಚಂದ್ರಹಾಸ ಹಿರೇಮಳಲಿ, ಎಲ್. ಮಂಜುನಾಥ್, ಎನ್.ಡಿ.ಶಾಂತಕುಮಾರ್,  ಶ್ರೀಮತಿ ಡಿ.ಎನ್. ಶಾಂಭವಿ ನಾಗರಾಜ್ ಅವರುಗಳಿಗೆ  `ಮಾಧ್ಯಮ ಚೂಡಾಮಣಿ’ ಬಿರುದು ನೀಡಿ ಸನ್ಮಾನಿಸಲಾಯಿತು.

ವಿಶ್ವ ಮಹಿಳಾ ದಿನಾಚರಣೆ, ಅಮ್ಮಂದಿರ ದಿನಾಚರಣೆ ಅಂಗವಾಗಿ ಜಿಲ್ಲೆಯ ಮಹಿಳಾ ಪತ್ರಕರ್ತರಿಗೆ `ಮಾಧ್ಯಮ ರತ್ನ’ ಬಿರುದು ಪ್ರದಾನ ಮಾಡಲಾಯಿತು.

ಕೆಯುಡಬ್ಲ್ಯೂಜೆ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ್, ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಕೆ. ಏಕಾಂತಪ್ಪ, ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ನಿರ್ದೇಶಕ ದೇವರಮನೆ ಶಿವಕುಮಾರ್, ಲಯನ್ಸ್ ಕ್ಲಬ್ ಅಧ್ಯಕ್ಷ ಎನ್.ಆರ್. ನಾಗಭೂಷಣರಾವ್, ಲಯನ್ಸ್ ಕ್ಲಬ್ ಉಪಾಧ್ಯಕ್ಷ ಮಹಾಂತೇಶ್ ವಿ. ಒಣರೊಟ್ಟಿ ಅವರುಗಳು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಸಂಘದ ಪ್ರಧಾನ ಕಾರ್ಯದರ್ಶಿ ಎ.ಫಕೃದ್ದೀನ್ ಸ್ವಾಗತಿಸಿದರು. ಖಜಾಂಚಿ ಎನ್.ವಿ. ಬದರಿನಾಥ್ ವಂದಿಸಿದರು. ಶ್ರೀಮತಿ ರುದ್ರಾಕ್ಷಿಬಾಯಿ ಪುಟ್ಟನಾಯ್ಕ ಪ್ರಾರ್ಥಿಸಿದರು. ಸಿವಿಲ್ ಇಂಜಿನಿಯರ್ ಹೆಚ್.ವಿ. ಮಂಜುನಾಥ ಸ್ವಾಮಿ ನಿರೂಪಿಸಿದರು. ಆರಂಭದಲ್ಲಿ ಚಿರಂತನ ಸಾಂಸ್ಕೃತಿಕ ಸಂಸ್ಥೆಯ ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸಿದರು.

error: Content is protected !!