ಜಿ.ಎಂ. ತಾಂತ್ರಿಕ ಮಹಾವಿದ್ಯಾಲಯದ `ಮಲ್ಲಿಕಾ-2023′ ಉತ್ಸವದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ
ದಾವಣಗೆರೆ, ಮೇ 30- ದುಡ್ಡೇ ದೊಡ್ಡಪ್ಪ ಆದರೆ ವಿದ್ಯೆ ಅದರಪ್ಪ. ವಿದ್ಯೆಯಿಂದ ಏನೆಲ್ಲಾ ಸಾಧಿಸಲು ಸಾಧ್ಯವಿದೆ. ಇಂಜಿನಿಯರ್ಗಳು ಈ ದೇಶದ ಆಸ್ತಿ. ಕಲಿತ ವಿದ್ಯೆ, ಪಡೆದ ಉದ್ಯೋಗದ ಮೂಲಕ ಸಮಾಜಕ್ಕೆ ಕೊಡುಗೆ ನೀಡುವ ಅಗತ್ಯವಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.
ನಗರದ ಜಿ.ಎಂ. ತಾಂತ್ರಿಕ ಮಹಾವಿದ್ಯಾಲಯದ ಜಿ. ಮಲ್ಲಿಕಾರ್ಜುನಪ್ಪ ತೆರೆದ ಸಭಾಂಗಣದಲ್ಲಿ ಇಂದು ಏರ್ಪಾಡಾಗಿದ್ದ `ಮಲ್ಲಿಕಾ-2023′ ಉತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಹಿಂದೆ ಕೇವಲ ಉಳ್ಳವರ ಮಕ್ಕಳಷ್ಟೇ ಇಂಜಿನಿಯರಿಂಗ್, ವೈದ್ಯಕೀಯದಂತಹ ತಾಂತ್ರಿಕ ಹಾಗೂ ಉನ್ನತ ಶಿಕ್ಷಣ ಪಡೆಯುತ್ತಿದ್ದರು. ಆದರೀಗ ಕೂಲಿಕಾರರ ಮಕ್ಕಳೂ ಸಹ ಪದವೀಧರರಾಗಿ ಉನ್ನತ ಹುದ್ದೆಗಳನ್ನು ಅಲಂಕರಿಸುತ್ತಿದ್ದಾರೆ. ವಿದ್ಯಾರ್ಥಿಗಳು ಜೀವನದಲ್ಲಿ ಓದುವ ಛಲ, ಸಾಧಿಸುವ ಗುರಿ ಇದ್ದರೆ ಉತ್ತಮ ವ್ಯಕ್ತಿಯಾಗಲು ಸಾಧ್ಯವಿದೆ ಎಂದರು.
ನಾಗಾಲೋಟದಲ್ಲಿ ಸಾಗುತ್ತಿರುವ ದೇಶದಲ್ಲಿ ಶಿಕ್ಷಣ, ವಿಜ್ಞಾನಕ್ಕೆ ಹೆಚ್ಚು ಆದ್ಯತೆ ಕೊಡಲಾಗಿದೆ. ವಿದ್ಯಾರ್ಥಿ-ವಿ ದ್ಯಾರ್ಥಿನಿಯರೂ ಸಹ ಸಂಶೋಧನೆ, ಚಿಂತನೆ ಹಾಗೂ ದೇಶದ ಅಭಿವೃದ್ಧಿ ಬಗ್ಗೆ ಹೆಚ್ಚು ಒಲವು ತೋರಬೇಕೆಂದು ಹಿತ ನುಡಿದರು.
ದಾವಣಗೆರೆ ವಿದ್ಯಾಕಾಶಿಯಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದ ನಗರವಾಗಿದೆ. ರಾಜ್ಯದಲ್ಲಿ 124, ದೇಶದಲ್ಲಿ 1500 ಇಂಜಿನಿಯರಿಂಗ್ ಕಾಲೇಜುಗಳಿವೆ. ಈ ಕಾಲೇಜುಗಳಿಂದ ಹೊರಹೊಮ್ಮುವ ಇಂಜಿನಿಯರ್ಗಳು ದೇಶದ ಆಸ್ತಿ ಎಂದರು.
ಜಿಎಂಐಟಿ ಕಾಲೇಜಿನಲ್ಲಿ 2200 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಪ್ರತಿ ವರ್ಷ ವಿದ್ಯಾರ್ಥಿನಿಯರೇ ರಾಂಕ್ ಜೊತೆಗೆ ಬಂಗಾರದ ಪದಕ ಪಡೆಯುತ್ತಿದ್ದಾರೆ.
ಈ ಬಾರಿ ನಾಲ್ವರು ರಾಂಕ್, ಬಂಗಾರದ ಪದಕ ಹಾಗೂ 2.25 ಲಕ್ಷ ರೂ. ವಿದ್ಯಾರ್ಥಿ ವೇತನದ ಮೂಲಕ ಶುಲ್ಕ ಹಿಂಪಡೆದಿದ್ದಾರೆ. ಶೇ. 90 ಕ್ಕಿಂತ ಅಧಿಕ ಅಂಕ ಪಡೆದ ಐವರು ವಿದ್ಯಾರ್ಥಿನಿಯರು ಕೂಡ ಬಂಗಾರದ ಪದಕಕ್ಕೆ ಭಾಜನರಾಗಿರುವುದು ನಮ್ಮ ಸಂತೋಷವನ್ನು ಇಮ್ಮಡಿಗೊಳಿಸಿದೆ. ಆದರೆ ವಿದ್ಯಾರ್ಥಿಗಳಲ್ಲಿ ಒಬ್ಬರೂ ಬಂಗಾರದ ಪದಕ ಪಡೆಯದಿರು ವುದಕ್ಕೆ ಬೇಸರವಿದೆ ಎಂದರು.
ನಟ, ಕಲಾ ನಿರ್ದೇಶಕ ಅರುಣ್ ಸಾಗರ್ ಮಾತನಾಡಿ, ವಿದ್ಯಾರ್ಥಿಗಳ ಜೀವನದಲ್ಲಿ ವಿದ್ಯಾದಾನ ಎಲ್ಲಕ್ಕಿಂತ ಮಿಗಿಲಾದುದು. ಇಂತಹ ಕಾರ್ಯದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರರವರು ಸಲ್ಲಿಸುತ್ತಿರುವ ಸೇವೆ ಮಹತ್ತರವಾದುದು. ಒಬ್ಬ ರಾಜಕಾರಣಿಯಾಗಿದ್ದರೂ ಸಮಾಜ ಸೇವಾ ಕಾರ್ಯ ಶ್ಲ್ಯಾಘನೀಯ ಎಂದರು.
ಇದೇ ವೇಳೆ ನಾಲ್ವರು ವಿದ್ಯಾರ್ಥಿನಿಯರು ಇಂಜಿನಿಯರಿಂಗ್ನಲ್ಲಿ ರಾಂಕ್ ಜೊತೆಗೆ ಎರಡು ಲಕ್ಷ ಇಪ್ಪತ್ತೈದು ಸಾವಿರದ ಆರು ನೂರು ರೂ.ಗಳನ್ನು ನಾಲ್ಕು ವರ್ಷದ ಬೋಧನಾ ಶುಲ್ಕವನ್ನು ಹಿಂಪಡೆದಿದ್ದಾರೆ. ಇದರೊಟ್ಟಿಗೆ ಬಂಗಾರದ ಪದಕವನ್ನು ಹಾಗೂ ಶೇ. 90 ರಷ್ಟು ಅಂಕ ಗಳಿಸುವ ಮೂಲಕ ಬಂಗಾರದ ಪದಕ ಪಡೆದರು.
ಕಾಲೇಜಿನ ಪಿಹೆಚ್ಡಿ ಪದವಿ ಪಡೆದ ಅಧ್ಯಾಪಕರುಗಳಾದ ಡಾ. ನಿರಂಜನಮೂರ್ತಿ, ಡಾ. ಹರೀಶ್, ಡಾ. ಹನುಮೇಶ್ ಅವರುಗಳನ್ನು ಗೌರವಿಸಲಾಯಿತು.
ಶ್ರೀಶೈಲ ಎಜುಕೇಶನಲ್ ಟ್ರಸ್ಟ್ ಕಾರ್ಯದರ್ಶಿ ಜಿ.ಎಂ. ಲಿಂಗರಾಜ್, ಖಜಾಂಚಿ ಜಿ.ಎಸ್. ಅನಿತ್ ಕುಮಾರ್, ಪ್ರೊ. ಬಕ್ಕಪ್ಪ, ದಾವಣಗೆರೆ ಕ್ಯಾನ್ಸರ್ ಫೌಂಡೇಶನ್ ರಾಯಭಾರಿ, ಕಲಾವಿದ ಆರ್.ಟಿ. ಅರುಣ್ ಕುಮಾರ್, ಯುವ ಮುಖಂಡ ಜಯಪ್ರಕಾಶ್ ಕೊಂಡಜ್ಜಿ, ಕಾಲೇಜಿನ ಆಡಳಿತಾಧಿಕಾರಿ ಸುಭಾಷ್, ಪ್ರಾಚಾರ್ಯ ಡಾ. ಸಂಜಯ್ ಪಾಂಡೆ, ನಾಸೀರ್ ಅಹಮದ್, ಡಾ. ಪಿ.ಎಸ್. ಬಸವರಾಜ್, ಡಾ. ಭರತ್ ರಾಜ್, ಕಿರಣ್ ಕುಮಾರ್, ಸುನೀಲ್ ಕುಮಾರ್, ಓಂಕಾರಪ್ಪ, ಪ್ರವೀಣ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ನಂತರ ಕಲಾವಿದ ಅರುಣ್ ಸಾಗರ್ ಅವರಿಂದ ಮನರಂಜನೆ ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.