ಕಾಂಗ್ರೆಸ್‌ನ ಗ್ಯಾರಂಟಿಗಳು ವಿಫಲವಾಗಲಿವೆ

ಕಾಂಗ್ರೆಸ್‌ನ ಗ್ಯಾರಂಟಿಗಳು ವಿಫಲವಾಗಲಿವೆ

ಕಾಂಗ್ರೆಸ್‌ನ ಗ್ಯಾರಂಟಿಗಳು ವಿಫಲವಾಗಲಿವೆ - Janathavaniಹರಿಹರದ ಬಿಜೆಪಿ ಕಾರ್ಯಕರ್ತರ ಅಭಿನಂದನಾ ಸಮಾರಂಭದಲ್ಲಿ ಸಂಸದ ಸಿದ್ದೇಶ್ವರ

ಹರಿಹರ, ಮೇ 16 – ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದವರ ಸುಳ್ಳು ಭರವಸೆಯ ಪ್ರಚಾರಕ್ಕೆ ಮತದಾರರು ಮರುಳಾಗಿ ಕಾಂಗ್ರೆಸ್ಸಿಗೆ ಮತ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳೆಲ್ಲವೂ ವಾರೆಂಟಿ ಇಲ್ಲದಂತೆ ಆಗಲಿವೆ. ನಮ್ಮ ಕಾರ್ಯಕರ್ತರು ಗ್ಯಾರಂಟಿಗಳ ವೈಫಲ್ಯದ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಟ್ಟು ಮುಂಬರುವ ಚುನಾವಣೆಗೆ ಅಸ್ತ್ರವನ್ನಾಗಿಸಿಕೊಳ್ಳ ಬೇಕು ಎಂದು ಸಂಸದ
ಜಿ.ಎಂ. ಸಿದ್ದೇಶ್ವರ ಹೇಳಿದರು.

ನಗರದ ಸಿದ್ದೇಶ್ವರ್ ಪ್ಯಾಲೇಸ್ ಸಭಾಂಗಣ ದಲ್ಲಿ ಇಂದು ನಡೆದ ವಿಜಯೋತ್ಸವ ಸಮಾರಂಭ ಮತ್ತು ಮುಖಂಡರ ಕಾರ್ಯಕರ್ತರ ಅಭಿನಂದನಾ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮುಂದಿನ ಎರಡು, ಮೂರು ತಿಂಗಳುಗಳಲ್ಲಿ ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿಗಳಿಗೆ ಚುನಾವಣೆ ಬರಲಿದೆ. ಒಂದು ವರ್ಷದ ಒಳಗೆ ಲೋಕಸಭಾ ಚುನಾವಣೆ ಬರಲಿದೆ. ಇವೆಲ್ಲವು ಗಳನ್ನು ಗಮನದಲ್ಲಿರಿಸಿಕೊಂಡು ಕಾರ್ಯಕರ್ತರು, ಮುಖಂಡರುಗಳು ಈಗಿನಿಂದಲೇ ಮುಂದಿನ ಸಿದ್ಧತೆಗಳನ್ನು ಮಾಡಿ ಕೊಂಡು ಪಕ್ಷವನ್ನು ಬಲಿಷ್ಠ ಗೊಳಿಸಬೇಕು ಎಂದು ಸೂಚನೆ ನೀಡಿದರು.

ಶಾಸಕ ಬಿ.ಪಿ. ಹರೀಶ್ ಮಾತನಾಡಿ, ರಾಜ್ಯದಲ್ಲಿ ಯಾರೇ ಮುಖ್ಯಮಂತ್ರಿಯಾಗಲಿ ನಮ್ಮ ಕ್ಷೇತ್ರದಲ್ಲಿರುವ ಮಠಗಳ ಶ್ರೀಗಳ ಆಶೀರ್ವಾದ ದಿಂದ ಕ್ಷೇತ್ರವನ್ನು ಅಭಿವೃದ್ಧಿಪಡಿಸುವೆ ಎಂದು ಹೇಳಿದರು. ನನ್ನ ಮತ್ತು ಪಕ್ಷದ ಲೆಕ್ಕಾಚಾರದಲ್ಲಿ ನಾವು 20 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಜಯ ಗಳಿಸಬೇಕಿತ್ತು. ಆದರೆ ಕೆಲವಾರು ತಾಂತ್ರಿಕ ತೊಂದರೆಗಳು ಜೊತೆಗೆ ಪಕ್ಷ ತೆಗೆದುಕೊಂಡ ಹಲವು ನಿರ್ಧಾರಗಳು ಪಕ್ಷಕ್ಕೆ ಮುಳುವಾದವು. ನಮಗೆ ಬರಬೇಕಾಗಿದ್ದ ಸಾಂಪ್ರದಾಯಿಕ ಮತಗಳು ಸಹ ಕೈಕೊಟ್ಟ ಕಾರಣದಿಂದ ನಮ್ಮ ಗೆಲುವಿನ ಅಂತರ ಕಡಿಮೆಯಾಯಿತು ಎಂದು ತಿಳಿಸಿದರು.

ನನಗೆ ಟಿಕೆಟ್ ನೀಡುವ ಸಂದರ್ಭದಲ್ಲಿ ಹಲವಾರು ಕಠಿಣ ಸಂದರ್ಭಗಳು ಎದುರಾದವು. ಕಾವಿ ಬಣ್ಣದ ಪಕ್ಷಕ್ಕೆ ಕಾವಿಯವರಿಂದಲೇ ಅಡ್ಡಿಯಾಯಿತು. ಆದರೆ ದೈವಶಕ್ತಿ ನನ್ನ ಕೈ ಹಿಡಿಯಿತು. ದೈವಶಕ್ತಿಯಿಂದ ನನಗೆ ಟಿಕೆಟ್ ದೊರೆಯಿತು ಮತ್ತು ಅದೇ ಶಕ್ತಿಯಿಂದ ನಾನಿಂದು ಜಯಶಾಲಿಯಾಗಿದ್ದೇನೆ. ಅದೇ ಶಕ್ತಿಯಿಂದ ಕಾವಿಧಾರಿಗಳಿಂದಲೇ ಕ್ಷೇತ್ರದ ಅಭಿವೃದ್ಧಿಯನ್ನು ಮಾಡುವವನಿದ್ದೇನೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಎಂ.ವೀರೇಶ್ ಹನಗವಾಡಿ ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ಕ್ಷೇತ್ರದ ಜನತೆ ಅಭಿವೃದ್ಧಿ ಇಲ್ಲದೇ ಬಿಜೆಪಿ ಗೆಲ್ಲಿಸಲು ಕಾತುರರಾಗಿದ್ದರು. ಅದರಂತೆ ಮುಖಂಡರು ಮತ್ತು ಕಾರ್ಯಕರ್ತರು ಹಗಲಿರುಳು ನಡೆಸಿದ ಪ್ರಚಾರ, ಸರ್ಕಾರದ ಸೌಲಭ್ಯಗಳನ್ನು ಮನೆ ಮನೆಗೆ ಮುಟ್ಟಿಸಿದ ಪರಿಣಾಮವಾಗಿ ನಾವು ಜಯಗಳಿಸಿದ್ದೇವೆ ಎಂದರು.

ಯುವ ಮುಖಂಡ ಚಂದ್ರಶೇಖರ್ ಪೂಜಾರ್ ಮಾತನಾಡಿ, ಇಡೀ ರಾಜ್ಯದಲ್ಲಿ ಪಕ್ಷ ಪರಾಭವ ಹೊಂದಿದರೂ ಹರಿಹರ ಕ್ಷೇತ್ರದಲ್ಲಿ ಗೆದ್ದಿದ್ದೇವೆ. ಮುಂದಿನ 25 ವರ್ಷಗಳ ಅಭಿವೃದ್ಧಿಯನ್ನು ಕ್ಷೇತ್ರಕ್ಕೆ ತರುವ ಕನಸನ್ನು ನಮ್ಮ ಶಾಸಕರು ಹೊಂದಿದ್ದಾರೆ. ಅದಕ್ಕೆ ನಮ್ಮೆಲ್ಲರ ಸಹಕಾರ ಯಾವಾಗಲೂ ಇರುತ್ತದೆ ಎಂದು ಹೇಳಿದರು.

ಈ ಸಮಯದಲ್ಲಿ ಹಿರಿಯ ಮುಖಂಡರಾದ ಎನ್.ಜಿ. ನಾಗನಗೌಡ್ರು, ಚುನಾವಣಾ ಪ್ರಭಾರಿ ಎನ್.ಇ. ಜೀವನಮೂರ್ತಿ, ಗ್ರಾಮಾಂತರ ಘಟಕದ ಅಧ್ಯಕ್ಷ ಎಂ.ಪಿ.ಲಿಂಗರಾಜ್, ನಗರ ಘಟಕದ ಅಧ್ಯಕ್ಷ ಅಜಿತ್ ಸಾವಂತ್, ಪ್ರಧಾನ ಕಾರ್ಯದರ್ಶಿಗಳಾದ ತುಳಜಪ್ಪ ಭೂತೆ, ಮಹಾಂತೇಶ್, ಮಂಜಾನಾಯ್ಕ ಹೆಚ್, ವೀರೇಶ್ ಆದಾಪುರ, ಜಿಲ್ಲಾ ಉಪಾಧ್ಯಕ್ಷ ಬಾತಿ ಚಂದ್ರಶೇಖರ್, ಶ್ರೀನಿವಾಸ ದಾಸಕರಿಯಪ್ಪ, ನಗರಸಭಾ ಸದಸ್ಯರಾದ ಎಬಿಎಂ ವಿಜಯಕುಮಾರ್, ಅಶ್ವಿನಿ ಕೃಷ್ಣ, ಮುಖಂಡರಾದ ಅಣ್ಣಪ್ಪ ಐರಣಿ, ಕೆಂಚನಹಳ್ಳಿ ಮಹಾಂತೇಶ್, ಜಿಗಳಿ ಚಂದ್ರಪ್ಪ, ವೀರಭದ್ರಪ್ಪ ಆದಾಪುರ, ಎ.ಪಿ ಆನಂದ, ಕೊಮಾರನಹಳ್ಳಿ ಮಹಾಂತೇಶ್, ಸುನೀಲ್ ಕುಮಾರ್, ರವಿ ರಾಯ್ಕರ್, ಶ್ರೀನಿವಾಸ್ ಚಂದಾಪೂರ್, ಅದ್ವೈತ್ ಶಾಸ್ತ್ರಿ, ಶಾಂತರಾಜ್, ಸಂತೋಷ್ ಗುಡಿಮನಿ, ರಾಜೇಶ್ ವರ್ಣೇಕರ್, ಭರತ್ ಶೆಟ್ಟಿ, ಗಿರೀಶ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!