ಹರಿಹರ, ಮೇ 5- ಹರಿಹರ ತಾ. ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶುಕ್ರವಾರ ಬೆಳಿಗ್ಗೆ ಹರಿಹರ ನಗರದ ಶ್ರೀ ಗುರು ತಿಪ್ಪೇರುದ್ರ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ 109ನೇ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಯಿತು.
`ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡದ ಅಸ್ಮಿತೆ’ ಕುರಿತು ಉಪನ್ಯಾಸ ನೀಡಿದ ಹಿರಿಯ ಸಾಹಿತಿ ಪ್ರೊ. ಹೆಚ್.ಎ. ಭಿಕ್ಷಾವರ್ತಿಮಠ ಅವರು, 1915 ಮೇ 5 ರಂದು ಸ್ಥಾಪನೆಯಾದ ಕರ್ನಾಟಕ ಸಾಹಿತ್ಯ ಪರಿಷತ್ ನಂತರ ಕನ್ನಡ ಸಾಹಿತ್ಯ ಪರಿಷತ್ ಆಗಿ ಬೆಳೆಯಿತು.
ಕನ್ನಡ ಭಾಷೆ ಬರೀ ಸಾಹಿತಿಗಳಿಂದ ಬೆಳೆದಿಲ್ಲ. ಬದಲಾಗಿ ಕನ್ನಡ ಪರಿಚಾರಕ ರಿಂದಲೂ ಬೆಳೆದಿದೆ. ಕನ್ನಡ ಸಾಹಿತ್ಯ ಪರಿಷತ್ ಅಸಂಖ್ಯಾತ ಸದಸ್ಯರನ್ನು ಹೊಂದುವ ಮೂಲಕ ದೇಶದಲ್ಲಿ ಗಮನ ಸೆಳೆದಿದೆ.
ಆದರೆ ನಮ್ಮ ಜನ ಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಕನ್ನಡಕ್ಕೆ ರಾಷ್ಟ್ರ ಮಟ್ಟದಲ್ಲಿ ಹಿನ್ನಡೆ ಆಗಿದೆ ಎಂದು ಭಿಕ್ಷಾವರ್ತಿಮಠ ಬೇಸರ ವ್ಯಕ್ತಪಡಿಸಿದರು.
ಕನ್ನಡಕ್ಕಾಗಿ ನಡೆದ ಗೋಕಾಕ್ ಚಳುವಳಿ ರಾಷ್ಟ್ರದ ಗಮನ ಸೆಳೆದಿತ್ತು. ಕನ್ನಡದ ಬಗ್ಗೆ ಹಗುರವಾಗಿ ಈ ಹಿಂದೆ ಮಾತನಾಡಿದವರು ಅಧಿಕಾರ ಕಳೆದುಕೊಂಡಿದ್ದಾರೆ.
ಹಾಗಾಗಿ ಕನ್ನಡ ನಾಡು, ನುಡಿ, ಜಲದ ವಿಷಯ ಬಂದಾಗ ಎಲ್ಲರೂ ಒಂದಾಗಿ ನಿಲ್ಲಬೇಕು. ಕನ್ನಡದ ಅಸ್ಮಿತೆಯಲ್ಲಿ ಗಡಿನಾಡು ಸಮಸ್ಯೆಗಳನ್ನು ಎದುರಿಸುವಂತಹ ಶಕ್ತಿ ಬೆಳೆಸಿಕೊಳ್ಳಬೇಕು.
ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮೊದಲಿನಿಂದಲೂ ಕೆಲಸ ಮಾಡಿಕೊಂಡು ಬಂದಿದೆ. ಕಸಾಪ ನಮ್ಮ ನಾಡಿನ ಹೆಮ್ಮೆ ಆಗಿದೆ. ಈ ಸಂಸ್ಥೆಯನ್ನು ಹುಟ್ಟುಹಾಕಿದ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ ಎಂ. ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್ ಅವರನ್ನೂ ನಾವು ಸದಾ ಸ್ಮರಿಸಬೇಕು. ಅವರ ಬಗ್ಗೆ ಇಂದಿನ ಯುವ ಪೀಳಿಗೆಗೆ ತಿಳಿಸುವ ಕೆಲಸ ಮಾಡಬೇಕೆಂದು ಭಿಕ್ಷಾವರ್ತಿಮಠ ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹರಿಹರ ತಾಲ್ಲೂಕು ಕಸಾಪ ಅಧ್ಯಕ್ಷ ಡಿ.ಎಂ. ಮಂಜುನಾಥಯ್ಯ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಸಾರ್ವಭೌಮ, ಕನ್ನಡಿಗರ ಶಕ್ತಿ, ಕನ್ನಡಿಗರ ಹೆಮ್ಮೆಯಾಗಿ ಬೆಳೆದಿದೆ ಎಂದರು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ರೇವಣಸಿದ್ದಪ್ಪ ಅಂಗಡಿ, ಜಿಲ್ಲಾ ಕಸಾಪ ಸಂಘಟನಾ ಕಾರ್ಯದರ್ಶಿ ಜಿಗಳಿ ಪ್ರಕಾಶ್, ಹರಿಹರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ.ಕೆ. ಭೂಮೇಶ್, ಜಿಲ್ಲಾ ಕಸಾಪ ಸದಸ್ಯ ರಿಯಾಜ್ ಅಹ್ಮದ್, ಹರಿಹರ ಕಸಬಾ ಹೋಬಳಿ ಕಸಾಪ ಅಧ್ಯಕ್ಷೆ ಗೀತಾ ಕೊಂಡಜ್ಜಿ, ಈಶಪ್ಪ ಬೂದಿಹಾಳ್, ನಾಗರಾಜ್, ಕುಂಬಳೂರು ಸದಾನಂದ್, ಎಂ. ವಾಸುದೇವಮೂರ್ತಿ, ಹೀನಾ ಕೌಸರ್, ಶಿಕ್ಷಕಿ ಮಮತಾ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.