ಸಮಾಜದ ಸತ್ಕಾರ್ಯಗಳಿಗೆ ಸ್ಪಂದಿಸಲು `ಪ್ರೀತಿ – ಆರೈಕೆ ಫೌಂಡೇಷನ್’ ಅಸ್ತಿತ್ವಕ್ಕೆ

ಸಮಾಜದ ಸತ್ಕಾರ್ಯಗಳಿಗೆ ಸ್ಪಂದಿಸಲು `ಪ್ರೀತಿ – ಆರೈಕೆ ಫೌಂಡೇಷನ್’ ಅಸ್ತಿತ್ವಕ್ಕೆ

ಸಮಾಜದ ಸತ್ಕಾರ್ಯಗಳಿಗೆ ಸ್ಪಂದಿಸಲು `ಪ್ರೀತಿ - ಆರೈಕೆ ಫೌಂಡೇಷನ್' ಅಸ್ತಿತ್ವಕ್ಕೆ - Janathavaniಸಾಮಾಜಿಕ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ತಮ್ಮ ಪತ್ನಿ ಲಿಂ. ಶ್ರೀಮತಿ ಪ್ರೀತಿ ಅವರ ಹಂಬಲವನ್ನು ಸಾಕಾರಗೊಳಿಸುವ ಸದುದ್ದೇಶದಿಂದ, ಆರ್ಥಿಕವಾಗಿ ಸಂಕಷ್ಟದಲ್ಲಿರುವ ಬಡ ರೋಗಿಗಳಿಗೆ ಉಚಿತ ಚಿಕಿತ್ಸೆ, ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ನೆರವು ಸೇರಿದಂತೆ, ಸಮಾಜಕ್ಕೆ ಸ್ಪಂದಿಸುವ ಇತರೆ ಸತ್ಕಾರ್ಯಗಳಿಗೆ `ಪ್ರೀತಿ – ಆರೈಕೆ ಫೌಂಡೇಷನ್’ ಸದಾ ಮುಂದೆ ಇರಲಿದೆ.

– ಡಾ. ಟಿ.ಜಿ. ರವಿಕುಮಾರ್, ಮುಖ್ಯಸ್ಥರು, ಆರೈಕೆ ಆಸ್ಪತ್ರೆ

ದಾವಣಗೆರೆ, ಮೇ 3- ಯಾವುದೇ ಮತ-ಜಾತಿ-ಪಂಥಕ್ಕೆ ಸೀಮಿತವಾಗದೆ ಸಮಾಜ ಸೇವೆಯನ್ನೇ ಧ್ಯೇಯವನ್ನಾಗಿಸಿಕೊಳ್ಳು ವುದರ ಮೂಲಕ ಸಮಾಜಕ್ಕೆ ತನ್ನದೇ ಆದ ವಿಶಿಷ್ಟ ಕೊಡುಗೆ ನೀಡುವ ನಿಟ್ಟಿನಲ್ಲಿ `ಪ್ರೀತಿ – ಆರೈಕೆ ಫೌಂಡೇಷನ್’ ಅಸ್ತಿತ್ವಕ್ಕೆ ಬಂದಿದೆ.

ನಗರದ ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯಸ್ಥರೂ, ಹಿರಿಯ ವೈದ್ಯರೂ ಆಗಿರುವ ಡಾ. ಟಿ.ಜಿ. ರವಿಕುಮಾರ್ ಅವರು ಈ ಸಂಸ್ಥೆಯನ್ನು ಸ್ಥಾಪಿಸಿದ್ದು, ಆರೈಕೆ ಆಸ್ಪತ್ರೆಯ ಸಹಯೋಗದೊಂದಿಗೆ `ಪ್ರೀತಿ – ಆರೈಕೆ  ಫೌಂಡೇಷನ್’ ಮುನ್ನಡೆಸುವ ಸಂಕಲ್ಪ ಮಾಡಿದ್ದಾರೆ.

ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ತಮ್ಮ ಪತ್ನಿ ಶ್ರೀಮತಿ ಪ್ರೀತಿ ಅವರ ಸಾಮಾಜಿಕ ಕಳಕಳಿಯನ್ನು ಸಾಕಾರಗೊಳಿಸುವ ದೆಸೆಯಲ್ಲಿ ಅವರ ಹೆಸರಿನಲ್ಲಿ `ಪ್ರೀತಿ – ಆರೈಕೆ ಫೌಂಡೇಷನ್’ ಡಾ. ರವಿಕುಮಾರ್ ತಿಳಿಸಿದ್ದಾರೆ.

ತಮ್ಮ ಪತ್ನಿ ಪ್ರೀತಿ ಅವರು ಕಳೆದ ಎರಡು ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ಅಗಲಿದ್ದು, ಅವರ ಸಾಮಾಜಿಕ ಸೇವೆಯನ್ನು ಮುಂದುವರಿಸುವುದರ ಮೂಲಕ, ನಮಗೆ ಎಲ್ಲವನ್ನೂ ಕೊಟ್ಟಿರುವ ಸಮಾಜಕ್ಕೆ ನಾವು ಕಿಂಚಿತ್ತು ಹಿಂತಿರುಗಿಸಬೇಕು ಎನ್ನುವ ಹಂಬಲವನ್ನು ಸಾಕಾರಗೊಳಿಸುವ ಸದುದ್ದೇಶದಿಂದ ಈ ಸಂಸ್ಥೆಯನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದು ಅವರು ಹೇಳಿದ್ದಾರೆ.

ಈ ನಿಟ್ಟಿನಲ್ಲಿ ನಮಗಾಗಿ ದೇಶ ರಕ್ಷಣೆ ಮಾಡಿದ ಹದಿನಾರು ನಿವೃತ್ತ ಸೈನಿಕರಿಗೆ ಆಜೀವ ಪರ್ಯಂತ ಆರೋಗ್ಯ ತಪಾಸಣೆ ದೊರೆಯುವಂತಹ `ಪ್ರೀತಿ – ಆರೈಕೆ’ ಹೆಲ್ತ್ ಕಾರ್ಡ್ ನೀಡಲಾಗಿದೆ. ಜೊತೆಗೆ, ದಾವಣಗೆರೆ ಜಿಲ್ಲೆಯಾದ್ಯಂತ ದಿನದ 24 ಗಂಟೆಗಳಲ್ಲೂ ಲಭ್ಯ ಇರುವಂತೆ ಉಚಿತ ಆಂಬ್ಯುಲೆನ್ಸ್ ಸೇವೆ ಒದಗಿಸಲಾಗಿದೆ ಎಂದು ಡಾ. ರವಿಕುಮಾರ್ ಅವರು ವಿವರಿಸಿದ್ದಾರೆ.

ಉದ್ಘಾಟನೆ : ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸಭಾಂಗಣದಲ್ಲಿ ಇಂದು ಏರ್ಪಾಡಾಗಿದ್ದ ಸರಳ ಸಮಾರಂಭದಲ್ಲಿ ಜ್ಯೋತಿ ಬೆಳಗಿಸುವುದರೊಂದಿಗೆ `ಪ್ರೀತಿ – ಆರೈಕೆ ಫೌಂಡೇಷನ್’ ತನ್ನನ್ನು ಸಮಾಜ ಸೇವೆಗೆ ಸಮರ್ಪಣೆಗೊಳಿಸಿತು. 

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಭಾಷಣ ಮಾಡಿದ ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯಸ್ಥ ಡಾ. ಟಿ.ಜಿ. ರವಿಕುಮಾರ್, ಪ್ರೀತಿ-ಆರೈಕೆ ಫೌಂಡೇಶನ್ ನನ್ನದು ಎಂಬ ಭಾವಕ್ಕಿಂತ ನಮ್ಮದು ಎಂಬ ಭಾವ ನನ್ನಲ್ಲಿದೆ. ಹಾಗಾಗಿ ಜತೆಗೆ ನೀವೂ ಸೇರಿಕೊಳ್ಳಿ ಎಂಬುದಕ್ಕಿಂತ, ನಿಮ್ಮ ಜತೆ ಫೌಂಡೇಷನ್ ಸೇರಿಕೊಳ್ಳಲಿ ಎಂಬ ಬಯಕೆ ನಮ್ಮದು ಎಂದು ಆಶಯ ವ್ಯಕ್ತಪಡಿಸಿದರು.

ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಶ್ರೀ ರಾಮಕೃಷ್ಣ ಮಿಷನ್‌ನ ಶ್ರೀ ತ್ಯಾಗೀಶ್ವರಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಸಮಾಜ ನಮಗೇನು ನೀಡಿದೆ ಎಂಬುದಕ್ಕಿಂತ, ಸಮಾಜಕ್ಕೆ ನಾವೇನು ಸೇವೆ ನೀಡಿದ್ದೇವೆ ಎಂಬುದರ ಆಧಾರದ ಮೇಲೆ ಬದುಕಿನ ಸಾರ್ಥಕತೆ ನಿರ್ಧಾರವಾಗುತ್ತದೆ. ಬದುಕಿನ ಸಾರ್ಥಕತೆ ಎಂದರೆ ಸಮಾಜದಿಂದ ಪಡೆದಿದ್ದನ್ನು ಸಮಾಜಕ್ಕೆ ಪುನಃ ನೀಡುವುದಾಗಿದೆ. ಪ್ರತಿಯೊಬ್ಬರು ಲಾಭ ಬಯಸದೇ ಸಮಾಜಕ್ಕೆ ಕೊಡುಗೆ ನೀಡುವ ಮನಸ್ಥಿತಿ ಬೆಳೆಸಿಕೊಳ್ಳಬೇಕು ಎಂದು ಹಿತ ನುಡಿದರು.

ನಿಸ್ವಾರ್ಥ ಸೇವೆ ಮಾಡುವಲ್ಲಿ ಪವಿತ್ರತೆ ಬೇಕು, ಇದರಿಂದ ಬರುವ ಶಕ್ತಿ ಬಹುದೊಡ್ಡದು. ಪ್ರಪಂಚದಲ್ಲಿ ಉನ್ನತ ಸಾಧನೆ ಮಾಡಿದ ವ್ಯಕ್ತಿಗಳ ಬಳಿ ಯಾವುದೇ ಹಣವಿಲ್ಲ. ಆದರೆ, ಅವರು ತಮ್ಮದೇ ಆದ ರೀತಿಯಲ್ಲಿ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ. ಪ್ರತಿಯೊಬ್ಬರು ಪ್ರಾಮಾಣಿಕವಾಗಿ ಸಾಧ್ಯವಾದಷ್ಟು ಸಮಾಜಕ್ಕೆ ಕೊಡುಗೆ ನೀಡೋಣ. ತನಗಾಗಿ ಎಲ್ಲವೂ ಬೇಕು ಎಂಬ ದಿನಮಾನದಲ್ಲಿ ನಾವಿದ್ದೇವೆ. ಇದ್ದವರನ್ನೇ ಮರೆತು ಬಿಡುವ ಯಾಂತ್ರಿಕ ಬದುಕನ್ನು ಸಾಗಿಸುತ್ತಿದ್ದೇವೆ. ಆದರೆ, ಲಿಂಗೈಕ್ಯರಾದವರ ಕನಸು, ಧ್ಯೇಯದ ಸಾಕಾರಕ್ಕಾಗಿ ಫೌಂಡೇಶನ್ ಸ್ಥಾಪಿಸುವ ಮೂಲಕ ಡಾ.ರವಿ ಕುಮಾರ್ ಅಗ್ರ ಪಂಕ್ತಿ ಹಾಕಿಕೊಟ್ಟಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಹಾಗೂ ಆರೈಕೆ ಸಮೂಹ ಸಂಸ್ಥೆಗಳ ಅಧ್ಯಕ್ಷ ಟಿ.ಜಿ. ಗುರುಸಿದ್ದನಗೌಡ ಮಾತನಾಡಿ, ನಿವೃತ್ತ ಸೈನಿಕರಿಗೆ ಸನ್ಮಾನ ಮಾಡುವ ಮೂಲಕ ನಾವೇನೂ ಮಹತ್ ಕಾರ್ಯ ಮಾಡುತ್ತಿಲ್ಲ. ಬದಲಾಗಿ ಜೀವ, ಜೀವನದ ಹಂಗು ತೊರೆದು ನಮಗಾಗಿ ದೇಶ ರಕ್ಷಣೆ ಮಾಡಿದ ಯೋಧರಿಗೆ ನಮ್ಮ ಕೃತಜ್ಞತೆ ಸಲ್ಲಿಸುತ್ತಿದ್ದೇವೆ. ಭಾರತ ಸ್ವಾತಂತ್ರ್ಯದ ಆರಂಭದ ದಿನಗಳಲ್ಲಿ ಫೀಲ್ಡ್‌ ಮಾರ್ಷಲ್ ಆಗಿದ್ದ ಜನರಲ್ ಕಾರ್ಯಪ್ಪನವರು, ದೇಶದ ಮೇಲೆ ನಿಯಂತ್ರಣ ಸಾಧಿಸಿ ಡಿಕ್ಟೇಟರ್ ಆಗುವ ಎಲ್ಲ ಅವಕಾಶವೂ ಇತ್ತು. ಆದರೆ, ಅವರು ದೇಶದಲ್ಲಿ ಪ್ರಜಾಪ್ರಭುತ್ವ ನೆಲೆಸಬೇಕು ಎಂದು ನಿರ್ಧರಿಸಿ, ಜವಾಹರಲಾಲ್ ನೆಹರು ಅವರು ಪ್ರಧಾನಿ ಆಗಲು ನೆರವಾದರು. ಇಂತಹ ವೀರ ಯೋಧರ ಪರಂಪರೆಯ ತಾಯ್ನಾಡು ನಮ್ಮದು ಎಂದು ಹೇಳಿದರು.

ಡಾ.ಹಾಲಸ್ವಾಮಿ ಕಂಬಳಿಮಠ, ಕ್ಯಾಪ್ಟನ್ ಡಾ.ಬಿ. ಹಾಲೇಶ, ಡಾ. ಎಚ್.ಎಂ ವೀರಯ್ಯ, ಡಾ. ಮಲ್ಲಿಕಾರ್ಜುನ ರೆಡ್ಡಿ, ಡಾ. ಆರ್.ಎಂ. ದೀಪಕ್, ಡಾ. ದೀಪಶ್ರೀ ಕಂಬಳಿಮಠ, ಡಾ. ಸಿದ್ಧಾರ್ಥ, ಡಾ.ಪ್ರದೀಪ್, ಡಾ. ಶ್ರೀನಿವಾಸ್, ಡಾ. ರವಿಗೌಡ್ರು, ಡಾ. ನಾಗಪ್ಪ ಕೆ. ಕಡ್ಲಿ, ನರ್ಸಿಂಗ್ ಅಧೀಕ್ಷಕಿ ಹೆಚ್.ಕೆ. ರೂಪಾ, ರವಿರಾಜ್, ನುಂಕೇಶ್, ಕಿರಣ್, ಆರೈಕೆ ಆಸ್ಪತ್ರೆ ಸಿಬ್ಬಂದಿ ಮತ್ತಿತರರು ಕಾರ್ಯಕ್ರಮದಲ್ಲಿ  ಉಪಸ್ಥಿತರಿದ್ದರು.

error: Content is protected !!