ರೈತರ ಸಾಲ ಮನ್ನಾ, 3 ಸಾವಿರ ನಿರುದ್ಯೋಗ ಭತ್ಯೆ

ರೈತರ ಸಾಲ ಮನ್ನಾ, 3 ಸಾವಿರ ನಿರುದ್ಯೋಗ ಭತ್ಯೆ

ಕೇಜ್ರಿವಾಲ್‌ ಭರವಸೆಗಳೊಂದಿಗೆ ಆಮ್ ಆದ್ಮಿ ಪಾರ್ಟಿಯ ಚುನಾವಣಾ ರಣಕಹಳೆ

ದಾವಣಗೆರೆ, ಮಾ. 4 – ಕರ್ನಾ ಟಕದಲ್ಲಿ ಆಮ್ ಆದ್ಮಿ ಪಾರ್ಟಿ ಸರ್ಕಾರ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡಲಾಗುವುದು ಹಾಗೂ ಕೃಷಿ ಇಳುವರಿಗೆ ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆ ಮಾಡಲಾಗುವುದು ಎಂದು ಆಮ್ ಆದ್ಮಿ ಪಾರ್ಟಿ ನಾಯಕ ಹಾಗೂ ದೆಹಲಿ ಮುಖ್ಯಮಂತ್ರಿ ಅರ ವಿಂದ ಕೇಜ್ರಿವಾಲ್ ಘೋಷಿಸಿದ್ದಾರೆ.

ನಗರದ ಹೈಸ್ಕೂಲ್ ಮೈದಾನ ದಲ್ಲಿ ಆಮ್ ಆದ್ಮಿ ಪಾರ್ಟಿ ವತಿಯಿಂದ ಆಯೋಜಿಸಲಾಗಿದ್ದ ಬೃಹತ್ ಸಮಾವೇಶದಲ್ಲಿ ಅವರು ಈ ಘೋಷಣೆ ಮಾಡುವುದ ರೊಂದಿಗೆ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ರಣಕಹಳೆ ಮೊಳಗಿಸಿದರು. 

ಕರ್ನಾಟಕದಲ್ಲಿ ಉತ್ತಮ ಶಿಕ್ಷಣ ಹಾಗೂ ಉದ್ಯೋಗದ ವ್ಯವಸ್ಥೆ ಮಾಡಲಾ ಗುವುದು. ಉದ್ಯೋಗ ಸಿಗುವವರೆಗೂ ತಿಂಗಳಿಗೆ 3 ಸಾವಿರ ರೂ.ಗಳ ನಿರುದ್ಯೋಗ ಭತ್ಯೆ ನೀಡ ಲಾಗುವುದು ಎಂದು ಕೇಜ್ರಿವಾಲ್ ಘೋಷಿಸಿದರು.

ದೆಹಲಿಯ ಮಾದರಿಯಲ್ಲಿ ಕರ್ನಾಟಕದಲ್ಲೂ ಉಚಿತ ವಿದ್ಯುತ್ ನೀಡಲಾಗುವುದು. ದೆಹಲಿಯಂತೆ ಭವ್ಯ ವಾದ ಶಾಲೆ ಹಾಗೂ ಆಸ್ಪತ್ರೆಗಳನ್ನು ನಿರ್ಮಿಸಲಾಗುವುದು ಎಂದರು.

ಮಹಾರಾಷ್ಟ್ರದ ನಂತರ ಕರ್ನಾಟಕದಲ್ಲಿ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.ರೈತರ ಸಾಲ ಮನ್ನಾ ಮಾಡಿ, ಕನಿಷ್ಠ ಬೆಂಬಲ ಬೆಲೆ ಕೊಡುವ ಜೊತೆಗೆ ರೈತರನ್ನು ಎಲ್ಲ ಸಮಸ್ಯೆಗಳಿಂದ ಮುಕ್ತಗೊಳಿಸಲಾಗು ವುದು ಎಂದು ಕೇಜ್ರಿವಾಲ್ ಹೇಳಿದರು.

ಕರ್ನಾಟಕದಲ್ಲಿ ಕಟ್ಟಾ ಪ್ರಾಮಾಣಿಕ ಸರ್ಕಾರ ಬೇಕಿದೆ. ಒಮ್ಮೆ ಆಮ್ ಆದ್ಮಿ ಪಾರ್ಟಿಗೆ ಅವಕಾಶ ಕೊಡಿ. ಕೆಲಸ ಮಾಡಲು ಸಾಧ್ಯವಾಗದಿದ್ದರೆ ಮತ್ತೆಂದೂ ಮತ ಕೇಳುವುದಿಲ್ಲ ಎಂದವರು ತಿಳಿಸಿದರು.

ಪಂಜಾಬ್‌ ಮುಖ್ಯಮಂತ್ರಿ ಭಗವಂತ್ ಮಾನ್ ಮಾತನಾಡಿ, ಹೊಸ ರಾಷ್ಟ್ರೀಯ ಪಿಂಚಣಿ ಹೆಸರಿನಲ್ಲಿ ಸರ್ಕಾರಿ ನೌಕರರಿಂದ ಹಣ ಪಡೆದು ಷೇರು ಪೇಟೆಯಲ್ಲಿ ತೊಡಗಿಸಲಾಗುತ್ತಿದೆ. ಈ ಹಣ ಅಂಬಾನಿ ಹಾಗೂ ಅದಾನಿಯಂಥವರ ಪಾಲಾಗುತ್ತಿದೆ. ನಿವೃತ್ತಿಯ ವೇಳೆಗೆ ಸರ್ಕಾರಿ ನೌಕರರಿಗೆ ಯಾವುದೇ ಹಣ ಸಿಗದೇ ಇರಬಹುದು ಎಂದು ಕಳವಳ ವ್ಯಕ್ತಪಡಿಸಿದರು.

ಇದಕ್ಕಾಗಿಯೇ ಪಂಜಾಬ್ ಸರ್ಕಾರ ಹಳೆ ಪಿಂಚಣಿ ವ್ಯವಸ್ಥೆ ಜಾರಿಗೆ ತರುತ್ತಿದೆ. ನೂತನ ಪಿಂಚಣಿ ವ್ಯವಸ್ಥೆಯಲ್ಲಿ ಹೂಡಿಕೆ ಮಾಡಲಾಗಿರುವ ಪಂಜಾಬ್‌ನ 18 ಸಾವಿರ ಕೋಟಿ ರೂ.ಗಳನ್ನು ವಾಪಸ್ ಪಡೆಯಲು ಹೋರಾಟ ನಡೆಸಲಾಗುವುದು ಎಂದರು.

ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಮಾತನಾಡಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ಗಳ ಹೆಸರು ಬೇರೆ ಆದರೂ ವರ್ತನೆ ಒಂದೇ. ಇದುವರೆಗೂ ರಾಜ್ಯದಲ್ಲಿ ಆಡಳಿತಾರೂಢ ಪಕ್ಷ ಬದಲಾಗಿದೆಯೇ ಹೊರತು ವ್ಯವಸ್ಥೆ ಬದಲಾಗಿಲ್ಲ. ಈ ಸಮಸ್ಯೆಗಳಿಗೆ ಆಮ್ ಆದ್ಮಿ ಪಾರ್ಟಿಯ `ಪೊರಕೆ’ಯೇ ಪರಿಹಾರ ಎಂದರು.

ಪಕ್ಷದ ಮುಖಂಡ ಮುಖ್ಯಮಂತ್ರಿ ಚಂದ್ರು ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ಗಳಿಂದ ಆಗಿರುವ ಅನಾಹುತಗಳನ್ನು `ಪೊರಕೆ’ಯಿಂದ ಸ್ವಚ್ಛಗೊಳಿಸಬೇಕಿದೆ ಎಂದರು.

ಮುಖಂಡರಾದ ಬ್ರಜೇಶ್ ಕಾಳಪ್ಪ ಮಾತನಾಡಿ, ಕರ್ನಾಟಕ ಹಿಂದಿನಿಂದಲೂ ರಾಜಕೀಯ ಪ್ರಯೋಗಕ್ಕೆ ಹೆಸರಾಗಿದೆ. ರಾಜ್ಯದಲ್ಲಿ ದೊಡ್ಡ ಪರಿವರ್ತನೆಯ ಅಗತ್ಯವಿದ್ದು, ಆಮ್ ಆದ್ಮಿ ಪಾರ್ಟಿಗೆ ಅವಕಾಶ ಇದೆ ಎಂದರು.

ಇದೇ ವೇಳೆ ಕಾರ್ಯಕರ್ತರಿಗೆ ಪಕ್ಷದ ಸಿದ್ಧಾಂತವನ್ನು ಪ್ರಾಮಾಣಿಕವಾಗಿ ಪಾಲಿಸುವ ಪ್ರಮಾಣ ವಚನವನ್ನು ಬೋಧಿಸಲಾಯಿತು.

ವೇದಿಕೆಯ ಮೇಲೆ ಆಮ್ ಆದ್ಮಿ ಪಾರ್ಟಿ ಮುಖಂಡರಾದ ಬಿ.ಟಿ. ನಾಗಣ್ಣ, ಶಾಂತಲಾ ದಾಮಲೆ, ಮಾಜಿ ಸಂಸದ ಡಾ. ವೆಂಕಟೇಶ್, ರವಿಚಂದ್ರ ನರವನ, ವಿಜಯ್ ಶರ್ಮ, ಟೆನ್ನಿಸ್ ಕೃಷ್ಣ, ಅಪರ್ಣ ಮತ್ತಿತರರು ಉಪಸ್ಥಿತರಿದ್ದರು.

error: Content is protected !!