ಕನ್ನಡದ ಉಳಿವಿಗೆ ಆದ್ಯತೆ ನೀಡೋಣ

ಕನ್ನಡದ ಉಳಿವಿಗೆ ಆದ್ಯತೆ ನೀಡೋಣ

ಚನ್ನಗಿರಿ, ಮಾ.4- ಕನ್ನಡಿಗರು ಸ್ವಾಭಿ ಮಾನಿಗಳಾಗಬೇಕು. ಕೇವಲ ಘೋಷಣೆಯಿಂದ ಕನ್ನಡ ಭಾಷೆ ಉಳಿಯಲು ಸಾಧ್ಯವಿಲ್ಲ, ಆಚರಣೆಯಿಂದ ಮಾತ್ರ ಸಾಧ್ಯ ಎಂದು ಪಾಂಡೋಮಟ್ಟಿ ವಿರಕ್ತಮಠದ ಡಾ.ಗುರುಬಸವ ಮಹಾಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಹರನಹಳ್ಳಿ-ಕೆಂಗಾಪುರ ಗ್ರಾಮದ ಶ್ರೀ ರಾಮಲಿಂಗೇಶ್ವರ ಮಠದ ಆವರಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಏರ್ಪಡಿಸಿದ್ದ 12ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ನಗರ ಪ್ರದೇಶದಲ್ಲಿ ಬರವಣಿಗೆಯ ಮೂಲಕ ಕನ್ನಡ ಭಾಷೆ ಜೀವಂತವಾಗಿದ್ದರೆ, ಗ್ರಾಮೀಣ  ಭಾಗದಲ್ಲಿ ಮಾತನಾಡುವ ಮೂಲಕ ಜೀವಂತವಾಗಿದೆ. ಭಾಷಾ ಸಾಹಿತ್ಯದಲ್ಲಿ ಶ್ರೀಮಂತಿಕೆ ಅಡಗಿದೆ, ಪ್ರಪಂಚದಲ್ಲಿಯೇ ಅತ್ಯಂತ ಶ್ರೀಮಂತಿಕೆ ಹೊಂದಿರುವ ಭಾಷೆ ಕನ್ನಡ. ಕನ್ನಡದಲ್ಲಿ ವ್ಯಾಕರಣ, ಅಲಂಕಾರ, ಸಂಧಿಗಳಿದ್ದು ಅವುಗಳನ್ನು ಅರಿಯುವುದು ಅವಶ್ಯಕವಾಗಿದೆ. ಶಾಲೆಯಿಂದ ಮಾತ್ರ ಭಾಷೆ ಉಳಿಸಲು ಸಾಧ್ಯ. ಆದ್ದರಿಂದ, ಶಾಲಾ ಹಂತದಲ್ಲಿಯೇ ಭಾಷೆ ತಿಳಿಸದಿದ್ದರೆ, ಅದನ್ನು ಕೊಂದಂತೆ ಎಂದರು.

ಭಾಷೆಯ ಅಳಿವು ಹಾಗೂ ಉಳಿವಿಗಾಗಿ ಸರ್ಕಾರದಲ್ಲಿ ಇಚ್ಚಾಶಕ್ತಿಯ ಕೊರತೆ ಇದೆ. ಹಿಂದಿನ ಸಮ್ಮೇಳನದ ನಿರ್ಣಯಗಳ ಜಾರಿಯಿಂದ ಕನ್ನಡ ಭಾಷೆಯನ್ನು ಬಾನೆತ್ತರಕ್ಕೆ ತೆಗೆದುಕೊಂಡು ಹೋಗಲು ಸಾಧ್ಯ. ಪಂಪರಿಂದ ಹಂಪನಾರ ತನಕ ಎಲ್ಲರ ಸಾಹಿತ್ಯದ ಬಗ್ಗೆ ಮಾತನಾಡುತ್ತೇವೆ. ಆದರೆ, ಕನ್ನಡದಲ್ಲಿ ತೇರ್ಗಡೆಯಾಗಲು ಕಷ್ಟ ಪಡುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದು ಹೇಳಿದರು.

ಒಂದನೇ ತರಗತಿಯನ್ನು ಐದು ಬಾರಿ ಅನುತ್ತೀರ್ಣರಾಗಿ, ಕೇವಲ ಊಟಕ್ಕಾಗಿ ಮತ್ತೋರ್ವರ ಮನೆಯಲ್ಲಿ ದುಡಿದರು. ಕನ್ನಡವನ್ನು ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿರುವ ಯುಗಧರ್ಮ ರಾಮಣ್ಣನವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುತ್ತಿರುವುದು ಹರ್ಷ ಉಂಟು ಮಾಡಿದೆ ಎಂದರು.

ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎಂ.ಬಸವರಾಜ್ ನಾಯ್ಕ್ ಮಾತನಾಡಿ, ಪ್ರಸ್ತುತ ದಿನ ಮಾನಗಳಲ್ಲಿ ಬೆಳಗಾವಿಯಂತಹ ಜಿಲ್ಲೆಯಲ್ಲಿ ಕನ್ನಡ ಗಟ್ಟಿಯಾಗಿ ಮಾತನಾಡುವ ವಾತಾವರಣ ಇಲ್ಲ ದಂತಾಗಿದೆ. ಹಿಂಬಾಗಿಲಿನಿಂದ ಕನ್ನಡ ನಾಡು-ನುಡಿ ಕುಗ್ಗಿಸುವ ಪ್ರಯತ್ನ ಮಾಡಲಾಗುತ್ತಿದೆ. ಇಂಗ್ಲಿಷ್ ಶಾಲೆ ವ್ಯಾಮೋಹದಿಂದ ಕನ್ನಡ ಮಾಧ್ಯಮ ಶಾಲೆಗಳು ಅಳಿವಿನಂಚಿಗೆ ತಲುಪುತ್ತಿವೆ ಎಂದರು.

ಮಾಜಿ ಶಾಸಕ ಮಹಿಮಾ ಜೆ.ಪಟೇಲ್ ಮಾತನಾಡಿ, ಭಾಷೆ ಇಲ್ಲದಿದ್ದರೆ ಆಲೋಚನೆ ಸಾಧ್ಯವಿಲ್ಲ. ಹಾಗಾಗಿ,  ನಮ್ಮ ಆಲೋಚನೆಯಲ್ಲಿ ಭಾಷೆ ಅಡಗಿದೆ. ಭಾಷೆಯನ್ನು ಪ್ರೀತಿ, ವಿಶ್ವಾಸ, ಸಹಕಾರ, ಸಂತೋಷದಿಂದ ಉಚ್ಚರಿಸಿದರೆ ಮಾತ್ರ ಅದರ ಉಳಿವು ಸಾಧ್ಯ. ದಿನಪತ್ರಿಕೆಗಳು ಸಾಹಿತ್ಯಿಕವಾಗಿ ಮನಸ್ಸನ್ನು ಪ್ರೇರೇಪಿತಗೊಳಿಸುವ ಸುದ್ದಿ ಹಾಗೂ ಪದ ಬಳಕೆಗಳನ್ನು ಮುಖಪುಟದಲ್ಲಿ ಹೆಚ್ಚು ಮುದ್ರಿಸಬೇಕು ಎಂದು ಮನವಿ ಮಾಡಿದರು.

ರಾಷ್ಟ್ರೀಯ ಗೋವು ಸೇವಾ ಸಂಘದ ರಾಜ್ಯಾಧ್ಯಕ್ಷ ಬಿ.ಟಿ.ಸಿದ್ದಪ್ಪ ಮಾತನಾಡಿ, ಜನರಿಗೆ ಸಾಹಿತ್ಯದ ಮೇಲೆ ಆಸಕ್ತಿ ಕಡಿಮೆಯಾಗಿದೆ. ಕನ್ನಡ ಸಾಹಿತ್ಯ ಓದಿದಾಗ ಮಾತ್ರ ಭಾಷೆ ಉಳಿಯಲಿದೆ ಎಂದ ಅವರ, ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮಾಯಕೊಂಡ ವಿಧಾನಸಭಾ ಕ್ಷೇತ್ರಕ್ಕೆ  ಸ್ಪರ್ಧೆ ಮಾಡಲು ತಯಾರಿ ನಡೆಸಿದ್ದು, ಟಿಕೆಟ್ ಸಿಕ್ಕರೆ ತಮ್ಮ ಮಗನನ್ನು ಕಣಕ್ಕಿಳಿಸಲು ನಿರ್ಧರಿಸಿರುವುದಾಗಿ ತಿಳಿಸಿ ಮತ ನೀಡುವಂತೆ ಕೋರಿಕೊಂಡರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ವಾಮದೇವಪ್ಪ, ಕಡಿಮೆ ಅವಧಿಯಲ್ಲಿ 4 ತಾಲ್ಲೂಕು ಸಾಹಿತ್ಯ ಸಮ್ಮೇಳನ ಮತ್ತು 2 ಜಿಲ್ಲಾ ಸಾಹಿತ್ಯ ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ.

ಪ್ರಸಕ್ತ ವರ್ಷದಲ್ಲಿ ಜಿಲ್ಲೆಯಲ್ಲಿ ಮೂರನೇ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲು ಆಯ-ವ್ಯಯದಲ್ಲಿ ಅನುದಾನ ಮೀಸಲಿರಿಸಲಾಗಿದೆ. ಜಿಲ್ಲಾ ಹಂತದ ಘಟಾನುಘಟಿ ನಾಯಕರ ನೆರವು ಪಡೆದು ಸಮ್ಮೇಳನ ಆಯೋಜಿಸಲಾಗುವುದು ಎಂದರು.

ಈ ವೇಳೆ ಹರನಹಳ್ಳಿ-ಕೆಂಗಾಪುರ ಮಠದ ರಾಮಲಿಂಗೇಶ್ವರ ಮಹಾಸ್ವಾಮೀಜಿ ಹಾಗೂ ಸಿರಿಗೆರೆಯ ಯುವ ಪ್ರತಿಭೆ ಕುಮಾರಿ ಶುಭಶ್ರೀ ಮಾತನಾಡಿದರು, ನಿಕಟಪೂರ್ವ ಸಮ್ಮೇಳನ ಅಧ್ಯಕ್ಷರಾದ ಸುಶೀಲಾದೇವಿ ಆರ್.ರಾವ್ ಕನ್ನಡ ಧ್ವಜ ಹಸ್ತಾಂತರಿಸಿದರು.

ಸಮ್ಮೇಳನದಲ್ಲಿ ಕೇಂದ್ರ ಕ.ಸಾ.ಪ ಸಂಘಟನಾ ಕಾರ್ಯದರ್ಶಿ ಜಿ.ರುದ್ರಯ್ಯ, ಶ್ರೀ ರಾಮಲಿಂಗೇಶ್ವರ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಹೆಚ್.ಆರ್ ವಿಜಯಕುಮಾರ್, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ವಿ ಪರಮೇಶ್ವರಪ್ಪ, ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ರಾಜಶೇಖರ ಗುಂಡಗಟ್ಟಿ, ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎ.ಆರ್ ಉಜ್ಜನಪ್ಪ, ಯುವ ಮುಖಂಡ ಜಿ.ಎಸ್ ಶ್ಯಾಮ್, ವಿದ್ಯಾರ್ಥಿ-ಯುವಜನರು, ಕನ್ನಡಾಭಿಮಾನಿಗಳು ಸೇರಿದಂತೆ ಇತರರು ಭಾಗವಹಿಸಿದ್ದರು. ಚನ್ನಗಿರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಲ್.ಜಿ. ಮಧುಕುಮಾರ್ ಸಮ್ಮೇಳನಾಧ್ಯಕ್ಷರ ಪರಿಚಯ ಮಾಡಿಕೊಟ್ಟರು.

ಸಮ್ಮೇಳನದಲ್ಲಿ ಕೃತಿಗಳ ಲೋಕಾರ್ಪಣೆ :

ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಕನ್ನಡ ಕೃತಿಗಳ ಲೋಕಾರ್ಪಣೆ ಮಾಡುವ ಪರಂಪರೆಗೆ ತಕ್ಕನಾಗಿ ಜಿಲ್ಲಾ 12 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಎರಡು ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು.

ಲೇಖಕ ಚಿಗಟೇರಿಯ ಡಾ.ಎ.ಶಿವನಗೌಡ ಕಡುಗೇರಿ ಅವರ ಪರಿಪೂರ್ಣ ನಾರಪ್ಪ ಎಂಬ ನಾಟಕ ಹಾಗೂ ನಿಬ್ಬೆರಗು (ವೈಜ್ಞಾನಿಕ ಲೇಖನಗಳು) ಎಂಬ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.

error: Content is protected !!